ನಾವೆಲ್ಲ ಊಹಿಸುವಂತೆಯೇ ಸಾಧಾರಣವಾಗಿ ಇಂತ ಕಥೆಗಳು ನೀತಿಕಥೆಯೊಂದಿಗೆ ಮುಕ್ತಾಯವಾಗುತ್ತವೆ. ಆದರೆ ಈ ಕಥೆ ಪಯಣಿಸುವುದು ಬೇರೆಯದೇ ರೀತಿಯಲ್ಲಿ. ತುಂಬಾ ಸರಳವಾಗಿ ಶುರುವಾಗುವ ಕಥೆಯ ಎಳೆ, ಮುಂದೆ ಮುಂದೆ ಸಾಗಿದಂತೆ ಕಗ್ಗಂಟಾಗುತ್ತಾ ಹೋಗುತ್ತದೆ.

ಈ ಸಿನಿಮಾದ genre ಯಾವುದು ಅಂತ‌ ಹೇಳೋಕೆ ಕಷ್ಟ. ಈ ಸಿನಿಮಾದ ಕಥೆ ಯಾವುದರ ಬಗ್ಗೆ ಇದೆ ಅಂತ ಹೇಳೋಕು ಕಷ್ಟ. ಆದರೆ ಒಂದು ಕ್ಷಣವೂ ಬೇಜಾರಾಗದಂತೆ ಪ್ರತಿ ದೃಶ್ಯದಿಂದ ಮತ್ತೊಂದು ದೃಶ್ಯಕ್ಕೆ ಪ್ರೇಕ್ಷಕ ಮುಂದೇನಾಗುತ್ತದೋ ಅಂತ ಕಾಯ್ತಾನೆ! ಚಿತ್ರಕಥೆ ಬರೆದ ರೀತಿಯಂತೂ ಅದ್ಭುತ. ಒಂದು ಕಾಲೇಜಿನ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ಒಬ್ಬ ಹುಡುಗ ಮತ್ತು ಹುಡುಗಿ ಕಾಲೇಜಿನ ಕೋಣೆಯೊಂದರಲ್ಲಿ ಯಾರು ಇಲ್ಲದ ಸಮಯದಲ್ಲಿ ತಮ್ಮ ಖಾಸಗಿ ಕ್ಷಣಗಳ ವಿಡಿಯೋವೊಂದನ್ನು ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಕೆಲ ದಿನಗಳಲ್ಲಿ ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ಸೋರಿಕೆ ಆಗಿರುತ್ತದೆ. ಇದು ಸಿನಿಮಾದ ಮೊದಲನೇ ದೃಶ್ಯ.

ನಾವೆಲ್ಲ ಊಹಿಸುವಂತೆಯೇ ಸಾಧಾರಣವಾಗಿ ಇಂತ ಕಥೆಗಳು ನೀತಿಕಥೆಯೊಂದಿಗೆ ಮುಕ್ತಾಯವಾಗುತ್ತವೆ. ಆದರೆ ಈ ಕಥೆ ಪಯಣಿಸುವುದು ಬೇರೆಯದೇ ರೀತಿಯಲ್ಲಿ. ತುಂಬಾ ಸರಳವಾಗಿ ಶುರುವಾಗುವ ಕಥೆಯ ಎಳೆ, ಮುಂದೆ ಮುಂದೆ ಸಾಗಿದಂತೆ ಕಗ್ಗಂಟಾಗುತ್ತಾ ಹೋಗುತ್ತದೆ. ಕಥೆಯ ಅಂತ್ಯಕ್ಕೆ ಬರುವ ಹೊತ್ತಿಗೆ ಹಿಂದೆ ಬಂದ ದಾರಿಯನ್ನು ನೋಡಿದರೆ ಚಿತ್ರಕಥೆ ಬರೆದವರು ಅದೆಷ್ಟು ಕೆಲಸ ಮಾಡಿರಬಹುದು ಅಂತ ಅರ್ಥವಾಗುತ್ತದೆ.

ಈ ಸಿನಿಮಾದ ಯಾವುದೇ ಪಾತ್ರಗಳಿಗೂ ಬೇಕಂತಲೇ ಸಿನಿಮೀಯ ರೀತಿಯಲ್ಲಿ ಸಂಭಾಷಣೆ ಹೇಳಿಸಿಲ್ಲ. ಮನೆಯಲ್ಲಿ ಮಾತನಾಡುವಾಗ ನಾವು ಹೇಗೆ pause ತೆಗೆದುಕೊಳ್ಳುತ್ತಾ, fillers ಬಳಸುತ್ತ ಮಾತನಾಡುತ್ತೇವೋ ಹಾಗೆಯೇ ಇಲ್ಲಿನ ಪಾತ್ರಗಳು ಮಾತನಾಡುತ್ತವೆ. ಹಾಗಾಗಿಯೇ ಈ ಎಲ್ಲಾ ಪಾತ್ರಗಳು ನಮ್ಮ ಸುತ್ತಮುತ್ತಲೇ ನಿಂತು ಒಂದರೊಟ್ಟಿಗೆ ಇನ್ನೊಂದು ಮಾತನಾಡುತ್ತಿವೆ ಅನ್ನಿಸುತ್ತದೆ.

