ಚಿತ್ರಗಳಲ್ಲಿ ಹಿಂಸೆಯ ವೈಭವೀಕರಣವನ್ನು ‘ಕೆತಾರ್ಟಿಕ್ ರಿಲೀಸ್‌ ‘ ಎನ್ನುವ ಒಂದು ವಾದವಿದೆ. ಇಂತಹ ಅಗತ್ಯಗಳೇ ಇಲ್ಲದೆ, ತೆರೆಯ ಮೇಲೆ ಮನೋರಂಜನೆಗಾಗಿ ಹಿಂಸೆಯನ್ನು ತರುವುದು ಕೂಡ ಸಿನಿಮಾಗಳಲ್ಲಿ ತೀರಾ ಸಾಮಾನ್ಯ, ಆದರೆ, ‘ಅನಿಮಲ್’ ಚಿತ್ರದಲ್ಲಿರುವಷ್ಟು ಮಟ್ಟಿನ ಹಿಂಸಾತ್ಮಕ ದೃಶ್ಯಗಳು ಭಾರತದ ಇತರ ಯಾವುದೇ ಚಿತ್ರಗಳಲ್ಲೂ ಇಲ್ಲವೇನೋ. ಪ್ರಜ್ಞಾಪೂರ್ವಕವಾಗಿ ಮತ್ತು ಪೂರ್ತಿಯಾಗಿ ಪೊಲಿಟಿಕಲೀ ಇನ್‌ಕರೆಕ್ಟ್ ಸಿನಿಮಾವನ್ನು ತೆಗೆದಿರುವುದರ ಹಿಂದೆ ನಿರ್ದೇಶಕರ ಉದ್ದೇಶವೇನೇ ಇರಲಿ, ಈ ಚಿತ್ರದ ಯಶಸ್ಸು ಅಥವಾ ಅಪಯಶಸ್ಸು ಪ್ರೇಕ್ಷಕರ ಮನಸ್ಥಿತಿಯ ಬಗ್ಗೆ ಸಾಕಷ್ಟು ಹೇಳಲಿದೆ.

ಅದು ಹೊಸ ನಿರ್ದೇಶಕರೊಬ್ಬರ ಚೊಚ್ಚಲ ಚಿತ್ರ. ನಿರ್ದೇಶಕರಿಗೆ ಸಿನಿಮಾ ಕಟ್ಟುವ ಕಲೆ ಗೊತ್ತಿತ್ತು, ಮಾದರಿಗಳನ್ನು ಮುರಿದು ಕಟ್ಟುವ ಧೈರ್ಯವಿತ್ತು. ಹೀಗಾಗಿ, ಹೊಸತನ ಮತ್ತು ತೀವ್ರತೆಯಿಂದ ಕೂಡಿದ್ದ ಚಿತ್ರ ಅಪಾರ ಮೆಚ್ಚುಗೆ ಗಳಿಸಿತು. ಆದರೆ, ಅದರಲ್ಲಿದ್ದ ಕೆಲ ಅಂಶಗಳು ಹಲವರಿಗೆ ಸಮಸ್ಯಾತ್ಮಕವೆನಿಸಿ ಸ್ವಲ್ಪಮಟ್ಟಿನ ಟೀಕೆಯೂ ಎದುರಾಯ್ತು. ಅದೇ ಚಿತ್ರ ಹಿಂದಿಗೆ ರಿಮೇಕ್ ಆಗಿ ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಹೆಸರು ಮಾಡುತ್ತಿದ್ದಂತೆ, ಚಿತ್ರದಲ್ಲಿದ್ದ (ನಮ್ಮ ಚಿತ್ರಗಳಲ್ಲಿ ಹೊಸದೇನೂ ಅಲ್ಲದ) ಟಾಕ್ಸಿಕ್ ಮಸ್ಕ್ಯುಲಾನಿಟಿಯ ಬಗ್ಗೆ ಕಟು ವಿಮರ್ಶೆಗಳು ಬಂದವು. ಚಿತ್ರದ ಕುರಿತ ಚರ್ಚೆಗಳು ಕಾವೇರಿದಂತೆ ಚಿತ್ರದ ಸಂಪಾದನೆಯೂ ಹೆಚ್ಚಿ, ಬ್ಲಾಕ್‌ಬಸ್ಟರ್ ಎನಿಸಿಕೊಂಡಿತು.

