ಹರ್ಷ ನಿರ್ದೇಶನದಲ್ಲಿ ಶಿವರಾಜಕುಮಾರ್ ಅಭಿನಯಿಸಿರುವ ‘ಭಜರಂಗಿ 2’ ನಾಳೆ ತೆರೆಕಾಣುತ್ತಿದೆ. ಕೋವಿಡ್‌ ಸಂಕಷ್ಟದ ದಿನಗಳ ನಂತರ ಥಿಯೇಟರ್‌ಗೆ ಬರುತ್ತಿರುವ ಮೂರನೇ ದೊಡ್ಡ ಚಿತ್ರವಿದು. ಈಗಾಗಲೇ ಟ್ರೈಲರ್‌ಗಳ ಮೂಲಕ ಸದ್ದು ಮಾಡುತ್ತಿರುವ ಸಿನಿಮಾ ಕುರಿತು ಶಿವರಾಜಕುಮಾರ್‌ ಮಾತನಾಡಿದ್ದಾರೆ.

ಕಳೆದೆರೆಡು ಮೂರು ವಾರಗಳಿಂದ ಕನ್ನಡ ಚಿತ್ರರಂಗದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಸಿನಿಮಾಗಳ ಬಿಡುಗಡೆಯ ಜೊತೆ ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ. ‘ಕೋಟಿಗೊಬ್ಬ 2’ ಮತ್ತು ‘ಸಲಗ’ ಚಿತ್ರಗಳು ಜನರನ್ನು ಥಿಯೇಟರ್‌ಗೆ ಸೆಳೆಯುತ್ತಿದ್ದು, ಇದು ಉದ್ಯಮಕ್ಕೆ ಚೈತನ್ಯ ತಂದಿದೆ. ನಾಳೆ ‘ಭಜರಂಗಿ 2’ ಸಿನಿಮಾ ತೆರೆಕಾಣುತ್ತಿದ್ದು, ನಿರೀಕ್ಷೆ ಕೊಂಚ ಹೆಚ್ಚೇ ಇದೆ. ಚಿತ್ರದ ಹೀರೋ ಶಿವರಾಜಕುಮಾರ್ ಕೂಡ ಇದು ತಮಗೆ ಸ್ಪೆಷಲ್ ಎಂದೇ ಹೇಳುತ್ತಿದ್ದಾರೆ.

‘ಭಜರಂಗಿ 2’ ನಿಮಗೆ ಏಕೆ ಸ್ಪೆಷಲ್‌?

ಈ ಸಿನಿಮಾ ಬೇರೆ ಬೇರೆ ಕಾರಣಗಳಿಗೆ ನನ್ನ ವೃತ್ತಿ ಬದುಕಿನಲ್ಲಿ ಮಹತ್ವದ್ದು. ಕೋವಿಡ್‌ನಿಂದಾಗಿ ಸಿನಿಮಾ ಚಟುವಟಿಕೆಗಳು ನಿಂತುಹೋಗಿದ್ದವು. ಸುಮಾರು ಒಂದೂವರೆ ವರ್ಷದ ನಂತರ ನನ್ನ ಸಿನಿಮಾ ಥಿಯೇಟರ್‌ಗೆ ಬರ್ತಿದೆ. ಇಷ್ಟೊಂದು ಗ್ಯಾಪ್ ಹಿಂದೆಂದೂ ಆಗಿರ್ಲಿಲ್ಲ. ಹಾಗಾಗಿ ನಾನೂ ಎಕ್ಸೈಟ್ ಆಗಿದ್ದೇನೆ. ಇನ್ನು ಇದು ಬೇರೆಯದ್ದೇ ಜಾನರ್‌ನ ಸಿನಿಮಾ. ಇಲ್ಲಿ ತೆರೆಯ ಮೇಲೆ ವಿಶ್ಯುಯಲ್ ಬ್ಯೂಟಿ ನೋಡಬಹುದು. ಲಂಡನ್‌ನಲ್ಲಿ ಶೌಲ್ಡರ್ ಸರ್ಜರಿ ಮಾಡಿಸಿಕೊಂಡು ಬಂದು ಆಕ್ಷನ್ ಸನ್ನಿವೇಶಗಳಲ್ಲಿ ಪಾಲ್ಗೊಂಡಿದ್ದೇನೆ. ಹೇಗೆ ಪರ್ಫಾರ್ಮ್ ಮಾಡಿದ್ದೇನೆ ಎಂದು ದೊಡ್ಡ ಪರದೆ ಮೇಲೆ ನೋಡುವ ಕುತೂಹಲ ನನಗೂ ಇದೆ. ಪ್ರತಿಭಾವಂತ ಯುವ ಕಲಾವಿದರೊಂದಿಗೆ ನಟಿಸಿದ್ದೇನೆ. ಜನರ ನಿರೀಕ್ಷೆಯೂ ಕೊಂಚ ಹೆಚ್ಚೇ ಇದೆ. ಹಾಗಾಗಿ, ಇದು ನನಗೆ ಸ್ಪೆಷಲ್‌ ಸಿನಿಮಾ ಆಗಿದೆ.

