ಮೂವತ್ತೇಳು ವರ್ಷಗಳ ಹಿಂದೆ ತೆರೆಕಂಡ ‘ಬಂಧನ’ ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲಾದ ಚಿತ್ರಗಳಲ್ಲೊಂದು. ಈ ಚಿತ್ರದ ಕ್ಲೈಮ್ಯಾಕ್ಸ್‌ನಿಂದ ‘ಬಂಧನ 2’ ಶುರುವಾಗಲಿದೆ. ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ ಚಿತ್ರಕ್ಕೆ ಚಾಲನೆ ಸಿಕ್ಕಿದೆ.

ಇದೊಂದು ಅಪರೂಪದ ಸಂದರ್ಭ. ಮೂವತ್ತೇಳು ವರ್ಷಗಳ ಹಿಂದೆ ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ ‘ಬಂಧನ’ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು. ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರು ವಿಷ್ಣುವರ್ಧನ್‌ ಮತ್ತು ಸುಹಾಸಿನಿ ಅಭಿನಯದ ಮೊದಲ ದೃಶ್ಯಕ್ಕೆ ಕ್ಲ್ಯಾಪ್‌ ಮಾಡಿ ಶುಭ ಕೋರಿದ್ದರು. ಈ ಸಿನಿಮಾ ವಿಷ್ಣುವರ್ಧನ್‌ ವೃತ್ತಿಬದುಕಿಗೆ ತಿರುವು ನೀಡಿದ್ದಲ್ಲದೆ, ಕನ್ನಡ ಚಿತ್ರರಂಗದಲ್ಲೂ ಮೈಲುಗಲ್ಲಾಯ್ತು. ಇದೀಗ ‘ಬಂಧನ 2’ಗೆ ಇಲ್ಲೇ ಚಾಲನೆ ಸಿಕ್ಕಿದೆ. ನಿರ್ದೇಶಕ ಸಿಂಗ್‌ ಬಾಬು ಕತೆಯನ್ನು ಮುಂದುವರೆಸುತ್ತಿದ್ದಾರೆ. ‘ಬಂಧನ’ ಕ್ಲೈಮ್ಯಾಕ್ಸ್‌ನಲ್ಲಿ ಸುಹಾಸಿನಿ ಜನ್ಮ ಕೊಡುವ ಮಗು ‘ಬಂಧನ 2’ನ ಹೀರೋ (ಆದಿತ್ಯ). ಮೂಲ ಸಿನಿಮಾದ ಸುಹಾಸಿನಿ ಮತ್ತು ಜೈಜಗದೀಶ್‌ ಜೋಡಿ ಸರಣಿ ಚಿತ್ರದಲ್ಲಿ ಪೋಷಕರಾಗಿ ಅಭಿನಯಿಸುತ್ತಿದ್ದಾರೆ. ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ‘ಬಂಧನ 2’ ಮೊದಲ ದೃಶ್ಯಕ್ಕೆ ಚಾಲನೆ ನೀಡಿ ಶುಭಹಾರೈಸಿದರು.

‘ಬಂಧನ 2’ ಸಿನಿಮಾ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ವೃತ್ತಿ ಬದುಕಿನ ಪ್ರಮುಖ ಚಿತ್ರವೂ ಹೌದು. ಹಳೆಯ ನೆನಪುಗಳನ್ನು ಮೆಲುಕು ಹಾಕಿ ಸಿಂಗ್‌ ಬಾಬು, “ಉಷಾ ನವರತ್ನಾರಾಂ ಕಾದಂಬರಿ ಆಧರಿಸಿದ ‘ಬಂಧನ’ ಕನ್ನಡ ಚಿತ್ರರಂಗದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸಿನಿಮಾ ಆಯ್ತು. ನನ್ನ ವೃತ್ತಿಬದುಕಿನಲ್ಲೂ ಇದು ಎಂದೂ ಮರೆಯಲಾಗದಂತಹ ಸಿನಿಮಾ. ಈ ಸಂದರ್ಭದಲ್ಲಿ ಆಗ ಚಿತ್ರಕ್ಕೆ ಕೆಲಸ ಮಾಡಿದ ಸಂಗೀತ ಸಂಯೋಜಕ ರಂಗರಾವ್‌, ಛಾಯಾಗ್ರಾಹಕ ಡಿ.ವಿ.ರಾಜಾರಾಂ, ಎಚ್‌.ವಿ.ಸುಬ್ಬರಾವ್‌, ಗೋವಿಂದರಾವ್‌… ಎಲ್ಲರನ್ನೂ ಈ ಸಂದರ್ಭದಲ್ಲಿ ನಾನು ಸ್ಮರಿಸುತ್ತೇನೆ. ಮುಖ್ಯವಾಗಿ ಆಗ ನನಗೆ ಬೆನ್ನುಲುಬಾಗಿ ನಿಂತದ್ದು ನಟ ವಿಷ್ಣುವರ್ಧನ್‌. ಆಗ ವಿಷ್ಣು ಆಕ್ಷನ್‌ ಹೀರೋ ಎಂದೇ ಗುರುತಿಸಿಕೊಂಡಿದ್ದವರು. ಅವರನ್ನು ಹಾಕಿಕೊಂಡು ಲವ್‌ಸ್ಟೋರಿ ‘ಬಂಧನ’ ಮಾಡಲು ಹೊರಟಾಗ ಬಹಳಷ್ಟು ಜನ ನಕ್ಕರು. ಎಲ್ಲರ ಊಹೆಯನ್ನು ತಲೆಕೆಳಗು ಮಾಡಿ ಈ ಸಿನಿಮಾ ದೊಡ್ಡ ಯಶಸ್ಸು ಕಂಡಿತು. ಈಗ ಇದರ ಮುಂದುವರೆದ ಭಾಗವಾಗಿ ‘ಬಂಧನ 2’ ಮಾಡುತ್ತಿದ್ದೇವೆ. ಇಲ್ಲೊಂದು ಹೊಸ ವಿಷನ್‌ ಲವ್‌ಸ್ಟೋರಿ ಇರಲಿದೆ” ಎಂದರು.

