ಭಿನ್ನ ಕಥಾವಸ್ತು ಆಯ್ಕೆ‌ ಮಾಡುವುದು ಹೇಗೆ ಎಂದು ಹುಡುಕುವವರಿಗೆ ತಮಿಳಿನ ‘ಐಂಗರನ್’ ಒಂದು ದಿಕ್ಸೂಚಿ. ಮೂಲತಃ ಥ್ರಿಯೇಟರ್ ಪ್ರೇಕ್ಷಕರನ್ನೇ‌ ಉದ್ದೇಶಿಸಿ ನಿರ್ಮಾಣ ಮಾಡಿದ್ದರೂ ಒಟಿಟಿಗೆ ಬರುವಾಗ ಸಾಕಷ್ಟು ಭಾರ ಇಳಿಸಿ ಬಂದಿದೆ. Ahaದಲ್ಲಿ ಸ್ಟ್ರೀಂ ಆಗುತ್ತಿದೆ.

ಕೊಳವೆ ಬಾವಿಯೊಳಗೆ ಮಗು ಬಿದ್ದಾಗ ದೊಡ್ಡ ಸುದ್ದಿಯಾಗುತ್ತದೆ. ಮೊದಲಿಗೆ ದೇಶಾದ್ಯಂತ ಸುದ್ದಿ ಮಾಡಿದ್ದ ಪ್ರಕರಣ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಮೂರು ವರ್ಷದ ಬಾಲಕ ಪ್ರಿನ್ಸ್ ಕುಮಾರ್‌ನ ಪ್ರಕರಣ. 2006ರ ಈ ಪ್ರಕರಣದಲ್ಲಿ 48 ತಾಸುಗಳ ನಿರಂತರ ಕಾರ್ಯಾಚರಣೆಯ ನಂತರ ಬಾಲಕನನ್ನು ಉಳಿಸಿಕೊಳ್ಳಲು ಸಾಧ್ಯವಾಗಿತ್ತು. ನೇರಪ್ರಸಾರದ ಸುದ್ದಿವಾಹಿನಿಗಳ ಆರಂಭಿಕ ಹಂತವಾದ ದೇಶಾದ್ಯಂತ ಎರಡು ದಿನ ಅದೇ ಸುದ್ದಿ. 2009-2020ರ ನಡುವೆ ಶಿಶುಗಳು ಕೊಳವೆ ಬಾವಿಗೆ ಬಿದ್ದ 40ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎನ್ನುತ್ತದೆ ಅಧಿಕೃತ ಅಂಕಿ ಅಂಶ. ಆದರೆ ಇಷ್ಟು ಪ್ರಕರಣಗಳಾಗಿಯೂ ಅಂಥ ಸಂದರ್ಭ ಬಂದರೆ ಬಳಕೆ ಮಾಡಲು ಒಂದೇ ಒಂದು ಸಾಧನವನ್ನೂ ಕಂಡುಹಿಡಿಯಲಾಗಿಲ್ಲ. ಹೇಳಿ ಕೇಳಿ ನಮ್ಮದು ಎಂಜಿನಿಯರುಗಳ ದೇಶ. ಪಕ್ಕದ ಎರಡು ಮನೆಗಳಲ್ಲೊಬ್ಬ ಎಂಜಿನಯರ್ ಇದ್ದೇ ಇರುತ್ತಾನೆ. ತಂತ್ರಜ್ಞಾನ ವಿಚಾರದಲ್ಲೂ 4ಜಿ ಹೋಗಿ 5ಜಿ ಬಗ್ಗೆ ಮಾತಾಡುತ್ತಿದ್ದೇವೆ. ಆದರೆ ಮಗು ಬೋರ್‌ವೆಲ್‌ಗೆ ಬಿದ್ದರೆ ಇಂದಿಗೂ ಜೆಸಿಬಿಯೇ ಗತಿ.

