ಈ ವಾರದ ಟಾಸ್ಕ್‌ನಲ್ಲಿ ಬಿಗ್‌ಬಾಸ್, ಮನೆಯ ಎಲ್ಲ ಸದಸ್ಯರನ್ನು ಬಾಲ್ಯಕ್ಕೆ ಕರೆದೊಯ್ಯುತ್ತಿದ್ದಾರೆ. ಎಲ್ಲ ಸ್ಪರ್ಧಿಗಳೂ ಪ್ರಾಥಮಿಕ ಶಾಲೆಯ ಸಮವಸ್ತ್ರ ತೊಟ್ಟು ಅಕ್ಷರಶಃ ಮಕ್ಕಳೇ ಆಗಿಬಿಟ್ಟಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ‘ಪ್ರಾಥಮಿಕ ಶಾಲೆ’ ಪ್ರಾರಂಭವಾಗಿದೆ! ಹಾಗಾದ್ರೆ ವಿದ್ಯಾರ್ಥಿಗಳು ಯಾರು? ಕಳೆದ ವಾರ ರಕ್ಕಸರ ಹಾಗೆ ಕಿತ್ತಾಡಿದ್ದವರೇ ಈ ವಾರ ಪುಟ್ಟ ಮಕ್ಕಳಾಗಿ ಶಾಲೆಗೆ ಸೇರಿಕೊಂಡಿದ್ದಾರೆ. ಒಬ್ಬರ ಕೈಗೆ ಇನ್ನೊಬ್ಬರು ಕಚ್ಚುತ್ತ, ಒಬ್ಬರ ಬಗ್ಗೆ ಇನ್ನೊಬ್ಬರು ದೂರು ಹೇಳುತ್ತ, ಎಲ್ಲರೂ ಸೇರಿ ಒಟ್ಟಿಗೆ ಪ್ರಾರ್ಥನೆ ಮಾಡುತ್ತ ಕೋಲಾಹಲವೆದ್ದಿದ್ದ ಮನೆಯಲ್ಲಿ ಕಲರವ ಉಂಟುಮಾಡುತ್ತಿದ್ದಾರೆ. ಕ್ರೌರ್ಯ ಮೆರೆದಾಡಿದ್ದ ಜಾಗದಲ್ಲಿ ಕೌಮಾರ್ಯದ ಮುಗ್ಧತೆ ಅರಳುತ್ತಿದೆ. ಈ ಸ್ಪೆಷಲ್ ಟಾಸ್ಕ್‌ನ ಮಜಾ ಹೇಗಿರುತ್ತದೆ ಎಂಬುದು ಇಂದು JioCinema ಬಿಡುಗಡೆ ಮಾಡಿರುವ ಎರಡು ಪ್ರೋಮೊಗಳಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ.
ಈ ವಾರದ ಟಾಸ್ಕ್‌ನಲ್ಲಿ ಬಿಗ್‌ಬಾಸ್, ಮನೆಯ ಎಲ್ಲ ಸದಸ್ಯರನ್ನು ಬಾಲ್ಯಕ್ಕೆ ಕರೆದೊಯ್ಯುತ್ತಿದ್ದಾರೆ. ಎಲ್ಲ ಸ್ಪರ್ಧಿಗಳೂ ಪ್ರಾಥಮಿಕ ಶಾಲೆಯ ಸಮವಸ್ತ್ರ ತೊಟ್ಟು ಅಕ್ಷರಶಃ ಮಕ್ಕಳೇ ಆಗಿಬಿಟ್ಟಿದ್ದಾರೆ. ಒಬ್ಬೊಬ್ಬರೂ ಇನ್ನೊಬ್ಬರ ಚೇಷ್ಟೆಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಈ ವಾರವಿಡೀ ಮಕ್ಕಳಾಟದ ಮನರಂಜನೆ ಭರಪೂರ ಸಿಗಲಿದೆ. ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೇನೂ ಭರ್ತಿಯಾಗಿಯಾಯ್ತು. ಹಾಗಾದ್ರೆ ಅವರಿಗೆ ಪಾಠ ಮಾಡುವ ಗುರುಗಳು ಯಾರು? ಮೊದಲ ತರಗತಿಯಲ್ಲಿ ‘ವ್ಯಕ್ತಿತ್ವ ವಿಕಸನ’ದ ಬಗ್ಗೆ ಪಾಠ ಮಾಡಲು ಬಂದವರು, ತನಿಷಾ ಟೀಚರ್!
