ಚಂದನವನದ ‘ನಟ ಸಾರ್ವಭೌಮ’ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಜತೆ ಮುದ್ದು ಮುದ್ದಾಗಿ ಮೃದು ಸ್ವಭಾವದ ಹುಡುಗಿಯ ಪಾತ್ರದಲ್ಲಿ ಮಿಂಚಿದವರು ನಟಿ ಅನುಪಮಾ ಪರಮೇಶ್ವರನ್. ಸದ್ಯ ‘ಟಿಲ್ಲು ಸ್ಕ್ವೇರ್’ ಸಿನಿಮಾದಿಂದಾಗಿ ಸಖತ್ ಸುದ್ದಿಯಲ್ಲಿರುವ ಮಲಯಾಳಂ ಚೆಲುವೆ ಈಗ ತಮ್ಮ ಹೊಸ ತೆಲುಗು ಸಿನಿಮಾ ಪ್ರಕಟಿಸಿದ್ದಾರೆ.
ವಿಭಿನ್ನ ಪಾತ್ರಗಳಿಗೆ ಜೀವ ತುಂಬುವ ನಟಿ ಅನುಪಮಾ ಪರಮೇಶ್ವರನ್ ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಸಖತ್ ಬೋಲ್ಡ್ ಆಗಿ ನಟಿಸಿದ್ದೂ ಇದೆ. ಅದರಲ್ಲೂ ಇತ್ತೀಚೆಗೆ ತೆರೆಕಂಡ ‘ಟಿಲ್ಲು ಸ್ಕ್ವೇರ್’ ಸಿನಿಮಾ ಬಾಕ್ಸಾಫೀಸ್ನಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಇತ್ತೀಚೆಗಷ್ಟೆ ಒಟಿಟಿಗೂ ಲಗ್ಗೆಯಿಟ್ಟಿದೆ. 2002ರಲ್ಲಿ ತೆರೆ ಕಂಡು ಹಿಟ್ ಆಗಿದ್ದ ‘ಡಿಜೆ ಟಿಲ್ಲು’ ಚಿತ್ರದ ಮುಂದುವರಿದ ಭಾಗವೇ ಈ ‘ಟಿಲ್ಲು ಸ್ಕ್ವೇರ್’. ಸಿದ್ದು ಜೊನ್ನಲಗಡ್ಡ ಜೊತೆ ಅನುಪಮಾ ಪರಮೇಶ್ವರನ್ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಯುವಜನರ ನಿದ್ದೆಗೆಡಿಸಿರುವ ಈ ಸಿನಿಮಾದ ಗಳಿಕೆ ಅಂದಾಜು ನೂರು ಕೋಟಿ ಎನ್ನಲಾಗುತ್ತಿದೆ. ಈ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಅನುಪಮಾ ಪರಮೇಶ್ವರನ್ ಈಗ ಮತ್ತೊಂದು ಹೊಸ ತೆಲುಗು ಸಿನಿಮಾ ಅನೌನ್ಸ್ ಮಾಡಿದ್ದಾರೆ.
ನಟಿ ಅನುಪಮಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೊಸ ಸಿನಿಮಾ ‘ಪರದಾ’ ಪೋಸ್ಟರ್ ಹಾಗೂ ಕಾನ್ಸೆಪ್ಟ್ ವಿಡಿಯೋ ಹಂಚಿಕೊಂಡಿದ್ದಾರೆ. ‘ಈ ಹಿಂದೆ ಹೇಳಿದಂತೆಯೇ ನಾನು ಒಂದೊಳ್ಳೆ ಕಥೆ ಹಾಗೂ ಪಾತ್ರ ಜೊತೆ ಬಂದಿದ್ದೇನೆ. ಬ್ಲಾಕ್ಬಸ್ಟರ್ ‘ಟಿಲ್ಲು ಸ್ಕ್ವೇರ್’ ನಂತರ, ಈಗ ಪರದಾ ಜೊತೆ ಬರುತ್ತಿದ್ದೇನೆ. ಹಿಂದೆಂದೂ ಕಾಣದಂತಹ ಅನುಭವ ಈ ಸಿನಿಮಾ ಮೂಲಕ ಸಿಗಲಿದೆ ಅನ್ನೋ ಭರವಸೆ ನೀಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ‘ಟಿಲ್ಲು ಸ್ಕ್ವೇರ್’ ಚಿತ್ರದಲ್ಲಿ ಸಖತ್ ಬೋಲ್ಡ್ ಹಾಗೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ನಟಿ, ಈಗ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ.