ಈಗ ನಿರ್ದೇಶಕರು ತಮ್ಮ ಚಿತ್ರದ ಬಗ್ಗೆ ಎದುರಾದ ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮದೇ ದಾರಿಯಲ್ಲಿ ಮುಂದುವರಿಯಬಹುದು, ಇಲ್ಲವೇ ವಿಮರ್ಶೆಗಳನ್ನು ಪರಾಮರ್ಶಿಸಿ ತಪ್ಪೆನಿಸಿದಲ್ಲಿ ತಿದ್ದಿಕೊಳ್ಳಲು ಯತ್ನಿಸಬಹುದು. ಆದರೆ, ಈ ಎರಡೂ ಹಾದಿ ಬಿಟ್ಟು ವಿಮರ್ಶಕರಿಗೆ ಸವಾಲೆಸೆಯುವುದಕ್ಕಾಗಿಯೇ, ಮತ್ತಷ್ಟು ಪ್ರಚೋದಿಸುವುದಕ್ಕಾಗಿಯೇ, ಟೀಕೆಗಳನ್ನು ಆಹ್ವಾನಿಸುವುದಕ್ಕಾಗಿಯೇ ಚಿತ್ರ ಮಾಡಿದರೆ ಆಗ ಹೊರಹೊಮ್ಮುವುದೇ – ಅನಿಮಲ್.

ಅತೀ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಜನಪ್ರಿಯತೆ ಮತ್ತು ಅಭಿಮಾನಿಗಳನ್ನು ಸಂಪಾದಿಸಿದ ನಿರ್ದೇಶಕರೆಂದರೆ ಸಂದೀಪ್ ರೆಡ್ಡಿ ವಂಗಾ. ‘ಕಬೀರ್ ಸಿಂಗ್’, ‘ಅರ್ಜುನ್ ರೆಡ್ಡಿ’ಯ ರಿಮೇಕ್ ಆಗಿರುವುದರಿಂದ, ಇದುವರೆಗೆ ಅವರು ನಿರ್ದೇಶಿಸಿರುವ ಸಿನಿಮಾ ಒಂದೇ ಎನ್ನುವುದಕ್ಕೆ ಅಡ್ಡಿ ಇಲ್ಲ. ಆದರೂ, ‘ಅನಿಮಲ್’ ಚಿತ್ರದ ಬಗ್ಗೆ ಹುಟ್ಟಿದ್ದ ನಿರೀಕ್ಷೆಗೆ ನಾಯಕ ರಣಬೀರ್ ಕಪೂರ್ ಎಷ್ಟು ಕಾರಣವೋ ವಂಗಾ ಕೂಡ ಅಷ್ಟೇ ಕಾರಣ. ಅನಿಮಲ್ ಕತೆಯ ಮೂಲದಲ್ಲಿರುವುದು ಅಪ್ಪ ಮತ್ತು ಮಗನ ಸಂಬಂಧ. ಅಪ್ಪನ ಪ್ರೀತಿ ಮತ್ತು ಒಂದು ಮೆಚ್ಚುಗೆಯ ಮಾತಿಗಾಗಿ ಕಾಯುವ ಮಗನ ಕುರಿತ ಸಿನಿಮಾಗಳು ಸಾಕಷ್ಟು ಬಂದಿದ್ದರೂ, ಅನಿಮಲ್‌ನಲ್ಲಿ ಅದು ಅಷ್ಟು ಭಾವುಕ ಮತ್ತು ಸರಳ ವಿಷಯವಲ್ಲ.