‘ಬಂಧನ’ದಲ್ಲಿ ‘ಡಾ.ನಂದಿನಿ’ ಪಾತ್ರಕ್ಕೆ ಜೀವ ತುಂಬಿದ್ದ ಸುಹಾಸಿನಿ ಸರಣಿ ಚಿತ್ರದ ಪ್ರಮುಖ ಪಾತ್ರಧಾರಿ. ಅವರು ವಿಷ್ಣುವರ್ಧನ್‌ ಜೊತೆಗಿನ ತಮ್ಮ ಒಡನಾಟವನ್ನು ಆತ್ಮೀಯವಾಗಿ ಸ್ಮರಿಸಿದರು. “ಬಂಧನ ಸಿನಿಮಾ ಮಾಡುವಾಗ ವಿಷ್ಣುವರ್ಧನ್‌ ದೊಡ್ಡ ಸ್ಟಾರ್.‌ ನಾನಿನ್ನೂ ಹೊಸಬಳು. ‘ಬಂಧನ’ ಬಹುಪಾಲು ನಾಯಕಿ ಪ್ರಧಾನ ಸಿನಿಮಾ. ಹಾಗಿದ್ದೂ ಯಾವುದೇ ಇಗೋ, ಅಸಮಧಾನಗಳಿಲ್ಲದೆ ವಿಷ್ಣು ನನ್ನೊಂದಿಗೆ ಅಭಿನಯಿಸಿದರು. ಈಗ ಕತೆ ಮುಂದುವರೆಯುತ್ತಿದೆ. ಕನ್ನಡ ಚಿತ್ರದಲ್ಲಿ ನಾನು ನಟಿಸಿ ತುಂಬಾ ವರ್ಷಗಳಾಯ್ತು. ಮತ್ತೆ ನಟನೆ ಕಲಿಯಬೇಕು! ಸ್ಟೂಡೆಂಟ್‌ ಥರ ಎಲ್ಲಾ ಕಲಿತು ನಟಿಸುತ್ತೇನೆ. ಸರಣಿ ಸಿನಿಮಾದ ಕತೆ ಕೇಳುವ ಅಗತ್ಯವೇ ಬರಲಿಲ್ಲ. ಈ ಜನರೇಷನ್‌ ಮಕ್ಕಳು ಏನು ಎಕ್ಸ್‌ಪೆಕ್ಟ್‌ ಮಾಡ್ತಾರೋ ಅದೆಲ್ಲವೂ ಇಲ್ಲಿ ಇರುತ್ತೆ” ಎಂದರು ಸುಹಾಸಿನಿ. ಚಿತ್ರದ ಮುಂದುವರೆದ ಕತೆ ಬೆಳೆಸಲು ಸಿಂಗ್‌ ಬಾಬು ವಿಷ್ಣುವರ್ಧನ್‌ ಅಭಿಮಾನಿಗಳ ಸಲಹೆಗಳನ್ನೂ ಕೇಳುತ್ತಿದ್ದಾರೆ. ಚಿತ್ರದುದ್ದಕ್ಕೂ ಅಲ್ಲಲ್ಲಿ ವಿಷ್ಣುರನ್ನು ನೆನಪು ಮಾಡುವ ನಿರೂಪಣೆ ಚಿತ್ರದಲ್ಲಿರುತ್ತದೆ ಎನ್ನುತ್ತಾರವರು. ಚಿಂತನ್‌ ಕತೆ ಹೆಣೆಯುತ್ತಿದ್ದು, ಅಣಜಿ ನಾಗರಾಜ್‌ ಸಿನಿಮಾ ನಿರ್ಮಿಸುತ್ತಿದ್ದಾರೆ. ಛಾಯಾಗ್ರಹಣದ ಹೊಣೆಯೂ ಅವರದೆ. ಸದ್ಯ ‘ಕಂಬಳ’ ಚಿತ್ರೀಕರಣಲ್ಲಿರುವ ಸಿಂಗ್‌ ಬಾಬು ಈ ಸಿನಿಮಾ ಮುಗಿದ ನಂತರ ‘ಬಂಧನ 2’ ಕೈಗೆತ್ತಿಕೊಳ್ಳಲಿದ್ದಾರೆ.

LEAVE A REPLY

Connect with

Please enter your comment!
Please enter your name here