ರಾಜ್ಯೋತ್ಸವದ ಅಂಗವಾಗಿ ಧನಂಜಯ ನಟನೆಯ ‘ಬಡವ ರಾಸ್ಕಲ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ‘ಗ್ಲಿಮ್ಸೆ’ಯಲ್ಲಿ ಚಿತ್ರದ ಪಾತ್ರಗಳು ಪರಿಚಯವಾಗಿವೆ. ಡಿಸೆಂಬರ್ 24ರಂದು ಕ್ರಿಸ್ಮಸ್‌ಗೆ ಸಿನಿಮಾ ತೆರೆಕಾಣಲಿದೆ.
ರಾಜ್ಯೋತ್ಸವದ ಅಂಗವಾಗಿ ಧನಂಜಯ ತಾವು ನಿರ್ಮಿಸಿ, ಹೀರೋ ಆಗಿ ನಟಿಸಿರುವ ‘ಬಡವ ರಾಸ್ಕಲ್’ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಟೀಸರ್‌ನಲ್ಲಿ ಹೀರೋ ಸೇರಿದಂತೆ ಆತನ ಸ್ನೇಹಿತರ ಪಾತ್ರಗಳ ಪರಿಚಯವಿದೆ. ಶಂಕರ್ ಗುರು ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ಭೂಗತ ಜಗತ್ತಿನ ಕತೆಯಿರುವ ಸೂಚನೆಗಳು ಸಿಕ್ಕಿವೆ. ಟೀಸರ್‌ನಲ್ಲಿ ರೌಡಿಗಳು ಒಬ್ಬೊಬ್ಬರಾಗಿ ತಮ್ಮ ಹೆಸರುಗಳನ್ನು ಹೇಳಿಕೊಳ್ಳುವುದನ್ನು ನೋಡಬಹುದು. ರೌಡಿ ಕತೆ ಎನ್ನುವುದಕ್ಕೆ ಇದು ಸಾಕ್ಷ್ಯ ಒದಗಿಸುತ್ತದೆ. ‘ಶಂಕರ್ ಅಲಿಯಾಸ್ ಬಡವ ರಾಸ್ಕಲ್’ ಎಂದು ನಟ ಧನಂಜಯ್ ತಮ್ಮ ಪಾತ್ರ ಪರಿಚಯಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಚಿತ್ರದ ‘ಉಡುಪಿ ಹೋಟೆಲು’ ಹಾಡು ಉತ್ತಮ ಸಂಗೀತ ಸಂಯೋಜನೆ ಮತ್ತು ಪಿಕ್ಚರೈಸೇಷನ್‌ನಿಂದಾಗಿ ಗಮನಸೆಳೆದಿತ್ತು.
ಚಿತ್ರದಲ್ಲಿ ಧನಂಜಯ್ ಅವರ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಅಭಿನಯಿಸಿದ್ದಾರೆ. ಸಂಗೀತ ಸಂಯೋಜನೆ ವಾಸುಕಿ ವೈಭವ್. ಕೆಆರ್‌ಜಿ ಸ್ಟುಡಿಯೋ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ಪ್ರಸ್ತುತ ಧನಂಜಯ ಅವರ ‘ರತ್ನನ್ ಪ್ರಪಂಚ’ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗುತ್ತಿದ್ದು, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಇನ್ನು ಧನಂಜಯ ಅವರ ಬಹುಭಾಷಾ ಚಿತ್ರ ‘ಪುಷ್ಪಾ’ ತೆಲುಗು ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆಗೆ ಧನಂಜಯ, ‘ಟಗರು’ ನಂತರ ಮತ್ತೊಮ್ಮೆ ಶಿವರಾಜ್ ಕುಮಾರ್ ಅವರ ಜೊತೆಗೆ ಅಭಿನಯಿಸಿರೋ ‘ಭೈರಾಗಿ’ ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ.