ಕತೆಗಾರ ಪ್ರವೀಣ್ ಕುಮಾರ್ ಜಿ. ನಿರ್ದೇಶನದ ‘ಅಮರ ಪ್ರೇಮಿ ಅರುಣ್’ ಸಿನಿಮಾದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಯೋಗರಾಜ್ ಭಟ್ ಮತ್ತು ಜಯಂತ ಕಾಯ್ಕಿಣಿ ರಚಿಸಿರುವ ಹಾಡುಗಳೂ ಸೇರಿದಂತೆ ಒಟ್ಟು ಐದು ಹಾಡುಗಳನ್ನು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ವಿವಿಧೆಡೆ ಚಿತ್ರಿಸುವುದು ಚಿತ್ರತಂಡದ ಯೋಜನೆ.
ಜನ ಟಾಕೀಸಿಗೆ ಬಂದು ಸಿನಿಮಾ ನೋಡುವ ಹೊತ್ತಿಗೆ ಸರಿಯಾಗಿ ‘ಅಮರ ಪ್ರೇಮಿ ಅರುಣ್’ ಚಿತ್ರ ತನ್ನ ಟಾಕಿ ಪೋರ್ಷನ್ ಚಿತ್ರೀಕರಣ ಮುಗಿಸಿ ಮುಂದಿನ ಹಂತಕ್ಕೆ ಬಂದಿದೆ. ಇದು ಅಮರ ಪ್ರೇಮಿಯೊಬ್ಬನ ಕಥೆ. ಅವನ ಹೆಸರು ಅರುಣ್. ಹಾಗಾಗಿ ಈಗ ಮಾತು ಮುಗಿಸಿರುವ ಅರುಣ್, ಮುಂದೆ ಹಾಡುಗಳ ಚಿತ್ರೀಕರಣದಲ್ಲಿ ಅರುಣರಾಗ ಹಾಡಲು ರೆಡಿಯಾಗಿದ್ದಾನೆ. ಒಲವು ಸಿನಿಮಾ ಸಂಸ್ಥೆಯು ನಿರ್ಮಿಸುತ್ತಿರುವ ‘ಅಮರ ಪ್ರೇಮಿ ಅರುಣ್ʼ ಸಿನಿಮಾವು ತನ್ನ ಮಾತಿನ ದೃಶ್ಯಗಳ ಚಿತ್ರೀಕರಣವನ್ನು ಬಳ್ಳಾರಿ ನಗರ ಮತ್ತು ಬಳ್ಳಾರಿ ತಾಲೂಕಿನ ಸಿರಿವಾರ, ಕಪ್ಪಗಲ್ಲು ಮತ್ತಿತರೆಡೆ ಚಿತ್ರಿಸಿದೆ. “ಬಳ್ಳಾರಿಯ ಐತಿಹಾಸಿಕ ಕೋಟೆ, ಹಳೇ ವಾಟರ್ ಪಂಪ್, ದುರ್ಗಮ್ಮನ ಗುಡಿ ಹಾಗೂ ಇನ್ನಿತರೆಗೆ ಸಿನಿಮಾ ಚಿತ್ರಿಸಿದ್ದೇವೆ. ಚಿತ್ರತಂಡದ ಎಲ್ಲಾ ತಂತ್ರಜ್ಞರು ಹಾಗೂ ಕಲಾವಿದರ ನೆರವಿನಿಂದ ಎಲ್ಲವೂ ನಾವು ಅಂದುಕೊಂಡಂತೆಯೇ ನಡೆದಿದೆ. ಮುಂದಿನ ಹಂತದಲ್ಲಿ ಐದು ಹಾಡುಗಳನ್ನು ಚಿತ್ರಿಸಬೇಕು. ನಿರ್ದೇಶಕ ಯೋಗರಾಜ್ ಭಟ್ ಎರಡು ಹಾಡು ಮತ್ತು ಜಯಂತ ಕಾಯ್ಕಿಣಿ ಅವರು ಒಂದು ಹಾಡು ರಚಿಸಿದ್ದಾರೆ. ನಾನು ಎರಡು ಬರೆಯುತ್ತಿದ್ದೇನೆ. ಹಾಡುಗಳನ್ನು ಕೂಡ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯೆ ವಿವಿಧೆಡೆ ಚಿತ್ರಿಸಲಿದ್ದೇವೆ” ಎನ್ನುತ್ತಾರೆ ನಿರ್ದೇಶಕ ಪ್ರವೀಣ್ ಕುಮಾರ್ ಜಿ.
‘ಅಮರ ಪ್ರೇಮಿ ಅರುಣ್ʼ ಸಿನಿಮಾದ ವಿಶೇಷ ಪಾತ್ರಗಳಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿರುವ ಪದ್ಮಶ್ರೀ ಜೋಗತಿ ಮಂಜಮ್ಮನವರು ಮತ್ತು ಖ್ಯಾತ ರಂಗಕರ್ಮಿ ಹುಲಿಗೆಪ್ಪ ಕಟ್ಟಿಮನಿ ನಟಿಸಿದ್ದಾರೆ. ಹರಿಶರ್ಮಾ ಮತ್ತು ದೀಪಿಕಾ ಆರಾಧ್ಯ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಧರ್ಮಣ್ಣ, ಭೂಮಿಕಾ ಭಟ್, ಮಹೇಶ್ ಬಂಗ್, ರಾಧಾ ರಾಮಚಂದ್ರ, ಚನ್ನಬಸಪ್ಪ, ಸುನಂದಾ ಹೊಸಪೇಟೆ, ಬಾಲಾ ರಾಜ್ವಾಡಿ, ರೋಹಿಣಿ ಇತರರು ತಾರಾಬಳಗದಲ್ಲಿದ್ದಾರೆ. ಪ್ರವೀಣ್ ಕುಮಾರ ಜಿ. ರಚನೆ ನಿರ್ದೇಶನ, ಪ್ರವೀಣ್ ಎಸ್. ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜನೆ, ಮನು ಶೇಡ್ಗಾರ್ ಸಂಕಲನ ಚಿತ್ರಕ್ಕಿದೆ.