ಮಣಿರತ್ನಂ ನಿರ್ದೇಶನದ ಮಹತ್ವಾಕಾಂಕ್ಷೆಯ ‘ಪೊನ್ನಿಯಿನ್ ಸೆಲ್ವನ್’ ಐತಿಹಾಸಿಕ ಚಿತ್ರದ ಸೀಕ್ವೆಲ್‌ ಟ್ರೈಲರ್‌ ಬಿಡುಗಡೆಯಾಗಿದೆ. ಚೋಳ ಸಾಮ್ರಾಜ್ಯದ ಗದ್ದುಗೆಗಾಗಿ ನಡೆಯುವ ಹೋರಾಟದ ಕತೆ ಮುಂದುವರೆದಿದೆ. ಏಪ್ರಿಲ್‌ 28ಕ್ಕೆ ಸಿನಿಮಾ ತೆರೆಕಾಣಲಿದೆ.

ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ ‘ಪೊನ್ನಿಯೆನ್ ಸೆಲ್ವನ್ 2’ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ. ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ನಟ ಕಮಲ ಹಾಸನ್‌ ಟ್ರೈಲರ್‌ ಬಿಡುಗಡೆಗೊಳಿಸಿದ್ದಾರೆ. ಮಣಿರತ್ನಂ, ಕಾರ್ತಿ, ಐಶ್ವರ್ಯ ರೈ, ವಿಕ್ರಮ್, ಶ್ರಿಯಾ, ಜಯಂ ರವಿ, ಪ್ರಕಾಶ್ ರೈ, ಶರತ್ ಕುಮಾರ್ ಸೇರಿದಂತೆ ಚಿತ್ರದ ತಾರೆಯರು ಭಾಗಿಯಾಗಿದ್ದರು. ಕಲ್ಕಿ ಕೃಷ್ಣಮೂರ್ತಿ ಬರೆದ ಪೊನ್ನಿಯಿನ್ ಸೆಲ್ವನ್ ಕಾದಂಬರಿ ಆಧಾರಿಸಿ ನಿರ್ದೇಶಕ ಮಣಿರತ್ನಂ ಎರಡು ಭಾಗಗಳಲ್ಲಿ ಚಿತ್ರ ತಯಾರಿಸಿದ್ದರು. ಕಳೆದ ವರ್ಷ ರಿಲೀಸ್ ಆಗಿದ್ದ ಮೊದಲ ಭಾಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಈ ಸಿನಿಮಾದ ವಹಿವಾಟು 500 ಕೋಟಿ ರೂ. ದಾಟಿತ್ತು ಎನ್ನುವುದು ಅಂದಾಜು. ಲೈಕಾ ಪ್ರೊಡಕ್ಷನ್ ಜೊತೆಗೂಡಿ ಮಣಿರತ್ನಂ ನಿರ್ಮಿಸಿ, ನಿರ್ದೇಶಿಸಿರುವ ‘ಪೊನ್ನಿಯಿನ್ ಸೆಲ್ವನ್ 2’ ಸೀಕ್ವೆಲ್ ಟ್ರೈಲರ್‌ ರಿಲೀಸ್‌ ಆಗಿದ್ದು, ನಿರೀಕ್ಷೆ ಹೆಚ್ಚಿದೆ.

ಚೋಳ ಸಾಮ್ರಾಜ್ಯದ ಗದ್ದುಗೆಗಾಗಿ ನಡೆಯುವ ಹೋರಾಟ, ಪಾಂಡ್ಯ ರಾಜರ ಕುತಂತ್ರ, ಚೋಳ ಸಾಮ್ರಾಜ್ಯ ನಾಶಪಡಿಸಲು ನಂದಿನಿ ಮಾಡುವ ಶಪಥ, ಕರಿಕಾಲನ್ ವೀರಾವೇಶದ ಹೋರಾಟ, ನಂದಿನಿ ಕರಿಕಾಲನ್ ಮುಖಾಮುಖಿಯಾಗುವ ಸನ್ನಿವೇಶ.. ಅದ್ಧೂರಿ ಮೇಕಿಂಗ್, ಬೃಹತ್ ಸೆಟ್‌ಗಳಿಗೆ ಟ್ರೈಲರ್‌ ಸಾಕ್ಷಿಯಾಗಿದೆ. ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ‘ಪೊನ್ನಿಯಿನ್ ಸೆಲ್ವನ್ 2’ ಟ್ರೈಲರ್‌ ಬಂದಿದೆ. ಮ್ಯೂಸಿಕಲ್‌ ಸೆನ್ಸೇಷನ್‌ ಎ.ಆರ್‌.ರೆಹಮಾನ್‌ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ನಿರ್ದೇಶಕ ಮಣಿರತ್ನಂ ಚಿತ್ರತಂಡದೊಂದಿಗೆ ಪ್ರಮೋಷನ್ ಶುರು ಮಾಡಿದ್ದಾರೆ. ಏಪ್ರಿಲ್‌ 28ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.

Previous articleBIFFes | ಒಂದು ಕಥೆ, ಹಲವು ವಿಚಾರ – ‘ಹದಿನೇಳೆಂಟು’
Next articleBIFFes | ಉತ್ತಮ ಚಿತ್ರಕಥೆಗೆ ಚೆಂದದ ಉದಾಹರಣೆ – ‘Boy From Heaven’

LEAVE A REPLY

Connect with

Please enter your comment!
Please enter your name here