ಉತ್ತರ ಕರ್ನಾಟಕ ಸೊಗಡಿನ ಭಾಷೆ, ಸಂಸ್ಕೃತಿ, ಜನಜೀವನ ಬಿಂಬಿಸುವ ಚಿತ್ರಗಳು ತಯಾರಾಗುವುದು ಕಡಿಮೆ. ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನವಾಗಿ ‘ಬಯಲುಸೀಮೆ’ ತಯಾರಾಗಿದೆ. ಸಾಕಷ್ಟು ಹೋಂವರ್ಕ್ ಮಾಡಿಕೊಂಡು ನಿರ್ದೇಶಕ ವರುಣ್ ಕಟ್ಟೀಮನಿ ಈ ಚಿತ್ರ ಸಿದ್ಧಪಡಿಸಿದ್ದಾರೆ. ಪ್ರಸ್ತುತ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿವೆ.
ಕನ್ನಡ ಚಿತ್ರರಂಗದ ಇತಿಹಾಸ ಗಮನಿಸಿದರೆ ಉತ್ತರ ಕರ್ನಾಟಕ ಭಾಗದ ಕತೆಗಳು ತೆರೆ ಮೇಲೆ ಮೂಡಿರುವುದು ತುಸು ಕಡಿಮೆ ಎಂದೇ ಹೇಳಬಹುದು. ಕಮರ್ಷಿಯಲ್ ಸಿನಿಮಾಗಳ ಹಾಸ್ಯಪಾತ್ರಗಳಲ್ಲಿ ಅಲ್ಲಿನ ಭಾಷೆ ಆಗಿಂದಾಗ್ಗೆ ಕೇಳಿಸಿವುದಿದೆ. ಅಲ್ಲಿನ ಗಂಡುಭಾಷೆ, ಮಣ್ಣಿನ ಘಮವನ್ನು ಸೂಸುವ ಪ್ರಾಮಾಣಿಕ ಪ್ರಯತ್ನಗಳು ವಿರಳ. ಈ ನಿಟ್ಟಿನಲ್ಲಿ ಭರವಸೆ ಪ್ರಯತ್ನವಾಗಿ ಕಾಣಿಸುತ್ತದೆ ‘ಬಯಲುಸೀಮೆ’. ಲಕ್ಷ್ಮಣ್ ಸಾ ಶಿಂಗ್ರಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರವನ್ನು ವರುಣ್ ಕಟ್ಟೀಮನಿ ನಿರ್ದೇಶಿಸಿದ್ದಾರೆ. 80ರ ದಶಕ ಮತ್ತು ಈ ಹೊತ್ತಿನ ಕಾಲಮಾನದೊಂದಿಗೆ ಬೆಸೆದ ಕಥೆ, ಆ ಎರಡು ಕಾಲಘಟ್ಟಗಳನ್ನೂ ಉತ್ತರ ಕರ್ನಾಟಕದ ಜವಾರಿ ಶೈಲಿಯಲ್ಲಿ ಕಟ್ಟಿಕೊಡುತ್ತದೆ ಎನ್ನುತ್ತಾರೆ ನಿರ್ದೇಶಕ ವರುಣ್.
ಸಾಹೂರಾವ್ ಶಿಂಧೆ ಎನ್ನುವ ಶ್ರೀಮಂತ ವ್ಯಕ್ತಿಯ ಸುತ್ತ ಬಯಲು ಸೀಮೆಯ ಕತೆ ಚಲಿಸುತ್ತದೆ. ಆತನ ಸುತ್ತ ಹಬ್ಬಿಕೊಳ್ಳುವ ಅಕ್ರಮ ಸಂಬಂಧ, ಅದರ ಹಿನ್ನೆಲೆಯಲ್ಲೊಂದು ಲವ್ ಸ್ಟೋರಿ ಹಾಗೂ ಅದರ ಗರ್ಭದಲ್ಲಿಯೇ ಹುಟ್ಟಿಕೊಳ್ಳೋ ರಣ ದ್ವೇಷ… ಗಟ್ಟಿ ಕತೆಯೊಂದಿಗೆ ಚಿತ್ರತಂಡ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಉತ್ಸಾಹದಲ್ಲಿದೆ. ಸಿನಿಮಾ ಶೂಟಿಂಗ್ ಮುಗಿಸಿರುವ ಚಿತ್ರತಂಡ ಆಡಿಯೋ ಬಿಡುಗಡೆ ಮಾಡಿದೆ. “ನಿರ್ದೇಶಕರು ಏನೇ ವಿಷ್ಯುವಲೈಸ್ ಮಾಡಿದರೂ ಅದಕ್ಕೆ ನಿರ್ಮಾಪಕರ ಸಪೋರ್ಟ್ ಬಹಳ ಮುಖ್ಯ. ಪ್ರತಿಯೊಬ್ಬರೂ ಈ ಸಿನಿಮಾಗೆ ಬಹಳಷ್ಟು ಶ್ರಮಿಸಿದ್ದಾರೆ. ನಾಗಾಭರಣ ಅವರ ಜೊತೆ ಆಕ್ಟ್ ಮಾಡಿರೋದು ಖುಷಿ ತಂದಿದೆ” ಎಂದ ನಟ ರವಿಶಂಕರ್ ಅವರು ನಾಗಾಭರಣರ ನಿರ್ದೇಶನದಲ್ಲಿ ನಟಿಸುವ ಅಭಿಲಾಷೆ ವ್ಯಕ್ತಪಡಿಸಿದರು.
ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಜಾನರಿನ ‘ಬಯಲುಸೀಮೆ’ ಸಿನಿಮಾ ನಾನಾ ಮಜಲುಗಳ, ಮೈನವಿರೇಳಿಸೋ ತಿರುವುಗಳ ಮೂಲಕ ಪ್ರೇಕ್ಷಕರನ್ನು ಬೇರೆಯದ್ದೇ ಜಗತ್ತಿಗೆ ಕೊಂಡೊಯ್ಯಲಿದೆ ಎಂದು ಚಿತ್ರದ ಕಲಾವಿದರು ಅಭಿಪ್ರಾಯಪಡುತ್ತಾರೆ. ಬೃಹತ್ ತಾರಾಗಣ ಹೊಂದಿರುವ ಚಿತ್ರದಲ್ಲಿ ಬಿಸಿಲ ನಾಡ ಪ್ರತಿಭೆಗಳೂ ಮಿಂಚಲು ಅಣಿಯಾಗಿದ್ದಾರೆ. ಟಿ.ಎಸ್ ನಾಗಾಭರಣ, ರವಿಶಂಕರ್, ಸಂಯುಕ್ತ ಹೊರನಾಡು, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ವರುಣ್ ಕಟ್ಟೀಮನಿ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕೈನವರ್, ಪ್ರದೀಪ್ ರಾಜ್ ಮುಂತಾದವರ ತಾರಾಗಣದಲ್ಲಿದ್ದಾರೆ. ಸುಜಯ್ ಕುಮಾರ್ ಬಾವಿಕಟ್ಟಿ ಛಾಯಾಗ್ರಹಣ, ಮಾನಸಾ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಸಂಕಲನ, ರಾಮು ನೃತ್ಯ ಸಂಯೋಜನೆ ಚಿತ್ರಕ್ಕಿದೆ.