ಇಲ್ಲಿ ರಣವಿಜಯ್ ಸಿಂಗ್‌ಗೆ (ರಣಬೀರ್ ಕಪೂರ್) ತನ್ನಪ್ಪ ಬಲ್‌ಬೀರ್ ಸಿಂಗ್ (ಅನಿಲ್ ಕಪೂರ್) ಮೇಲೆ ಇರುವುದು ಗೀಳು. ಕೆಲವು ಏಕಮುಖ ಪ್ರೀತಿಯ ಸಂದರ್ಭಗಳಲ್ಲಿ ನಾವು ನೋಡುವ, ಹುಚ್ಚಿನ ಮಟ್ಟಿಗೇರಿರುವ, ವಿಧ್ವಂಸಕ ಪ್ರೀತಿ. ಈ ಒನ್ ಸೈಡೆಡ್‌ ಲವ್‌ಸ್ಟೋರಿಯಲ್ಲಿ ನಾಯಕ – ನಾಯಕಿಯ ಬದಲು ನಾಯಕ ಮತ್ತು ಅವನ ಅಪ್ಪ ಇದ್ದಾರೆ. ಇಂತಹ ಕೊಂಚ ನಂಬಲೂ ಕಷ್ಟವಾಗುವ ಕಥೆಯ ಆರಂಭದಲ್ಲೇ ನಾಯಕನ ಮಾನಸಿಕ ಸ್ಥಿತಿಯ ಬಗ್ಗೆ ಅನುಮಾನಗಳು ಬರುತ್ತವೆ. ಆದರೆ, ಅದನ್ನು ಮಾನಸಿಕ ತೊಂದರೆಗಿಂತ ಹೆಚ್ಚು ಅನಿಮಲ್ ಇನ್‌ಸ್ಟಿಂಕ್ಟ್ ಎಂಬಂತೆ ಹೇಳುತ್ತಾ ಹೋಗುತ್ತಾರೆ ನಿರ್ದೇಶಕರು.

ಬೇರೊಬ್ಬನೊಂದಿಗೆ ಮದುವೆ ನಿಶ್ಚಯವಾಗಿದ್ದ ಗೀತಾಂಜಲಿಗೆ (ರಶ್ಮಿಕಾ ಮಂದಣ್ಣ) ಆಲ್ಪಾ ಮೇಲ್ ಬಗ್ಗೆ ಪಾಠ ಮಾಡುತ್ತಾನೆ ವಿಜಯ್. ಮನುಷ್ಯ ಗುಹಾವಾಸಿಯಾಗಿದ್ದಾಗ ಹೆಣ್ಣಿಗೆ ಅಡುಗೆ ಮಾಡುವುದರ ಜೊತೆಗೆ ಇದ್ದ ಮತ್ತೊಂದು ಜವಾಬ್ದಾರಿಯೆಂದರೆ ತನ್ನ ಸಂತಾನದ ಮುಂದುವರಿಕೆಗೆ ಸರಿಯಾದ ಗಂಡನ್ನು ಹುಡುಕುವುದು ಮತ್ತು ಆಕೆ ಯಾವಾಗಲೂ ಆಲ್ಫಾ ಮೇಲ್ ಅನ್ನೇ ಆರಿಸುತ್ತಿದ್ದಳು ಎನ್ನುವ ವಿಜಯ್ ಮಾತನ್ನು ಗೀತಾಂಜಲಿ ಕಣ್ಣರಳಿಸಿ ಕೇಳುತ್ತಾಳೆ ಮತ್ತು ತನ್ನ ಮದುವೆ ಮುರಿದು ಕಣ್ಣು ಮುಚ್ಚಿ ಅವನ ಹಿಂದೆ ಹೋಗುತ್ತಾಳೆ. ಇದೇ ನಿರ್ದೇಶಕರ ಹಿಂದಿನ ಸಿನಿಮಾದ ಡಾಕ್ಚರ್ ಪ್ರೀತಿಗೂ, ಯುಎಸ್‌ನಲ್ಲಿ ಎಂಬಿಎ ಮಾಡಹೊರಟಿದ್ದ ಈ ಸಿನಿಮಾದ ಗೀತಾಂಜಲಿಗೂ ಹೀಗಾಗಿ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.

ಒಂದಷ್ಟು ಚಿತ್ರ ವಿಚಿತ್ರ ರೋಮ್ಯಾಂಟಿಕ್ ದೃಶ್ಯಗಳು, ಸನ್ನಿವೇಶಗಳು, ಡೈಲಾಗ್ಸ್‌ಗಳ ನಡುವೆ ಮದುವೆ ಮಾಡಿಕೊಂಡು ಇಬ್ಬರೂ ಅಮೆರಿಕಾಗೆ ಹೋಗಿ ನೆಲೆಸುತ್ತಾರೆ. ಆದರೆ, ಅಪ್ಪ ಬಲ್‌ಬೀರ್ ಸಿಂಗ್‌ ಮೇಲೆ ಹತ್ಯೆ ಯತ್ನ ನಡೆದಾಗ ನಾಯಕನ ಒಳಗಿದ್ದ ಮೃಗತ್ವ ಹತೋಟಿ ಮೀರಿ ಹೊರ ಬಂದು ತೆರೆಯ ಮೇಲೆ ರಕ್ತದ ಹೊಳೆ ಹರಿಯಲು ಆರಂಭವಾಗುತ್ತದೆ. ಹೆಣಗಳ ರಾಶಿ ಬೀಳುತ್ತದೆ. ಗುಂಡುಗಳ ಸುರಿಮಳೆಯಾಗುತ್ತದೆ. ಕಂಡು ಕೇಳರಿಯದ ಮಟ್ಟಿನ ಹಿಂಸೆ ತೆರೆಯ ಮೇಲೆ ಅನಾವರಣಗೊಳ್ಳುತ್ತದೆ.

ವಂಗಾ ಎಲ್ಲವನ್ನೂ ಅತಿಯಾಗಿಯೇ ಮಾಡುತ್ತಾರೆ. ಸಿನಿಮಾದ ಮಧ್ಯದಲ್ಲಿ ಹೊಟೇಲ್ ಒಂದರಲ್ಲಿ ಬರುವ ಫೈಟ್ ದೃಶ್ಯದಲ್ಲಿ, ಜಾನ್‌ವಿಕ್ ಸಿನಿಮಾಗಳನ್ನು ನಾಚಿಸುವ ರೀತಿಯಲ್ಲಿ ಗನ್‌ಗಳು ಸದ್ದು ಮಾಡುತ್ತವೆ. ಅದಕ್ಕೆ ತೃಪ್ತಿಯಾಗದೆ ನಿರ್ದೇಶಕರು ನಾಯಕನ ಕೈಗೆ ಮಚ್ಚು ಕೊಟ್ಟು ರಕ್ತ ಹರಿಸುತ್ತಾರೆ. ಅದೂ ಸಾಕೆನಿಸದೆ ಕೊನೆಗೆ ಹೊಟೇಲ್ ಒಳಗೆ (ಕೆಜಿಎಫ್ ತರಹದ) ದೊಡ್ಡ ಮಿಷಿನ್ ಗನ್ ತಂದು ದೀಪಾವಳಿ ಪಟಾಕಿಯೇನೋ ಎಂಬಂತೆ ಸಂಭ್ರಮಿಸುತ್ತಾರೆ. ಸೇನೆಯ ರೀತಿಯಲ್ಲಿ ನೂರಾರು ಜನ ಪ್ರವಾಹದಂತೆ ಬಂದು ಸತ್ತು ಹೋಗುತ್ತಾರೆ. ಇವೆಲ್ಲವೂ ಇನ್ಯಾವುದೋ ಪರ್ಯಾಯ ಪ್ರಪಂಚದಲ್ಲಿ ನಡೆಯುತ್ತಿದೆಯೇನೋ ಎಂಬಂತೆ, ಇಡೀ ಸಿನಿಮಾದಲ್ಲಿ ಒಂದೇ ಒಂದು ಬಾರಿ, ಒಬ್ಬನೇ ಒಬ್ಬ ಪೊಲೀಸ್ ಕೂಡ ಕಾಣಿಸಿಕೊಳ್ಳುವುದಿಲ್ಲ.

