ಸುದ್ದಿ ಮಾಧ್ಯಮಗಳ ನಡುವಿನ ಸ್ಪರ್ಧೆ, ಟಿಆರ್‌ಪಿಗಾಗಿ ಮಾಡುವ ಕಾರ್ಯಗಳು, ಜನಾಭಿಪ್ರಾಯ ತಿದ್ದುವಿಕೆಯ ಅಂಶಗಳಿರುವ ಈ ಸರಣಿಯಲ್ಲಿ ನಟಿಸುವ ಮೂಲಕ‌ ಸೊನಾಲಿ ಬೇಂದ್ರೆ ವೆಬ್ ಸೀರೀಸ್‌ಗೆ ಕಾಲಿಟ್ಟಿದ್ದಾರೆ. ZEE5ನಲ್ಲಿ‌ ಸ್ಟ್ರೀಮ್ ಆಗುತ್ತಿದೆ ಸರಣಿ.

ಸಿನಿಮಾ ರಂಗದಲ್ಲಿ ಬೇಡಿಕೆ ಕಡಿಮೆಯಾದ ತಾರೆಯರು ಒಂದು ಕಾಲದಲ್ಲಿ ಕಂಪನಿ ನಾಟಕಗಳ ಮುಖೇನ ತಮ್ಮ ತಾರಾಮೌಲ್ಯ ನಗದೀಕರಿಸುತ್ತಿದ್ದರು. ನಂತರದ ಕಾಲಘಟ್ಟದಲ್ಲಿ ಬೆಳ್ಳಿತೆರೆಯ ತರುವಾಯ ಕಿರುತೆರೆ ಎಂದಾಯಿತು. ಈಗ ವೆಬ್ ಸರಣಿ ಆ ಸ್ಥಾನ ತುಂಬಿದೆ. ಅದರಂತೆ ಸೊನಾಲಿ ಬೇಂದ್ರೆ ‘ದ ಬ್ರೋಕನ್ ನ್ಯೂಸ್’ ವೆಬ್ ಸರಣಿಯ ಮೂಲಕ ಹೊಸ ಪ್ರದೇಶ ಪ್ರವೇಶಿಸಿದ್ದಾರೆ. ತೊಂಭತ್ತರ ದಶಕದ ಹಿರೋಯಿನ್‌ಗಳನ್ನು ವೆಬ್ ಸರಣಿಗೆ ಹಾಕಿಕೊಂಡರೆ ಲಾಭವಿದೆಯೇ? ತೆರೆಯ ಮೇಲೆ ಈಗ ಹೇಗೆ ಕಾಣುತ್ತಾಳೋ‌ ನೋಡೋಣ ಎಂಬ ಕುತೂಹಲದಲ್ಲಿ ಒಂದಷ್ಟು ಮಂದಿಯನ್ನು ಅತ್ತ ಸೆಳೆಯುವುದಂತೂ ಖರೆ. ವಾಸ್ತವದಲ್ಲಿ ನಾನೂ ಈ ಸರಣಿ ನೋಡಲು ಕೂತದ್ದು ಸೊನಾಲಿ ಬೇಂದ್ರೆ ನಟನೆ ನೋಡುವ ಉದ್ದೇಶದಿಂದಲೇ.

