ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ 14ನೇ ಆವೃತ್ತಿಗೆ ಇಂದು ಸಂಜೆ ಚಾಲನೆ ಸಿಗಲಿದೆ. ಸ್ಪರ್ಧಾತ್ಮಕ ವಿಭಾಗಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಿತ್ರಗಳ ಜೊತೆ ಈ ಬಾರಿ ಆಸ್ಕರ್‌ಗೆ ನಾಮನಿರ್ದೇಶನಗೊಂಡ ಮತ್ತು ಆಸ್ಕರ್‌ ಗಳಿಸಿದ ಸಿನಿಮಾಗಳೂ ಇರಲಿವೆ. ಖ್ಯಾತ ಸಿನಿಮಾ ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರ ಸಿನಿಮಾಗಳನ್ನು ಪ್ರದರ್ಶಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ.

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂದು ಸಂಜೆ ಚಾಲನೆ ಸಿಗಲಿದೆ. ವಿಧಾನಸೌಧದ ಮುಂಭಾಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು Biffesನ 14ನೇ ಆವೃತ್ತಿಗೆ ಚಾಲನೆ ನೀಡಲಿದ್ದಾರೆ. ಖ್ಯಾತ ಚಿತ್ರಸಾಹಿತಿ ವಿಜಯೇಂದ್ರ ಪ್ರಸಾದ್‌ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದು ಚಿತ್ರೋತ್ಸವದ ಸ್ಮರಣಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಖ್ಯಾತ ಸಿನಿಮಾ ಛಾಯಾಗ್ರಾಹಕ ಗೋವಿಂದ ನಿಹಲಾನಿ, ಬಹುಭಾಷಾ ನಟಿ ರಮ್ಯಕೃಷ್ಣ, ನಟ ಅಭಿಷೇಕ್‌ ಅಂಬರೀಶ್‌, ನಟಿ ಸಪ್ತಮಿ ಗೌಡ ಅತಿಥಿಗಳಾಗಿ ಇರಲಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆಗೂಡಿ ಚಿತ್ರೋತ್ಸವ ಆಯೋಜಿಸಿವೆ. ಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ರಿಷಭ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಪ್ರದರ್ಶನಗೊಳ್ಳಲಿದೆ. ನಾಳೆಯಿಂದ ಮಾರ್ಚ್‌ 24ರಿಂದ 30ರವರೆಗೆ ವಿವಿಧ ದೇಶಗಳ 200ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಬೆಂಗಳೂರು ರಾಜಾಜಿನಗರದ ಒರಾಯಿನ್‌ ಮಾಲ್‌ನ 11 ಸ್ಕ್ರೀನ್‌ಗಳಲ್ಲಿ, ಚಾಮರಾಜಪೇಟೆಯ ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ಮತ್ತು ಸುಚಿತ್ರಾ ಫಿಲಂ ಸೊಸೈಟಿಯ ಆಡಿಟೋರಿಯಂನಲ್ಲಿ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಪನೋರಮಾ ಜನಪ್ರಿಯ ಕನ್ನಡ ಸಿನಿಮಾ ವಿಭಾಗದಲ್ಲಿ ‘ಕಾಂತಾರ’ ಜೊತೆ ‘KGF2’ ಮತ್ತು ‘ಚಾರ್ಲಿ 777’ ಚಿತ್ರಗಳು ಸ್ಕ್ರೀನ್‌ ಆಗಲಿವೆ. ಏಷ್ಯನ್‌ ಸಿನಿಮಾ, ಭಾರತೀಯ ಸಿನಿಮಾ ಮತ್ತು ಕನ್ನಡ ಸಿನಿಮಾ – ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಈ ಬಾರಿ ಬಹುಮಾನದ ಮೊತ್ತ ಹೆಚ್ಚಿಸಲಾಗಿದೆ. ಮೊದಲ ಸ್ಥಾನ ಗಳಿಸಿದ ಸಿನಿಮಾಗೆ 10 ಲಕ್ಷ ರೂ., ಎರಡನೇ ಸ್ಥಾನ ಪಡೆಯುವ ಚಿತ್ರಕ್ಕೆ 5 ಲಕ್ಷ ರೂ. ಮತ್ತು ಮೂರನೇ ಸ್ಥಾನ ಗಳಿಸುವ ಚಿತ್ರಕ್ಕೆ 3 ಲಕ್ಷ ರೂ. ಬಹುಮಾನ ಸಿಗಲಿದೆ.

ಖ್ಯಾತ ಸಿನಿಮಾ ಛಾಯಾಗ್ರಾಹಕ, ಕನ್ನಡಿಗ ವಿ.ಕೆ.ಮೂರ್ತಿ ಅವರ ಜನ್ಮಶತಮಾನೋತ್ಸವ ವರ್ಷವಿದು. ಹಾಗಾಗಿ ಚಿತ್ರೋತ್ಸವದಲ್ಲಿ ಅವರಿಗೆ ವಿಶೇಷ ಗೌರವ ಸಲ್ಲುತ್ತಿದೆ. ಮೂರ್ತಿ ಛಾಯಾಗ್ರಹಣ ಮಾಡಿದ ಲ್ಯಾಂಡ್‌ಮಾರ್ಕ್‌ ಹಿಂದಿ ಸಿನಿಮಾಗಳಾದ ‘ಪ್ಯಾಸಾ’, ‘ಕಾಗಝ್‌ ಕೆ ಫೂಲ್‌’ ಮತ್ತು ‘ಸಾಹೀಬ್‌, ಬೀಬಿ ಔರ್‌ ಗುಲಾಮ್‌’ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಈ ಬಾರಿ ಆಸ್ಕರ್‌ನಲ್ಲಿ ಸದ್ದು ಮಾಡಿದ ‘The Whale’, ‘Triangle Of Sadness’, ‘Everything Everywhere All At Once’ ಸಿನಿಮಾಗಳು Biffesನಲ್ಲಿ ಸ್ಕ್ರೀನ್‌ ಆಗಲಿವೆ ಎನ್ನುವುದು ವಿಶೇಷ. ಇನ್ನು ಎಂದಿನಂತೆ ಈ ಬಾರಿಯೂ ಸೆಮಿನಾರ್‌, ವರ್ಕ್‌ಶಾಪ್‌ಗಳು ಹಾಗೂ ಮಾಸ್ಟರ್‌ ಕ್ಲಾಸಸ್‌ ಆಯೋಜಿಸಲಾಗಿದೆ. ಇಲ್ಲಿ ಸಿನಿಮಾರಂಗದ ಅನುಭವಿ ತಂತ್ರಜ್ಞರು ಹಾಗೂ ಕಲಾವಿದರು ಪಾಲ್ಗೊಂಡು ಸಿನಿಮಾ ವಿದ್ಯಾರ್ಥಿಗಳು ಹಾಗೂ ಸಿನಿ ಆಸಕ್ತರೊಂದಿಗೆ ಚರ್ಚೆ ನಡೆಸಲಿದ್ದಾರೆ.

LEAVE A REPLY

Connect with

Please enter your comment!
Please enter your name here