60, 70ರ ದಶಕಗಳ ಜನಪ್ರಿಯ ನಾಯಕನಟಿ ಜಮುನಾ (86 ವರ್ಷ) ಇಂದು ಅಗಲಿದ್ದಾರೆ. ಪ್ರಮುಖವಾಗಿ ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ ಅವರು ಹಲವು ಕನ್ನಡ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತರು. ವಿವಿಧ ಭಾಷೆಗಳ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.

ಕನ್ನಡ ನಾಡಿನ ಹಂಪಿಯಲ್ಲಿ ಜನಿಸಿದ ಜಮುನಾ ಬೆಳೆದದ್ದು ಆಂಧ್ರದಲ್ಲಿ. ತೆಲುಗು ಸಿನಿಮಾ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಅವರು ತೆಲುಗು ಚಿತ್ರರಂಗದ ಮೇರು ತಾರೆಯರಾದ ಎನ್‌ಟಿಆರ್‌, ಆರ್‌.ನಾಗೇಶ್ವರಾವ್‌ ಅವರಿಗೆ ನಾಯಕಿಯಾಗಿ ಬಹಳಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರು. ಐವತ್ತರ ದಶಕದ ಮಧ್ಯದಲ್ಲಿ ‘ಆದರ್ಶ ಸತಿ’ ಚಿತ್ರದೊಂದಿಗೆ ಕನ್ನಡ ಚಿತ್ರರಂಗಕ್ಕೆ ಬಂದರೂ ಅವರು ಕನ್ನಡಿಗರಿಗೆ ಚಿರಪರಿಚಿತರಾಗಿದ್ದು ಡಾ.ರಾಜಕುಮಾರ್‌ ಅವರ ‘ಸಾಕ್ಷಾತ್ಕಾರ’ ಚಿತ್ರದಲ್ಲಿ. ಹಲವಾರು ಹಿಂದಿ, ತಮಿಳು ಸಿನಿಮಾಗಳಲ್ಲೂ ಅಭಿನಯಿಸಿದ ಅವರು 60, 70ರ ದಶಕಗಳ ಜನಪ್ರಿಯ ನಾಯಕನಟಿಯಾಗಿ ಮಿಂಚಿದರು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಅಗಲಿದ್ದಾರೆ. 86 ವರ್ಷಗಳ ತುಂಬು ಜೀವನ ಅವರದು. ಮೇರು ನಟಿಯ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

1936ರ ಆಗಸ್ಟ್ 30ರಂದು ಹಂಪಿಯಲ್ಲಿ ಜನಿಸಿದ ಜಮುನಾರ ಜನ್ಮನಾಮ ಜನಾ ಬಾಯಿ. ತಂದೆ ನಿಪ್ಪಾಣಿ ಶ್ರೀನಿವಾಸ ರಾವ್. ತಾಯಿ ಕೌಸಲ್ಯಾದೇವಿ. ತಂದೆ – ತಾಯಿ ಅವರದ್ದು ಅಂತರ್ಜಾತೀಯ ವಿವಾಹ. ಕುಟುಂಬದ ಮಾತೃ ಭಾಷೆ ಕನ್ನಡ. ಜಮುನಾ ಏಳು ವರ್ಷದವರಿದ್ದಾಗ ವ್ಯವಹಾರ ನಿಮಿತ್ತ ಅವರ ಕುಟುಂಬವು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ದುಗ್ಗಿರಾಲದಲ್ಲಿ ನೆಲೆ ನಿಂತಿತು. ಚಿಕ್ಕಂದಿನಲ್ಲೇ ರಂಗಭೂಮಿ ಸಂಪರ್ಕಕ್ಕೆ ಬಂದ ಜಮುನಾ ನಂತರದ ದಿನಗಳಲ್ಲಿ ಚಿತ್ರರಂಗಕ್ಕೆ ಪರಿಚಯವಾದರು. ‘ಪುಟ್ಟಿಲ್ಲು’ ಚಿತ್ರದೊಂದಿಗೆ ತೆಲುಗು ಸಿನಿಮಾ ಪ್ರವೇಶಿಸಿದ ಅವರಿಗೆ ‘ಮಿಸ್ಸಮ್ಮ’ (1955) ಚಿತ್ರದ ಯಶಸ್ಸು ಚಿತ್ರರಂಗದಲ್ಲಿ ಭದ್ರ ಜಾಗ ಕಲ್ಪಿಸಿತು.

