ಭಾರತೀಯ ಚಿತ್ರರಂಗದ ಜನಪ್ರಿಯ ಹಿನ್ನೆಲೆ ಗಾಯಕ ಕೆಕೆ (53 ವರ್ಷ) ನಿನ್ನೆ ರಾತ್ರಿ ಹೃದಯಾಘಾತದಿಂದ ಅಗಲಿದ್ದಾರೆ. ಪ್ರಮುಖವಾಗಿ ಹಿಂದಿ ಸಿನಿಮಾಗಳಿಗೆ ಹಾಡುತ್ತಿದ್ದ ಅವರು ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿಯೂ ಅವರು ಹಾಡಿದ್ದಾರೆ.

ಕಳೆದ ಮೂರು ದಶಕಗಳಿಂದ ಚಿತ್ರರಂಗದ ಹಿನ್ನೆಲೆ ಗಾಯನದಲ್ಲಿ ಗುರುತಿಸಿಕೊಂಡಿದ್ದ ಕೆಕೆ ಅಗಲಿದ್ದಾರೆ. ನಿನ್ನೆ ರಾತ್ರಿ ಕೊಲ್ಕೊತ್ತಾದ ನಝ್ರುಲ್‌ ಮಂಚಾದಲ್ಲಿ ಅವರು ಲೈವ್‌ ಪರ್ಫಾರ್ಮೆನ್ಸ್‌ ಕೊಟ್ಟಿದ್ದರು. ಈ ಕಾರ್ಯಕ್ರಮದ ನಂತರ ತಮ್ಮ ಹೋಟೆಲಿನ ಕೋಣೆಗೆ ಹಿಂದಿರುಗಿದ ಅವರು ಅಸ್ವಸ್ಥರಾಗಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಹೃದಯಾಘಾತದಿಂದ ಕೆಕೆ ಇಹಲೋಕ ತ್ಯಜಿಸಿರುವುದನ್ನು ದೃಢಪಡಿಸಿದ್ದಾರೆ.

ದಿಲ್ಲಿ ಮೂಲದ ಕೃಷ್ಣಕುಮಾರ್‌ ಕುನ್ನತ್‌ ಚಿತ್ರರಂಗದಲ್ಲಿ ಕೆಕೆ ಎಂದೇ ಕರೆಸಿಕೊಂಡಿದ್ದರು. 1999ರಲ್ಲಿ ಅವರ ಮೊದಲ ಆಲ್ಬಂ ‘ಪಲ್‌’ ಬಿಡುಗಡೆಯಾಗಿತ್ತು. ಗಾಯಕ, ಸಂಗೀತ ಸಂಯೋಜಕರಾಗಿ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದ ಅವರ ಹೆಸರಿನಲ್ಲಿ ನೂರಾರು ಜನಪ್ರಿಯ ಗೀತೆಗಳಿವೆ. ತಡಪ್‌ ತಡಪ್‌ (ಹಮ್‌ ದಿಲ್‌ ದೇ ಚುಕೆ ಸನಂ), ದಸ್‌ ಬಹಾನೆ (ದಸ್‌), ತೂನೆ ಮಾರಿ ಎಂಟ್ರಿಯಾ (ಗುಂಡೇ) ಸೇರಿದಂತೆ ಬಾಲಿವುಡ್‌ನಲ್ಲಿ ಕೆಕೆ ಹಾಡಿರುವ ಹಲವು ಗೀತೆಗಳು ಜನಪ್ರಿಯವಾಗಿವೆ.

ಕನ್ನಡದ ಹತ್ತಾರು ಗೀತೆಗಳಿಗೆ ಕೆಕೆ ದನಿಯಾಗಿದ್ದಾರೆ. ಅನು ಮಲಿಕ್‌ ಸಂಗೀತ ಸಂಯೋಜನೆಯಲ್ಲಿ ‘ಲವ್‌’ (2004) ಚಿತ್ರದಿಂದ ಆರಂಭಿಸಿ ಇತ್ತೀಚಿನವರೆಗೂ ಅವರು ಹಾಡಿದ್ದಾರೆ. ನಡೆದಾಡುವ ಕಾಮನಬಿಲ್ಲು (ಪರಿಚಯ), ಕಣ್ಣ ಹನಿಯೊಂದಿಗೆ (ಮನಸಾರೆ), ವಿದಾಯದ ವೇಳೆಯಲ್ಲಿ (ಮಳೆ ಬರಲಿ ಮಂಜೂ ಇರಲಿ), ಒಂದು ಹಾಡು (ಆರ್ಯನ್‌) ಸೇರಿದಂತೆ ಕೆಕೆ ಹತ್ತಾರು ಕನ್ನಡ ಚಿತ್ರಗೀತೆಗಳನ್ನು ಹಾಡಿದ್ದಾರೆ. ಕೆಕೆ ಅಕಾಲಿಕ ನಿಧನಕ್ಕೆ ದೇಶದಾದ್ಯಂತ ಸಿನಿಮಾ ಹಾಗೂ ಇತರೆ ಕ್ಷೇತ್ರಗಳ ಪ್ರಮುಖರು ಕಂಬನಿ ಮಿಡಿದಿದ್ದಾರೆ.

LEAVE A REPLY

Connect with

Please enter your comment!
Please enter your name here