Rs 11,000 ಕೋಟಿ ಮೌಲ್ಯದ ಪಿವಿಆರ್ ಹಾಗೂ Rs 6,400 ಕೋಟಿ ಮೌಲ್ಯದ ಐನಾಕ್ಸ್ ವಿಲೀನವಾಗಿ ಒಂದೇ ಕಂಪನಿಯಾಗುತ್ತಿದೆ. ಮಾರುಕಟ್ಟೆ ಪಾಲು ವಿಸ್ತರಣೆಗೆ ಮಲ್ಟಿಪ್ಲೆಕ್ಸ್‌ಗಳು ಜಿದ್ದಿಗೆ ಬಿದ್ದಿರುವ ಭಾರತದಲ್ಲಿ ಇವುಗಳ ಆರಂಭ ಹಾಗೂ ಭವಿಷ್ಯದ ವಿಶ್ಲೇಷಣೆ ಈ ಬರಹ.

ಪ್ರಿಯಾ ವಿಲೇಜ್ ರೋಡ್ ಶೋ ಅಂದರೆ ಏನೆಂದು ನಿಮಗೆ ಥಟ್ಟನೆ ಹೊಳೆಯದಿರಬಹುದು. ಆದರೆ ಪಿವಿಆರ್ ಎಂದರೆ ಕೂಡಲೇ ಗೊತ್ತಾಗಿಬಿಡುತ್ತದೆ, ಆ PVRನ ವಿಸ್ತ್ರತ ರೂಪವೇ ಪ್ರಿಯಾ ವಿಲೇಜ್ ರೋಡ್ ಶೋ. ದೇಶದ ಅತಿದೊಡ್ಡ ಮಲ್ಟಿಪ್ಲೆಕ್ಸ್ ಸರಣಿ ಪಿವಿಆರ್ ಆಗಿದ್ದು ಈ ಕ್ಷೇತ್ರದ ಎರಡನೇ ಅತಿದೊಡ್ಡ ‌ಸಂಸ್ಥೆ ಐನಾಕ್ಸ್. ಇದೀಗ ಈ ಎರಡೂ ಕಂಪನಿಗಳು ವಿಲೀನಗೊಳ್ಳಲಿವೆ ಎಂಬ ಕಾರಣಕ್ಕೆ‌ ಸುದ್ದಿಯಾಗಿವೆ. ಸಿನಿಮಾ ಪ್ರದರ್ಶನ ಕ್ಷೇತ್ರ ಒಂದೆಡೆ ಕೋವಿಡ್,‌ ಮತ್ತೊಂದೆಡೆ ಓಟಿಟಿ‌ಗಳ ನಡುವೆ ಸಿಲುಕಿ ನಲುಗಿರುವ ಈ ಸಂದರ್ಭದಲ್ಲಿ ದೈತ್ಯರ ವಿಲೀನದ ಸುದ್ದಿ ಬಂದಿರುವುದು ಈ ಕ್ಷೇತ್ರದ ಕಡೆಗೆ ಹೂಡಿಕೆದಾರರೂ ಒಮ್ಮೆ ತಿರುಗಿ ನೋಡುವಂತೆ‌ ಮಾಡಿದೆ ಎಂಬುದಕ್ಕೆ ಎರಡೂ ಕಂಪನಿಗಳ ಷೇರು ಬೆಲೆಯಲ್ಲಿ ಕಂಡ ಜಿಗಿತವೇ ಸಾಕ್ಷಿ.

ಇನ್ನೊಂದಾರು ತಿಂಗಳಲ್ಲಿ ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪಿವಿಆರ್-ಐನಾಕ್ಸ್ ಹೆಸರಿನ ಹೊಸ ಕಂಪನಿ 109 ನಗರಗಳಲ್ಲಿ 1546 ಥಿಯೇಟರ್‌ಗಳನ್ನು ಹೊಂದಿದ ದೇಶದ ಅತಿದೊಡ್ಡ ಸಿನಿ ಪ್ರದರ್ಶನ ಕಂಪನಿಯಾಗಲಿದೆ. ಇದುವರೆಗೆ ಪಿವಿಆರ್ 73 ನಗರಗಳಲ್ಲಿ 871 ಸ್ಕ್ರೀನ್ ಹೊಂದಿದ್ದು ಐನಾಕ್ಸ್ 72 ನಗರಗಳಲ್ಲಿ 675 ಸ್ಕ್ರೀನ್ ಹೊಂದಿತ್ತು. ಈ ಪೈಕಿ 36 ಊರುಗಳಲ್ಲಿ ಎರಡೂ ಅಸ್ತಿತ್ವ ಹೊಂದಿದ್ದವು. ಈಗಾಗಲೇ‌ ಇರುವ ಚಿತ್ರಮಂದಿರಗಳು‌ ಈಗಿನಂತೆಯೇ‌ ಪ್ರತ್ಯೇಕ‌ ಬ್ರ್ಯಾಂಡ್‌ಗಳಲ್ಲೇ ಮುಂದುವರಿಯಲಿದ್ದು ಹೊಸ ಸೇರ್ಪಡೆಗಳು ಪಿವಿಆರ್-ಐನಾಕ್ಸ್ ಎಂಬ ಬ್ರ್ಯಾಂಡ್‌ನ ಅಡಿ ತಲೆಯೆತ್ತಲಿವೆ.