ಅಷ್ಟು ಸುಂದರ ಟೀಚರ್ ಪಾಠ ಮಾಡಲು ಬಂದರೆ ಹಾಜರಿಗೇನು ಕಮ್ಮಿ? ಅದರಲ್ಲಿಯೂ ಲಾಸ್ಟ್ ಬೆಂಚ್ ಹುಡುಗ ವರ್ತೂರು ಸಂತೋಷ್ ಅಂತೂ, ‘ನೀವ್ ಚೆನ್ನಾಗ್ ಕಾಣಿಸ್ತಾ ಇದೀರಾ ಮಿಸ್’ ಎಂದು ನಿಂತಲ್ಲೇ ಕೈ ಬೀಸಿದ್ದಾರೆ. ಅದಕ್ಕೆ ತನಿಷಾ ಮಿಸ್ ನಾಚಿಕೊಂಡಿದ್ದಾರೆ. ಆದರೆ ನಾಚಿಕೆಯನ್ನು ಮುಚ್ಚಿಟ್ಟುಕೊಂಡ ಮಿಸ್, ವರ್ತೂರ್‌ಗೆ ಬೆಂಚ್ ಮೇಲೆ ನಿಂತುಕೊಳ್ಳುವ ಶಿಕ್ಷೆ ಕೊಟ್ಟಿದ್ದಾರೆ. ಅಲ್ಲದೇ ಸ್ಲೇಟಿನ ಮೇಲೆ, ‘ಐ ಲವ್ ಯೂ’ ಎಂದು ಬರೆದು ಓದುವಂತೆ ಕೇಳುತ್ತಿದ್ದಾರೆ.
ವ್ಯಕ್ತಿತ್ವ ವಿಕಸನದ ಪಾಠಗಳನ್ನು ಕೇಳಿದ ಮೇಲೆ ಭಾಷೆಯ ಪಾಠವೂ ಬೇಕಲ್ಲವೇ? ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಪಾಠ ಮಾಡಿಲ್ಲವೆಂದರೆ ಹೇಗೆ? ಕನ್ನಡ ಕಲಿಸಲು ಬಂದ ಮೇಷ್ಟ್ರು ಯಾರು ಗೊತ್ತೆ? ವಿದೇಶದಿಂದ ಬಂದಿರುವ ಮೈಕಲ್, ಕೋಟು ತೊಟ್ಟು ‘ಕನ್ನಡ ತರಗತಿ’ ಮಾಡಲು ಸಜ್ಜಾಗಿದ್ದಾರೆ. ‘ವಿದೇಶದಿಂದ ಬಂದಿದೀನಿ. ಕನ್ನಡ ಭಾಷೆಯ ಮೇಲೆ ನನಗೆ ಪ್ರೀತಿ ಆಯ್ತು. ಈಗ ಪಂಡಿತ ಆಗಲು ಯತ್ನಿಸುತ್ತಿದ್ದೇನೆ’ ಎಂದಿದ್ದಾರೆ ಮೈಕಲ್ ಮೇಷ್ಟ್ರು. ಅಷ್ಟೇ ಅಲ್ಲ, ಪುಂಡ ಹುಡುಗ ಕಾರ್ತಿಕ್‌ಗೆ, ‘ಆಂಗ್ಲ ಭಾಷೆ ಬಳಕೆ ಮಾಡಿದರೆ ಶಿಕ್ಷೆ ಕೊಡ್ತೀನಿ’ ಎಂದು ಎಚ್ಚರಿಕೆ ನೀಡಿದ್ದಾರೆ. ‘ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎಂದು ಮೈಕಲ್ ಹೇಳುತ್ತಿದ್ದರೆ ವಿದ್ಯಾರ್ಥಿಗಳ ಬಾಯಲ್ಲಿ ‘ಕನ್ನಡ… ರೋಮಾಂಚನವೀ ಕನ್ನಡ’ ಎಂಬ ಹಾಡು ತಂತಾನೆಯೇ ಹೊಮ್ಮಿದೆ. ಈ ವಾರ ಬಿಗ್‌ಬಾಸ್‌ನಲ್ಲಿ ವೀಕ್ಷಕರು ಶಾಲೆಯ ವಾತಾವರಣವನ್ನು ನೋಡಬಹುದು.