‘ಫೋಟೊ’ ಸಿನಿಮಾದ ದುರ್ಗ್ಯಾನ ಮುಖವನ್ನು ಮರೆಯಲಾಗುವುದಿಲ್ಲ. ಜಹಾಂಗೀರ್, ಮಹದೇವ ಹಡಪದ್, ಸಂಧ್ಯಾ ಅರಕೆರೆ ಎಲ್ಲರೂ ರಂಗಭೂಮಿಯವರು. ಪಾತ್ರಗಳನ್ನು ಅವರು ಕಟ್ಟುವ ರೀತಿಗೆ ಶರಣು. ಎಡಿಟಿಂಗ್ ಮತ್ತು ಸಂಗೀತದಲ್ಲಿ ಇನ್ನೊಂದು ಸ್ವಲ್ಪ ಕೆಲಸ ಮಾಡಬಹುದಿತ್ತು ಅನ್ನಿಸುತ್ತದೆ. ನೋಡಲೇಬೇಕಾದ ಚಿತ್ರ ಇದು ಮತ್ತು ಗಮನಿಸಲೇಬೇಕಾದ ನಿರ್ದೇಶಕರು ಉತ್ಸವ್ ಗೋನ್ವಾರ್.

ಸಾಧಾರಣವಾಗಿ ಬೆಂಗಳೂರಿನ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಶನಿವಾರ, ಭಾನುವಾರ ಜನಜಂಗುಳಿ ಹೆಚ್ಚು. ಆಗಲೇ ಒಳ್ಳೊಳ್ಳೆಯ world movies ಇರುವುದರಿಂದ ಸಾಲು ಹನುಮಂತನ ಬಾಲದ ಹಾಗೆ ಸುತ್ತಿ ಸುತ್ತಿ ಹೋಗುತ್ತಿರುತ್ತದೆ. ಹಾಗಾಗಿ 3 ಸಿನಿಮಾ ನೋಡುವಷ್ಟರಲ್ಲಿ ಸಾಕಾಗಿರುತ್ತದೆ. ಇಂದೂ (ಮಾರ್ಚ್‌ 25) ಹಾಗೆಯೇ ಆಯಿತು. ಇಂದು ನೋಡಿದ ಚಿತ್ರಗಳು ‘ಫೋಟೋ’, ‘Until Tomorrow’ ಮತ್ತು ‘Farha’

ಇವುಗಳಲ್ಲಿ ‘ಫೋಟೋ’ ಸಿನಿಮಾಗೆ ನನ್ನ ‘5 ಸ್ಟಾರ್ಸ್‌’. ವಿಷಯವಾಗಿ ಅಷ್ಟೇ ಅಲ್ಲ craft ಆಗಿ ಸಹ ಗೆದ್ದ ಸಿನಿಮಾ ಅದು. ಅವೈಜ್ಞಾನಿಕವಾಗಿ ಘೋಷಿಸಿದ ಲಾಕ್‌ಡೌನ್‌ ಸರ್ಕಾರದ, ವ್ಯವಸ್ಥೆಯ, ಸಮುದಾಯದ ಸೋಲು. ಇದು ಸಿನಿಮಾದ ವಿಷಯ. ಆದರೆ ಉತ್ಸವ್ ಅವರು ಅದನ್ನು ಹೇಳಲು ಅದಕ್ಕೊಂದು ಕಥೆ ಕಟ್ಟುತ್ತಾರೆ, ಅದಕ್ಕೆ ತಕ್ಕಂತೆ ಆವರಣ ಕಟ್ಟುತ್ತಾರೆ, ಪಾತ್ರಗಳನ್ನು ಕಟ್ಟುತ್ತಾರೆ ಮತ್ತು ಅವೆಲ್ಲವೂ ಅತ್ಯಂತ ಸಾವಯವವಾಗಿ ಬರುವಂತೆ ನಮ್ಮೆದುರಿಗೆ ಚಿತ್ರ ನಿರ್ಮಿಸುತ್ತಾರೆ. ಮಸ್ಕಿಯಲ್ಲಿನ ದುರ್ಗ್ಯಾನ ತಂದೆ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣದಲ್ಲಿ ಕೆಲಸ ಮಾಡುತ್ತಿರುತ್ತಾನೆ. ದುರ್ಗ್ಯಾನ ಒಂದು fascination ಎಂದರೆ ವಿಧಾನಸೌಧದ ಎದುರುಗಡೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಎನ್ನುವುದು. ಆ ಫೋಟೋಗಾಗಿ ಉತ್ಸವ್ ವಿಧಾನಸೌಧವನ್ನೇ ಆರಿಸಿಕೊಳ್ಳುವುದು ಮತ್ತು ಅದರ ಪರಿಣಾಮ ಸಹ ಒಂದು ರೂಪಕವಾಗಿಯೇ ಕೆಲಸ ಮಾಡುತ್ತದೆ.