ಮಜಬೂತಾದ ಪಿವಿಆರ್ ಹಿನ್ನೆಲೆ
ಪಿವಿಆರ್‌ಗೆ ಭಾರತದ ಪ್ರಪ್ರಥಮ ಮಲ್ಟಿಪ್ಲೆಕ್ಸ್ ಎಂಬ ಹೆಗ್ಗಳಿಕೆಯಿದೆ. ಅದು ಬೆಳೆದು ಬಂದ ಕತೆಯೂ ಮಜಬೂತಾಗಿದೆ. ಪಿವಿಆರ್ ಸಂಸ್ಥಾಪಕ ಅಜಯ್ ಬಿಜ್ಲಿ ತಂದೆ 1978ರಲ್ಲಿ ಒಂದು ಥಿಯೇಟರ್ ಖರೀದಿ ಮಾಡಿದಲ್ಲಿಂದಲೇ‌ ಇತಿಹಾಸ ಆರಂಭವಾಗುತ್ತದೆ. ದೆಹಲಿಯಲ್ಲಿದ್ದ ಆ ‘ಪ್ರಿಯಾ ಲವ್ ವಿಕಾಸ್ ಸಿನಿಮಾ’ ಎಂಬ ಥ್ರಿಯೇಟರ್ ಅದಾಗಲೇ ತನ್ನ ಖದರು ಕಳೆದುಕೊಂಡು 10 ವರ್ಷಗಳ ಕಾಲ ಅಲ್ಲಿಂದಲ್ಲಿಗೇ ನಡೆಯುತ್ತಿತ್ತು. ಹೀಗಿದ್ದಾಗ 1988ರಲ್ಲಿ 22ರ ಹರೆಯದ ಅಜಯ್ ಬಿಜ್ಲಿ ಥಿಯೇಟರ್ ವ್ಯವಹಾರವನ್ನು ತನ್ನ ತಂದೆಯಿಂದ ವಹಿಸಿಕೊಂಡರು. 1990ರಲ್ಲಿ ಅದನ್ನು‌ ಪುಜರುಜ್ಜೀವನಗೊಳಿಸಿದರು. ಡಿಟಿಎಸ್ ಸೌಂಡ್ ಸಿಸ್ಟಂ, ಹೊಸ ಬಣ್ಣ, ಶುಚಿ ಶೌಚಾಲಯ, ಸಿಬ್ಬಂದಿಗಳಿಗೆ ಸಮವಸ್ತ್ರ, ಅಷ್ಟೇ ಅಲ್ಲದೆ ದೆಹಲಿಯ ಹೆಸರಾಂತ ಫಾಸ್ಟ್ ಫುಡ್ ಸರಣಿ ನಿರುಲಾಸ್, ಗಿಫ್ಟು-ಗ್ರೀಟಿಂಗ್ಸಿನ ಆರ್ಚೀಸ್ ಮತ್ತು ಮೆಕ್ ಡೊನಾಲ್ಡ್ಸ್‌ಗೆ ಜಾಗ ಕೊಟ್ಟು ಪ್ರಿಯಾ ಸಿನಿಮಾಸ್ ಎಂದು‌ ಮರುನಾಮಕರಣ ಮಾಡಿ ಅದನ್ನು ಸಿನಿಮಾ ನೋಡುವ ಜಾಗವಷ್ಟೇ ಅಲ್ಲದೆ ಯುವಕ-ಯುವತಿಯರು ಬಂದು ಹಾಳುಬೀಳುವ ತಾಣವನ್ನಾಗಿಸಿದರು. ಆಗ ಬೇರೆಡೆ ಟಿಕೆಟ್ ದರ Rs 25 – 30ರಲ್ಲಿದ್ದರೆ ಪ್ರಿಯಾ ಸಿನಿಮಾಸ್‌ನಲ್ಲಿ Rs 75. ಆದರೆ ಅಜಯ್ ತೆಗೆದುಕೊಂಡ ರಿಸ್ಕ್ ಫಲ ನೀಡಿತು. ದೆಹಲಿ ಮಟ್ಟಿಗೆ ಪ್ರಿಯಾ ಸಿನಿಮಾಸ್ ಮನೆಮಾತಾಯಿತು.