ಇಂಥ ಅಪರೂಪದ ವಿಚಾರವನ್ನು ಕತೆಯಾಗಿಸಿರುವ ಸಿನಿಮಾ ತಮಿಳಿನ ‘ಐಂಗರನ್’. ನಟ ಜಿ.ವಿ. ಪ್ರಕಾಶ್ ತಮ್ಮ ವೃತ್ತಿಜೀವನದುದ್ದಕ್ಕೂ ಹೆಚ್ಚಾಗಿ ವಿಶೇಷ ಕತೆಗಳನ್ನೇ ಆಯ್ದುಕೊಂಡು ಬಂದಿದ್ದಾರೆ. ಇದೇ ನಟನ ‘ಸೆಲ್ಫಿ’ಯನ್ನೂ ನಾವು ಈ ಹಿಂದೆ‌ ವಿಮರ್ಶೆ ಮಾಡಿದ್ದೆವು. ಅದು ಮೆಡಿಕಲ್ ಮಾಫಿಯಾದ ಸುತ್ತಲಿನ ಕತೆ. ಇಲ್ಲಿ ರವಿ ಅರಸು ನಿರ್ದೇಶನದ ‘ಐಂಗರನ್’ ಬಿಡುಗಡೆಯಾಗಲು ಕಾರಣಾಂತರಗಳಿಂದ ಐದು ವರ್ಷ ಕಾಯಬೇಕಾಗಿ ಬಂತು. ಹಾಗಾಗಿ ಇದು ಒಟಿಟಿಗಿಂತ ಥಿಯೇಟರ್ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಮಾಡಿದ ಸಿನಿಮಾ. ಕೆಲವು ದೃಶ್ಯಗಳನ್ನು ಹೆಣೆದ ರೀತಿಯಲ್ಲೂ ಆ ವಿಚಾರ ಗೋಚರಕ್ಕೆ ಬರುತ್ತದೆ. ಮಗುವನ್ನು ಮೇಲಕ್ಕೆತ್ತುವಾಗ ಮತ್ತೆ ಹಗ್ಗ ಬೀಳುತ್ತೆ ಬೀಳುತ್ತೆ ಎಂದು ಅನಿಸುವಂತೆ ಬರುವ ಕ್ಲೋಸಪ್ ಶಾಟ್‌ಗಳು ಥಿಯೇಟರಲ್ಲಿ ಸಮೂಹದ ಜತೆಗೆ ನೋಡಲು ಹೆಚ್ಚು ಪರಿಣಾಮಕಾರಿ. ಹಗ್ಗ ಬೀಳುವುದಿಲ್ಲ ಎಂಬುದು ನಿಮಗೆ ಗೊತ್ತಿದ್ದರೂ ಸಾಮೂಹಿಕ ಕುತೂಹಲದ ನಡುವೆ ನೀವೂ ಕುತೂಹಲಿಗಳಾಗುತ್ತೀರಿ. ಫೈಟ್ ದೃಶ್ಯಗಳ ಸ್ಲೋ ಮೋಶನ್ನು ಗುಂಪಿನಲ್ಲಿ ನೋಡುವಾಗ ಹೆಚ್ಚು ಒಗ್ಗುತ್ತದೆ. ಹಾಗೆಂದ ಮಾತ್ರಕ್ಕೆ ಇದು ಒಟಿಟಿಗೆ ಒಗ್ಗದ ಸಿನಿಮಾ ಎಂಬುದಲ್ಲ. ಕೆಲವು ಥಿಯೇಟ್ರಿಕಲ್‌ ಅಂಶಗಳನ್ನು ಒಳಗೊಂಡಿದೆ.