ಇದು ಸುದ್ದಿ ಮಾಧ್ಯಮಗಳ ಸುತ್ತ ನಡೆಯುವ ಸರಣಿ ಎಂದು‌ ಹೆಸರು‌‌ ಕೇಳುತ್ತಿದ್ದಂತೆಯೇ ಗೊತ್ತಾಗುತ್ತದೆ. ಸುದ್ದಿ ಮಾಧ್ಯಮಗಳ ನಕಾರಾತ್ಮಕತೆ‌ಯ ಅನಾವರಣ ಎಂಬುದನ್ನೂ ‘ದ ಬ್ರೋಕನ್ ನ್ಯೂಸ್’ ತಿಳಿಸುತ್ತದೆ. ‘ನಿಮ್ಮ ನ್ಯೂಸ್ ಚಾನಲ್‌ ನೋಡುವುದಕ್ಕಿಂತ ಹೆಚ್ಚಿನ ಮಂದಿ ಇಂಟರ್‌ನೆಟ್‌ನಲ್ಲಿ ನಾಯಿ-ಬೆಕ್ಕುಗಳ ವಿಡಿಯೋ ನೋಡುತ್ತಾರೆ’ ಎಂಬುದು ಈ ಸರಣಿಯಲ್ಲಿ ಬರುವ ಒಂದು ಸಂಭಾಷಣೆ. ‘ಮಾಧ್ಯಮ ರಂಗ ಮೊದಲು ಚೆನ್ನಾಗಿತ್ತು, ಈಗ‌ ನಾಯಿಕೊಡೆಗಳಂತೆ ಹುಟ್ಟಿಕೊಂಡ ಟಿವಿ ಚಾನಲ್‌ಗಳಿಂದಾಗಿ ಮಾಧ್ಯಮ ಗಾಂಭೀರ್ಯ ಕಳೆದುಕೊಂಡಿದೆ’ ಎಂದು ಹಿರಿಯ ಪರ್ತಕರ್ತರನೇಕರು ನೋವು ತೋಡಿಕೊಳ್ಳುವುದಿದೆ. ಆದರೆ ವಾಸ್ತವದಲ್ಲಿ ಅದು ಹಾಗಲ್ಲ. ಟಿವಿ ವಾರ್ತೆಯ ಮಟ್ಟಿಗೆ ದೂರದರ್ಶನ ಮಾತ್ರವಿದ್ದಾಗ, ರಾಜ್ಯದ ಜನಸಂಖ್ಯೆ 4 ಕೋಟಿಯ ಅಂದಾಜಿದ್ದಾಗ ಎಲ್ಲಾ ಪತ್ರಿಕೆಗಳ ಒಟ್ಟು ಪ್ರಸಾರ ಸಂಖ್ಯೆ ಹತ್ತು ಲಕ್ಷ ಮೀರುತ್ತಿರಲಿಲ್ಲ. ಅಂದರೆ ಆ ಕಾಲದಲ್ಲಿ ಪತ್ರಿಕೆಯ ಓದುಗರಾಗಿದ್ದವರು ಆಡಳಿತ-ರಾಜಕೀಯದ‌ ಮಂದಿ ಮತ್ತು ಸಮಾಜದ ಕೆನೆಪದರ ಮಾತ್ರ. ಮಾಧ್ಯಮಗಳನ್ನು ಗಂಭೀರವಾಗಿ ಪರಿಗಣಿಸದ ಮಂದಿ ಇಂದಿನಂತೆ ಅಂದೂ ಇದ್ದರು ಎಂಬುದು‌ ಸತ್ಯ. ಆದರೆ‌ ಈಗ ದೃಶ್ಯ-ಮುದ್ರಣ ಮಾಧ್ಯಮಗಳನ್ನು ಎಷ್ಟು ಜನ ಗಂಭೀರವಾಗಿ ಪರಿಗಣಿಸದವರಿದ್ದಾರೆ ಎಂಬುದು ಈಗ ಸಾಮಾಜಿಕ‌ ಜಾಲತಾಣದ ಕಾರಣ ಬಹಿರಂಗವಾಗುತ್ತಿದೆಯಷ್ಟೆ. ಆದಾಗ್ಯೂ 75 ಕೋಟಿ ಮಂದಿ ಸಾಮಾಜಿಕ ಜಾಲತಾಣಗಳಿಂದ ಹೊರಗಿದ್ದಾರೆ.

ಇಂಥ ಕಾಲಘಟ್ಟದಲ್ಲಿ ‘ದ ಬ್ರೋಕನ್ ನ್ಯೂಸ್’ ಹೊಸತೇನನ್ನೂ ಹೇಳುವುದಿಲ್ಲ. ಬಿಬಿಸಿ ಸ್ಟುಡಿಯೋಸ್ ನಿರ್ಮಾಣದ ಸರಣಿ ತಾನು ಹೇಳಬೇಕಿರುವ ಕತೆಗಾಗಿ ಕೇವಲ ಎರಡು ಟಿವಿ ವಾಹಿನಿಗಳನ್ನು ಸಾಂಕೇತಿಕವಾಗಿ ಇರಿಸಿಕೊಂಡಿದೆ. ಆವಾಜ಼್ ಭಾರತಿ ಮಾದ್ಯಮ ಧರ್ಮವನ್ನು ಅನುಸರಿಸುವ ಚಾನಲ್‌ ಆದರೆ ಜೋಶ್ 24×7ಗೆ ಟಿಆರ್‌ಪಿ ಮಾತ್ರವೇ ಮುಖ್ಯ. ನಿರೀಕ್ಷೆಯಂತೆಯೇ ಮಾಧ್ಯಮ ಧರ್ಮದ ಪರ ನಿಂತ ಚಾನಲ್‌ಗೆ ಟಿಆರ್‌ಪಿ‌ ಕಡಿಮೆ. ಅಧಿಕ ಟಿಆರ್‌ಪಿ ಇರುವ ಚಾನಲ್ ಸಂದರ್ಶನ ಮಾಡುವವರನ್ನೂ ಹಣ ‌ನೀಡಿ ಖರೀದಿಸುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಎರಡು ಬಂದು ಹೋಗುವ ಪ್ರಕರಣಗಳನ್ನು‌ ನೀಡಲಾಗಿದೆ.

