ಬೆಂಗಳೂರಿನಲ್ಲಿರುವ ಚಿತ್ರಮಂದಿರಗಳ ಪೈಕಿ ಈಗಾಗಲೇ ಸಾಕಷ್ಟು ಬಾಗಿಲು ಮುಚ್ಚಿವೆ. ಅವುಗಳಿದ್ದ ಜಾಗದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳು ತಲೆ ಎತ್ತುತ್ತಿವೆ. ಉಳಿದಿರುವ ಬೆರಳೆಣಿಕೆ ಸಿಂಗಲ್ ಸ್ಕ್ರೀನ್‌ಗಳ ಪಟ್ಟಿಯಲ್ಲಿದ್ದ ಕಾವೇರಿ ಚಿತ್ರಮಂದಿರ ಸಹ ಈಗ ಇದೇ ದಾರಿ ಹಿಡಿದಿದೆ. 50 ವರ್ಷ ಇತಿಹಾಸವುಳ್ಳ ಈ ಚಿತ್ರಮಂದಿರ ಈಗ ಶಾಶ್ವತವಾಗಿ ಪ್ರದರ್ಶನ ನಿಲ್ಲಿಸಿದೆ.
ಮಲ್ಟಿಪ್ಲೆಕ್ಸ್ ಸಂಸ್ಕೃತಿ, ಓಟಿಟಿ ಹಾಗೂ ಬದಲಾಗುತ್ತಿರುವ ಕಾಲಕ್ಕೆ ಬೆಂಗಳೂರಿನ ಮತ್ತೊಂದು ಚಿತ್ರಮಂದಿರ ಬಲಿಯಾಗಿದೆ. 50 ವರ್ಷದ ಇತಿಹಾಸ ಹೊಂದಿದ್ದ ಬೆಂಗಳೂರು ಪ್ಯಾಲೇಸ್ ಗುಟ್ಟಹಳ್ಳಿಯ ಕಾವೇರಿ ಥಿಯೇಟರ್ ಶಾಶ್ವತವಾಗಿ ಬಾಗಿಲು ಮುಚ್ಚಿದೆ. 1974ರ ಜನವರಿ 11ರಂದು ಡಾ ರಾಜಕುಮಾರ್ ಅಭಿನಯದ ‘ಬಂಗಾರದ ಪಂಜರ’ ಸಿನಿಮಾ ಪ್ರದರ್ಶನದ ಮೂಲಕ ʻಕಾವೇರಿ ಚಿತ್ರಮಂದಿರ ಆರಂಭವಾಗಿತ್ತು. ಕಳೆದ ಜನವರಿ 11ರಂದು 50 ವರ್ಷ ಪೂರೈಸಿದ್ದ ಚಿತ್ರಮಂದಿರದಲ್ಲಿ ಸುವರ್ಣ ಮಹೋತ್ಸವ ಸಹ ನಡೆದಿತ್ತು. ಒಂದು ಕಾಲು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಥಿಯೇಟರ್ ಬೆಂಗಳೂರಿನ ಅತಿದೊಡ್ಡ ಚಿತ್ರಮಂದಿರಗಳಲ್ಲಿ ಒಂದಾಗಿತ್ತು.
ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಕ್ಯಾಂಟೀನ್, ಜತೆಗೆ ಮಿನಿ ಬಾಲ್ಕನಿ ಇದ್ದ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಇದೂ ಸಹ ಒಂದು. ಚಿತ್ರಮಂದಿರ ಆರಂಭವಾಗಿದ್ದ ದಿನಗಳಲ್ಲಿ 1384 ಸೀಟುಗಳ ವ್ಯವಸ್ಥೆ ಇತ್ತು. ನಂತರದಲ್ಲಿ ಥಿಯೇಟರ್ ರಿನೋವೇಷನ್ ಮಾಡಲಾಗಿತ್ತು. ಆಗ 1384 ರಿಂದ 1100ಕ್ಕೆ ಆಸನಗಳ ಸಂಖ್ಯೆಯನ್ನು ಇಳಿಸಲಾಗಿತ್ತು. ‘ಬಂಗಾರದ ಪಂಜರ, ‘ಶಂಕರಾಭರಣಂ’, ‘ದಿಲ್‌ವಾಲೆ ದುಲನಿಯಾ ಲೇ ಜಾಯೆಂಗೆ’ ಸಿನಿಮಾಗಳು ಇಲ್ಲಿ 25 ವಾರ ಪ್ರದರ್ಶನ ಕಂಡಿದ್ದವು. ‘ಜನರು ಸಿನಿಮಾ ನೋಡಲು ಬರುವುದೇ ತೀರಾ ಕಡಿಮೆ ಆಗಿದೆ. ಇದರಿಂದಾಗಿ ಚಿತ್ರಮಂದಿರದ ಕಲೆಕ್ಷನ್ ತುಂಬಾ ಕಡಿಮೆಯಾಗಿದ್ದು, ಥಿಯೇಟರ್ ನಡೆಸುವುದು ಕಷ್ಟವಾಗಿದೆ. ಈ ಕಾರಣದಿಂದಲೇ ಏಪ್ರಿಲ್ 19ರಿಂದ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ. ಮುಂದೆ ಈ ಜಾಗದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟುತ್ತೇವೆ’ ಎನ್ನುತ್ತಾರೆ ಥಿಯೇಟರ್ ಮಾಲೀಕ ಪ್ರಕಾಶ್. ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಗಳ ಸೂಪರ್‌ಹಿಟ್ ಸಿನಿಮಾಗಳನ್ನು ನೋಡಿದ ಸಿನಿಪ್ರಿಯರಿಗೆ ಕಾವೇರಿ ಚಿತ್ರಮಂದಿರ ಇನ್ನು ಕೇವಲ ನೆನಪು ಮಾತ್ರ.