ವರ್ಷದಲ್ಲಿ ಮೂರರಿಂದ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸುವ ನಟ ಅಕ್ಷಯ್ ಕುಮಾರ್. ಹಿಂದಿ ಸೇರಿದಂತೆ ಮರಾಠಿ ಸಿನಿಮಾದಲ್ಲೂ ಈಗ ಬ್ಯುಸಿಯಾಗಿದ್ದಾರೆ. ಇದರ ನಡುವೆ ಈಗ ತೆಲುಗು ಸಿನಿಮಾ ಒಪ್ಪಿಕೊಳ್ಳುವ ಮೂಲಕ ಟಾಲಿವುಡ್‌ನಲ್ಲೂ ಖಾತೆ ತೆರೆದಿದ್ದಾರೆ.
ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಒಂದರ ಹಿಂದೆ ಒಂದರಂತೆ ಚಿತ್ರಗಳ ಶೂಟಿಂಗ್‌ನಲ್ಲಿ ವ್ಯಸ್ತವಾಗಿರುವ ನಟ, ಈಗ ತೆಲುಗು ಚಿತ್ರವೊಂದರಲ್ಲಿ ನಟಿಸೋಕೆ ಒಪ್ಪಿಗೆ ನೀಡಿದ್ದಾರೆ. ಹೌದು, ಟಾಲಿವುಡ್‌ನ ಪ್ಯಾನ್ ಇಂಡಿಯಾ ಸಿನಿಮಾ ‘ಕಣ್ಣಪ್ಪ’ ಒಂದು ಬಿಗ್ ಬಜೆಟ್ ಚಿತ್ರ. ಈ ಸಿನಿಮಾದಲ್ಲಿ ನಟಿಸೋಕೆ ಅಕ್ಷಯ್ ಕುಮಾರ್ ಒಪ್ಪಿಕೊಂಡಿದ್ದಾರೆ.
ನಟ ಮೋಹನ್ ಬಾಬು ನಿರ್ಮಾಣದ ದೊಡ್ಡ ಬಜೆಟ್‌ನ ‘ಕಣ್ಣಪ್ಪ’ ಸಿನಿಮಾವನ್ನು ಮುಖೇಶ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಮೋಹನ್ ಬಾಬು ಅವರ ಮಗ ಮಂಚು ವಿಷ್ಣು ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಅನೌನ್ಸ್ ಆದಾಗಲೇ ದಕ್ಷಿಣ ಭಾರತದ ಕೆಲ ಖ್ಯಾತ ನಟ-ನಟಿಯರು ಇದರಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಜೊತೆಗೆ ಬಾಲಿವುಡ್‌ನ ಸ್ಟಾರ್ ನಟ ಅಕ್ಷಯ್ ಕುಮಾರ್ ಸಹ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಸಹ ಹರಿದಾಡಿತ್ತು. ಆದರೆ, ಈ ಬಗ್ಗೆ ಚಿತ್ರತಂಡವಾಗಲಿ, ನಟನಾಗಲಿ ಯಾವುದೇ ಮಾಹಿತಿ ರಿವೀಲ್ ಮಾಡಿರಲಿಲ್ಲ. ಆದರೆ, ಈಗ ಮಂಚು ವಿಷ್ಣು ಸಾಮಾಜಿಕ ಜಾಲತಾಣದಲ್ಲಿ ಅಕ್ಷಯ್ ಕುಮಾರ್ ‘ಕಣ್ಣಪ್ಪ’ ಚಿತ್ರತಂಡ ಸೇರಿಕೊಂಡಿರವ ಬಗ್ಗೆ ಬರೆದುಕೊಂಡಿದ್ದಾರೆ. ಜೊತೆಗೆ ಒಂದು ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.
‘ಕಣ್ಣಪ್ಪ’ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣಕ್ಕೆ ಬೇರೆ ಬೇರೆ ಭಾಷೆಯ ಕಲಾವಿದರನ್ನು ಅತಿಥಿ ಪಾತ್ರಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಕನ್ನಡ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರನ್ನೂ ಚಿತ್ರತಂಡ ಸಂಪರ್ಕಿಸಿದ್ದು, ಇನ್ನೂ ವಿಷಯ ಮಾತುಕತೆ ಹಂತದಕ್ಕಿದೆ ಎನ್ನಲಾಗುತ್ತಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅಕ್ಷಯ್ ಕುಮಾರ್, ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರ ‘ವೇದತ್ ಮರಾಠೆ ವೀರ್ ದೌಡ್ಲೆ ಸಾತ್’ ಮರಾಠಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಿವಾಜಿ ಪಾತ್ರಕ್ಕೆ ಬಣ್ಣ ಹಚ್ಚಿರುವ ಅಕ್ಷಯ್ ಕುಮಾರ್ ಈ ಹಿಂದೆ ಸಿನಿಮಾ ಕುರಿತಾದ ಅಪ್ಡೇಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರ ಜೊತೆಗೆ ‘ಸಿಂಗ್ ಅಗೇನ್’, ‘ಸ್ಕೈ ಫೋರ್ಸ್’, ‘ಶಂಕರ’, ‘ಖೇಲ್ ಖೇಲ್ ಮೇ’, ‘ಹೇರಾಪೇರಿ 3’ ಹೀಗೆ ಸಾಕಷ್ಟು ಚಿತ್ರಗಳು ಅಕ್ಷಯ್ ಕೈಲಿವೆ.