ಅಷ್ಟು ಸಂಕಟ, ಸ್ಥಿತ್ಯಂತರಗಳನ್ನು ಕಂಡ ನಂತರವೂ, ಅಂತಹ ಯುದ್ಧ ಸಹ ಜಾತಿಯನ್ನು ಅಳಿಸಲಾಗುವುದಿಲ್ಲ. ಪ್ರೀತಿ ಕಳೆದುಕೊಂಡು ಬದುಕಿನಿಂದ ವಿಮುಕ್ತನಾದವ ಮತ್ತೆ ಅಮ್ಮನಿಗಾಗಿ ಬದುಕಿಗೆ ಹಿಂದಿರುಗಿದ ಕಥೆ ‘Sand’. ಇದು ಶ್ರೀಲಂಕಾದ ಸಿನಿಮಾ.

ಕೊರೋನಾ ಸಮಯದ ಒಂದು side effect ಎಂದರೆ ಥಿಯೇಟರ್‌ನ ಸಾಮುದಾಯಿಕ ಅನುಭವವನ್ನು ಬಿಟ್ಟು ನಾವು ಓಟಿಟಿಯಲ್ಲಿ ವೈಯಕ್ತಿಕ ಥಿಯೇಟರ್ ಅನುಭವಕ್ಕೆ ತೆರೆದುಕೊಂಡಿದ್ದು. ಆದರೆ ಮತ್ತೆ ಥಿಯೇಟರ್‌ಗಳು ಪ್ರಾರಂಭವಾದ ಮೇಲೆ, ಮತ್ತೆ ಎಲ್ಲರ ಜೊತೆ ಕುಳಿತು, ಅದರಲ್ಲೂ ಚಿತ್ರೋತ್ಸವಕ್ಕೆ ಬರುವ ಸಮಾನ ಮನಸ್ಕರೊಂದಿಗೆ ಸಿನಿಮಾ ನೋಡುವ ಸೊಗಸೇ ಬೇರೆ. ಅದರಲ್ಲೂ ಕೆಲವು ಚಿತ್ರಗಳಂತೂ ಥಿಯೇಟರ್‌ನಲ್ಲೇ ವೀಕ್ಷಿಸಬೇಕಾದ, ಯಾವುದೇ mute ಅವಕಾಶ ಇಲ್ಲದೆ, ಕತ್ತಲಿನಲ್ಲಿ ಸಂಪೂರ್ಣ ಮುಳುಗಿ ನೋಡಲಿಕ್ಕೇ ಹೇಳಿ ಮಾಡಿಸಿದಂಥವು. ಅಂತಹುದೇ ಒಂದು ಚಿತ್ರದೊಂದಿಗೆ ನಿನ್ನೆಯ ದಿನ (26th ಮಾರ್ಚ್‌) ಪ್ರಾರಂಭವಾಯಿತು. ನಿನ್ನೆ ನಾನು ನೋಡಿದ ಚಿತ್ರಗಳು – ‘ಅರ್ಜೆಂಟೀನಾ 1985’, ‘ಕೋಳಿ ಎಸ್ರು’, ‘ಸ್ಯಾಂಡ್’ ಮತ್ತು ‘19.20.21.’.

