13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂದು ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ನಟ ದರ್ಶನ್ ಚಿತ್ರೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಖ್ಯಾತ ಚಿತ್ರನಿರ್ದೇಶಕ ಪ್ರಿಯದರ್ಶನ್ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳುವರು. ಮಾರ್ಚ್ 10ರವರೆಗೆ ನಡೆಯುವ ಚಿತ್ರೋತ್ಸವದಲ್ಲಿ ಜಗತ್ತಿನ 55 ರಾಷ್ಟ್ರಗಳ 200 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
ಹದಿಮೂರನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಮಾರ್ಚ್ 3ರಿಂದ 10ರವರೆಗೆ 55 ರಾಷ್ಟ್ರಗಳ ಸುಮಾರು 200ಕ್ಕೂ ಹೆಚ್ಚು ಚಲನಚಿತ್ರಗಳು ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ರಾಜಾಜಿನಗರದ ಒರಾಯಿನ್ ಮಾಲ್‌ನಲ್ಲಿ 11ಸ್ಕ್ರೀನ್‌ಗಳನ್ನು ಸಿನಿಮಾ ಪ್ರದರ್ಶನಕ್ಕೆ ಮೀಸಲಿಡಲಾಗಿದ್ದು, ಇದಲ್ಲದೆ ಡಾ.ರಾಜ್ ಭವನ (ಚಲನಚಿತ್ರ ಕಲಾವಿದರ ಸಂಘ, ಚಾಮರಾಜಪೇಟೆ), ಸುಚಿತ್ರಾ ಫಿಲಂ ಸೊಸೈಟಿಯಲ್ಲೂ ಪ್ರದರ್ಶನ ಏರ್ಪಡಿಸಲಾಗಿದೆ. ಚಿತ್ರಪ್ರದರ್ಶನ ಮಾತ್ರವಲ್ಲದೆ ನಿರ್ದೇಶಕರು, ಕಲಾವಿದರು, ತಂತ್ರಜ್ಞರೊಂದಿಗೆ ಸಂವಾದ, ಸಂದರ್ಶನಗಳೂ ಏರ್ಪಾಟಾಗಿವೆ.
ಇಂದು ಸಂಜೆ ಜಿಕೆವಿಕೆ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ 13ನೇ Biffesಗೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ ನೀಡುವರು. ಬ್ಯಾಟರಾಯನಪುರ ಶಾಸಕ ಕೃಷ್ಣ ಭೈರೇಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜನಪ್ರಿಯ ನಟ ದರ್ಶನ್ ಚಿತ್ರೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಖ್ಯಾತ ಚಿತ್ರನಿರ್ದೇಶಕ ಪ್ರಿಯದರ್ಶನ್ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳುವರು. ಸುನೀಲ್ ಪುರಾಣಿಕ್ ಪ್ರಸ್ತಾವಿಕ ನುಡಿಗಳನ್ನಾಡಲಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಉಪಸ್ಥಿತರಿರುತ್ತಾರೆ.