‘ಪರದಾ’ ಸಿನಿಮಾದ ಕಾನ್ಸೆಪ್ಟ್ ವಿಡಿಯೋವನ್ನು ನಟಿ ಸಮಂತಾ ರಿಲೀಸ್ ಮಾಡಿದ್ದಾರೆ. ದೇವಿಯ ವಿಗ್ರಹದ ಜೊತೆಗೆ ಮನುಸ್ಮೃತಿಯ ಶ್ಲೋಕದೊಂದಿಗೆ ಆರಂಭವಾಗುವ ವಿಡಿಯೋದಲ್ಲಿ ಮುಖದ ಮೇಲೆ ಸೀರೆಯ ಸೆರಗನ್ನು ಮುಸುಕಿನಂತೆ ಹಾಕಿಕೊಂಡಿರುವ ಮಹಿಳೆಯವ ನಡುವೆ ಅನುಪಮಾ ಪರಮೇಶ್ವರನ್ ಇರುತ್ತಾರೆ. ಮೆಲ್ಲನೆ ಅನುಪಮಾ ಮುಖದ ಮೇಲಿನ ಮುಸುಕು ಅಥವಾ ಪರದಾ ಸರಿಯುತ್ತದೆ. ‘ಪರದಾ… ಇನ್ ದ ನೇಮ್ ಆಫ್ ಲವ್’ ಅನ್ನೋ ಟ್ಯಾಗ್ ಲೈನ್ ಸಹ ಇದೆ. ಇದನ್ನ ನೋಡಿದರೆ, ಇದೊಂದು ಪ್ರೇಮ ಕಥೆಯ ಜೊತೆಗೆ ಪರದೆಯ ಹಿಂದೆ ಇರುವ ಮಹಿಳೆಯ ಕಥೆಯನ್ನೂ ಹೇಳುವ ಚಿತ್ರವಾಗಿರಬಹುದು ಎಂದು ಊಹಿಸಲಾಗುತ್ತಿದೆ.
ಆನಂದ ಮೀಡಿಯಾ ಬ್ಯಾನರ್ ಅಡಿಯಲ್ಲಿ ವಿಜಯ್ ಡೊಂಕದ, ಶ್ರೀನಿವಾಸಲು ಪಿವಿ ಮತ್ತು ಶ್ರೀಧರ್ ಮಕ್ಕುವ ನಿರ್ಮಿಸುತ್ತಿರುವ ಪರದಾ ಚಿತ್ರಕ್ಕೆ ‘ಸಿನಿಮಾ ಬಂಡಿ’ ಖ್ಯಾತಿಯ ಪ್ರವೀಣ್ ಕಂಡ್ರೇಗುಲಾ ನಿರ್ದೇಶನವಿದೆ. ಮಲಯಾಳಂ ನಟ ‘ಹೃದಯಂ’ ಖ್ಯಾತಿಯ ದರ್ಶನ ರಾಜೇಂದ್ರನ್ ಮತ್ತು ಸಂಗೀತಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೋಪಿ ಸುಂದರ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ದೆಹಲಿ, ಹಿಮಾಚಲ ಪ್ರದೇಶ ಮತ್ತು ಕೆಲವು ಹಳ್ಳಿಗಳಲ್ಲಿ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ.