ಕಳೆದ ವರ್ಷ ಸ್ಟ್ರೀಮ್‌ ಆಗಿದ್ದ ಅಮೇಜಾನ್‌ ಪ್ರೈಮ್‌ ವೀಡಿಯೋದ ‘Unpaused’ ಆಂಥಾಲಜಿ ಸೀಕ್ವೆಲ್‌ ‘Unpaused: Naya Safar’ ಜನವರಿ 21ರಿಂದ ಸ್ಟ್ರೀಮ್‌ ಆಗಲಿದೆ. ಪ್ರತಿಭಾವಂತ ಯುವನಿರ್ದೇಶಕರು ಐದು ಕತೆಗಳನ್ನು ಕಿರುಚಿತ್ರಗಳನ್ನಾಗಿ ಆಂಥಾಲಜಿಯಲ್ಲಿ ನಿರೂಪಿಸಿದ್ದಾರೆ.

ಕೋವಿಡ್‌ ದಿನಗಳಲ್ಲಿನ ಜನರ ಸಂಕಷ್ಟಗಳು, ಇವುಗಳಿಂದ ಹೊರಬರಲು ಅವರು ಪಟ್ಟ ಪಡಿಪಾಟಲು, ಲಾಕ್‌ಡೌನ್‌ನಿಂದ ದುರ್ಬಲಗೊಂಡ ಇಲ್ಲವೇ ಬೆಸೆದ ಸಂಬಂಧಗಳು ‘Unpaused: Naya Safar’ ಆಂಥಾಲಜಿಯಲ್ಲಿ ಕಿರುಚಿತ್ರಗಳಾಗಿವೆ. ಅಮೇಜಾನ್‌ ಪ್ರೈಮ್‌ ವೀಡಿಯೋ ಈ ಕಿರುಚಿತ್ರಗಳನ್ನು ನಿರ್ಮಿಸಿದ್ದು ಜನವರಿ 21ರಿಂದ ಇವು ಸ್ಟ್ರೀಮ್‌ ಆಗಲಿವೆ. ಖ್ಯಾತ ಚಿತ್ರನಿರ್ದೇಶಕ ನಾಗರಾಜ್‌ ಮಂಜುಲೆ, ‘ಬೇವಕೂಫಿಯಾ’ ಖ್ಯಾತಿಯ ನೂಪುರ್‌ ಆಸ್ತಾನಾ, ‘ಜಸ್ಸಿ ಜೈಸಿ ಕೋಯಿ ನಹೀ’ ಕಿರುತೆರೆ ಶೋಗೆ ಸಂಭಾಷಣೆ ಬರೆದಿದ್ದ ಶಿಖಾ ಮಕಾನ್‌, ‘ಲಿಟ್ಲ್‌ ಥಿಂಗ್ಸ್’‌ ನಿರ್ದೇಶಕ ರುಚಿರ್‌ ಅರುಣ್‌ ಮತ್ತು ‘ದಿ ಗೆಸ್ಟ್‌’ ಕಿರುಚಿತ್ರ ನಿರ್ದೇಶಿಸಿದ್ದ ಅಯ್ಯಪ್ಪ ಕೆ.ಎಂ. ಆಂಥಾಲಜಿಯ ಐವರು ನಿರ್ದೇಶಕರು.

ಅಮೇಜಾನ್‌ ಪ್ರೈಮ್‌ ವೀಡಿಯೋ ಭಾರತದ ಮುಖ್ಯಸ್ಥರಾದ ಅಪರ್ಣಾ ಪುರೋಹಿತ್‌, “‘Unpaused: Naya Safar’ ಮೂಲಕ 2022 ಶುರುವಾಗುತ್ತಿರುವುದು ಅಮೇಜಾನ್‌ ಪ್ರೈಮ್‌ಗೆ ಉತ್ತಮ ಆರಂಭ. ಈ ಕತೆಗಳು ನೊಂದ ಜನರಿಗೆ ವಿಶ್ವಾಸ ತುಂಬಲಿವೆ. ಮತ್ತೊಂದೆಡೆ ಇಂಡಿಪೆಂಡೆಂಟ್‌ ಫಿಲ್ಮ್‌ ಮೇಕರ್‌ಗಳಿಗೆ ವೇದಿಕೆ ಒದಗಿಸಲಿದೆ” ಎಂದಿದ್ದಾರೆ. ನಾಗರಾಜ್‌ ಮಂಜುಲೆ ನಿರ್ದೇಶನ ‘ವೈಕುಂಠ್‌’ ಕಿರುಚಿತ್ರದಲ್ಲಿ ಅರ್ಜುನ್‌ ಕರ್ಚೆ ಮತ್ತು ಹನುಮಂತ್‌ ಭಂಡಾರಿ ನಟಿಸಿದ್ದಾರೆ. ಆಸ್ತಾನಾ ನಿರ್ದೇಶಿಸಿರುವ ‘ದಿ ಕಪಲ್‌’ ಕಿರುಚಿತ್ರದಲ್ಲಿ ಶ್ರೇಯಾ ಧನ್ವಂತರಿ ಮತ್ತು ಪ್ರಿಯಾಂನ್ಶು ಪೈನುಲಿ ನಟಿಸಿದ್ದಾರೆ. ಅಯ್ಯಪ್ಪ ಕೆ.ಎಂ. ನಿರ್ದೇಶನದ ‘ವಾರ್‌ ರೂಂ’ನಲ್ಲಿ ಗೀತಾಂಜಲಿ ಕುಲಕರ್ಣಿ, ರಸಿಕಾ ಅಗಾಸೆ, ಪೂರ್ಣಾನಂದ್‌ ಪಾಂಡೇಖರ್‌, ಶಾರ್ವರಿ ದೇಶಪಾಂಡೆ ನಟಿಸಿದ್ದಾರೆ. ರುಚಿರ್‌ ಅರುಣ್‌ ನಿರ್ದೇಶನದ ‘ತೀನ್‌ ತಿಗಡ’ದಲ್ಲಿ ಸಕೀಬ್‌ ಸಲೀಂ, ಆಶಿಷ್‌ ವರ್ಮಾ, ಸ್ಯಾಮ್‌ ಮೋಹನ್‌ ಇದ್ದಾರೆ. ಶಿಖಾ ಮಕಾನ್‌ ನಿರ್ದೇಶನದ ‘ಗೋಂಡ್‌ ಕೆ ಲಡ್ಡು’ ಕಿರುಚಿತ್ರದಲ್ಲಿ ನೀನಾ ಕುಲಕರ್ಣಿ, ದರ್ಶನಾ ರಾಜೇಂದ್ರನ್‌, ಲಕ್ಷವೀರ್‌ ಸಿಂಗ್‌ ಶರಣ್‌ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here