ಕನ್ನಡದ ಬೆಡಗಿ ಆಶಿಕಾ ರಂಗನಾಥ್ ‘ನಾ ಸಾಮಿರಂಗ’ ತೆಲುಗು ಚಿತ್ರದಲ್ಲಿ ನಾಗಾರ್ಜುನ ಜೋಡಿಯಾಗಿ ನಟಿಸಲಿದ್ದಾರೆ. ಕಲ್ಯಾಣ್ ರಾಮ್ ಜೊತೆಗೆ ‘ಅಮಿಗೋಸ್’ ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದ ಆಶಿಕಾರಿಗೆ ನಾಗಾರ್ಜುನ ಅವರೊಂದಿಗೆ ನಟಿಸುವ ದೊಡ್ಡ ಅವಕಾಶ ಲಭಿಸಿದೆ.
ಅಕ್ಕಿನೇನಿ ನಾಗಾರ್ಜುನ ಅವರ ಹೊಸ ಸಿನಿಮಾ ಇತ್ತೀಚೆಗಷ್ಟೇ ಘೋಷಣೆ ಆಗಿದ್ದು, ಚಿತ್ರಕ್ಕೆ ‘ನಾ ಸಾಮಿರಂಗ’ ಎನ್ನುವ ಶೀರ್ಷಿಕೆ ಇಡಲಾಗಿತ್ತು. ಇದೀಗ ಚಿತ್ರದ ನಾಯಕಿಯಾಗಿ ಕನ್ನಡತಿ ಆಶಿಕಾ ರಂಗನಾಥ್ ನಟಿಸುವುದು ಖಾತ್ರಿಯಾಗಿದೆ. ಈ ಚಿತ್ರಕ್ಕಾಗಿ ಇತ್ತೀಚೆಗೆ ಹೈದರಾಬಾದ್ನಲ್ಲಿ ಚಿತ್ರತಂಡ ಆಶಿಕಾ ಅವರ ಫೋಟೋಶೂಟ್ ನಡೆಸಿದೆ. ಆಶಿಕಾ ಅವರು ಗ್ಲಾಮರಸ್ ನಟಿ. ತೆಲುಗು ಭಾಷೆಯ ಮೇಲೆ ಹಿಡಿತ ಇದೆ. ನಟನೆಯಲ್ಲೂ ಉತ್ತಮ ಅನುಭವವಿದೆ. ಈ ಕಾರಣದಿಂದ ಆಶಿಕಾ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಕಲ್ಯಾಣ್ ರಾಮ್ ನಟನೆಯ ‘ಅಮಿಗೋಸ್’ ತೆಲುಗು ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದ್ದ ಆಶಿಕಾಗೆ ಈಗ ಮತ್ತೊಂದು ದೊಡ್ಡ ಅವಕಾಶ ಒದಗಿ ಬಂದಿದೆ. ಈ ಚಿತ್ರವನ್ನು ವಿಜಯ್ ಬಿನ್ನಿ ನಿರ್ದೇಶಿಸುತ್ತಿದ್ದಾರೆ. ಆಸ್ಕರ್ ಪುರಸ್ಕೃತ ಸಂಗೀತ ಸಂಯೋಜಕ ಎಂ ಎಂ ಕೀರವಾಣಿ ಈ ಸಿನಿಮಾಗೆ ಸಂಗೀತ ಸಂಯೋಜಿಸುತ್ತದ್ದಾರೆ. Srinivasaa Silver Screen ಬ್ಯಾನರ್ ಅಡಿ ಶ್ರೀನಿವಾಸ ಚಿತ್ತೂರಿ ಸಿನಿಮಾ ನಿರ್ಮಿಸುತ್ತಿದ್ದು, ಪ್ರಸನ್ನ ಕುಮಾರ್ ಬೇಜವಾಡ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. PRK Productions ಅವರ ‘O2’ ಸಿನಿಮಾದಲ್ಲಿ ಆಶಿಕಾ ನಟಿಸಿದ್ದು, ಸಿನಿಮಾ ತೆರೆಗೆ ಸಿದ್ಧವಾಗಿದೆ. ನಿರ್ದೇಶಕ ಸಿಂಪಲ್ ಸುನಿ ಮತ್ತು ದುಷ್ಯಂತ್ ಅವರ ‘ಗತವೈಭವ’ ಚಿತ್ರದಲ್ಲಿ ಇವರು ನಾಯಕಿಯಾಗಿ ಅಭಿನಯಿಸಿದ್ದಾರೆ.