ಮಾಥಿ ಇಲ್ಲೊಬ್ಬ ಮೆಕ್ಯಾನಿಕಲ್ ಎಂಜಿನಿಯರ್. ಆದರೆ ಸಾಮಾನ್ಯ ಎಂಜಿಯರ್ ಅಲ್ಲ. ಈತ DIY (Do It Yourself) ಕಲೆಗಾರಿಕೆಯಲ್ಲಿ ಪರಿಣಿತ. ಕೈಗೆ ಸಿಗುವ ಸಾಮಗ್ರಿಗಳನ್ನೇ ಉಪಯೋಗಿಸಿ ಏನಾದರೂ ಆವಿಷ್ಕರಿಸುವ ಬುದ್ಧಿವಂತ. ತಾನು ಓದಿದ ವಿಷಯದಲ್ಲಿ ಎಂದಲ್ಲ, ಎಲ್ಲಾ ವಿಚಾರಗಳಲ್ಲೂ ಹಾಗೆಯೇ. ತುಂಡಾದ ಸಿಗರೇಟನ್ನೂ ರಿಪೇರಿ ಮಾಡುವ ಛಾತಿ‌ ಇರುವಾತ. ಗೆಳೆಯನ ಬೈಕ್ ಬಳಸಲು ಈತನಿಗೆ ಕೀಲಿಕೈ ಬೇಡ, ಬೈಕ್ ಸಿಕ್ಕರೆ ಸಾಕು; ಕೀಲಿ ಇಲ್ಲದಿದ್ದರೂ ಸ್ಟಾರ್ಟ್ ಮಾಡುವುದು ದೊಡ್ಡ ವಿಚಾರವಲ್ಲ. ಮನೆಯಲ್ಲಿರುವ ಸೈಕಲನ್ನು ಮಾರ್ಪಡಿಸಿ ನಿಂತಲ್ಲೇ ಪೆಡಲ್ ತುಳಿದರೆ ಮಿಕ್ಸರ್-ಗ್ರೈಂಡರ್ ಎರಡೂ ಚಾಲು ಆಗುತ್ತದೆ. ಏನೇ ಸಮಸ್ಯೆ ಎದುರಾದಾಗಲೂ ಅದನ್ನು ಪರಿಹರಿಸುವ ವಿಧಾನ ಕಂಡುಕೊಳ್ಳುವ ಚಾಣಾಕ್ಷ ಈ ಮಾಥಿ. ಅಪ್ಪ ಪೊಲೀಸ್ ಇಲಾಖೆಯಲ್ಲಿ ಇರುವ ಕಾರಣ ಬಾಲ್ಯದ ಆಸೆಯಂತೆ ಈತನೂ ಪೊಲೀಸ್ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿರುತ್ತಾನೆಯೇ ಹೊರತು ಪ್ರಸ್ತುತ ನಿರುದ್ಯೋಗಿ.

ಮೊದಲೇ ಹೇಳಿದಂತೆ ಇಲ್ಲಿ ಬೋರ್ ವೆಲ್‌ಗೆ ಬಿದ್ದ ಮಗುವನ್ನು ಬಜಾವು ಮಾಡುವುದು ಕತೆಯ ಕೇಂದ್ರ ಬಿಂದು. ಅದನ್ನು ಕುತೂಹಲಕರವಾಗಿಸಲು ಬೇರೆ ವಿಚಾರಗಳನ್ನು ಸುತ್ತ ಹೆಣೆಯಲಾಗಿದೆ. ಹಾಗಾಗಿ ಆಭರಣ ಮಳಿಗೆಗಳ ಸರಣಿ ಕಳ್ಳತನ ಸಮಾನಾಂತರ ಉಪಕತೆಯಾಗಿ ಕೊನೆಗೆ ಮೂಲ ಕತೆಯ ಜತೆ ಸೇರಿಕೊಳ್ಳುತ್ತದೆ. ಕೋಳಿ‌ಗಳ ತೂಕ ಹೆಚ್ಚಾಗಲು ಸ್ಟೀರಾಯ್ಡ್ ನೀಡುವ ಮಾಫಿಯಾದ ಕತೆ ನಾಯಕನನ್ನು ಹೀರೋ ಮಾಡಿ‌ ಮಧ್ಯಭಾಗದಲ್ಲಿ ಬೋರ್‌ವೆಲ್ ಕತೆಗೆ ಸೇರಿಕೊಳ್ಳುತ್ತದೆ. ಮೂರೂ ಕತೆಗಳನ್ನು ಜತೆಜತೆಗೆ ನಿಭಾಯಿಸಲು ನಿರ್ದೇಶಕರು ಮಾಂಟೇಜ್ ಶಾಟ್‌ಗಳನ್ನು (ಬಿಡಿ ದೃಶ್ಯ) ಸಾಕಷ್ಟು ಬಳಕೆ ಮಾಡಬೇಕಾಗಿ ಬಂದಿದೆ. ಅಲ್ಲೆಲ್ಲ ಹೊಸತನದ‌ ಪ್ರಯೋಗ ಮಾಡಲಾಗಿದ್ದರೂ ಐದು ವರ್ಷದ ಕಾಲ‌ ಸಿನಿಮಾ ಡಬ್ಬದಲ್ಲಿ ಕೂತ‌ ಕಾರಣ ಅವೆಲ್ಲ ಸೂತ್ರಗಳು ಹಳತಾಗಿವೆ.

