‘ಸಲಗ’ ಚಿತ್ರದ ಯಶಸ್ಸಿನಲ್ಲಿರುವ ದುನಿಯಾ ವಿಜಯ್ ಟಾಲಿವುಡ್ ಪ್ರವೇಶಿಸುವ ಸುದ್ದಿ ಇದೆ. ಗೋಪಿಚಂದ್ ಮಾಲಿನೇನಿ ನಿರ್ದೇಶನದಲ್ಲಿ ನಂದಮೂರಿ ಬಾಲಕೃಷ್ಣ ನಟಿಸಲಿರುವ ಸಿನಿಮಾದಲ್ಲಿ ಅವರು ಪ್ರಮುಖ ಖಳನಟನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ನಟ ದುನಿಯಾ ವಿಜಯ್ ‘ಸಲಗ’ ಚಿತ್ರದೊಂದಿಗೆ ನಿರ್ದೇಶಕನಾಗಿ ಬಡ್ತಿ ಪಡೆದು ಯಶಸ್ವಿಯೂ ಆಗಿದ್ದಾರೆ. ಅವರ ನಟನೆ, ನಿರ್ದೇಶನದ ‘ಸಲಗ’ ರಾಜ್ಯದ ಹಲವೆಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಐವತ್ತನೇ ದಿನದತ್ತ ದಾಪುಗಾಲು ಹಾಕುತ್ತಿದೆ. ಈ ಮಧ್ಯೆ ದುನಿಯಾ ವಿಜಯ್ ಕುರಿತ ಸುದ್ದಿಯೊಂದು ಓಡಾಡುತ್ತಿದೆ. ಅವರು ನಂದಮೂರಿ ಬಾಲಕೃಷ್ಣರ ಹೊಸ ಸಿನಿಮಾದಲ್ಲಿ ಖಳನಾಗಿ ಟಾಲಿವುಡ್‌ಗೆ ಪದಾರ್ಪಣೆ ಮಾಡುವ ಸೂಚನೆ ಸಿಕ್ಕಿದೆ. ತೆಲುಗು ಸಿನಿಮಾ ಪೋರ್ಟಲ್‌ಗಳಲ್ಲಿ ಈ ಸುದ್ದಿಯಿದ್ದು, ಆ ಬಗ್ಗೆ ದುನಿಯಾ ವಿಜಯ್ ಅಧಿಕೃತವಾಗಿ ಇನ್ನೂ ಹೇಳಿಕೊಂಡಿಲ್ಲ. ಕನ್ನಡದಲ್ಲಿ ದುನಿಯಾ ವಿಜಯ್ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ತೆಲುಗು ಚಿತ್ರದ ಪ್ರಮುಖ ಪಾತ್ರದಲ್ಲಿ ಅವರು ಅಭಿನಯಿಸಿದರೆ ಕನ್ನಡದ ನೆಲದಲ್ಲಿ ತೆಲುಗು ಚಿತ್ರದ ಮಾರುಕಟ್ಟೆ ವಿಸ್ತರಿಸಬಹುದು ಎನ್ನುವುದು ನಿರ್ಮಾಪಕರ ಯೋಜನೆಯಂತಿದೆ.
ಗೋಪಿಚಂದ್ ಮಾಲಿನೇನಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕಿನ್ನೂ ಶೀರ್ಷಿಕೆ ನಿಗದಿಯಾಗಿಲ್ಲ. ‘#NBK107’ ಎಂದು ಕರೆಸಿಕೊಳ್ಳುತ್ತಿರುವ ಈ ಚಿತ್ರದ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಲಿದ್ದಾರೆ. ರಾಯಲಸೀಮೆಯ ನೈಜ ಘಟನೆಯೊಂದನ್ನು ಆಧರಿಸಿ ಚಿತ್ರಕ್ಕೆ ಕತೆ ಹೆಣೆಯಲಾಗಿದೆ. ನಟ ದುನಿಯಾ ವಿಜಯ್ ಮೂಲತಃ ಸ್ಟಂಟ್‌ಮ್ಯಾನ್ ಆಗಿ ಬೆಳ್ಳಿತೆರೆಗೆ ಪರಿಚಯವಾದರು. ಆರಂಭದಲ್ಲಿ ಖಳಪಾತ್ರಗಳಲ್ಲಿ ನಟಿಸುತ್ತಿದ್ದ ಅವರು ‘ದುನಿಯಾ’ ಚಿತ್ರದ ಮೂಲಕ ನಾಯಕನಟನಾಗಿ ಗುರುತಿಸಿಕೊಂಡರು. ‘ಸಲಗ’ ಚಿತ್ರದ ಮೂಲಕ ನಿರ್ದೇಶನದಲ್ಲೂ ಗೆಲುವು ಕಂಡ ಅವರು ತೆಲುಗು ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆ. ಈ ಸಿನಿಮಾ ಕುರಿತು ಸದ್ಯದಲ್ಲೇ ಅಧಿಕೃತ ಮಾಹಿತಿ ಸಿಗಲಿದೆ.