ಮುಂದೆ ಸಾಲು, ಸಾಲು ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುತ್ತಾ ಬಂದ ಅವರು ‘ಮಿಸ್‌ ಮೇರಿ’ ಚಿತ್ರದೊಂದಿಗೆ ಹಿಂದಿಗೆ ಪರಿಚಿತರಾದರು. ‘ಮಿಲನ್’ (1967) ಹಿಂದಿ ಸಿನಿಮಾದಲ್ಲಿನ ನಟನೆಗೆ ಅವರಿಗೆ ಅತ್ಯುತ್ತಮ ಪೋಷಕ ನಟಿ ಫಿಲ್ಮ್‌ಫೇರ್ ಪ್ರಶಸ್ತಿ ಲಭಿಸಿತು. ಆದರ್ಶ ಸತಿ, ತೆನಾಲಿ ರಾಮಕೃಷ್ಣ, ಭೂಕೈಲಾಸ, ರತ್ನಗಿರಿ ರಹಸ್ಯ, ಸಾಕ್ಷಾತ್ಕಾರ, ಮಾಯೆಯ ಮುಸುಕು, ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ ಅವರು ಅಭಿನಯಿಸಿರುವ ಕನ್ನಡ ಸಿನಿಮಾಗಳು. ರಾಜಕಾರಣಕ್ಕೂ ಕಾಲಿಟ್ಟ ಜಮುನಾ 1989 – 91ರ ಅವಧಿಯಲ್ಲಿ ರಾಜಮಂಡ್ರಿ ಸಂಸದೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಎನ್‌ಟಿಆರ್‌ ಪ್ರಶಸ್ತಿ, ಎಂಜಿಆರ್‌ ಪುರಸ್ಕಾರ, ಬಿ.ಸರೋಜಾದೇವಿ ರಾಷ್ಟ್ರೀಯ ಗೌರವ, ಫಿಲ್ಮ್‌ಫೇರ್‌ ಪ್ರಶಸ್ತಿಗಳು ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಹಲವು ಪ್ರತಿಷ್ಠಿತ ಗೌರವಗಳು ಅವರಿಗೆ ಸಂದಿವೆ. ಪ್ರೊ.ಜೂಲೂರಿ ರಮಣ ರಾವ್‌ ಅವರನ್ನು ಜಮುನಾ ವರಿಸಿದ್ದರು (1965). ವಂಶಿ ಮತ್ತು ಶ್ರವಂತಿ ಈ ದಂಪತಿಯ ಇಬ್ಬರು ಮಕ್ಕಳು. ಜಮುನಾ ಅವರ ಪತಿ ರಮಣ ರಾವ್‌ 2014ರಂದು ಇಹಲೋಕ ತ್ಯಜಿಸಿದ್ದರು.

Previous articleಟ್ರೈಲರ್‌ | ರೊಮ್ಯಾಂಟಿಕ್‌ – ಥ್ರಿಲ್ಲರ್‌ ಜರ್ನೀ ಕತೆ ‘ಲಾಂಗ್‌ ಡ್ರೈವ್’
Next articleಕಳೆಗುಂದಿದ್ದ ಬಾಲಿವುಡ್‌ಗೆ ರಂಗುತುಂಬಿದ ‘ಪಠಾಣ್‌’

LEAVE A REPLY

Connect with

Please enter your comment!
Please enter your name here