ಅರ್ಜೆಂಟೀನಾ 1985 : ಮಿಲಿಟರಿಗೆ ವಿಶೇಷ ಅಧಿಕಾರ ಕೊಟ್ಟಾಗ, ಮಿಲಿಟರಿ/ಪೊಲೀಸ್ ಸಂಪೂರ್ಣ ಮುಕ್ತ ಸ್ವಾತಂತ್ರ್ಯ ಅನುಭವಿಸುತ್ತಾ ಆಡಳಿತದಲ್ಲಿದ್ದಾಗ ಅದು ಮಾಡುವ ಎಲ್ಲಾ ಕೆಲಸಗಳಿಗೂ ದೇಶಭಕ್ತಿಯ ಮುಸುಕೂ, ಅದರ ದುರಾಡಳಿತವನ್ನು ಪ್ರಶ್ನಿಸಿದವರಿಗೆ ದೇಶದ್ರೋಹಿಯ ಪಟ್ಟವೂ ಬೈ ಡಿಫಾಲ್ಟ್ ಎನ್ನುವಂತೆ ಸಿಕ್ಕುಬಿಡುತ್ತದೆ. ಅರ್ಜೆಂಟೀನಾದಲ್ಲಿ ಅಂತಹ ಮಿಲಿಟರಿ ಆಡಳಿತ ಮುಗಿದಿದೆ. ಆ ಆಡಳಿತವಿರುವಾಗಲೂ ಅಧಿಕಾರಿಯಾಗಿದ್ದ ಒಬ್ಬಾತ, ಅದನ್ನು ಅನುಮೋದಿಸದಿದ್ದರೂ ಅದರೆದುರಲ್ಲಿ ಪ್ರಶ್ನೆ ಮಾಡಿದವನಲ್ಲ. ಈಗ ಹೊಸ ಸರ್ಕಾರ ಬಂದಾಗ ಅವನಲ್ಲಿ ಸಣ್ಣ ಆತಂಕ. ಆ ಹಳೆಯ ಲೆಕ್ಕದ ಬಾಕಿ ನಾನೂ ತೀರಿಸಬೇಕಾಗಬಹುದೇ ಎನ್ನುವ ಆತಂಕ. ಅಷ್ಟರಲ್ಲಿ ಹೊಸ ಸರ್ಕಾರ ಅವನ ಮೇಲೆ ಒಂದು ಜವಾಬ್ದಾರಿ ಹೊರಿಸುತ್ತದೆ. ಪದಚ್ಯುತಗೊಂಡ ಅಥವಾ ದುರಾಚಾರದ ಆರೋಪ ಹೊತ್ತ ಸೇನೆಯ ಅಧಿಕಾರಿಗಳಿಗೆ ಸಾರ್ವಜನಿಕ ತನಿಖೆ ನಡೆದು, ಪ್ರಜಾಪ್ರಭುತ್ವದ ಆಶಯದಡಿಯಲ್ಲೇ ವಿಚಾರಣೆ ನಡೆಸಬೇಕು. ಅದರ ಪ್ರಾಸಿಕ್ಯೂಟರ್ ಆಗಿ ಈ ಅಧಿಕಾರಿಯನ್ನು ಆರಿಸಲಾಗುತ್ತದೆ. ಅದು ಅವನಿಗೆ ಬೇಡದ ಆದರೆ ತಪ್ಪದ ಜವಾಬ್ದಾರಿ. ವಿಚಾರಣೆ ಶುರುವಾಗುವಾಗ ಹಿಂಜರಿಕೆಯಲ್ಲಿ ಇವನಿದ್ದರೆ, ಆ ಸೇನಾಧಿಕಾರಿಗಳು ತಮ್ಮ ಸಮವಸ್ತ್ರದ ಜರ್ಬಿನಲ್ಲಿ ಕೂತಿರುತ್ತಾರೆ. ಆದರೆ ಆ ವಿಚಾರಣೆ ಈ ಎರಡೂ ಸ್ಥಾನಗಳನ್ನೂ ಅದಲು ಬದಲು ಮಾಡುತ್ತದೆ. ಅದನ್ನು ಚಿತ್ರ ದೀರ್ಘವಾಗಿ ಆದರೆ ನಮ್ಮ ಆಸಕ್ತಿಯನ್ನು ಇಷ್ಟೂ ಬಿಟ್ಟುಕೊಡದೆ ಹೇಳುತ್ತದೆ. ಅದು ಚಿತ್ರದ plus point.

