ಚಿತ್ರ ಮುಗಿದ ನಂತರ ಮೇಲ್ನೋಟಕ್ಕೆ ಇದೊಂದು ಹಾರರ್ ಸಿನಿಮಾ ಎನಿಸಿದರೂ, ಅಲ್ಲಿನ ವಿಷಯಗಳು ಚಿಂತನೆಗೆ ಹಚ್ಚುತ್ತದೆ. ಒಂದು ರೀತಿ ನಾವು ಹೇಗೆ ಗ್ರಹಿಸುತ್ತೇವೋ, ಹಾಗೆ ಅರ್ಥವಾಗುವಂತಹ ಸಿನಿಮಾ. ‘ಭೂತಕಾಲಂ’ ಮಲಯಾಳಂ ಸಿನಿಮಾ SonyLIVನಲ್ಲಿ ಸ್ಟ್ರೀಮ್ ಆಗುತ್ತಿದೆ.
ಭೂತಕಾಲದಲ್ಲಿ ಸಂಧಿಸಿದ ವ್ಯಕ್ತಿ, ವಿಷಯ ಮತ್ತು ನಮ್ಮ ನಿರ್ಧಾರಗಳು ವಾಸ್ತವ ಸ್ಥಿತಿಯ ಮೇಲೆ ಪರಿಮಾಣ ಬೀರುತ್ತವೆ ಎನ್ನುತ್ತದೆ ಒಂದು ಥಿಯರಿ. ವಾಸಿಸುತ್ತಿರುವ ಮನೆಗೂ, ಆ ಮನೆಯಲ್ಲಿನ ವ್ಯಕ್ತಿಗಳ ಮಾನಸಿಕ ಅರೋಗ್ಯಕ್ಕೂ ಸಂಬಂಧವಿರುತ್ತದೆ ಎನ್ನುವ ಲೌಕಿಕ ಸಿದ್ಧಾಂತವನ್ನು ಹಾರರ್ ಫ್ಲೇವರ್‌ನಲ್ಲಿ ಕಟ್ಟಿಕೊಡುವ ಪ್ರಯತ್ನವಿದು. ಪ್ರೀತಿ, ವಾತ್ಸಲ್ಯ, ಮಾನಸಿಕ ಆರೋಗ್ಯ, ವಾಸ್ತವದಲ್ಲಿ ಭೂತದ ಸಮಸ್ಯೆಯಂತೆಯೇ ಕಾಡುತ್ತಿರುವಂತ ನಿರುದ್ಯೋಗ ಈ ಎಲ್ಲಾ ಅಂಶಗಳನ್ನು ಒಳಗೊಂಡಿದೆ ಚಿತ್ರ.
ಚಿತ್ರದ ದ್ವಿತಿಯಾರ್ಧದಲ್ಲಿ ವೈಭವದ ಹಿನ್ನೆಲೆ ಸಂಗೀತವಿಲ್ಲದೆಯೂ ಕ್ರಿಯೆ, ಪ್ರತಿಕ್ರಿಯೆಯಲ್ಲಿಯೇ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವ ಸನ್ನಿವೇಶಗಳಿವೆ. ಚಿತ್ರ ಮುಗಿದ ನಂತರ ಮೇಲ್ನೋಟಕ್ಕೆ ಇದೊಂದು ಹಾರರ್ ಸಿನಿಮಾ ಎನಿಸಿದರೂ, ಅಲ್ಲಿನ ವಿಷಯಗಳು ಚಿಂತನೆಗೆ ಹಚ್ಚುತ್ತದೆ. ಚಿತ್ರದ ಕೊನೆ ಸರಿಯಾಗಿಲ್ಲ, ಇಲ್ಲಿ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿವೆ ಎಂದು ಒಂದು ವರ್ಗದ ಪ್ರೇಕ್ಷಕರಿಗೆ ಅನಿಸಬಹುದು. ಆದರೆ ಕತೆಗಾರ ತಾನು ಹೇಳಲು ಹೊರಟಿದ್ದ ಅಸಲಿ ಸಮಸ್ಯೆಯನ್ನು ನಿವಾರಿಸಿರುತ್ತಾನೆ. ಒಂದು ರೀತಿ ನಾವು ಹೇಗೆ ಗ್ರಹಿಸುತ್ತೇವೋ, ಹಾಗೆ ಅರ್ಥವಾಗುವಂತಹ ಸಿನಿಮಾ. ಮೇಲೆ ಪ್ರಸ್ತಾಪಿಸಿದ ಅಂಶಗಳಾವೂ ಇರದೆ ಒಂದು ಹಾರರ್ ಸಿನಿಮಾ ಎಂದುಕೊಂಡು ನೋಡಿದರೂ ಕೂಡ ಅದು ಬೇರೆಯದ್ದೇ ಒಂದು ಅನುಭವ ನೀಡುತ್ತದೆ.