And that symbol of system fails him and many more like him. ‘ಈ ರಾತ್ರಿ 12 ಗಂಟೆಯಿಂದ, ಸರಿಯಾಗಿ ಕೇಳಿಸಿಕೊಳ್ಳಿ, ಈ ರಾತ್ರಿ 12 ಗಂಟೆಯಿಂದ ದೇಶ ಬಂದ್’ ಎಂದು ಹೇಳುವ ಮಾತು ಎಷ್ಟು ಜನರ ಬದುಕುಗಳನ್ನು ರಸ್ತೆಗೆ ತಳ್ಳಿಬಿಟ್ಟಿತು…. ತಟ್ಟೆ-ಜಾಗಟೆ ಹೊಡೆದು ‘ಗೋ ಕರೋನಾ, ಗೋ’ ಎನ್ನುವುದರ ಭೀಭತ್ಸತೆ, ಕೂಲಿಕಾರನೊಬ್ಬನಿಗೆ ಕೊಡಬೇಕಾದ ಸಂಬಳ ಕೊಡದೆ, ಮನೆಯ ಮುಂದೆ ದೀಪ ಹಚ್ಚುವ, ಅವನ ಫೋನ್ ಕಟ್ ಮಾಡುವ ಕಂಟ್ರ್ಯಾಕ್ಟರ್, ಗಾಡಿ ಮಾರಿ ಕಳಿಸುವ ಹೃದಯವಂತ ಪೋಲೀಸರು, ಅವರನ್ನು ಬಿಟ್ಟ ಹೆಗ್ಗಳಿಕೆಯನ್ನು ವಿಡಿಯೋ ಮಾಡಿ ಹಂಚಿ, ಲೈಕ್, ಕಾಮೆಂಟ್, ಶೇರ್ ಕೇಳುವವ, ಊರೊಳಗೆ ಬರುವ ರಸ್ತೆಗೆ ಬೇಲಿ ಹಚ್ಚುವ ನಾಯಕರು, ಪ್ರತಿಭಟಿಸುವವವರು ಎಲ್ಲರೂ, ಎಲ್ಲವೂ ನಮ್ಮ ಮುಂದೆ ಕನ್ನಡಿ ಇಟ್ಟು ನಮ್ಮ ನಡವಳಿಕೆಗಳ ಲೆಕ್ಕ ಕೇಳುತ್ತಾರೆ. ಇಲ್ಲೆಲ್ಲೂ ಜೋರುದನಿ ಇಲ್ಲ, ಭಾಷಣ ಇಲ್ಲ, ಆದರೆ ಅವರ ಕಣ್ಣುಗಳನ್ನು ಎದುರಿಸುವ ಧೈರ್ಯ ವ್ಯವಸ್ಥೆಗಿರುವುದಿಲ್ಲ.

ಕಡೆಯಲ್ಲಿ ಆ ತಾಯಿ ಹರಿದೆಸೆಯುವುದು ವಿಧಾನಸೌಧದ ಫೋಟೋ ಮಾತ್ರವನ್ನೇ? ಸಿನಿಮಾಕ್ಕಾಗಿ ಉತ್ಸವ್ ಅವರು ಒಂದು ಕಡೆ ಕಥೆ ಹೇಳಿದರೆ, ಕ್ಯಾಮೆರಾ ಕೂಡಾ ಒಂದು ಕಥೆ ಹೇಳುತ್ತದೆ, ತನ್ನ ಫ್ರೇಂಗಳ ಮೂಲಕ. ಆ ಕಥೆ ಮೊದಲ ಕಥೆಗೆ ಅಂಡರ್ ಲೈನ್ ಹಾಕುತ್ತದೆ. ದುರ್ಗ್ಯಾನ ಮುಖವನ್ನು ಮರೆಯಲಾಗುವುದಿಲ್ಲ. ಜಹಾಂಗೀರ್, ಮಹದೇವ ಹಡಪದ್, ಸಂಧ್ಯಾ ಅರಕೆರೆ ಎಲ್ಲರೂ ರಂಗಭೂಮಿಯವರು. ಪಾತ್ರಗಳನ್ನು ಅವರು ಕಟ್ಟುವ ರೀತಿಗೆ ಶರಣು. ಎಡಿಟಿಂಗ್ ಮತ್ತು ಸಂಗೀತದಲ್ಲಿ ಇನ್ನೊಂದು ಸ್ವಲ್ಪ ಕೆಲಸ ಮಾಡಬಹುದಿತ್ತು ಅನ್ನಿಸುತ್ತದೆ. ನೋಡಲೇಬೇಕಾದ ಚಿತ್ರ ಇದು ಮತ್ತು ಗಮನಿಸಲೇಬೇಕಾದ ನಿರ್ದೇಶಕರು ಉತ್ಸವ್ ಗೋನ್ವಾರ್.

