ಹಿಂದಿ ಸಿನಿಮಾ | ಸೂರ್ಯವಂಶಿ

ಅಕ್ಷಯ್ ತಾವು ಸಮರ್ಥ ಆಕ್ಷನ್ ಹೀರೋ ಎಂಬುದನ್ನು ಯಾವಾಗಲೋ ಪ್ರೂವ್ ಮಾಡಿದ್ದಾರೆ. ಈ ಚಿತ್ರದಲ್ಲಿಯೂ ಅವರ ಶೋ ಮುಂದುವರೆದಿದೆ. ಆದರೆ ಕತ್ರಿನಾ ಕೈಫ್‌ಗೆ ಅಭಿನಯ ಬರಲ್ಲ ಎನ್ನುವ ಅಂಶ ಎದ್ದು ಕಾಣುತ್ತದೆ.

ಪ್ರಾಣ ಪಣಕ್ಕಿಟ್ಟು ದೇಶಕ್ಕೆ ಮಿಡಿಯುವ ಹಾಗೂ  ಕುಟುಂಬದ ಹಿತ ಲೆಕ್ಕಿಸದೆ ದುಷ್ಟರನ್ನು ಎದುರು ಹಾಕಿಕೊಳ್ಳುವ ಪೊಲೀಸ್ ಅಧಿಕಾರಿಗಳು, ದೇಶದ್ರೋಹಿ, ಪಾಕ್ ಬೆಂಬಲಿತ ಜಿಹಾದಿ ಉಗ್ರವಾದಿಗಳು, ದೇಶ ಒಡೆಯುವ ಬಾಂಬ್ ಸ್ಪೋಟಿಸುವ ಅವರ ಷಡ್ಯಂತ್ರಗಳು, ಸಾವು ನೋವು, ಹೋರಾಟ… ಇವೆಲ್ಲಾ ನಮಗೆ ಇತ್ತೀಚಿನ ಚಿತ್ರಗಳಲ್ಲಿ ಹೊಸದೂ ಅಲ್ಲ, ವಿಭಿನ್ನವೂ ಅಲ್ಲ. ಆದರೆ ಅಂತಹದೇ ಕಥಾವಸ್ತುವನ್ನು ಮಸಾಲೆ ಹಚ್ಚಿ ಶೋಕೇಸ್ ಮಾಡುವ ರೋಹಿತ್ ಶೆಟ್ಟಿಯಂತಾ ನಿರ್ದೇಶಕರಿದ್ದಾರಲ್ಲ, ಅವರ ಪ್ರತಿಭೆ ಮತ್ತು ಪ್ರಯತ್ನಕ್ಕೆ ತಲೆದೂಗಬೇಕು.

ವೀರ್ ಸೂರ್ಯವಂಶಿ ಹೆಸರಿನ ಪೋಲಿಸ್ ಅಧಿಕಾರಿ (ಡಿಸಿಪಿ) ಸೂಪರ್ ಕಾಪ್! ಅವನ ಎಂಟ್ರಿಯಿಂದ ಹಿಡಿದು ಕ್ಲೈಮ್ಯಾಕ್ಸ್‌ವರೆಗೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ ಪ್ರಸ್ತುತ ನಂಬರ್‌ ಒನ್‌ ಹೀರೋಗಳ ಪಟ್ಟಿಯಲ್ಲಿರುವ ಅಕ್ಷಯ್ ಕುಮಾರ್. ಕೆಲವು ದಿಗ್ಭ್ರಮೆ ಮೂಡಿಸುವ ಏರಿಯಲ್ ಸ್ಟಂಟ್‌ಗಳನ್ನು ತಾವೇ ಖುದ್ದಾಗಿ ಮಾಡಿರುವುದು ಅವರ ಸಾಹಸ ಪ್ರವೃತ್ತಿಗೆ ಉದಾಹರಣೆ. ಉಗ್ರವಾದಿಗಳು ಬಚ್ಚಿಟ್ಟ 600 ಕೆಜಿ ಆರ್.ಡಿ.ಎಕ್ಸ್ ಸ್ಪೋಟಕದ ಹಿಂದೆ ಬೇತಾಳದಂತೆ ಬಿದ್ದು ವೈರಿಗಳನ್ನು ಪುಡಿಗಟ್ಟಬಲ್ಲ ಶೂರ.