ಆ ಉದಾಹರಣೆಗಳನ್ನು ಮೀರಿ, ವರದಿಗಾರರಾಗಿ ಬರುವ ಪಾತ್ರಗಳು ನೋಡುಗನ ಮೇಲೆ ಪರಿಣಾಮ ಉಂಟು ಮಾಡುವುದಿಲ್ಲ. ಕಡಿಮೆ ಟಿಆರ್‌ಪಿ‌ ಇರುವ ಆವಾಜ಼್ ಭಾರತಿಯ ಮುಖ್ಯಸ್ಥೆ ಸೊನಾಲಿ ಬೇಂದ್ರೆ. ಗಟ್ಟಿಯಾದ ಪೋಷಣೆಯಿಲ್ಲದ ಕಾರಣ ಆ ಪಾತ್ರ ನೀರಸವಾಗಿ ಕಾಣುತ್ತದೆ. ಅದೇ ಕಾರಣದಿಂದ ಅಭಿನಯದಲ್ಲೂ ರಸವಿಲ್ಲ. ಶ್ರಿಯಾ ಪಳಗಾಂವ್ಕರ್ ನಿರ್ವಹಿಸಿದ ರಾಧಾ ಭಾರ್ಗವ ಪಾತ್ರ ಚಿತ್ರಕಥೆಗಾರರ ಪ್ರಕಾರ ಪ್ರಮುಖ ಪಾತ್ರ. ಆದರೆ ಗಟ್ಟಿತನದ ವ್ಯಕ್ತಿತ್ವದ ಬದಲು ತನ್ನ ಧೋರಣೆಗಳ ಬಗೆಗೇ ಅನುಮಾನ ಮತ್ತು‌ ನಿರ್ದಿಷ್ಟತೆ ಇಲ್ಲದಂತೆ ಅಲ್ಲಲ್ಲಿ ಕಾಣುವ ರಾಧಾ ಕೂಡ ಮನಸೂರೆಗೊಳಿಸುವಲ್ಲಿ ಸೋಲುತ್ತಾಳೆ. ಇವೆಲ್ಲರ ಮಧ್ಯೆ ‘ಪಾತಾಳ್ ಲೋಕ್’ನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಜೈದೀಪ್ ಅಲ್ಹಾವಟ್ ನಿರ್ವಹಿಸಿದ ದೀಪಾಂಕರ್ ಪಾತ್ರ ಗಟ್ಟಿ ಅಭಿನಯದ ಕಾರಣ ಮನಸ್ಸಲ್ಲಿ ಉಳಿಯುತ್ತದೆ. ಋಣಾತ್ಮಕವಾಗಿ ಚಿತ್ರಿಸಿದ ಪಾತ್ರವೊಂದು ವಿಕ್ಷಕರಿಗೆ ಖುಷಿಯಾದರೆ ಅದು ಆ‌ ನಟನ ಗೆಲುವೂ ಹೌದು, ಚಿತ್ರಕಥೆಗಾರನ ಸೋಲೂ ಹೌದು.