ಜನರಲ್ಲಿ ಇನ್ನೂ ಕೊರೋನಾ ಆತಂಕ ಪೂರ್ಣ ಹೋಗಿಲ್ಲ…

ಹೌದು, ಅದು ಸಹಜ. ಬದುಕಿನಲ್ಲಿ ಎಲ್ಲವೂ ಇರುತ್ತೆ. ಹಾಗೆಯೇ ಜೀವನವೂ ನಡೀಬೇಕು. ನಾವು ಧೈರ್ಯವಾಗಿ, ಎಚ್ಚರಿಕೆಯಿಂದ ಸಾಗುತ್ತಾ ಇರಬೇಕು. ಥಿಯೇಟರ್‌ನಲ್ಲಿ ಹಂಡ್ರೆಡ್ ಪರ್ಸೆಂಟ್ ಆಕ್ಯುಪೆನ್ಸಿ ಕೊಟ್ಟಿರೋದು ಸಿನಿಮೋದ್ಯಮ ಚೇತರಿಕೆಗೆ ನೆರವಾಗಿದೆ. ಕಳೆದ ವಾರಗಳಲ್ಲಿ ತೆರೆಕಂಡ ಚಿತ್ರಗಳನ್ನು ಜನರು ಗೆಲ್ಲಿಸಿದ್ದಾರೆ. ಇದು ಗುಡ್ ಸೈನ್‌.

ನಿರ್ದೇಶಕರು ‘ಭಜರಂಗಿ 2’ ಚಿತ್ರದಲ್ಲಿ ಏನು ತೋರಿಸಲು ಹೊರಟಿದ್ದಾರೆ?

ಇದೊಂದು ಆಕ್ಷನ್ ಫ್ಯಾಂಟಸಿ ಎಂಟರ್‌ಟೇನರ್‌. ಗೆಟಪ್, ಮೇಕಿಂಗ್, ಸ್ಪೆಷಲ್ ಎಫೆಕ್ಟ್‌.. ಬೇರೆಯದ್ದೇ ಲೋಕಕ್ಕೆ ಕರೆದೊಯ್ಯುವ ಸಿನಿಮಾ. ನಿರ್ದೇಶಕ ಹರ್ಷ ಹಾಗೂ ನಿರ್ಮಾಪಕರಾದ ಜಯಣ್ಣ – ಭೋಗಣ್ಣ ತುಂಬಾ ಇಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಸಿನಿಮಾ ನೋಡುವ ಪ್ರೇಕ್ಷಕ ತೆರೆಯ ಮೇಲಿನ ದೃಶ್ಯದಲ್ಲಿ ಇನ್ವಾಲ್ವ್‌ ಆಗುವಂತಹ ನರೇಟೀವ್ ಇದೆ. ಬದುಕಿನ ಫಿಲಾಸಫಿಯನ್ನೇ ಹೇಳಿದ್ದಾರೆ. ಪಕ್ಕಾ ಪೈಸಾ ವಸೂಲಿ ಸಿನಿಮಾ.

ಬೆಂಕಿ ಆಕಸ್ಮಿಕವೊಂದರಲ್ಲಿ ಚಿತ್ರದ ಸೆಟ್‌ ಹಾಳಾಗಿತ್ತು..

ಹೌದು, ಕೊಟ್ಯಾಂತರ ರೂಪಾಯಿ ಹಣ ವ್ಯಯಿಸಿ ಹಾಕಿದ್ದ ಸೆಟ್‌ ಅದು. ಅಂದು ಎಲ್ಲರೂ ಅಲ್ಲಿದ್ದೆವು. ಖಂಡಿತ ಇಡೀ ಚಿತ್ರತಂಡಕ್ಕೆ ಅದು ಆಘಾತದ ವಿಷಯ. ಇತರೆ ನಿರ್ಮಾಪಕರಾಗಿದ್ದರೆ ಎದೆಗುಂದುತ್ತಿದ್ದರೇನೋ, ಜಯಣ್ಣ – ಭೋಗೇಂದ್ರ ಧೈರ್ಯಗೆಡಲಿಲ್ಲ. ಇನ್ನೂ ದೊಡ್ಡ ಸೆಟ್ ಹಾಕಿ ನಿರ್ದೇಶಕ ಹರ್ಷರಿಗೆ ಧೈರ್ಯ ತುಂಬಿದರು. ಅವರೊಂಥರಾ ದಿಲ್‌ದಾರ್ ನಿರ್ಮಾಪಕರು!