ಅವನ ಪತ್ನಿಯಾಗಿ ಗ್ಲಾಮರ್ ಬೊಂಬೆ ಕತ್ರಿನಾ ಕೈಫ್‌ಗೆ ಎರಡು ಹಾಡುಗಳಿವೆ. ಮದುವೆಯ ನಂತರ ಅವನು ಮಗನನ್ನು ಅಪಾಯಕ್ಕೊಡ್ಡಿದನೆಂದು ಸಿಡಿದು ಬಿದ್ದು ದೂರ ಹೋಗುತ್ತಾಳೆ. ಅಲ್ಲೊಂದು ಫ್ಯಾಮಿಲಿ ಆಂಗಲ್ ಸ್ಟೋರಿ. ಸೂರ್ಯವಂಶಿ ಬೆಂಬತ್ತುವ ಹಲವು ವಿಲನ್ನುಗಳು –  ಒಮರ್, ಮುಕ್ತಾರ್, ಖಾದರ್ ಮುಂತಾದವರ ನಿರೀಕ್ಷಿತ ಖಳನಾಯಕ ಕೃತ್ಯಗಳು! ಅಕ್ಷಯ್ ಕುಮಾರ್ ವೀರನಾದರೂ ಸಹಾ ವಲ್ನರಬಲ್ (ಕುಂದು ಉಳ್ಳವ) ಎಂದು ತೋರಿಸಲು ಅವನಿಗೆ ಇತರರ ಹೆಸರನ್ನು ಮರೆಯುವ, ತಪ್ಪು ತಪ್ಪಾಗಿ ಹೇಳುವ ರೋಗ, ಕೆಲವೊಮ್ಮೆ ನಗೆಯುಕ್ಕಿಸುತ್ತದೆ.

ಕೊನೆಗೆ ಇನ್ನಿಬ್ಬರು ಧೀರ ಸ್ಟಂಟ್ ಮಾಸ್ಟರ್ಸ್ ಹೀರೋಗಳ ಸಾಥ್… ಸಿಂಬಾ ಆಗಿ ಹಾಸ್ಯಪ್ರಧಾನ ಪಾತ್ರದಲ್ಲಿ ರಣವೀರ್‌ ಸಿಂಗ್ ಮಿಂಚಿದರೆ, ಟಫ್ ಕಾಪ್ ಆಗಿ ಸಿಂಗಂ ಎಂದು ಅನ್ಯ ಚಿತ್ರಗಳಲ್ಲಿ ಕಾಣುವ ಅಜಯ್ ದೇವಗನ್ ಇಲ್ಲಿ ಕೊನೆಯಲ್ಲಿ ಅತಿಥಿಗಳಾಗಿ ಎಂಟ್ರಿ ಕೊಡುತ್ತಾರೆ. ಇವರೆಲ್ಲಾ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶನದ ಚಿತ್ರಗಳಲ್ಲಿ ನಟಿಸಿದವರು ಮತ್ತು ಆಯಾ ಸಿನಿಮಾ ಪಾತ್ರಗಳೇ ಎಂಬುದು ವಿಶೇಷ. ಅಕ್ಷಯ್ ತಾವು ಸಮರ್ಥ ಆಕ್ಷನ್ ಹೀರೋ ಎಂಬುದನ್ನು ಯಾವಾಗಲೋ ಪ್ರೂವ್ ಮಾಡಿದ್ದಾರೆ. ಹಾಗೇ ಇಲ್ಲಿಯೂ ಸಹಾ. ಆದರೆ ಕತ್ರಿನಾ ಕೈಫ್‌ಗೆ ಅಭಿನಯ ಬರಲ್ಲ ಎನ್ನುವ ಅಂಶ ಎದ್ದು ಕಾಣುತ್ತದೆ. ಮುದ್ದು ಬೊಂಬೆಯಂತೆ ಬಳುಕುತ್ತಾ ‘ಟಿಪ್ ಟಿಪ್ ಬರಸಾ..’ ಹಳೆ ಹಾಡಿಗೆ ಅವರಿಲ್ಲಿ ಹೆಜ್ಜೆ ಹಾಕಿದ್ದಾರೆ. ಮನರಂಜನೆಗಾಗಿ ಯಾವುದೇ ಬಿಂಕ ಬಿಗುಮಾನ ಇಲ್ಲದಂತೆ ಮಾಡಿದ ಮಸಾಲೆ ಚಿತ್ರ ‘ಸೂರ್ಯವಂಶಿ’.

ನಾಗೇಶ್ ಕುಮಾರ್ ಸಿ.ಎಸ್‌., ಸಿನಿಮಾ ವಿಶ್ಲೇಷಕರು

Previous articleನಿರ್ಮಾಪಕರು ಮತ್ತು ಪ್ರದರ್ಶಕರ ಮಧ್ಯೆ ಫಲಿಸದ ಮಾತುಕತೆ; ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಲಿದೆ ‘ಮರಕ್ಕರ್’
Next articleವೀಡಿಯೊ ಸಾಂಗ್ | ರಾಜಮೌಳಿ ‘RRR’; ರಾಮ್ ಚರಣ್, ಜ್ಯೂ.ಎನ್‌ಟಿಆರ್ ಡ್ಯಾನ್ಸ್ ನಂಬರ್

LEAVE A REPLY

Connect with



Please enter your comment!
Please enter your name here