ಕೋಳಿ ಎಸ್ರು : ಗೆಳತಿ ಚಂಪಾಶೆಟ್ಟಿಯವರ ನಿರ್ದೇಶನದ ಚಿತ್ರ. ಚಿತ್ರದಿಂದ ಚಿತ್ರಕ್ಕೆ ನಿರ್ದೇಶಕಿಯಾಗಿ ಚಂಪಾ ಬೆಳೆದ ರೀತಿಗೆ ಈ ಚಿತ್ರ ಉದಾಹರಣೆ. ಅಕ್ಷತಾ ಪಾಂಡವಪುರ ಮತ್ತು ಅವರ ಮಗಳಾಗಿ ಅಭಿನಯಿಸಿದ ಆಪೇಕ್ಷಾ ತಮ್ಮ ಅಭಿನಯದ ಮೂಲಕ ಚಿತ್ರವನ್ನು ಅನಾಯಾಸವಾಗಿ ಮುಂದೆ ದಾಟಿಸುವುದಷ್ಟೇ ಅಲ್ಲದೆ ಆ ಎರಡೂ ಪಾತ್ರಗಳನ್ನೂ ಶಾಶ್ವತಗೊಳಿಸುತ್ತಾರೆ. ಕಾ ತ ಚಿಕ್ಕಣ್ಣನವರ ಕಥೆಯನ್ನಾಧರಿಸಿದ ಚಿತ್ರ ಇದು ಎಂದು ಕೇಳಿದೆ. ಬಹುಶಃ ಸಣ್ಣಕಥೆಯನ್ನಾಧರಿಸಿದ್ದರಿಂದ ಕೆಲವು ಕಡೆ ಹೆಚ್ಚೇನೂ ಘಟಿಸುತ್ತಿಲ್ಲ ಅನ್ನಿಸುತ್ತದೆ, ಕೆಲವು ದೃಶ್ಯಗಳನ್ನು ಲಂಬಿಸಿದಂತೆ ಅನಿಸುತ್ತದೆ. ನಾಟಕ ಮತ್ತು ಸಿನಿಮಾ ಎರಡನ್ನು ಅತ್ಯಂತ ತೀವ್ರವಾಗಿ ಪ್ರೀತಿಸುವ ಚಂಪಾಶೆಟ್ಟಿ ಮತ್ತವರ ತಂಡ ಇನ್ನಷ್ಟು, ಮತ್ತಷ್ಟು ಸಿನಿಮಾಗಳನ್ನು, ನಾಟಕಗಳನ್ನು ಕಟ್ಟುತ್ತಾ ಹೋಗಲಿ!