ಸರಣಿಯ ಹೆಚ್ಚಿನ ಭಾಗ ಸ್ಟುಡಿಯೋದ ಒಳಗೇ ನಡೆಯುವ‌ ಕಾರಣ ಒಂದು ತೆರನಾದ ಏಕತಾನತೆ ಆವರಿಸುತ್ತದೆ. ಮೊಬೈಲ್‌ಗಳಿಗೆ ಸ್ಪೈವೇರ್ ಹರಿಬಿಟ್ಟು ಪ್ರಮುಖರ ಚಲನವಲನ ಗಮನಿಸಿದ ಕಾರಣ ಮೂವತ್ತೈದು ದೇಶಗಳಲ್ಲಿ ಸುದ್ದಿಯಾದ ಪೆಗಾಸಸ್ ಈ ಸರಣಿಯ ಜೀವಾಳ. ಆದರೆ ಅದು ತೆರೆದುಕೊಳ್ಳುವುದು ಕೊನೆಯ ಅಧ್ಯಾಯದಲ್ಲಿ. ಊಬರ್ ಕೂಡ ತನ್ನ ಆ್ಯಪ್ ಬಳಕೆದಾರರ ಚಲನವಲನ ಗಮನಿಸಲು ಖಾಸಗಿತನ ವಿಚಾರದಲ್ಲಿ ಧೋಖಾ ನೀಡಿತ್ತು. ಅದು ಉಂಟು ಮಾಡುವ ಪರಿಣಾಮವನ್ನು ‘ಸೂಪರ್ ಪಂಪ್ಡ್ ಅಪ್: ದ ಬ್ಯಾಟಲ್ ಫಾರ್ ಊಬರ್’ನಲ್ಲಿ ಪರಿಣಾಮಕಾರಿ ಚಿತ್ರಿಸಲಾಗಿದೆ. ಕಾರಲ್ಲಿ ಕೂತ‌ ಮಂದಿ ಆಡುವ ಮಾತುಗಳು, ಅವರ ಹಾವಭಾವಗಳು ಅವರಿಗೇ ಗೊತ್ತಿಲ್ಲದಂತೆ ರೆಕಾರ್ಡ್ ಆಗುವುದು ತೆರೆಯ ಮೇಲೆ ಕಂಡಾಗ ಅದರ ಆಳ-ಅಗಲ ನೋಡುಗನಿಗೆ ಅರ್ಥವಾಗುತ್ತದೆ. ಆದರೆ ಅದೇ ವಿಚಾರ ಇಲ್ಲಿ ಕೇವಲ ಸುದ್ದಿ ವಾಚಕರ ಬಾಯಲ್ಲಷ್ಟೇ ಕೇಳುವಾಗ ಅದೊಂದು ಗಂಭೀರ ವಿಚಾರ ಅನಿಸುವುದೇ ಇಲ್ಲ.

ದೃಶ್ಯ ರೂಪದಲ್ಲಿ‌‌ ತೋರಿಸಿದ್ದಿದ್ದರೆ ಮಾತ್ರ ಪರಿಣಾಮಕಾರಿ ಆಗಬಹುದಾದ ಹಲವು ವಿಷಯಗಳನ್ನು ಕೇವಲ ಸಂಭಾಷಣೆಯ ಮೂಲಕ‌ ಹೇಳಹೊರಟ ಕಾರಣ ‘ದ ಬ್ರೋಕನ್ ನ್ಯೂಸ್’ ಸ್ವತಃ ಬ್ರೋಕನ್ ಸೀರೀಸ್‌ನಂತೆ ಕಾಣುತ್ತದೆ. ಸಮ್ಮಿಶ್ರ ಸರ್ಕಾರದಲ್ಲಿ ಎಂಎಲ್‌ಎಗಳು ನಿಷ್ಠೆ ಬದಲಾಯಿಸುವಂಥ ಸನ್ನಿವೇಶಕ್ಕೂ ಕೇವಲ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ‌ ಎದುರಾಬದರು ಕೂತು ಮಾತನಾಡುವ ದೃಶ್ಯವನ್ನು ಬಳಕೆ ಮಾಡಲಾಗಿದೆ. ಬಿಬಿಸಿ ಸ್ಟುಡಿಯೋಸ್‌ ಇಂಥ ಕ್ರಮಗಳ ಮೂಲಕ ನಿರ್ಮಾಣ ವಿಚಾರದಲ್ಲಿ ಭಾರಿ ಜುಗ್ಗತನ ಪ್ರದರ್ಶನ ಮಾಡಿರುವುದು ಕಣ್ಣಿಗೆ ರಾಚುತ್ತದೆ. ಹಲವು ಬಹುಮುಖ್ಯ ಭೇಟಿಗಳನ್ನೂ ಕೇವಲ ಬೇಸ್‌ಮೆಂಟ್‌ಗೆ ಸೀಮಿತಗೊಳಿಸಿ ಮುಗಿಸಲಾಗಿದೆ. ಪದೇ ಪದೆ ಬೇಸ್‌ಮೆಂಟ್ ಭೇಟಿಯೂ ಆ ಸನ್ನಿವೇಶಗಳನ್ನು ತೆಳುವಾಗಿಸಿದೆ.

ಈ‌ ಎಲ್ಲಾ ಕಾರಣಗಳಿಂದ ‘ದ ಬ್ರೋಕನ್ ನ್ಯೂಸ್’ ಸರಣಿಯು ಕತೆಯಲ್ಲಿ ಬರುವ ಆವಾಜ಼್ ಭಾರತಿಯಂತೆ ಕಡಿಮೆ ಟಿಆರ್‌ಪಿ ಪಡೆಯುವ ಸರಣಿ.

LEAVE A REPLY

Connect with

Please enter your comment!
Please enter your name here