ಅಲ್ಲು ಅರ್ಜುನ್‌ ಅಭಿನಯದ ‘ಪುಷ್ಪ’ ಭಾರತದ 2021ರ ಬ್ಲಾಕ್‌ಬಸ್ಟರ್‌ ಸಿನಿಮಾ ಎನಿಸಿಕೊಂಡಿತು. ಹೀರೋ ಅಲ್ಲು ಅರ್ಜುನ್‌ ಸೇರಿದಂತೆ ‘ಪುಷ್ಪ’ದಲ್ಲಿ ನಟಿಸಿರುವ ಐವರು ತಾರೆಯರು ಚಿತ್ರಕ್ಕೆ ಮೊದಲ ಆಯ್ಕೆಯಾಗಿರಲಿಲ್ಲ ಎನ್ನುವುದು ಗೊತ್ತೇ!?

ಸುಕುಮಾರ್‌ ನಿರ್ದೇಶನದಲ್ಲಿ ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ ‘ಪುಷ್ಪ’ ಭಾರತದಾದ್ಯಂತ ಭರ್ಜರಿ ಯಶಸ್ಸು ಕಂಡಿತು. 2021ರ ಡಿಸೆಂಬರ್‌ 17ರಂದು ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಥಿಯೇಟರ್‌ಗೆ ಬಂದಿತ್ತು. ಮೈತ್ರಿ ಮೂವೀ ಮೇಕರ್ಸ್‌ ನಿರ್ಮಾಣದ ಸಿನಿಮಾದ ಹಿಂದಿ ಅವತರಣಿಕೆಗೆ ಉತ್ತರ ಭಾರತದಲ್ಲಿ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿತು. ಹಿಂದಿ ಬೆಲ್ಟ್‌ನಲ್ಲಿ ಚಿತ್ರದ ವಹಿವಾಟು ನೂರು ಕೋಟಿ ಆಸುಪಾಸಿನಲ್ಲಿದೆ. ಪ್ರಸ್ತುತ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಆದಾಗ್ಯೂ ಥಿಯೇಟರ್‌ನಲ್ಲಿ ಚಿತ್ರದ ಕ್ರೇಝ್‌ ಮುಂದುವರೆದಿದೆ. ತೆಲುಗು ಚಿತ್ರರಂಗದ ಮೈಲುಗಲ್ಲಾದ ಈ ಸಿನಿಮಾದ ಸ್ಕ್ರಿಪ್ಟ್‌ ಅಲ್ಲು ಅರ್ಜುನ್‌ರಿಗೆ ಬರೆದದ್ದಲ್ಲ!

ನಿರ್ದೇಶಕ ಸುಕುಮಾರ್‌ ವರ್ಷಗಳ ಹಿಂದೆ ‘ಪುಷ್ಪ’ ಕತೆಯನ್ನು ನಟ ಮಹೇಶ್‌ ಬಾಬು ಅವರಿಗೆ ಹೇಳಿದ್ದರು. ಈ ಚಿತ್ರದಲ್ಲಿ ಮಹೇಶ್‌ ಬಾಬು ನಟಿಸಬೇಕೆನ್ನುವುದು ಅವರ ಅಪೇಕ್ಷೆಯಾಗಿತ್ತು. ಸ್ಕ್ರಿಪ್ಟ್‌ ಓದಿದ ಮಹೇಶ್‌ ಬಾಬು ಪಾತ್ರವನ್ನು ಒಲ್ಲೆ ಎಂದರು. ಅಂತಿಮವಾಗಿ ಈ ಪಾತ್ರ ಅಲ್ಲು ಅರ್ಜುನ್‌ ಪಾಲಾಗಿ ಅವರ ವೃತ್ತಿ ಬದುಕಿನಲ್ಲೇ ವಿಶೇಷವೆನಿಸಿತು. ‘ಪುಷ್ಪ’ ಪಾತ್ರದೊಂದಿಗೆ ಅವರೀಗ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದಾರೆ. ಇನ್ನು ಚಿತ್ರದ ಹಿರೋಯಿನ್‌ ‘ಶ್ರೀವಲ್ಲಿ’ ಆಗಿ ನಟಿಸಬೇಕಿದ್ದವರು ಸಮಂತಾ. ಕಾರಣಾಂತರಗಳಿಂದ ಅವರು ಪಾತ್ರ ಕೈಚೆಲ್ಲಿದಾಗ ಅವಕಾಶ ಕನ್ನಡತಿ ರಶ್ಮಿಕಾ ಮಂದಣ್ಣ ಅವರ ಪಾಲಾಯ್ತು. ಈ ಪಾತ್ರ ದಕ್ಷಿಣ ಭಾರತದಲ್ಲಿ ರಶ್ಮಿಕಾರ ಸ್ಟಾರ್‌ ವ್ಯಾಲ್ಯೂ ಹೆಚ್ಚಿಸಿದೆ. ನಾಯಕಿ ಪಾತ್ರ ಬೇಡೆವೆಂದ ಸಮಂತಾ ಅವರು ಅಲ್ಲು ಅರ್ಜುನ್‌ ಆಹ್ವಾನದ ಮೇರೆಗೆ ‘ಊ ಅಂಟಾವಾ’ ಸ್ಪೆಷಲ್‌ ಸಾಂಗ್‌ಗೆ ಹೆಜ್ಜೆ ಹಾಕಿದರು. ಅವರ ಉಪಸ್ಥಿತಿಯಿಂದ ಹಾಡು ಸೂಪರ್‌ಹಿಟ್‌ ಆಯ್ತು.