ಬೆಸ್ಟ್ ಅಂದರೆ ಈ ಸಿನಿಮಾದ ಅನೇಕ ಪಾತ್ರಗಳು ತನ್ನನ್ನು ತಾನು ಸೇಫ್ ಮಾಡಿಕೊಳ್ಳಲು ಪ್ರಯತ್ನಿಸುತ್ತಾ ಉಳಿದ‌ ಪಾತ್ರಗಳ ಮೇಲೆ ತನ್ನ ಪ್ರಭಾವ ಬೀರಲು ಪ್ರಯತ್ನಿಸುತ್ತವೆ. ಪೂರ್ತಿ ಕಥೆ ಅನೇಕ ತಿರುವುಗಳನ್ನು ಹೊಂದಿರುವುದು ಇದೇ ಕಾರಣಕ್ಕೆ. ಅವಕಾಶವಾದಿತನ, ಇನ್ನೊಬ್ಬರ ಮೇಲೆ ಗೂಬೆ ಕೂರಿಸುವಿಕೆ, ಬೇರೆ ಬೇರೆ ಸ್ತರದ ಜನರನ್ನು ಬೇರೆ ರೀತಿಯಲ್ಲಿ ಕಾಣುವುದು, ಜಾತಿಯ ಲೇಪನ, ದಬ್ಬಾಳಿಕೆ ಹೀಗೆ ಅನೇಕ ವಿಷಯಗಳು ಇಡೀ ಕಥೆಯಲ್ಲಿ ಜೊತೆಜೊತೆಗೆ ಸಾಗುತ್ತವೆ.‌

ಸಿಕ್ಕಾಪಟ್ಟೆ ಪಾತ್ರಗಳಿದ್ದೂ ಪ್ರತೀ ಪಾತ್ರಕ್ಕೆ‌ ಅದರದ್ದೇ ಆದ ಪ್ರಾಮುಖ್ಯತೆ ನೀಡಲಾಗಿದೆ. ಕಾಲೇಜಿನ ಪ್ರಾಂಶುಪಾಲರ ಪಾತ್ರದಲ್ಲಿ ನಟಿಸಿದವರದಂತೂ ಸಹಜಾಭಿನಯ. ಬೂಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲು ಪ್ರದರ್ಶನಗೊಂಡು‌, ಇನ್ನಷ್ಟು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿ ಜನಮೆಚ್ಚುಗೆ ಪಡೆದು ಈಗ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ‘ಪಿಂಕಿ ಎಲ್ಲಿ’ ಸಿನಿಮಾ ನಿರ್ದೇಶಿಸಿದ್ದ ಪೃಥ್ವಿ ಕೊಣನೂರು ಅವರೇ ಈ‌ ಸಿನಿಮಾ ‌ನಿರ್ದೇಶಕರು. ಕೋರ್ಟಿನ ದೃಶ್ಯಗಳು, ಪ್ರಿನ್ಸಿಪಲ್ ಚೇಂಬರಿನ ದೃಶ್ಯಗಳಂತೂ ನಿಜವಾಗಿಯೂ ನಡೆಯುತ್ತಿವೆಯೋ‌ ಏನೋ ಅನ್ನುವಂತಿವೆ. ಥಿಯೇಟರಿಗೆ ಬಂದಾಗ ಮಿಸ್ ಮಾಡಿಕೊಳ್ಳದೆ ನೋಡಿ.‌

Previous articleBIFFes | ‘ನಕಲಿ’ ಬದುಕಿಗೆ ಕನ್ನಡಿ ಹಿಡಿಯುವ ‘No Bears’
Next article‘ಪೊನ್ನಿಯಿನ್ ಸೆಲ್ವನ್ 2’ ಟ್ರೈಲರ್‌ | ಏಪ್ರಿಲ್‌ 28ಕ್ಕೆ ಮಣಿರತ್ನಂ ಸಿನಿಮಾ ತೆರೆಗೆ

LEAVE A REPLY

Connect with

Please enter your comment!
Please enter your name here