ಸಂದೀಪ್‌ ರೆಡ್ಡಿ ವಂಗ ನಿರ್ದೇಶನದಲ್ಲಿ ‘ಅನಿಮಲ್‌ ಪಾರ್ಕ್‌’ ಹಿಂದಿ ಸಿನಿಮಾ ಘೋಷಣೆಯಾಗಿದೆ. ಇದು ‘ಅನಿಮಲ್‌’ ಚಿತ್ರದ ಸರಣಿ. ರಣಬೀರ್‌ ಕಪೂರ್‌, ಬಾಬ್ಬಿ ಡಿಯೋಲ್‌, ಅನಿಲ್‌ ಕಪೂರ್‌ ನಟನೆಯ ‘ಅನಿಮಲ್‌’ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿದೆ.

ರಣಬೀರ್ ಕಪೂರ್ ಮತ್ತು ಅನಿಲ್‌ ಕಪೂರ್‌ ಮುಖ್ಯ ಭೂಮಿಕೆಯಲ್ಲಿದ್ದ ‘ಅನಿಮಲ್‌’ ಹಿಂದಿ ಚಿತ್ರದ ಸೀಕ್ವೆಲ್‌ ಅಧಿಕೃತವಾಗಿ ಘೋಷಣೆಯಾಗಿದೆ. ಸೀಕ್ವೆಲ್‌ಗೆ ‘ಅನಿಮಲ್‌ ಪಾರ್ಕ್‌’ ಎಂದು ಶೀರ್ಷಿಕೆ ನಿಗಧಿಯಾಗಿದೆ. ‘ಅನಿಮಲ್‌’ ನಿರ್ದೇಶಿಸಿದ್ದ ಸಂದೀಪ್‌ ರೆಡ್ಡಿ ವಂಗ ಅವರೇ ಸರಣಿ ನಿರ್ದೇಶಿಸಲಿದ್ದಾರೆ. T-Series ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದು, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಮೂಡಿಬರಲಿರುವ ಪ್ರಭಾಸ್ ಅವರ ‘ಸ್ಪಿರಿಟ್’, ಅಲ್ಲು ಅರ್ಜುನ್ ಸಿನಿಮಾ ಮತ್ತು ‘ಅನಿಮಲ್‌ ಪಾರ್ಕ್’ ಚಿತ್ರಗಳಿಗೆ ಸಹಕರಿಸುತ್ತಿರುವುದಾಗಿ T – Series ತಿಳಿಸಿದೆ. 2023ರ ಯಶಸ್ವಿ ಚಿತ್ರಗಳಲ್ಲಿ ಒಂದಾದ ‘ಅನಿಮಲ್‌’ ಡಿಸೆಂಬರ್ 1ರಂದು ಬಿಡುಗಡೆಯಾಗಿ, ಭಾರತೀಯ ಬಾಕ್ಸ್‌ ಆಫೀಸ್‌ ನಲ್ಲಿ 500 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸಿದೆ.

ಭೂಷಣ್ ಕುಮಾರ್ ಅವರೊಂದಿಗಿನ ಸಹಕಾರದ ಕುರಿತು ಸಂದೀಪ್‌ ವಂಗಾ ಅವರು ‘ನಾನು ರಚಿಸುವ ಪ್ರತಿ ವಿಷಯಗಳ ಕುರಿತು ಭೂಷಣ್ ಕುಮಾರ್ ಅವರು ನೀಡುವ ಸಹಕಾರ ಮತ್ತು ಯಾವುದೇ ಹಾಡನ್ನು ಆಯ್ಕೆ ಮಾಡಲು T-Series ನೀಡಿರುವ ಸ್ವಾತಂತ್ರ್ಯವು ನನಗೆ ಮನೆಯ ಸದಸ್ಯರಂತೆಯೇ ಎನ್ನುವ ಭಾವನೆ ನೀಡುತ್ತದೆ. ಅದಕ್ಕಿಂತ ಹೆಚ್ಚು ನಿರ್ದೇಶಕನಿಗೆ ಇನ್ನೇನು ಬೇಕಿಲ್ಲ’ ಎಂದಿದ್ದಾರೆ. ‘ಅನಿಮಲ್‌’ ಚಿತ್ರದಲ್ಲಿ ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ತೃಪ್ತಿ ದಿಮ್ರಿ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದರೂ ಬಾಕ್ಸ್‌ ಆಫೀಸ್‌ ಗಳಿಕೆಯಲ್ಲಿ ದೊಡ್ಡ ಯಶಸ್ಸು ಕಂಡಿದೆ. ಚಿತ್ರದಲ್ಲಿನ ರಣಬೀರ್‌ ಮತ್ತು ಬಾಬಿ ಡಿಯೋಲ್‌ ಎಂಟ್ರಿ ಹಾಡುಗಳು ಟ್ರೆಂಡ್‌ ಸೃಷ್ಟಿಸಿವೆ.

LEAVE A REPLY

Connect with

Please enter your comment!
Please enter your name here