ಚಿತ್ರೋತ್ಸವದಲ್ಲಿ ಸಿನಿಮಾಕ್ಷೇತ್ರದ ವೃತ್ತಿಪರ ಪರಿಣಿತರು, ಕಲಾವಿದರು, ತಂತ್ರಜ್ಞರಿಂದ ಉಪಯುಕ್ತ ವಿಷಯಗಳ ಕುರಿತಾಗಿ ಉಪನ್ಯಾಸ ಹಾಗೂ ಸಂವಾದಗಳನ್ನು ಏರ್ಪಡಿಸಲಾಗಿದ್ದು, ಹೊಸ ಪೀಳಿಗೆಯ ಸಿನಿಮಾಸಕ್ತರಿಗೆ ಮಾಹಿತಿ – ಮಾರ್ಗದರ್ಶನ ನೀಡುವುದು ಇದರ ಉದ್ದೇಶ. ಈ ಬಾರಿ ಚಿತ್ರಮಂದಿರಗಳಲ್ಲಿನ ಪ್ರದರ್ಶನದ ಜೊತೆಗೆ ಆನ್‌ಲೈನ್‌ನಲ್ಲೂ ಪ್ರದರ್ಶನದ ಅನುಕೂಲ ಕಲ್ಪಿಸಲಾಗಿದ್ದು, ಅದಕ್ಕಾಗಿ ವೆಬ್‌ಸೈಟ್‌ನಲ್ಲಿ ವಿವರಗಳನ್ನು ನೋಂದಾಯಿಸಿಕೊಂಡು ವೀಕ್ಷಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಆಯ್ದ ಚಲನಚಿತ್ರಗಳು ಮಾರ್ಚ್ 4ರಿಂದ ವೀಕ್ಷಣೆಗೆ ಲಭ್ಯವಿರುತ್ತವೆ. ಪ್ರಶಸ್ತಿ ವಿತರಣೆ ಮತ್ತು ಸಮಾರೋಪ ಸಮಾರಂಭ ಮಾರ್ಚ್ 10ರಂದು ಜರುಗಲಿದೆ. ಅಂದು ಏಷ್ಯನ್, ಭಾರತೀಯ ಮತ್ತು ಕನ್ನಡ ಚಲನಚಿತ್ರ ಸ್ಪರ್ಧೆಗಳ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಈ ಬಾರಿಯ ಚಲನಚಿತ್ರೋತ್ಸವದ ವಸ್ತು ವಿಷಯವಾಗಿ ಪ್ರದರ್ಶಕ ಕಲೆಗಳು ಹಾಗೂ ‘ಆಜಾದಿ ಕಿ ಅಮೃತ ಮಹೋತ್ಸವ’ವಾಗಿ ಆಯ್ದುಕೊಳ್ಳಲಾಗಿದ್ದು, ಚಿತ್ರೋತ್ಸವವನ್ನು ಕೋವಿಡ್ ಮಹಾಮಾರಿಯ ವಿರುದ್ಧ ಸೆಣೆಸಿದ ಎಲ್ಲಾ ಕಾರ್ಯಕರ್ತರಿಗೆ ಸಮರ್ಪಿಸಲಾಗಿದೆ. 13ನೇ ಚಲನಚಿತ್ರೋತ್ಸವ ಹಲವು ವಿಶೇಷತೆಗಳನ್ನು ಹೊಂದಿದೆ. ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಫಿಲ್ಮ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (FIAPF) ಮಾನ್ಯತೆ ಪಡೆದ ನಂತರ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಿದು. ಈ ಮಾನ್ಯತೆ ಪಡೆದ ಜಗತ್ತಿನ 46 ಸಿನಿಮೋತ್ಸವಗಳ ಸಾಲಿಗೆ Biffes ಸೇರ್ಪಡೆಯಾಗಿದೆ.
ಸ್ಪರ್ಧಾ ವಿಭಾಗದಲ್ಲಿ ಏಷ್ಯಾ ಚಲನಚಿತ್ರ ವಿಭಾಗ (2020 ಮತ್ತು 2021), ಭಾರತೀಯ ಚಲನಚಿತ್ರಗಳ ವಿಭಾಗ – ಚಿತ್ರಭಾರತಿ (2020 ಮತ್ತು 2021), ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗ (2020 ಮತ್ತು 2021) ಮತ್ತು ಕನ್ನಡದ ಜನಪ್ರಿಯ ಮನೋರಂಜನಾ ಪ್ರಧಾನ ಚಿತ್ರಗಳ ಸ್ಪರ್ಧಾ ವಿಭಾಗ (2020 ಮತ್ತು 2021) ಇವೆ. ಸಮಕಾಲೀನ ವಿಶ್ವ ಸಿನಿಮಾ, ವಿದೇಶವೊಂದರ ವಿಶೇಷ ನೋಟ, ಈಶಾನ್ಯ ರಾಜ್ಯಗಳ ವಿಶೇಷ ನೋಟ ವಿಭಾಗಗಳಲ್ಲಿ ಆಯ್ದ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಪುನರಾವಲೋಕನ (ರೆಟ್ರೋಸ್ಪೆಕ್ಟೀವ್) ವಿಭಾಗದಲ್ಲಿ ಜರ್ಮನಿಯ ಫಿಲ್ಮ್ ಮೇಕರ್ ವೋಲ್ಕರ್ ಸ್ಕೋಂಡ್ರಫ್ ಮತ್ತು ಪಂಚಭಾಷಾ ತಾರೆ ಭಾರತಿ ವಿಷ್ಣುವರ್ಧನ್ ಸಿನಿಮಾ ಸಾಧನೆಯನ್ನು ಸ್ಮರಿಸಲಾಗುವುದು. ‘ಆಜಾದಿ ಕಿ ಅಮೃತ್ ಮಹೋತ್ಸವ್’ ನಿಮಿತ್ತ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಚಲನಚಿತ್ರಗಳ ವಿಶೇಷ ಪ್ರದರ್ಶನ ಇರಲಿದೆ.