ಭರಪೂರ ವಯಲೆನ್ಸ್ ನಂತರದಲ್ಲಿ ಪ್ರೇಕ್ಷಕರನ್ನು ಸೆಳೆಯುವ ಎರಡನೇ ಸಾಧನವಾಗಿ ಬಳಕೆಯಾಗಿರುವುದು ಸೆಕ್ಸ್. ಏಕೆಂದರೆ, ನಿರ್ದೇಶಕ ವಂಗಾ ಪ್ರಕಾರ ಗಂಡಸುತನ ಮೆರೆಯಲು ಇರುವುದು ಎರಡು ವಿಧಾನ, ಒಂದು ಹೊಡೆದಾಟ ಇನ್ನೊಂದು ಲೈಂಗಿಕ ಶಕ್ತಿ. ಅದನ್ನು ನಾಯಕನ ಬಾಯಲ್ಲೇ ಹೇಳಿಸುವ ನಿರ್ದೇಶಕರು, ಲೈಂಗಿಕತೆ ಕುರಿತು ಒಪನ್ ಆಗಿ ಮಾತನಾಡುವ ನೆಪದಲ್ಲಿ, ಶಾಕ್ ವ್ಯಾಲ್ಯೂಗಾಗಿ ಆಗಾಗ್ಗೆ ಒಂದಷ್ಟು ಜೋಕ್ಸ್, ಡೈಲಾಗ್ಸ್, ದೃಶ್ಯಗಳನ್ನು ತುಂಬಿದ್ದಾರೆ. ತಮ್ಮ ಪ್ರೇಕ್ಷಕರನ್ನು ಖುಷಿ ಪಡಿಸಿದ್ದಾರೆ. ಇವುಗಳ ಮತ್ತೊಂದು ಉದ್ದೇಶ ತಮ್ಮ ಹಿಂದಿನ ಚಿತ್ರ ವಿರೋಧಿಸಿದ ಮಹಿಳಾವಾದಿಗಳನ್ನು ಗೇಲಿ ಮಾಡುವುದು. ಹಿಂದಿನ ಚಿತ್ರದಲ್ಲಿ ಕಪಾಳಕ್ಕೆ ಹೊಡೆಯುವ ದೃಶ್ಯ ವಿವಾದಕ್ಕೆ ಕಾರಣವಾಗಿದ್ದ ಕಾರಣ, ಅದನ್ನು ಇಲ್ಲಿಯೂ ಬಳಸಿಕೊಂಡಿದ್ದಾರೆ, ಮತ್ತಷ್ಟು ಹಿಂಸೆ ಸೇರಿಸಿ, ಒಟ್ಟಿನಲ್ಲಿ ಚಿತ್ರದ ಶೀರ್ಷಿಕೆಯನ್ನು ಕ್ಷಣವೂ ಮರೆಯದಂತೆ ನೋಡಿಕೊಂಡಿದ್ದಾರೆ.

ಚಿತ್ರದಲ್ಲಿ ಹಲವು ಮತ ಧರ್ಮಗಳ ಅನಗತ್ಯ ಮತ್ತು ವಿಚಿತ್ರ ರೀತಿಯ ಕಾಕ್‌ಟೇಲ್ ಇದೆ. ನಾಯಕ ಸಿಖ್. ಆದರೆ, ತನ್ನ ಒಳಿತಿಗಾಗಿ ನಾಯಕಿಯನ್ನು ಅನುಸರಿಸಿ ಹಿಂದೂ ಸಂಪ್ರದಾಯದಂತೆ ದೊಡ್ಡ ಹೋಮವೊಂದನ್ನು ಗಂಭೀರವಾಗಿಯೇ ಮಾಡುತ್ತಾನೆ. ಅಲ್ಲಿಯವರೆಗೆ ತೊಂದರೆಯಿಲ್ಲ. ನಂತರ ಯಾವ ಕಾರಣಕ್ಕೋ, ದೊಡ್ಡ ಗುಂಪು ಕಟ್ಟಿಕೊಂಡು ಚರ್ಚಿಗೆ ಹೋಗಿ ಫಾದರ್ ಬಳಿ ಕನ್ಫೆಸ್ ಮಾಡಿಕೊಳ್ಳುತ್ತಾನೆ. ಆದರೆ, ಅಲ್ಲಿ ಗಂಭೀರತೆ ಇಲ್ಲ. ಅಲ್ಲಿ ಬರುವುದು ಹಾಸ್ಯ ದೃಶ್ಯ. ನಂತರದಲ್ಲಿ, ಇವನದೇ ಕುಟುಂಬಕ್ಕೆ ಸೇರಿದ ಖಳನಾಯಕನ ಮನೆಯವರು ಅದ್ಯಾಕೋ ಇಸ್ಲಾಮಿಗೆ ಮತಾಂತರವಾಗುತ್ತಾರೆ. ಕತೆ ಹೇಳುವ ಹಿರಿಯನ ಪ್ರಕಾರ ತುಂಬಾ ಮದುವೆಯಾಗಿ, ತುಂಬಾ ಮಕ್ಕಳನ್ನು ಮಾಡಿಕೊಳ್ಳುತ್ತಾರೆ. ಹೀಗಾಗಿ, ಮುಖ್ಯ ಖಳನಾಯಕ, ನಾಯಕನ ರಕ್ತಸಂಬಂಧಿ ಅಣ್ಣನೇ ಆಗಿದ್ದರೂ, ಆತ ಮುಸ್ಲಿಂ. ಆತನ ಎಂಟ್ರಿಯಾಗುವುದು ಕೂಡ, ಆತ ಮೂರನೇ ಮದುವೆಯಾಗುವ ದೃಶ್ಯದೊಂದಿಗೆ. ಈ ಧರ್ಮಗಳನ್ನೆಲ್ಲಾ ಕತೆಯಲ್ಲಿ ಎಳೆದು ತರುವ ಅಗತ್ಯವೇನಿತ್ತೋ ಅರ್ಥವಾಗುವುದಿಲ್ಲ.

ನಟನೆಯ ವಿಷಯಕ್ಕೆ ಬಂದಾಗ ಇದು ಪೂರ್ತಿಯಾಗಿ ರಣಬೀರ್ ಕಪೂರ್ ಚಿತ್ರವಾದ್ದರಿಂದ ಅವರೇ ಆವರಿಸಿಕೊಂಡಿದ್ದಾರೆ ಮತ್ತು ಹಲವು ರೀತಿಯಲ್ಲಿ, ಹಲವು ವೇಷಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೊಟ್ಟೆಯ ಬೊಜ್ಜಿನಿಂದ ಹಿಡಿದು, ನಗ್ನತೆಯವರೆಗೆ ಎಲ್ಲವನ್ನೂ ತೋರಿಸಿದ್ದಾರೆ. ರಶ್ಮಿಕಾ ತಮಗೆ ಸಿಕ್ಕಿರುವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅನಿಲ್‌ ಕಪೂರ್‌ಗೆ ಹೆಚ್ಚಿನ ಸಂಬಾಷಣೆ ಇಲ್ಲವಾದರೂ, ತನ್ನ ಮಗನ ಹುಚ್ಚುತನವನ್ನು ನೋಡುತ್ತಾ ಮಾತು ಮರೆತ ಅಪ್ಪನಾಗಿ ಉತ್ತಮವಾಗಿ ಅಭಿನಯಿಸಿದ್ದಾರೆ. ‘ಏನಾಗ್ತಾ ಇದೆ? ಇವನು ಯಾಕೆ ಹೀಗಾಡ್ತಾ ಇದಾನೆ’ ಎಂಬಂತಹ ಭಾವವೊಂದು ಅನಿಲ್‌ ಕಪೂರ್ ಮುಖದ ಮೇಲೆ ಶಾಶ್ವತವಾಗಿ ಕಂಡುಬರುತ್ತದೆ.

ಇಡೀ ಚಿತ್ರದಲ್ಲಿ ಮಗ ಕ್ರಿಮಿನಲ್ ಅನಿಸುವುದು ಅಪ್ಪ ಅನಿಲ್‌ ಕಪೂರ್‌ಗೆ ಮಾತ್ರವಾದ್ದರಿಂದ ಎಷ್ಟೋ ಪ್ರೇಕ್ಷಕರ ಮುಖದ ಮೇಲೂ ಇದೇ ಭಾವ ಮೂಡಬಹುದು. ಇನ್ನು ಚಿತ್ರದ ಕೊನೆಕೊನೆಗೆ ಬರುವ ಬಾಬ್ಬಿ ಡಿಯೋಲ್, ಒಂದೂ ಸಂಭಾಷಣೆ ಇಲ್ಲದೆ ತಮ್ಮ ಅಭಿನಯದಿಂದಲೇ ಭೀಕರವಾಗಿ ಕಾಡುತ್ತಾರೆ. ದುಷ್ಟ ಖಳನ ಪಾತ್ರದಲ್ಲಿ ಗೆದ್ದಿದ್ದಾರೆ. ಹಿನ್ನೆಲೆ ಸಂಗೀತ, ಕೆಲವೆಡೆ ಹೊಸತಾಗಿದೆ, ವಿಶೇಷವಾಗಿದೆ. ಚಿತ್ರ ಮುಗಿದು ಕ್ರೆಡಿಟ್ ರೋಲ್ ಆದ ಮೇಲೂ ಮತ್ತಷ್ಟು ರಕ್ತಪಾತ ಮುಂದುವರಿಸುವ ನಿರ್ದೇಶಕರು, ತಾವೇ ಸಂಪಾದಕರೂ ಆಗಿರುವ ಕಾರಣ ಯಾವುದೇ ದೃಶ್ಯಗಳನ್ನು ಕೈ ಬಿಡುವ ಮನಸ್ಸು ಮಾಡಿದಂತಿಲ್ಲ. ಹೀಗಾಗಿ, ತಾಂತ್ರಿಕವಾಗಿ ಚಿತ್ರ ಉತ್ತಮವಾಗಿದ್ದರೂ, ಹತ್ತಿರ ಹತ್ತಿರ ಮೂರೂವರೆ ಗಂಟೆಗಳ ಕಾಲ ಹಿಂಸೆಯನ್ನು ನೋಡುವುದು ಹಲವರಿಗೆ ಹಿಂಸೆ ಅನಿಸಬಹುದು.