ಸ್ಯಾಂಡ್ : ಶ್ರೀಲಂಕಾದ ಚಿತ್ರ. ಈಳಂ ನಿರ್ಣಾಯಕ ಯುದ್ಧ ಮುಗಿದ ನಂತರದ ಕಥೆ. ನಾಲ್ಕು ಜನರಿದ್ದ ಮನೆಯಲ್ಲಿ ಉಳಿದ ಒಬ್ಬನೇ ಗಂಡುಮಗ. ಉಳಿದವರನ್ನು ಸೇನೆ ಕರೆದುಕೊಂಡು ಹೋಗಿದೆ, ಆದರೆ ಅವರು ಮತ್ತೆ ವಾಪಸ್ ಮನೆಗೆ ಬಂದೇ ಇಲ್ಲ. ಮನೆಯಲ್ಲಿ ಒಬ್ಬಳೇ ಉಳಿದ ತಾಯಿ, ಮಾರಿಯಮ್ಮನ ಪೂಜೆ ಮಾಡುವವಳು, ಹಳ್ಳಿಯವರಿಗೆ ಅಮ್ಮ ಹೇಳಿದ ಶಾಸ್ತ್ರ ದಾಟಿಸುವವಳು. ಆ ಅಮ್ಮನಷ್ಟೇ ಧೈರ್ಯವುಳ್ಳವಳು. ನಿಜಕ್ಕೂ ಆ ಅಮ್ಮನೇ ಇವಳು ಅನ್ನಿಸುವಂತೆ ಹೋರಾಡುವವಳು. ಆ ಗಂಡು ಮಗ ಸಮುದ್ರದ ದಂಡೆಯಲ್ಲಿ, ಬಾಯಿ ತುಂಬಾ ಮರಳನ್ನು ತುಂಬಿ, ಕಾಲು ಮುರಿದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದರೊಂದಿಗೆ ಚಿತ್ರ ಶುರುವಾಗುತ್ತದೆ. ಯುದ್ಧ ಹಲವರ ಜೀವನದಲ್ಲಿ ಅಲ್ಲೋಲ ಕಲ್ಲೋಲ ಮಾಡಿದೆ. ಕಳೆದುಕೊಂಡ ಪ್ರೀತಿಯ ಫೋಟೋವನ್ನು ಕುತ್ತಿಗೆಗೇ ನೇತು ಹಾಕಿಕೊಳ್ಳುವ ಇವನು ಅವಳನ್ನು ಪಡೆಯಲು ಏನೆಲ್ಲಾ ಮಾಡುತ್ತಾನೆ. ಆಸ್ತಿಕನಾಗುತ್ತಾನೆ, ಕುಂಟಿಕೊಂಡೇ ಶಬರಿಮಲೆ ಏರುತ್ತಾನೆ. ಆದರೆ ಆ ಪ್ರೀತಿ ಅವನ ಕೈಜಾರಿ ಹೋಗುತ್ತೆ, ಕಾರಣ ‘ಜಾತಿ’! ಅಷ್ಟು ಸಂಕಟ, ಸ್ಥಿತ್ಯಂತರಗಳನ್ನು ಕಂಡ ನಂತರವೂ, ಅಂತಹ ಯುದ್ಧ ಸಹ ಜಾತಿಯನ್ನು ಅಳಿಸಲಾಗುವುದಿಲ್ಲ… ಪ್ರೀತಿ ಕಳೆದುಕೊಂಡು ಬದುಕಿನಿಂದ ವಿಮುಕ್ತನಾದವ ಮತ್ತೆ ಅಮ್ಮನಿಗಾಗಿ ಬದುಕಿಗೆ ಹಿಂದಿರುಗಿದ ಕಥೆ ಇದು. ಆದರೆ ಅದಕ್ಕೆ ಮಿಗಿಲಾದುದು ಮತ್ತೇನೋ ಇದೆ ಅನ್ನಿಸುತ್ತದೆ, ಬಹುಶಃ ಮತ್ತೊಮ್ಮೆ ನೋಡಬೇಕು ಇದನ್ನು.

