ರಾಜ್‌ಕುಮಾರ್‌ ನಿರ್ದೇಶನದ ‘ಅರಬ್ಬೀ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಅಂತಾರಾಷ್ಟ್ರೀಯ ಈಜುಪಟು ವಿಶ್ವಾಸ್‌ ಬದುಕಿನ ಕತೆಯನ್ನೇ ನಿರ್ದೇಶಕರು ಚಿತ್ರದಲ್ಲಿ ಹೇಳುತ್ತಿದ್ದಾರೆ. ವಿಶ್ವಾಸ್‌ ಅವರೇ ಚಿತ್ರದ ಮುಖ್ಯ ಪಾತ್ರ ನಿರ್ವಹಿಸುತ್ತಿರುವುದು ವಿಶೇಷ. ಮಾಜಿ ಪೊಲೀಸ್‌ ಅಧಿಕಾರಿ, ರಾಜಕಾರಣಿ ಅಣ್ಣಾಮಲೈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ. ಅಂಗವಿಕಲತೆಯೂ ಸಹ ಅಡ್ಡಿಯಾಗಲಾರದು ಎಂದು ವಿಶ್ವಾಸ್ ಎಂಬ ವಿಶೇಷಚೇತನ ಯುವಕನೊಬ್ಬ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ನೈಜ ಕಥೆಯನ್ನು ನಿರ್ದೇಶಕ ರಾಜ್‌ಕುಮಾರ್ ಅವರು ‘ಅರಬ್ಬೀ’ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್‌ ಅನ್ನು ಫಿಲಂ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯ ಜೊತೆಗೆ ತನ್ನ ಎರಡೂ ಕೈಗಳನ್ನು ಕಳೆದುಕೊಳ್ಳುವ ವಿಶ್ವಾಸ್, ತನ್ನ ಅಂಗವಿಕಲತೆಯ ಕಾರಣದಿಂದಲೇ ಸಮಾಜದಲ್ಲಿ ಸಾಕಷ್ಟು ಅವಮಾನ ಅನುಭವಿಸುತ್ತಾರೆ. ಸಾಧನೆ ಮಾಡಿ ತೋರಿಸಬೇಕೆಂದು ನಿರ್ಧರಿಸಿ, ಹಠ, ಆತ್ಮವಿಶ್ವಾಸದಿಂದಲೇ ಗೆಲುವು ಸಾಧಿಸುತ್ತಾರೆ.

ಸ್ವಿಮ್ಮಿಂಗ್ ಕೋಚ್ ಆಗಿ ನಾಯಕನಿಗೆ ಸ್ಪೂರ್ತಿ ತುಂಬುವ ಪಾತ್ರವನ್ನು ಅಣ್ಣಾಮಲೈ (IPS) ನಿರ್ವಹಿಸಿದ್ದಾರೆ. ನಾಯಕನ ಗೆಳತಿಯೂ ಬೆನ್ನೆಲುಬಾಗಿ ನಿಲ್ಲುತ್ತಾಳೆ. ವಿಶ್ವಾಸ್ ಕೊನೆಗೂ ಅಂದುಕೊಂಡದ್ದನ್ನು ಸಾಧಿಸಿ ತೋರಿಸಿದನೇ? ಇಲ್ಲವೇ? ಎನ್ನುವುದೇ ಚಿತ್ರದ ಕತೆ. Shri Vijaya Raghavendra Productions ಮೂಲಕ ಚೇತನ್ ಸಿ ಎಸ್ ಚಿತ್ರವನ್ನು ನಿರ್ಮಿಸಿದ್ದಾರೆ. ‘ಸರಿಗಮಪ’ ಖ್ಯಾತಿಯ ಕಂಬದ ರಂಗಯ್ಯ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಆನಂದ್ ದಿಂಡವಾರ ಛಾಯಾಗ್ರಹಣ ನಿರ್ವಹಿಸಿದ್ದಾರೆ.

ನಿರ್ಮಾಪಕ ಚೇತನ್ ಸಿ ಎಸ್ ಸಿನಿಮಾ ಬಗ್ಗೆ ಮಾತನಾಡಿ, ‘ನಿರ್ದೇಶಕ ರಾಜ್‌ಕುಮಾರ್ ಬಂದು ಈ ಕಾನ್ಸೆಪ್ಟ್ ಹೇಳಿದಾಗ ಇಷ್ಟವಾಯಿತು. ಛಲವಿದ್ದರೆ ಏನನ್ನಾದರೂ ಮಾಡಿ ತೋರಿಸಬಹುದು ಎಂದು ಈ ಚಿತ್ರದಲ್ಲಿ ತೋರಿಸಿದ್ದೇವೆ. ಉಡುಪಿ, ಅರಬ್ಬೀ ಸಮುದ್ರದಲ್ಲಿ 32 ದಿನಗಳ ಕಾಲ ಚಿತ್ರೀಕರಿಸಿದ್ದೇವೆ’ ಎಂದರು. ಫಿಲಂ ಚೇಂಬರ್ ಉಪಾಧ್ಯಕ್ಷ ವೆಂಕಟೇಶ್, ಯಶವಂತಪುರ ಸರ್ಕಲ್ ಇನ್‌ಸ್ಪೆಕ್ಟರ್‌ ಅಜಯ್ ಸಾರಥಿ, ನಾಗೇಂದ್ರ ಅರಸ್, ವಿಜಯ್ ಚೆಂಡೂರ್ ಮುಂತಾದವರು ಚಿತ್ರದ ಬಗ್ಗೆ ಮಾತನಾಡಿದರು. ವಿಶ್ವಾಸ್‌ ರೀತಿಯ ವಿಶೇಷಚೇತನರಿಗೆ ಸಮಾಜ ಕೇವಲ ಅನುಕಂಪ ತೋರಿಸದೆ, ಅವರ ಪ್ರತಿಭೆಗೆ ತಕ್ಕಂತೆ ಅವಕಾಶಗಳನ್ನು ಕೊಟ್ಟರೆ, ದೊಡ್ಡ ಸಾಧನೆ ಮಾಡುವರು ಎನ್ನುವುದೇ ಈ ಚಿತ್ರದ ಸಂದೇಶ.

LEAVE A REPLY

Connect with

Please enter your comment!
Please enter your name here