ವೈ.ಬಿ.ಎನ್‌.ಸ್ವಾಮಿ ನಿರ್ದೇಶಿಸಿ, ನಟಿಸಿರುವ ‘ಧೀರನ್‌’ ಸಸ್ಪೆನ್ಸ್‌ – ಥ್ರಿಲ್ಲರ್‌ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಇದೊಂದು ಥ್ರೀ ಡೈಮೆನ್ಷನಲ್‌ ಸಿನಿಮಾ ಎನ್ನುತ್ತಾರವರು. ಲಕ್ಷ್ಯಾ ಶೆಟ್ಟಿ ಚಿತ್ರದ ಹಿರೋಯಿನ್‌.

‘ಧೀರನ್‌’ ಸಿನಿಮಾ ನಿರ್ದೇಶಕ ವೈ.ಬಿ.ಎನ್‌.ಸ್ವಾಮಿ ಅವರು ಸಿನಿಮಾ ಪ್ರೊಮೋಷನ್‌ ಮೂಲಕ ಚಿತ್ರರಂಗದ ನಂಟು ಬೆಳೆಸಿಕೊಂಡವರು. ಈಗ ಸಸ್ಪೆನ್ಸ್, ಥ್ರಿಲ್ಲರ್ ಕಥೆಯ ‘ಧೀರನ್‌’ ಮೂಲಕ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ. ಜರ್ನೀಯಲ್ಲಿ ನಡೆಯುವ ಕಳ್ಳ ಪೊಲೀಸ್‌, ಕಳ್ಳ ಕಳ್ಳ ಹಾಗೂ ಪೋಲಿಸ್ ಪೋಲಿಸ್ ಆಟ, ಹೀಗೆ ಮೂರು ಡೈಮನ್‌ಷನ್‌ನಲ್ಲಿ ‘ಧೀರನ್‌’ ಕಥೆ ಹೇಳಿರುವ ನಿರ್ದೇಶಕರು ಜೊತೆಗೊಂದು ಲವ್‌ಸ್ಟೋರಿ ಇಟ್ಟಿದ್ದಾರೆ. ಚಿತ್ರನಿರ್ದೇಶಕ ಸಿಂಪಲ್‌ ಸುನಿ ಈ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಗೊಳಿಸಿದರು.

ಫಸ್ಟ್‌ಲುಕ್‌ ಬಿಡುಗಡೆಗೊಳಿಸಿ ಮಾತನಾಡಿದ ಸುನಿ, “ಇಂಗ್ಲೀಷ್‌ನಲ್ಲಿ ಇದನ್ನು ‘ದಿ ರನ್’ ಎಂದು ಹೇಳಬಹುದು. ನಿರ್ದೇಶಕ ಸ್ವಾಮಿ ಮತ್ತು ನಾನು ಮೊದಲಿಂದಲೂ ಗೆಳೆಯರು. ಆಗ ನಾವೆಲ್ಲ ಸೇರಿ ಸಿನಿಮಾಗಳ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಿದ್ದೆವು, ಈಗ ಒಂದೊಳ್ಳೇ ಸಿನಿಮಾ ನಿರ್ದೇಶನ ಮಾಡಿದ್ದಾರೆ” ಎಂದು ಹಳೆಯ ನೆನಪುಗಳಿಗೆ ಜಾರಿದರು. ಚಿತ್ರದ ಕತೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಾಯಕನಾಗಿಯೂ ಅಭಿನಯಿಸಿರುವ ಸ್ವಾಮಿ ಮಾತನಾಡಿ “ನನ್ನ ನಿರ್ದೇಶನದ ಮೊದಲ ಚಿತ್ರವಿದು. ಸುನಿ ನನಗೆ 15 ವರ್ಷಗಳ ಗೆಳೆಯ. ಇದು ಚಿತ್ರಕಥೆಯ ಮೇಲೆ ನಿಂತಿರುವ ಸಿನಿಮಾ. ಚಿತ್ರಕ್ಕೆ ಮಾಸ್ತಿ ಉತ್ತಮ ಡೈಲಾಗ್‌ಗಳನ್ನು ಬರೆದಿದ್ದಾರೆ. ಐದು ಪಾತ್ರಗಳ ಜರ್ನೀ ಮೂಲಕ ಕತೆ ಆರಂಭವಾಗಿ, ಇದರಲ್ಲಿ ಯಾರು ಗೆಳೆಯರು, ಯಾರು ವಿಲನ್‌ಗಳು ಎಂಬುದೇ ಗೊತ್ತಾಗುವುದಿಲ್ಲ. ಚಿತ್ರ ನೋಡಿದ ಮೇಲೆ ಜನ ಸಂಗೀತ, ಛಾಯಾಗ್ರಹಣದ ವಿಶೇಷತೆ ಬಗ್ಗೆ ಖಂಡಿತ ಮಾತನಾಡುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊಸಬರ ಈ ಚಿತ್ರಕ್ಕೆ ಸೆನ್ಸಾರ್‌ ಆಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಿಮಿಕ್ರಿ ದಯಾನಂದ್‌ ಅವರು ಮಾತನಾಡಿ, “ಈ ಸಿನಿಮಾ ಶುರುವಾದಾಗಿನಿಂದಲೂ ಚಿತ್ರತಂಡದ ಜೊತೆ ಇರುವ ನಾನು ಚಿತ್ರದಲ್ಲಿ ತಾತನಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ಸಾಕಷ್ಟು ಹೊಸ ಕಲಾವಿದರಿದ್ದು, ಹೊಸಬರು ಬೆಳೆದಾಗ ಇಂಡಸ್ಟಿಯೂ ಬೆಳೆಯುತ್ತೆ. ಜನ ಥಿಯೇಟರಿಗೆ ಬಂದು ನೋಡಿ ಗೆಲ್ಲಿಸಬೇಕು. ಈ ಸಿನಿಮಾ ಹಿಟ್ ಆದ್ರೆ. ಒಂದಿಷ್ಟು ವಿಲನ್ ಹಾಗೂ ಹೀರೋಗಳು ಇಂಡಸ್ಟಿಗೆ ಬರುತ್ತಾರೆ” ಎಂದರು. ಮಂಗಳೂರು ಮೂಲದ ಲಕ್ಷ್ಯಾ ಶೆಟ್ಟಿ ಚಿತ್ರದ ನಾಯಕಿ. ಸಂದೀಪ್‌ ಹೊನ್ನಾಳಿ ಛಾಯಾಗ್ರಹಣ, ರಘು ಸಂಕಲನ, ಆರ್.ಎಸ್.ಗಣೇಶ್ ನಾರಾಯಣ್ ಸಂಗೀತ ಚಿತ್ರಕ್ಕಿದೆ. ಭಾಸ್ಕರ್, ಪ್ರಮೋದ್‌ ಶೆಟ್ಟಿ, ರಘು ಪಾಂಡೇಶ್ವರ್, ತೇಜಸ್ವಿನಿ ಪ್ರಕಾಶ್, ವಿದ್ಯಾಮೂರ್ತಿ, ವೀಣಾ ಸುಂದರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here