19.20.21 : ಈ ಮೊದಲೇ ನೋಡಿದ್ದರೂ ಮತ್ತೊಮ್ಮೆ ನೋಡದೆ ಇರಲಾಗಲಿಲ್ಲ. ಬಾಬಾಸಾಹೇಬರ ಆಶಯ ಮತ್ತು ಕೊಡುಗೆ ಎರಡನ್ನೂ ಎದೆಯಲ್ಲಿ ಹೊತ್ತ ಚಿತ್ರ ಇದು. ಆಡಳಿತ ವ್ಯವಸ್ಥೆಯೊಂದಕ್ಕೆ ಪ್ರಶ್ನೆ ಕೇಳುವವರಿಲ್ಲದೆ ಹೋದರೆ ಅದು ಅದೆಷ್ಟು ಕ್ರೂರಿಯಾಗಬಲ್ಲದು ಎನ್ನುವುದನ್ನು ಸಾರುವ ಚಿತ್ರ. ಮಂಸೋರೆ ನಿರ್ದೇಶಿಸಿದ ಈ ಚಿತ್ರ ಸಹ ಕೇವಲ ಅವರ ಮಟ್ಟಿಗಷ್ಟೇ ಅಲ್ಲದೆ, ಒಂದು ದಾಖಲೆಯಾಗಿಯೂ ಉಳಿಯುವ ಚಿತ್ರ. ಇಂದಿನ ಪ್ರದರ್ಶನದ ವಿಶೇಷ, ಮೊದಲ ಬಾರಿ ವಿಠಲ ಮಲೆಕುಡಿಯ ಅವರೂ ಸಹ ಚಿತ್ರತಂಡದೊಂದಿಗೆ ಭಾಗವಹಿಸಿದ್ದು. ಈ ಚಿತ್ರ ನೋಡುವಾಗ ಮುಂಜಾನೆ ನೋಡಿದ ‘ಅರ್ಜೆಂಟೀನಾ 1985’ ಚಿತ್ರದ ಒಂದು ಸಂಭಾಷಣೆಯ ತುಣುಕು ನೆನಪಾಯಿತು. ತನಿಖೆ ನಡೆಸಿದ ಆ ಅಧಿಕಾರಿ ಹೇಳುತ್ತಾನೆ – ‘ಗೆರಿಲ್ಲಾಗಳೂ ಜನ ಸಾಮಾನ್ಯರ ಜೀವನವನ್ನು ಕಲಕಿದ್ದಾರೆ, ಅವರೇ ಸಾವಿನ ಶಿಕ್ಷೆ ಕೊಟ್ಟಿದ್ದಾರೆ, ಅಲ್ಲೂ ಪ್ರಜಾಪ್ರಭುತ್ವ ಇರಲಿಲ್ಲ. ಆದರೆ ಸರ್ಕಾರವೊಂದು ತಾನೂ ಅದನ್ನೇ ಅನುಸರಿಸಿದಾಗ ಅದು ಆ ಗೆರಿಲ್ಲಾಗಿಂತ ಕ್ರೂರವೂ, ಅತ್ಯಂತ ಅಪಾಯಕಾರಿಯೂ ಆಗಬಲ್ಲದು. ಏಕೆಂದರೆ ಸರಕಾರದ ಕೈಲಿ ಅಸೀಮ ಅಧಿಕಾರ ಇರುತ್ತದೆ’. ಇಂದು ನೋಡಿದ ಮೊದಲ ಮತ್ತು ಕಡೆಯ ಚಿತ್ರಗಳು ಬೇರೆಬೇರೆ ಕಾಲದಲ್ಲಿ, ಬೇರೆಬೇರೆ ದೇಶಗಳಲ್ಲಿ ನಡೆದ ಸತ್ಯಘಟನೆಗಳನ್ನೇ ಆಧರಿಸದ್ದರೂ ಎರಡೂ ಆಡಿದ್ದು ಒಂದೇ ಮಾತನ್ನೇ….

ಸಖತ್ ಮೊಮೆಂಟ್ : ಶ್ರೀಲಂಕಾದ ಚಿತ್ರದಲ್ಲಿ ಒಂದು ಮಾರಿಯಮ್ಮನ ಭಜನೆಯ ದೃಶ್ಯ ಮತ್ತು ಒಂದು ಹಾಡು ಬರುತ್ತದೆ, ‘ಕರ್ಪೂರ ನಾಯಕಿಯೇ ಕನಕವಲ್ಲಿ’ ಎಂದು. ಅದನ್ನು ಕೇಳಿ ನನಗೆ ರೋಮಾಂಚನವಾಗಿತ್ತು. ಥೇಟ್ ಅದೇ ಹಾಡನ್ನು ನಾನು ನನ್ನ ಬಾಲ್ಯದಲ್ಲಿ KGF ಮತ್ತು ಕೋಲಾರಜಿಲ್ಲೆಯ ಮಾರಿಯಮ್ಮನ ದೇಗುಲಗಳಲ್ಲಿ ಕೇಳಿದ್ದೆ! ಎಲ್ಲಿಯ ಶ್ರೀಲಂಕಾ, ಎಲ್ಲಿನ ನನ್ನೂರು. ಮಾರಿಯಮ್ಮ ಹೀಗೆ ಎರಡನ್ನೂ ಬೆಸೆದಿದ್ದಳು!

LEAVE A REPLY

Connect with

Please enter your comment!
Please enter your name here