ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾನಿರ್ದೇಶಕ ನಿತಿನ್‌ ಚಂದ್ರಕಾಂತ್‌ ದೇಸಾಯಿ ಇಹಲೋಕ ತ್ಯಜಿಸಿದ್ದಾರೆ. ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ದೇಸಾಯಿ ಅವರು ನಾಲ್ಕು ಬಾರಿ ರಾಷ್ಟ್ರಪ್ರಶಸ್ತಿ, ಮೂರು ಬಾರಿ ಫಿಲ್ಮ್‌ಫೇರ್‌ ಪುರಸ್ಕಾರ ಪಡೆದಿದ್ದಾರೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿಂದಿ ಸಿನಿಮಾರಂಗದ ಖ್ಯಾತ ಕಲಾ ನಿರ್ದೇಶಕ ನಿತಿನ್‌ ಚಂದ್ರಕಾಂತ್‌ ದೇಸಾಯಿ (57 ವರ್ಷ) ಅಗಲಿದ್ದಾರೆ. ಮುಂಬೈ ಕರ್ಜತ್‌ನಲ್ಲಿನ ಅವರದೇ ಒಡೆತನದ ND ಸ್ಟುಡಿಯೋದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಹಿಂದಿ ಚಲನಚಿತ್ರೋದ್ಯಮದಲ್ಲಿ ಕಲಾ ನಿರ್ದೇಶಕ, ಪ್ರೊಡಕ್ಷನ್‌ ಡಿಸೈನರ್‌, ನಿರ್ದೇಶಕ, ನಿರ್ಮಾಪಕರಾಗಿ ವಿವಿಧ ವಿಭಾಗಗಳಲ್ಲಿ ಗುರುತಿಸಿಕೊಂಡಿದ್ದ ದೇಸಾಯಿ ಹಿಂದಿ ಮತ್ತು ಮರಾಠಿ ಕಿರುತೆರೆಯಲ್ಲಿ ಹೆಸರು ಮಾಡಿದವರು. ಅಶುತೋಷ್‌ ಗೊವಾರಿಕರ್, ವಿಧು ವಿನೋದ್‌ ಚೊಪ್ರಾ, ರಾಜಕುಮಾರ್‌ ಹಿರಾನಿ, ಸಂಜಯ್‌ ಲೀಲಾ ಬನ್ಸಾಲಿ ಸೇರಿದಂತೆ ಹಲವು ಖ್ಯಾತನಾಮ ಚಿತ್ರನಿರ್ದೇಶಕರ ಸಿನಿಮಾಗಳಿಗೆ ಸೆಟ್‌ಗಳನ್ನು ಹಾಕಿದ್ದ ಹೆಗ್ಗಳಿಕೆ ಅವರದು.

ಮೂಲಗಳು ಹೇಳುವಂತೆ ಆಗಸ್ಟ್‌ 2ರ ಬೆಳಿಗ್ಗೆ ನಿತಿನ್ ದೇಸಾಯಿ ಅವರ ಮೃತ ದೇಹವು ND ಸ್ಟುಡಿಯೋದಲ್ಲಿ ಪತ್ತೆಯಾಗಿದೆ. ಅವರ ಅಕಾಲಿಕ ಸಾವಿನ ಬಗ್ಗೆ ಖಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 20 ವರ್ಷಗಳ ವೃತ್ತಿ ಜೀವನದಲ್ಲಿ ‘1942 ಎ ಲವ್‌ ಸ್ಟೋರಿ’ ‘ಹಮ್‌ ದಿಲ್‌ ದೇ ಚುಕೆ ಸನಮ್‌’, ‘ದೇವದಾಸ್‌’, ‘ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಮುಂಬೈ’, ‘ಪ್ರೇಮ್‌ ರತನ್‌ ಧನ್‌ ಪಾಯೋ’ ಮುಂತಾದ ಜನಪ್ರಿಯ ಸಿನಿಮಾಗಳ ಕಲಾನಿರ್ದೇಶಕರಾಗಿ ನಿತಿನ್‌ ಕೆಲಸ ಮಾಡಿದ್ದಾರೆ. 2019ರಲ್ಲಿ ತೆರಕಂಡಿದ್ದ ಅಶುತೋಷ್‌ ಗೌರೀಕರ್‌ ನಿರ್ದೇಶನದ ‘ಪಾಣಿಪತ್‌’ ಕಲಾನಿರ್ದೇಶಕರಾಗಿ ಅವರ ಕೊನೆಯ ಸಿನಿಮಾ.

ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ನಿತಿನ್‌ ದೇಸಾಯಿ ನಾಲ್ಕು ಬಾರಿ ರಾಷ್ಟ್ರಪ್ರಶಸ್ತಿ, ಮೂರು ಬಾರಿ ಫಿಲ್ಮ್‌ಫೇರ್‌ ಪುರಸ್ಕಾರ ಪಡೆದಿದ್ದಾರೆ. 2002ರಲ್ಲಿ ‘ದೇಶ್ ದೇವಿ’‌ ಭಕ್ತಿಪ್ರಧಾನ ಚಲನಚಿತ್ರ ನಿರ್ಮಿಸುವ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. 2005ರಲ್ಲಿ 52 ಎಕರೆ ಭೂಮಿಯಲ್ಲಿ ಮುಂಬೈ ಬಳಿ ಕರ್ಜತ್‌ನಲ್ಲಿ ‘ND ಸ್ಟುಡಿಯೋಸ್’ ಆರಂಭಿಸಿದ್ದರು. ‘ಜೋಧಾ ಅಕ್ಬರ್’, ‘ಟ್ರಾಫಿಕ್ ಸಿಗ್ನಲ್’ ಮುಂತಾದ ಚಲನಚಿತ್ರಗಳು ಹಾಗೂ ಕಲರ್ಸ್‌ ವಾಹಿನಿಯ ‘ಬಿಗ್ ಬಾಸ್‌’ ರಿಯಾಲಿಟಿ ಶೋಗೆ ಈ ಸ್ಟುಡಿಯೋದಲ್ಲಿ ಬೃಹತ್‌ ಸೆಟ್‌ಗಳನ್ನು ಹಾಕಲಾಗಿತ್ತು. ಇವರ ಅಕಾಲಿಕ ಅಗಲಿಕೆಯಿಂದ ನಟ ಅಕ್ಷಯ್‌ ಕುಮಾರ್ ತಮ್ಮ ‘OMG 2’ ಚಿತ್ರದ ಟ್ರೈಲರ್‌ ಬಿಡುಗಡೆ ಮುಂದೂಡಿದ್ದಾರೆ. ಚಿತ್ರನಿರ್ದೇಶಕ ಅಶುತೋಷ್‌ ಗೊವಾರಿಕರ್ ಸೇರಿದಂತೆ ಬಾಲಿವುಡ್‌ನ ಹಲವರು ನಿತಿನ್‌ ದೇಸಾಯಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here