ನಿರ್ದೇಶಕ ಪವನ್ ಒಡೆಯರ್ ನಿರ್ಮಾಣದ ‘ಡೊಳ್ಳು’ ಸಿನಿಮಾ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಾಗರ್ ಪುರಾಣಿಕ್ ಕಥೆ ಹಾಗೂ ನಿರ್ದೇಶನದ ಚಿತ್ರವಿದು.

ನಿರ್ದೇಶಕ ಪವನ್ ಒಡೆಯರ್ ಈಗ ನಿರ್ಮಾಪಕರಾದ ಸಂಭ್ರಮದಲ್ಲಿದ್ದಾರೆ. ಅಲ್ಲದೆ ಮೊದಲ ಪ್ರಯತ್ನದಲ್ಲೇ ಅವರಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಮನ್ನಣೆಗಳು ದೊರೆಯುತ್ತಿರುವುದು ಅವರ ಸಂತೋಷವನ್ನು ಇಮ್ಮಡಿಗೊಳಿಸಿವೆ. ಈ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಪವನ್ ಒಡೆಯರ್, “ನಮ್ಮ ಒಡೆಯರ್ ಮೂವೀಸ್ (Wadeeyar movies) ಸಂಸ್ಥೆಯಿಂದ ನಿರ್ಮಾಣ ಆಗ್ತಿರೋ ಮೊದಲನೆಯ ಸಿನಿಮಾ ‘ಡೊಳ್ಳು’. ಈ ಸಿನಿಮಾದಲ್ಲಿ ನಾನು ಹಾಗೂ ಪತ್ನಿ ಅಪೇಕ್ಷಾ ಪುರೋಹಿತ್ ಮೊದಲ ಬಾರಿ ನಿರ್ಮಾಪಕರಾಗಿ ನಿಮ್ಮ ಮುಂದೆ ಬರುತ್ತಿದ್ದೇವೆ” ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಸಾಗರ್ ಪುರಾಣಿಕ್ ಕಥೆ ಹಾಗೂ ನಿರ್ದೇಶನವಿದೆ. ನಿರ್ಮಾಪಕರಾದ ಮೊದಲ ಪ್ರಯತ್ನದಲ್ಲೇ ಪವನ್ ಒಡೆಯರ್ ಅವರಿಗೆ ಸಂತಸದ ಸುದ್ದಿಗಳು ಸಿಗುತ್ತಿವೆ. ಡೊಳ್ಳು 2020ರಲ್ಲಿ CBFC ಇಂದ U ಸರ್ಟಿಫಿಕೇಟ್ ಪಡೆದಿದ್ದು, ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ.

ಅಮೇರಿಕಾದ ಕಲೈಡೊಸ್ಕೋಪ್ ಇಂಡಿಯನ್ ಫಿಲಂ ಫೆಸ್ಟಿವಲ್ ಬಾಸ್ಟನ್‌ನಲ್ಲಿ ಅದರ ಮೊದಲ ಪ್ರದರ್ಶನ ಕಂಡು, ಎಲ್ಲಾ ಪ್ರೇಕ್ಷಕರ ಗಮನ ಸೆಳೆಯುವುದರೊಂದಿಗೆ ಎಲ್ಲರ ಪ್ರಶಂಸೆ ಪಡೆದಿದೆ. ಇನ್ನೂ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣಲಿದೆ. ಈ ಚಿತ್ರ ಢಾಕಾ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್ ಹಾಗೂ ಡಾಲಸ್ ಸೌತ್ ಏಶಿಯನ್ ಫಿಲಂ ಫೆಸ್ಟಿವಲ್‌ಗಳಿಗೆ ಈಗಾಗಲೇ ಆಯ್ಕೆಯಾಗಿದೆ. ಇನ್ನು ಇನ್ನೋವೇಟಿವ್ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್ ಚಲನಚಿತ್ರೋತ್ಸವದಲ್ಲಿ, ಸರಸ್ವತಿ ಪಿಂಪ್ಳೆ ಫೌಂಡೇಶನ್ ವತಿಯಿಂದ ದಾದಾಸಾಹೇಬ್ ಫಾಲ್ಕೆ ಬೆಸ್ಟ್ ಕನ್ನಡ ಫಿಲ್ಮ್ ಎಂಬ ಪ್ರಶಸ್ತಿ ಡೊಳ್ಳಿಗೆ ದೊರಕಿದೆ. ಹಾಗೆಯೇ, ದಾದಾಸಾಹೇಬ್ ಫಾಲ್ಕೆ ಎಂ.ಎಸ್.ಕೆ ಟ್ರಸ್ಟ್ ವತಿಯಿಂದ 1 ಲಕ್ಷ ನಗದು ಬಹುಮಾನ ಸಿಕ್ಕಿದೆ. “ಇದು ನಮಗೆ ಬಹಳ ಹೆಮ್ಮೆಯ ವಿಷಯ. ಇನ್ನೂ ಹಲವಾರು ಪ್ರಶಸ್ತಿಗಳು, ಬಹುಮಾನಗಳು ಹಾಗೂ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುತ್ತೆ ಎಂಬ ವಿಶ್ವಾಸ ನಮಗಿದೆ” ಎನ್ನುತ್ತಾರೆ ಪವನ್ ಒಡೆಯರ್. ಕಾರ್ತಿಕ್ ಮಹೇಶ್, ನಿಧಿ ಹೆಗಡೆ, ಚಂದ್ರ ಮಯೂರ, ಬಾಬು ಹಿರಣ್ಣಯ್ಯ, ಶರಣ್ಯ ಸುರೇಶ್, ಡಾ.ಪ್ರಭುದೇವ, ವರುಣ್ ಶ್ರೀನಿವಾಸ್, ಚಂದ್ರಮನು ಹಾಗೂ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ಎಂ.ಅನಂತ್ ಕಾಮತ್  ಸಂಗೀತ ಸಂಯೋಜನೆ, ಬಿ.ಎಸ್.ಕೆಂಪರಾಜು  ಸಂಕಲನ, ಶ್ರೀನಿಧಿ ಡಿ.ಎಸ್. ಚಿತ್ರಕಥೆ ಮತ್ತು ಸಂಭಾಷಣೆ, ದೇವಿ ಪ್ರಕಾಶ್ ಕಲೆ, ನಿತಿನ್ ಲೂಕೋಸ್ ಶಬ್ದ ವಿನ್ಯಾಸ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here