ಚಿತ್ರಗಳಲ್ಲಿ ಹಿಂಸೆಯ ವೈಭವೀಕರಣದಿಂದ ಕೆತಾರ್ಟಿಕ್ ರಿಲೀಫ್ ಸಿಗುತ್ತದೆ ಎಂಬ ವಾದವಿದೆ. ಮನಸ್ಸಿನಲ್ಲಿ ಮಡುಗಟ್ಟಿರುವ, ರೋಷ, ಸಿಟ್ಟು ಮತ್ತು ಹಿಂಸೆಯ ಭಾವಗಳು ತೆರೆ ಮೇಲಿನ ಹಿಂಸೆಯ ದೃಶ್ಯಗಳನ್ನು ನೋಡುವ ಮೂಲಕ ಕರಗುತ್ತವೆ ಎಂಬುದು ಈ ವಾದ. ಜೊತೆಗೆ, ಎಷ್ಟೋ ಸಿನಿಮಾಗಳು ಹಿಂಸೆಯನ್ನು ಅತಿಯಾಗಿ ವಿಜೃಂಭಿಸುತ್ತಲೇ ಅದರ ಹಿಂದಿರುವ ಮನೋವೈಜ್ಞಾನಿಕ ಕಾರಣ, ಹಿಂಸೆಯ ಸ್ವರೂಪ ಮತ್ತು ಇತಿಹಾಸ ಮುಂತಾದವುಗಳ ಬಗ್ಗೆ ಮಾತನಾಡುತ್ತವೆ. ಎ ಕ್ಲಾಕ್‌ವರ್ಕ್ ಆರೆಂಜ್, ಟ್ಯಾಕ್ಸಿ ಡ್ರೈವರ್, ಅಮೆರಿಕನ್ ಸೈಕೋ, ಫೈಟ್ ಕ್ಲಬ್ ಮುಂತಾದ ಎಷ್ಟೋ ಹಿಂಸಾತ್ಮಕ ಚಿತ್ರಗಳು ಮನಸ್ಥಿತಿಯ ಬಗ್ಗೆ, ಮನೋವಿಕಲ್ಪದ ಬಗ್ಗೆ ಮಾತನಾಡುತ್ತವೆ.

ಇಂತಹ ಅಗತ್ಯಗಳೇ ಇಲ್ಲದೆ, ತೆರೆಯ ಮೇಲೆ ಮನೋರಂಜನೆಗಾಗಿ ಹಿಂಸೆಯನ್ನು ತರುವುದು ಕೂಡ ಸಿನಿಮಾಗಳಲ್ಲಿ ತೀರಾ ಸಾಮಾನ್ಯ, ಆದರೆ, ‘ಅನಿಮಲ್’ ಚಿತ್ರದಲ್ಲಿರುವಷ್ಟು ಮಟ್ಟಿನ ಹಿಂಸಾತ್ಮಕ ದೃಶ್ಯಗಳು ಭಾರತದ ಇತರ ಯಾವುದೇ ಚಿತ್ರಗಳಲ್ಲೂ ಇಲ್ಲವೇನೋ. ಪ್ರಜ್ಞಾಪೂರ್ವಕವಾಗಿ ಮತ್ತು ಪೂರ್ತಿಯಾಗಿ ಪೊಲಿಟಿಕಲೀ ಇನ್‌ಕರೆಕ್ಟ್ ಸಿನಿಮಾವನ್ನು ತೆಗೆದಿರುವುದರ ಹಿಂದೆ ನಿರ್ದೇಶಕರ ಉದ್ದೇಶವೇನೇ ಇರಲಿ, ಈ ಚಿತ್ರದ ಯಶಸ್ಸು ಅಥವಾ ಅಪಯಶಸ್ಸು ಪ್ರೇಕ್ಷಕರ ಮನಸ್ಥಿತಿಯ ಬಗ್ಗೆ ಸಾಕಷ್ಟು ಹೇಳಲಿದೆ.

LEAVE A REPLY

Connect with

Please enter your comment!
Please enter your name here