ಅಷ್ಟು ಮಾಡಿದ ನಂತರ ಅಜಯ್ ಬಿಜ್ಲಿ‌ಗೆ ಇದ್ದ ಆಸೆ ಪ್ರಿಯಾ ‌ಸಿನಿಮಾಸ್ ಅನ್ನು ಮಲ್ಟಿಪ್ಲೆಕ್ಸ್ ಮಾಡುವುದು. ಆದರೆ ಹೆಚ್ಚಿನ ವಿದ್ಯಾಭ್ಯಾಸ ಇಲ್ಲದ ಅಜಯ್‌ಗೆ ಕಾಡಿದ್ದು ಅನುಭವದ ಕೊರತೆ. ಹೀಗೆ ಅಂದುಕೊಳ್ಳುತ್ತಿರುವಾಗ ಅದೇ ಹೊತ್ತಿಗೆ ಮಾತುಕತೆಗೆ ಸಿಕ್ಕಿದ್ದು ಆಸ್ಟ್ರೇಲಿಯಾ ಮೂಲದ ಸಿನಿಮಾ ಪ್ರದರ್ಶನ ಕಂಪನಿ ವಿಲೇಜ್ ರೋಡ್ ಶೋ. 1995ರಲ್ಲಿ ಭಾರತ ಅದಾಗಲೇ ಆರ್ಥಿಕ ಉದಾರೀಕರಣ ನೀತಿ ಅಳವಡಿಸಿಕೊಂಡಿದ್ದ ಕಾರಣ‌ ಹೊಸ ಹೂಡಿಕೆಗೆ ತೊಡಕಾಗಲಿಲ್ಲ. 60:40 ಪಾಲುದಾರಿಕೆಯಲ್ಲಿ 1995ರಲ್ಲಿ ಮಾಡಿಕೊಂಡ ಒಡಂಬಡಿಕೆ ಪರಿಣಾಮ 1997ರಲ್ಲಿ ದೆಹಲಿಯಲ್ಲಿ ಪಿವಿಆರ್ ಸಿನಿಮಾಸ್ ಕಾರ್ಯಾಚರಣೆ ಆರಂಭಿಸಿತು. “ಒಂದೇ ಸೂರಿನಡಿ 4 ಸಿನಿಮಾಗಳು,‌ ದಿನಕ್ಕೆ 24 ದೇಖಾವೆಗಳು” ಎಂಬ ಜಾಹೀರಾತು ಫಲ ನೀಡಿತು. ಟಿಕೆಟ್ ಕೊಳ್ಳಲು ಜನ ಮುಗಿಬಿದ್ದರು, ಕಿಲೋಮೀಟರ್ ಉದ್ದ ಕ್ಯೂ ನಿಂತರು.