ಚಿತ್ರದ ನಿಮ್ಮ ಸಹಕಲಾವಿದರ ಬಗ್ಗೆ ಏನು ಹೇಳ್ತೀರಿ?

ಸೂರಿ ನಿರ್ದೇಶನದ ‘ಟಗರು’ ಚಿತ್ರದಲ್ಲಿ ಭಾವನಾ ನನಗೆ ನಾಯಕಿಯಾಗಿದ್ದರು. ನಾನು ಅವರ ಹಲವು ತಮಿಳು ಚಿತ್ರಗಳನ್ನು ನೋಡಿದ್ದೇನೆ. ಕಲಾವಿದರಿಗೆ ಸವಾಲಾಗುವ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲೂ ಅವರ ಪಾತ್ರಕ್ಕೆ ಬೇರೆಯದ್ದೇ ಶೇಡ್‌ ಇದ್ದು, ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಚಿತ್ರದಲ್ಲಿ ಶೃತಿ ಅವರನ್ನು ನೋಡಿದವರು ಖಂಡಿತ ಸರ್ಪೈಸ್ ಆಗುತ್ತಾರೆ. ‘ಆಸೆಗೊಬ್ಬ ಮೀಸೆಗೊಬ್ಬ’ ಚಿತ್ರದಲ್ಲಿ ಅವರು ನನ್ನ ತಂಗಿ ಪಾತ್ರ ಮಾಡಿದ್ದರು. ಮುಂದೆ ‘ನಮ್ಮೂರ ಹುಡ್ಗ’ ಸಿನಿಮಾದಲ್ಲಿ ನಾಯಕಿಯಾದರು. ಅವರು ಅತ್ಯುತ್ತಮ ನಟಿ. ಚಿತ್ರದ ಮೂರು ಪ್ರಮುಖ ಖಳಪಾತ್ರಗಳಲ್ಲಿ ಪ್ರಸನ್ನ, ಚೆಲುವರಾಜು ಮತ್ತು ಗಿರೀಶ್ ಇದ್ದಾರೆ. ಆಡಿಷನ್‌ನಲ್ಲಿ ಆಯ್ಕೆಯಾದ ಪ್ರತಿಭಾವಂತರು. ‘ಭಜರಂಗಿ’ಯಲ್ಲಿ ನಟಿಸಿದ್ದ ಲೋಕಿ ಅವರಿಗೆ ವಿಶೇಷ ಪಾತ್ರವಿದೆ. ಯುವ ಕಲಾವಿದರೊಂದಿಗೆ ನಟಿಸುವುದು ಖುಷಿ ಕೊಡುತ್ತದೆ.

ನಿಮ್ಮ ಮುಂದಿನ ಸಿನಿಮಾಗಳು?

ನೆಕ್ಸ್ಟ್‌ ‘ಬೈರಾಗಿ’ ಬರಲಿದೆ. ಆನಂತರ ‘ನೀ ಸಿಗೊವರೆಗೂ’. ಇದಾದ ಮೇಲೆ ನಮ್ಮ ಬ್ಯಾನರ್‌ನಲ್ಲೇ ತಯಾರಾಗಲಿರುವ ಚಿತ್ರವನ್ನು ಹರ್ಷ ನಿರ್ದೇಶಿಸಲಿದ್ದಾರೆ. ಇದು ನನಗೆ 125ನೇ ಸಿನಿಮಾ. ಮುಂದೆ ಕೆಆರ್‌ಜಿ ಅವರದು. ಅದಾದ ಮೇಲೆ ರಿಷಬ್‌ ಶೆಟ್ಟಿ ನಿರ್ದೇಶನದಲ್ಲೊಂದು, ಯೋಗರಾಜ್ ಭಟ್‌ ನಿರ್ದೇಶನದ ಸಿನಿಮಾ… ಹೀಗೆ 2023ರವರೆಗೆ ಬ್ಯುಸಿಯಾಗಿದ್ದೇನೆ.

LEAVE A REPLY

Connect with

Please enter your comment!
Please enter your name here