ಆರ್ಥಿಕವಾಗಿ ಹಿಂದುಳಿದ ಮಧ್ಯಮ ವರ್ಗದ ಕುಟುಂಬದ ವಿನು, ಅವನ ತಾಯಿ ಮತ್ತು ಅಜ್ಜಿ ತಮ್ಮದೇ ಆದ ನೋವುಗಳಿಂದ ಖಿನ್ನತೆಯಲ್ಲಿ ಬಳಲುತ್ತಿರುವ ಪಾತ್ರಗಳು. ಅನಾರೋಗ್ಯದಿಂದ ಬಳಲುತ್ತಿರುವ ಅಜ್ಜಿಗೆ ಮನೋರೋಗವೂ ಇದೆ. ಇವರು ಬಾಡಿಗೆ ಮನೆಯೊಂದರಲ್ಲಿ ವಾಸವಿರುತ್ತಾರೆ. ವಿನು ಅಜ್ಜಿಯ ದಿಢೀರ್ ಸಾವಿನ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ವಿನು, ಡಿ ಫಾರ್ಮಾ ಮುಗಿಸಿಕೊಂಡಿದ್ದು ಕೆಲಸಕ್ಕಾಗಿ ಅಲೆಯುತ್ತಿದ್ದಾನೆ. ಶಿಕ್ಷಕಿಯಾಗಿರುವ ಅಮ್ಮನಿಗೆ ಮನೆ ನಿಭಾಯಿಸುವ ಜವಾಬ್ದಾರಿ. ವಿನು ಕೆಲಸಕ್ಕಾಗಿ ಅಲೆದು ನಿರಾಶನಾಗಿ ಖಿನ್ನತೆಗೆ ಈಡಾಗಿ ದುಶ್ಚಟಗಳಿಗೆ ದಾಸನಾಗಿರುತ್ತಾರೆ. ಆತನಿಗೆ ತನಗೆ ಕೆಲಸ ಇಲ್ಲ ಎನ್ನುವುದರ ಜೊತೆಗೆ ಗರ್ಲ್ ಫ್ರೆಂಡ್ ಇದ್ದಾಳೆ ಎನ್ನುವುದು ಭಾದೆಯೇ ಆಗಿರುತ್ತದೆ. ವಿನುಗೆ ಮನೆಯಲ್ಲಿ ಏನೋ ವಿಚಿತ್ರ ಶಬ್ಧ, ತೀರಿ ಹೋದ ಅಜ್ಜಿ ಮನೆಯಲ್ಲಿ ಮತ್ತೆ ಕಾಣಿಸಿಕೊಂಡಂತ ಅನುಭವಗಳು ಉಂಟಾಗಿ ಆತನು ಮಾನಸಿಕ ರೋಗಿ ಎನ್ನುವಂತೆ ಬಿಂಬಿತವಾಗುತ್ತದೆ.
ಅಮ್ಮ, ಮಗನ ನಡುವಿನ ಬಾಂಧವ್ಯ ಹದಗೆಡುತ್ತಾ ಕತೆಯು ಸಾಗುತ್ತದೆ. ಏಕಾಂಗಿಗಳಾದ ಎರಡೂ ಪಾತ್ರಗಳು ತಮ್ಮ ನೋವುಗಳೊಂದಿಗೆ ಮತ್ತಷ್ಟು ಖಿನ್ನತೆಗೆ ಒಳಗಾಗುತ್ತವೆ. ಮಾನಸಿಕ ಖಿನ್ನತೆಗೆ ಮದ್ದು ಸಿಕ್ಕಿತೇನೋ ಎನ್ನುವಾಗ ವಾಸವಿರುವ ಮನೆಯಲ್ಲಿ ಏನೋ ಸಮಸ್ಯೆ ಇದೆ ಎನ್ನುವಂತೆ ಚಿತ್ರಕಥೆಯ ಹೆಣಿಗೆಯಿದೆ. ಕತೆ ಮುಂದೇನಾಗುತ್ತದೆ ಎನ್ನುವುದೇ ಈ ಸಿನಿಮಾದ ರೋಚಕತೆ. ಹಾರರ್ ಜಾನರ್‌ನೊಂದಿಗೆ ಕತೆಗಾರ ಹಾಗೂ ನಿರ್ದೇಶಕ ರಾಹುಲ್ ಸದಾಶಿವನ್ ಮತ್ತು ಶ್ರೀಕುಮಾರ್ ಶ್ರೇಯಸ್ ನಾಜೂಕಾಗಿ ಹೇಳಬೇಕಾದನ್ನು ಹೇಳಿ ಮುಗಿಸಿದ್ದಾರೆ. ಅದೇನೆಂದು ಚಿತ್ರ ನೋಡಿಯೇ ಅರಿಯಬೇಕು. ಚಿತ್ರದ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಉತ್ಕೃಷ್ಟವಾಗಿದೆ. ಅಮ್ಮ – ಮಗನಾಗಿ ರೇವತಿ ಮತ್ತು ಶೈನ್ ನಿಗಮ್ ಅವರದ್ದು ಮನೋಜ್ಞ ಅಭಿನಯ. ಚಿತ್ರ SonyLIVನಲ್ಲಿ ಸ್ಟ್ರೀಮ್ ಆಗುತ್ತಿದೆ.