ಕರ್ನಾಟಕದ ಸಾಂಸ್ಕೃತಿಕ ಪರಂಪರೆಗೆ ಪ್ರಾದೇಶಿಕ ಭಾಷೆಗಳು ಮತ್ತು ಉಪಭಾಷೆಗಳ ಕೊಡುಗೆ ಅಪಾರ. ಕನ್ನಡದ ಉಪಭಾಷೆ ತುಳುಭಾಷಾ ಚಲನಚಿತ್ರ ಪರಂಪರೆಗೆ ಈಗ ಐವತ್ತು ವರ್ಷ ತುಂಬಿತು. ತುಳು ಚಿತ್ರಗಳು ಈಗ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಚಿತ್ರರಂಗದ ಐವತ್ತು ವರ್ಷಗಳ ಒಂದು ನೋಟ, ಚಲನಚಿತ್ರ ಪ್ರದರ್ಶನ ಹಾಗೂ ವಿಚಾರ ಸಂಕಿರಣಗ ಮೂಲಕ ತುಳು ಚಿತ್ರರಂಗದ ಅವಲೋಕನ ನಡೆಯಲಿದೆ. ಅಗಲಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟರಾದ ಪುನೀತ್ ರಾಜಕುಮಾರ್ ಮತ್ತು ಸಂಚಾರಿ ವಿಜಯ್ ಸ್ಮರಣೆ, ಅಗಲಿದ ಚಿತ್ರರಂಗದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುವುದು.
ಭಾರತದಿಂದ ಆಹ್ವಾನಿತರಾದ ಪ್ರತಿನಿಧಿಗಳಲ್ಲಿ ಚಲನಚಿತ್ರ ನಿರ್ಮಾಪಕರು, ಚಿತ್ರೋತ್ಸವ ಸಂಘಟಕರು, ಕಾರ್ಯಕ್ರಮ ನಿಯೋಜಕರು ಹಾಗೂ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ, ದೆಹಲಿ, ಕೇರಳ, ತಮಿಳುನಾಡು ಮತ್ತು ಈಶಾನ್ಯ ರಾಜ್ಯಗಳ ಪತ್ರಕರ್ತರು ಮತ್ತು ವಿಮರ್ಶಕರು ಸೇರಿದ್ದಾರೆ. ಚಿತ್ರೋತ್ಸವ ನಡೆಯುವ ದಿನಗಳಲ್ಲಿ ಚಲನಚಿತ್ರ ಮಾಧ್ಯಮ ಮತ್ತು ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞರಿಂದ ಕಾರ್ಯಾಗಾರ, ಸಂವಾದ, ಮಾಸ್ಟರ್ ಕ್ಲಾಸ್ ಮತ್ತು ಉಪನ್ಯಾಸಗಳು ನಡೆಯಲಿವೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನೀಲ್ ಪುರಾಣಿಕ್ ಚಿತ್ರೋತ್ಸವದ ನಿರ್ದೇಶಕರಾದರೆ, ಹಿರಿಯ ಸಿನಿಮಾ ವಿಮರ್ಶಕ ಎಚ್.ಎನ್.ನರಹರಿರಾವ್ ಕಲಾತ್ಮಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.