ಎರಡನೆಯ ಚಿತ್ರ ‘Until Tomorrow’. ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ನೋಡಿದ, ಆದರೆ ನಿರಾಸೆ ಉಂಟುಮಾಡಿದ ಚಿತ್ರ ಇದು. ಕಥೆ, ಸ್ಕ್ರೀನ್ ಪ್ಲೇ, ಪಾತ್ರ ಪೋಷಣೆ ಎರಡೂ ಸೋತಿವೆ. ಮುಖ್ಯ ಪಾತ್ರದ ನಡವಳಿಕೆಗೂ, ಅವರು ಪಾತ್ರವನ್ನು ಕಟ್ಟಲು ಬಯಸುವ ರೀತಿಗೂ ಹೋಲಿಕೆಯೇ ಇಲ್ಲ.

ಮೂರನೆಯ ಚಿತ್ರ, ‘Farha’. ಸತ್ಯ ಘಟನೆಯನ್ನು ಆಧರಿಸಿದ ಚಿತ್ರ. ಯುದ್ಧದ ಭೀಕರತೆಯನ್ನು ಚಿತ್ರ ಅಷ್ಟೇ ಭೀಕರವಾಗಿ ಕಟ್ಟಿಕೊಡುತ್ತದೆ. ಪ್ರಧಾನ ಪಾತ್ರದಲ್ಲಿರುವ Karam Taher ತನ್ನ ಪಾತ್ರಕ್ಕೆ ಸಾಧ್ಯವಾಗಬಹುದಾದ ಎಲ್ಲಾ rangeಗಳನ್ನೂ ಅತ್ಯಂತ ಸಮರ್ಪಕವಾಗಿ ಬಳಸಿಕೊಳ್ಳುತ್ತಾಳೆ. ಅವಳು ಅನುಭವಿಸುವ ಸಂಕಟ, ಹೆದರಿಕೆ, ಆತಂಕ, ಅದ್ಯಾವುದರಲ್ಲೂ ಸೋಲದ ಅವಳ ಮನೋಸ್ಥೈರ್ಯ…. ಚಿತ್ರ ನೋಡಲೇಬೇಕು ಅನ್ನಿಸುವಂತೆ ಮಾಡುತ್ತದೆ.

ಕೊನೆ ಚುಟುಕು : ಅಂದಹಾಗೆ ಚಿತ್ರಮಂದಿರಗಳ ಮೇಲಿನ ಸಾಲನ್ನು ಜ್ಯೂರಿಗಳಿಗೆ ಮೀಸಲಿಡುವುದು ಗೊತ್ತಿತ್ತು. ಇಂದು ಎರಡು ಕಡೆ, ಎರಡು ಸಲ ಮೇಲಿನಿಂದ ಎರಡನೆಯ ಸಾಲನ್ನು ‘ರಿಸರ್ವ್’ ಎಂದಿದ್ದು ಮಾತ್ರ ಈ ಸಲದ ವಿಶೇಷ! ಕಾರಣ ಅವರು ಹೇಳಿದ ರೀತಿ, ಮೊದಲ ಸಲ ‘ಕಮಿಷನರ್ ಆಪೀಸಿಂದ ಯಾರೋ ಬರ್ತಾರಂತೆ, ಒಂದು ಸಾಲು ಯಾರೂ ಕೂರುವಂತಿಲ್ಲ’, ಎರಡನೆಯ ಸಲ ‘ಐಎಎಸ್ ಆಫಿಸರ್ ಫ್ಯಾಮಿಲಿ ಬರುತ್ತೆ, ಒಂದು ಲೈನ್ ಯಾರೂ ಕೂರೋ ಹಾಗಿಲ್ಲ!’. Seriously?! ವೆಬ್ ಸೈಟಿನಲ್ಲಾಗಲೀ, ಹೊರಗಡೆ ನೋಟಿಸ್ ಬೋರ್ಡಿನಲ್ಲಾಗಲೀ ಇದನ್ನು ದಪ್ಪಕ್ಷರಗಳಲ್ಲಿ ಮುದ್ರಿಸಿದರೆ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಸಿನಿಮಾ ನೋಡುವ ನಮಗೂ ಗೊಂದಲ ಇರುವುದಿಲ್ಲ!’

LEAVE A REPLY

Connect with

Please enter your comment!
Please enter your name here