ಹಾಗೆ ನೋಡಿದರೆ ‘ಊ ಅಂಟಾವಾ’ ಹಾಡಿಗೆ ಸಮಂತಾ ಅವರು ಮೊದಲ ಆಯ್ಕೆಯೇನೂ ಆಗಿರಲಿಲ್ಲ. ನಿರ್ದೇಶಕರು ಈ ಹಾಡಿಗೆ ಬಾಲಿವುಡ್‌ ನಟಿ ದಿಶಾ ಪಟಾನಿ ಅವರನ್ನು ಅಪ್ರೋಚ್‌ ಮಾಡಿದ್ದರು. ದಿಶಾ ಒಲ್ಲೆ ಎಂದಾಗ ನಟಿ ನೋರಾ ಫತೇಹಿ ಅವರಿಗೆ ಕರೆ ಹೋಗಿತ್ತು. ಸ್ಪೆಷಲ್‌ ಸಾಂಗ್‌ನಲ್ಲಿ ಹೆಜ್ಜೆ ಹಾಕಲು ನೋರಾ ಒಪ್ಪದಿದ್ದಾಗ ನಟ ಅಲ್ಲು ಅರ್ಜುನ್‌ ಅವರು ಸಮಂತಾರ ಮೊರೆ ಹೋದರು. ನಟ ನಾಗಚೈತನ್ಯರೊಂದಿಗಿನ ವಿಚ್ಛೇದನದ ನಂತರ ಮೌನಕ್ಕೆ ಜಾರಿದ್ದ ಸಮಂತಾಗೆ ಈ ಸ್ಪೆಷಲ್‌ ಸಾಂಗ್‌ನಿಂದ ಒಳ್ಳೇ ಮೈಲೇಜು ಸಿಕ್ಕಿತು. ಇನ್ನು ಚಿತ್ರದ ‘ಭನ್ವರ್‌ ಸಿಂಗ್‌ ಶೆಖಾವತ್‌’ ಪ್ರಮುಖ ಪಾತ್ರದಲ್ಲಿ ಖ್ಯಾತ ತಮಿಳು ನಟ ವಿಜಯ್‌ ಸೇತುಪತಿ ಕಾಣಿಸಿಕೊಳ್ಳಬೇಕಿತ್ತು. ಕೊನೆಯ ಹಂತದಲ್ಲಿ ಈ ರೋಲ್‌ ಮಲಯಾಳಂ ನಟ ಫಹಾದ್‌ ಫಾಸಿಲ್‌ ಪಾಲಾಯ್ತು. ಈ ಪಾತ್ರದ ಮೂಲಕ ಫಹಾದ್‌ ಉತ್ತರ ಭಾರತದ ಪ್ರೇಕ್ಷಕರಿಗೆ ಚಿರಪರಿಚಿತರಾದರು.

Previous articleಪ್ರೇಕ್ಷಕರ ಭಿನ್ನ ಗ್ರಹಿಕೆಗೆ ನಿಲುಕುವ ವಿಶಿಷ್ಟ ಸೈಕಾಲಾಜಿಕಲ್‌ ಹಾರರ್‌ ‘ಭೂತಕಾಲಂ’
Next articleವಿಶಿಷ್ಟ ಅನುಭವ ಕಟ್ಟಿಕೊಡುವ ಕ್ರೈಂ ಡ್ರಾಮಾ ‘BORDER TOWN MURAL MURDERS’

LEAVE A REPLY

Connect with

Please enter your comment!
Please enter your name here