ಮೂಲತಃ ಥಿಯೇಟರನ್ನು ಉದ್ದೇಶಿಸಿ ನಿರ್ಮಾಣವಾದ ಸಿನಿಮಾವನ್ನು ಒಟಿಟಿಗೆ ಒಗ್ಗಿಸಲು ಸಾಕಷ್ಟು ಕಡೆ ಕತ್ತರಿ ಪ್ರಯೋಗ ಮಾಡಿರುವುದು ಒಳ್ಳೆಯ ವಿಚಾರ. ಕಳ್ಳತನದ ದೃಶ್ಯಗಳಿಗೆ ಮತ್ತಷ್ಟು ಕತ್ತರಿ ತೋರಿಸಿದ್ದಿದ್ದರೆ ಒಳ್ಳೆಯದಿರುತ್ತಿತ್ತು. ಆದರೆ ಅದನ್ನು ಹಾಗೆಯೇ ಇರಿಸಿ ನಾಯಕಿಯ ಪಾತ್ರವನ್ನು ಸಾಕಷ್ಟು ಕಿರಿದು ಮಾಡಿದ್ದಾರೆ. ಹಾಗಾಗಿ ನಾಯಕ-ನಾಯಕಿ ಮಧ್ಯೆ ಪ್ರೇಮಾಂಕುರ ಆಗಲು ಆರಂಭದಲ್ಲಿ ಬರುವ ದೃಶ್ಯಗಳು ನಂತರ ಮಂಗಮಾಯ. ಕೊನೆಯ ಹಂತದಲ್ಲಿ ಅವರಿಬ್ಬರ ನಡುವಿನ ಪರಿಚಯ ಧುತ್ತನೆ ಎದುರಾದಾಗ ಅಚ್ಚರಿಯೂ ಆಗುತ್ತದೆ.

ಕೆಲವೆಲ್ಲ ಕುಂದು ಕೊರತೆ ನಡುವೆಯೂ ನೋಡಿಸಿಕೊಂಡು ಹೋಗುವುದು ಮೂಲ ಕತೆಯಲ್ಲಿರುವ ಹೊಸತನ. ಸಜೀವ ಸಮಸ್ಯೆ ಇಟ್ಟುಕೊಂಡು ಕಡೇ ಪಕ್ಷ ಸಿನಿಮಾದಲ್ಲಾದರೂ ಪರಿಹಾರ ಕಂಡುಕೊಳ್ಳಲು ಹೊರಟ ರೀತಿ ಸ್ಫೂರ್ತಿದಾಯಕ. ವಾಟ್ಸಾಪ್ ಫಾರ್ವರ್ಡ್ ವಿಡಿಯೋಗಳಲ್ಲಿ ಆಗಾಗ್ಗೆ ಕಾಣಬರುವ ದೇಸಿ ಆವಿಷ್ಕಾರಗಳನ್ನು ಉಲ್ಲೇಖಿಸಿ ಸಿನಿಮಾ ಕೊನೆಯಾಗುತ್ತದೆ. ಅಂತ್ಯದ ಹಂತದಲ್ಲಿ ಒಟ್ಟಾರೆಯಾಗಿ ವ್ಯವಸ್ಥೆಯನ್ನು ದೂಷಿಸಿ ನಿರ್ದೇಶಕ ತನ್ನ ಮನದ ಮಾತು ಹೊರ ಹಾಕುತ್ತಾನೆ. ಅದುವರೆಗೂ ಅನ್ವೇಷಕರಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡುವ ಸಿನಿಮಾ ಕೊನೆಗೆ ಉತ್ಸಾಹಕ್ಕೆ ತಣ್ಣೀರೆರೆಚಿದ ಅನುಭವ ನೀಡಬಹುದು ಎಂಬುದನ್ನು ನಿರ್ದೇಶಕ ಊಹಿಸಿರಲಿಕ್ಕಿಲ್ಲ.

Previous articleಊಬರ್‌ನ ಬೆಳವಣಿಗೆ ಹಾಗೂ ಪತನದ ಕಥನ ಸೂಪರ್ ಪಂಪ್ಡ್ ಅಪ್
Next articleಸವೆದು ತುಂಡಾಗುತ್ತಿರುವ ನೆನಪಿನೆಳೆಗಳನ್ನು ಗಂಟು ಹಾಕುತ್ತಾ…

LEAVE A REPLY

Connect with

Please enter your comment!
Please enter your name here