ಅಭಿಜಿತ್‌ ಮಹೇಶ್‌ ನಿರ್ದೇಶನದ ‘ಬ್ಯಾಚುಲರ್‌ ಪಾರ್ಟಿ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ರಕ್ಷಿತ್‌ ಶೆಟ್ಟಿ ಅವರ Paramvah Studios ನಿರ್ಮಾಣದ ಚಿತ್ರವಿದು. ದಿಗಂತ್‌, ಯೋಗಿ, ಅಚ್ಯುತ್‌ಕುಮಾರ್‌ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ದಿಗಂತ್ ಮಂಚಾಲೆ, ಲೂಸ್ ಮಾದ ಯೋಗಿ ಮತ್ತು ಅಚ್ಯುತ್‌ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಬ್ಯಾಚುಲರ್ ಪಾರ್ಟಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾವನ್ನು ಅಭಿಜಿತ್ ಮಹೇಶ್ ನಿರ್ದೇಶಿಸಿದ್ದು, ಪಂಚಿಂಗ್ ಡೈಲಾಗ್‌ಗಳ ಮೂಲಕ ಟ್ರೇಲರ್ ಹೆಚ್ಚು ಸೆಳೆಯುತ್ತಿದೆ. ‘ನಾನು ಕಿರುಚಿತ್ರ ಮಾಡುತ್ತಿದ್ದ ಸಮಯದಲ್ಲಿ ನನಗೆ ಅಭಿಜಿತ್ ಮಹೇಶ್ ಪರಿಚಯವಾದರು. ‘ಕಿರಿಕ್ ಪಾರ್ಟಿ’, ‘ಅವನೇ ಶ್ರೀಮನ್‌ ನಾರಾಯಣ’ ಚಿತ್ರಗಳಲ್ಲಿ ಒನ್‌ಲೈನ್ ಪಂಚಿಂಗ್ ಡೈಲಾಗ್‌ಗಳು ಅಭಿಜಿತ್ ಅವರ ಕೊಡುಗೆ. ಅಂತಹ ಅದ್ಭುತ ಪ್ರತಿಭೆ ಅವರು. ಆಗಿನಿಂದಲೂ ನಾನು ಅಭಿಜಿತ್ ಅವರಿಗೆ ನಿರ್ದೇಶನ ಮಾಡಲು ಹೇಳುತ್ತಿದ್ದೆ. ಈಗ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನು ದಿಗಂತ್ ಹಾಗೂ ಯೋಗಿ ಇಬ್ಬರು ಅದ್ಭುತ ಕಲಾವಿದರು. ನಾನು ಅವರಿಬ್ಬರ ಚಿತ್ರಗಳನ್ನು ನೋಡಿ ಬಹಳ ಇಷ್ಟಪಟ್ಟಿದ್ದೇನೆ. ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಒಟ್ಟಾರೆ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಚಿತ್ರ ಇದೇ ಜನವರಿ 26ಕ್ಕೆ ತೆರೆಕಾಣುತ್ತಿದೆ. ನೋಡಿ ಹಾರೈಸಿ’ ಎಂದರು ರಕ್ಷಿತ್ ಶೆಟ್ಟಿ.

‘ಲಾಕ್ ಡೌನ್ ಸಮಯದಲ್ಲಿ ಈ ಸಿನಿಮಾದ ಕಥೆ ಹುಟ್ಟಿತು. ಇದೊಂದು ಪಕ್ಕಾ ಎಂಟರ್‌ಟೇನರ್ ಸಿನಿಮಾ. ಪ್ರೇಕ್ಷಕರು ಕೊಡುವ ದುಡ್ಡಿಗೆ ಖಂಡಿತ ಮೋಸ ಆಗುವುದಿಲ್ಲ. ನಿರ್ದೇಶನ ಮಾಡಲು ಅವಕಾಶ ನೀಡಿದ ರಕ್ಷಿತ್ ಶೆಟ್ಟಿ ಅವರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ’ ಎಂದರು ನಿರ್ದೇಶಕರು. ಚಿತ್ರದ ಹೀರೋಗಳಲ್ಲೊಬ್ಬರಾದ ಯೋಗಿ, ‘ರಿಷಬ್ ಶೆಟ್ಟಿ ಅವರು ಮಾಡಬೇಕಿದ್ದ ಪಾತ್ರವಿದು. ಅವರು ‘ಕಾಂತಾರ’ದಲ್ಲಿ ಬ್ಯುಸಿಯಾದ ಕಾರಣ ನಾನು ನಟಿಸುವಂತಾಯ್ತು. ಪಾತ್ರ ತುಂಬಾ ಚೆನ್ನಾಗಿದೆ. ನಾನು ಹಾಗೂ ದಿಗಂತ್ ಹದಿನೈದು ವರ್ಷಗಳ ಸ್ನೇಹಿತರು. ಆದರೆ ಒಂದು ಚಿತ್ರದಲ್ಲೂ ಒಟ್ಟಿಗೆ ನಟಿಸಿರಲಿಲ್ಲ. ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿರುವುದು ಖುಷಿಯಾಗಿದೆ’ ಎಂದರು.

‘Paramvah Studios ಬ್ಯಾನರ್‌ನಲ್ಲಿ ನನ್ನ ಎರಡನೇ ಚಿತ್ರವಿದು. ಯೋಗಿ ಹಾಗೂ ನಾನು ಒಟ್ಟಿಗೆ ನಟಿಸಿರುವ ಮೊದಲ ಚಿತ್ರ. ಚಿತ್ರೀಕರಣದ ಸಮಯ ತುಂಬಾ ಸಂತಸಮಯವಾಗಿತ್ತು’ ಎಂದರು ದಿಗಂತ್. ‘ಸಿನಿಮಾ ಬೆಂಗಳೂರು ಅಷ್ಟೇ ಅಲ್ಲದೆ, ಥೈಲ್ಯಾಂಡ್, ಬ್ಯಾಂಕಾಕ್‌ನಲ್ಲೂ ಚಿತ್ರೀಕರಣಗೊಂಡಿದೆ. ನಾನು, ಯೋಗಿ ಹಾಗೂ ದಿಗಂತ್ ಅಲ್ಲಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆವು. ಇಬ್ಬರು ಒಳ್ಳೆಯ ನಟರು. ಅಭಿಜಿತ್ ಅವರು ಪ್ರತಿಭಾವಂತ ನಿರ್ದೇಶಕ.
ಎಲ್ಲರೂ ಚಿತ್ರ ನೋಡಿ, ಪ್ರೋತ್ಸಾಹ ನೀಡಿ’ ಎನ್ನುವುದು ಅಚ್ಯುತ್‌ಕುಮಾರ್‌ ಮಾತು. ಚಿತ್ರವನ್ನು Paramvah Studios ಬ್ಯಾನರ್‌ ಅಡಿಯಲ್ಲಿ ಜಿ ಎಸ್ ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಿಸಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ರಾಮ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಕಾಸ್ಟ್ಯೂಮ್ ಡಿಸೈನರ್ ಅರುಂಧತಿ ಹಾಗೂ Paramvah ಸಂಸ್ಥೆಯ CEO ಶ್ರೀನಿ ಶೆಟ್ಟಿ ಚಿತ್ರದ ಕುರಿತು ಮಾತನಾಡಿದರು.

LEAVE A REPLY

Connect with

Please enter your comment!
Please enter your name here