ಶಿವರಾಜಕುಮಾರ್‌ ಅಭಿನಯದ ‘ಭಜರಂಗಿ 2’ ZEE5 ಓಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದ್ದು, ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೂರು ದಿನಗಳಲ್ಲಿ 5 ಕೋಟಿಗೂ ಹೆಚ್ಚು ನಿಮಿಷಗಳಷ್ಟು ವೀಕ್ಷಣೆಗೊಳಗಾಗಿರುವುದು ದಾಖಲೆ ಎನ್ನಲಾಗಿದೆ.

ಶಿವರಾಜಕುಮಾರ್‌ ಅಭಿನಯದ ‘ಭಜರಂಗಿ 2’ 2021ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು ಎಂದೇ ಪ್ರೊಜೆಕ್ಟ್‌ ಆಗಿತ್ತು. ಅಕ್ಟೋಬರ್ 29ರಂದು ತೆರೆಕಂಡ ಚಿತ್ರವನ್ನು ಅಭಿಮಾನಿಗಳು ಅದ್ಧೂರಿಯಿಂದ ಸ್ವಾಗತಿಸಿದರು. ಆದರೆ ಅದೇ ದಿನ ಪುನೀತ್ ನಿಧನದ ಸುದ್ದಿ ಬರಸಿಡಿಲಿನಂತೆ ಎರಗಿತ್ತು. ಹೀಗಾಗಿ ತೆರೆಕಂಡ ಎರಡು ದಿನಗಳ ಕಾಲ ಚಿತ್ರಪ್ರದರ್ಶನ ಸ್ಥಗಿತಗೊಂಡಿತು. ಪುನೀತ್‌ ಅಗಲಿಕೆಯ ಹಿನ್ನೆಲೆಯಲ್ಲಿ ನಂತರದ ದಿನಗಳಲ್ಲೂ ಥಿಯೇಟರ್‌ಗಳಲ್ಲಿ ‘ಭಜರಂಗಿ-2’ಗೆ ಅಷ್ಟಾಗಿ ರೆಸ್ಪಾನ್ಸ್ ಸಿಗಲಿಲ್ಲ. ರಾಜ್ಯದ ಕೆಲವು ಪಟ್ಟಣ ಪ್ರದೇಶಗಳ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡಿತಾದರೂ ಒಟ್ಟಾರೆ ಸಿನಿಮಾಗೆ ಸಿಂಗಲ್‌ ಸ್ಕ್ರೀನ್‌ಗಳಿಂದ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಡಿಸೆಂಬರ್ 23ರಂದು ‘ಭಜರಂಗಿ 2’ ಚಿತ್ರವನ್ನು ಜೀ5 ಓಟಿಟಿಯಲ್ಲಿ ಬಿಡುಗಡೆ ಮಾಡಲಾಯಿತು. ಸಿನಿಮಾ ಸ್ಟ್ರೀಮ್‌ ಆದ ಮೂರೇ ದಿನಗಳಲ್ಲಿ 5 ಕೋಟಿಗೂ ಹೆಚ್ಚು ನಿಮಿಷಗಳಷ್ಟು ವೀಕ್ಷಣೆ ಕಂಡಿದೆ. ಸಿನಿಮಾ ಸ್ಟ್ರೀಮಿಂಗ್‌ ವಿಷಯದಲ್ಲಿ ಇದೊಂದು ವಿಶಿಷ್ಟ ದಾಖಲೆ ಎಂದು ಜೀ5 ಹೇಳಿಕೊಂಡಿದೆ. ಓಟಿಟಿಯಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಬೃಹತ್ ವೀಕ್ಷಣೆ ಪಡೆದ ಮೊದಲ ಕನ್ನಡ ಚಿತ್ರವಿದು ಎನ್ನುವ ಹೆಗ್ಗಳಿಕೆ ಈ ಚಿತ್ರದ್ದು. ‘ಭಜರಂಗಿ-2’ ಚಿತ್ರವನ್ನು ಹರ್ಷ ನಿರ್ದೇಶಿಸಿದ್ದು, ಭಾವನಾ ಮೆನನ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಭಜರಂಗಿ ಲೋಕಿ , ಶ್ರುತಿ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ದೊಡ್ಡ ತಾರಾಬಳಗವಿದೆ. ಜಯಣ್ಣ-ಭೋಗೇಂದ್ರ ನಿರ್ಮಾಣದ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಿದೆ.

LEAVE A REPLY

Connect with

Please enter your comment!
Please enter your name here