ಅಲ್ಲಿಂದ ನಂತರ ಯಶಸ್ವಿಯಾಗಿ ಮಾರುಕಟ್ಟೆ ವಿಸ್ತರಣೆ ಮಾಡುತ್ತಾ ಸಾಗಿದ ಪಿವಿಆರ್‌ಗೆ ಸಮಸ್ಯೆ ಎದುರಾದದ್ದು 2001ರಲ್ಲಿ, ಅಮೆರಿಕದಲ್ಲಿನ 9/11 ದಾಳಿಯ ಪರಿಣಾಮದಿಂದ ಉಂಟಾದ ಆರ್ಥಿಕ ಹಿಂಜರಿತದ ಕಾರಣ‌ ಪಾಲುದಾರ ಕಂಪನಿ ವಿಲೇಜ್ ರೋಡ್ ಶೋ ಭಾರತದ ಮಾರುಕಟ್ಟೆಯಿಂದ ನಿರ್ಗಮಿಸಲು ದಿಢೀರ್ ತೀರ್ಮಾನಿಸಿದಾಗ. ಆದರೆ ಆ ಹೊತ್ತಿಗಾಗಲೇ ಪಿವಿಆರ್ ಹೊಸತಾಗಿ 50 ಕಡೆಗಳಲ್ಲಿ ಮಲ್ಟಿಪ್ಲೆಕ್ಸ್ ಆರಂಭಕ್ಕೆ ಕೈ ಹಾಕಿತ್ತು. ಅದನ್ನು ಉಳಿಸಿಕೊಳ್ಳಬೇಕಿದ್ದರೆ ವಿಲೇಜ್‌ ರೋಡ್ ಶೋದ ಅಷ್ಟೂ ಪಾಲನ್ನು ಖರೀದಿ‌ ಮಾಡುವುದರ ಜತೆಗೆ ಅದಾಗಲೇ ಕೈ ಹಾಕಿದ ವಿಸ್ತರಣೆಗೆ ಅಜಯ್ ಬಿಜ್ಲಿ Rs 100 ಕೋಟಿ‌ ಹೂಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಆರಂಭದಲ್ಲೇ ರಿಸ್ಕ್ ತೆಗೆದು‌ ಗೆದ್ದಿದ್ದ ಅಜಯ್‌ಗೆ ಮತ್ತೆ ರಿಸ್ಕ್ ತೆಗೆದುಕೊಳ್ಳುವ ಧೈರ್ಯವಿತ್ತು. ವಯಸ್ಸೂ ಅದಕ್ಕೆ ಪೂರಕವಾಗಿತ್ತು. ಹಾಗಾಗಿ ಒಂದಷ್ಟು ಆಸ್ತಿ ಮಾರಿ, ಉಳಿದ ಹಣಕ್ಕೆ ಐಸಿಐಸಿಐ ವೆಂಚರ್ಸ್ ಕಡೆಯಿಂದ Rs 80 ಕೋಟಿ ಹೂಡಿಕೆ ತಂದು ಪಿವಿಆರ್ ವ್ಯವಹಾರ ಮುಂದುವರಿಸಿದರು, ಮತ್ತೆ ಗೆದ್ದರು. 2006ರಲ್ಲಿ ಕಂಪನಿ ಸಾರ್ವಜನಿಕ ಸ್ವಾಮ್ಯಕ್ಕೆ ಒಳಪಟ್ಟ ಬಳಿಕ ಐಸಿಐಸಿಐ ವೆಂಚರ್ಸ್ ನಿರ್ಗಮಿಸಿತು.

ಮಾರುಕಟ್ಟೆ‌ ವಿಸ್ತರಣೆಗೆ ಜಿದ್ದಾಜಿದ್ದಿ
2010ರ ನಂತರ ಮಲ್ಟಿಪ್ಲೆಕ್ಸ್ ಜಗತ್ತು ಕಂಡದ್ದು ಮಾರಾಟ – ಖರೀದಿಯ ವ್ಯಾಪಾರ. ದೇಶದ ಪೂರ್ವದೆಡೆಗೆ ದೃಷ್ಟಿಯಿಟ್ಟ ಐನಾಕ್ಸ್ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಒಂಭತ್ತು ಮಲ್ಟಿಪ್ಲೆಕ್ಸ್ ನಡೆಸುತ್ತಿದ್ದ ’89 ಸಿನಿಮಾಸ್’ ಎಂಬ ಕಂಪನಿಯನ್ನು ಖರೀದಿಸಿತು. ನಿರಂತರ ಮಾರುಕಟ್ಟೆ ವಿಸ್ತರಣೆಯಿಂದಾಗಿ ಅತಿಹೆಚ್ಚು ಸ್ಕ್ರೀನ್ ಹೊಂದಿದ ಹೆಗ್ಗಳಿಕೆಗೆ 2012ರಲ್ಲಿ ಐನಾಕ್ಸ್ ಪಾತ್ರವಾಯಿತು. ಆಗ 135 ಸ್ಕ್ರೀನ್ ತನ್ನ ಒಡೆತನದಲ್ಲಿ ಇಟ್ಟುಕೊಂಡಿದ್ದ ಸಿನಿಮ್ಯಾಕ್ಸನ್ನು Rs 395 ಕೋಟಿಗೆ ಖರೀದಿಸುವ ಮೂಲಕ‌ ಪಿವಿಆರ್ ಮತ್ತೆ ಅಗ್ರಸ್ಥಾನಕ್ಕೇರಿತು. ಇತ್ತ ಒಟ್ಟು 38 ಸ್ಕ್ರೀನ್‌ಗಳನ್ನು ಹೊಂದಿದ್ದ ಸತ್ಯಂ ಸಿನಿಮಾವನ್ನು ಐನಾಕ್ಸ್ 2014ರಲ್ಲಿ Rs 182 ಕೋಟಿ ಕೊಟ್ಟು ತನ್ನ ತೆಕ್ಕೆಗೆ ಹಾಕಿ ಸ್ಪರ್ಧೆಯನ್ನು ತೀವ್ರಗೊಳಿಸಿತು. ಗುಜರಾತ್ ಫ್ಲೂರೋ ಕೆಮಿಕಲ್ಸ್ ಲಿಮಿಟೆಡ್‌ ಎಂಬ ಸಾರ್ವಜನಿಕ ಸ್ವಾಮ್ಯದ ಕಂಪನಿಯ ಅಂಗಸಂಸ್ಥೆಯಾದ ಐನಾಕ್ಸ್‌ಗೆ ಬಂಡವಾಳದ ಕೊರತೆ ಇರಲಿಲ್ಲ. ಸ್ಕ್ರೀನ್ ಸಂಖ್ಯೆ ವಿಸ್ತರಿಸಲು ಪಣತೊಟ್ಟಿದ್ದ ಪಿವಿಆರ್ ಆಗ ಡಿಎಲ್‌ಎಫ್ ಒಡೆತನದ ಡಿಟಿ ಸಿನಿಮಾಸನ್ನು 2016ರಲ್ಲಿ Rs 500 ಕೋಟಿಗೆ ಖರೀದಿಸಿ, 2018ರಲ್ಲಿ ಚೆನ್ನೈ ಮೂಲದ ಎಸ್‌ಪಿಐ ಸಿನಿಮಾಸನ್ನು Rs 850 ಕೋಟಿಗೆ ಖರೀದಿ ಮಾಡಿ ಮಾರುಕಟ್ಟೆ‌ ವಿಸ್ತರಿಸಿಕೊಂಡಿತು.

ಅಸಲಿ ವ್ಯವಹಾರವೇ ಬೇರೆ
ಹೀಗೆಲ್ಲ ನೂರಾರು ಕೋಟಿ ರೂಪಾಯಿಗಳಲ್ಲಿ ವ್ಯವಹಾರ ಮಾಡುವ ಮಲ್ಟಿಪ್ಲೆಕ್ಸ್‌ಗಳಿಗೆ ಸಿನಿಮಾವೇ ಪ್ರಮುಖ ವ್ಯವಹಾರ ‌ಅಂದುಕೊಂಡರೆ ತಪ್ಪು. ಯಕಶ್ಚಿತ್ ಜ್ಯೂಸು-ಪಾಪ್‌ಕಾರ್ನು, ಬ್ರೆಡ್ಡು-ಬನ್ನು‌ ಮಾರಾಟ ಇವುಗಳಿಗೆ ಸಿನಿಮಾದಷ್ಟೇ ಮುಖ್ಯ‌ ಎಂಬುದು‌ ವಿಚಿತ್ರ ಸತ್ಯ. ಮಲ್ಟಿಪ್ಲೆಕ್ಸ್ ಕಂಪನಿಗಳು ತನ್ನ ಲೆಕ್ಕಪತ್ರದಲ್ಲಿ ಫುಡ್ ಆ್ಯಂಡ್ ಬೆವರೇಜಸ್ ಎಂದು ಗೌರವಯುತವಾಗಿ ಬರೆದುಕೊಳ್ಳುವ ಈ ವ್ಯವಹಾರದ ಪಾಲು ಒಟ್ಟು ಆದಾಯದಲ್ಲಿ ಸರಿಸುಮಾರು ಶೇ.35ರಷ್ಟಿದೆ. ಅಲ್ಲದೆ ಇಂಥ ಆಹಾರ‌ವನ್ನೆಲ್ಲ ಅವುಗಳು ಕೊಂಡು ತಂದು ಮಾರಾಟ ಮಾಡುವಲ್ಲಿ ಶೇ.300ರಷ್ಟು ಲಾಭ ಮಾಡಿಕೊಳ್ಳುತ್ತವೆ. ಪಿವಿಆರ್-ಐನಾಕ್ಸ್ ವಿಲೀನವಾಗಲು ಈ ಅಂಶವೂ ಪ್ರಮುಖ‌ ಕಾರಣ. ವಿಸ್ತಾರವಾದ ಮಾರುಕಟ್ಟೆಯಾದ ಕಾರಣ ಆಹಾರ ಪದಾರ್ಥಗಳ ಸಗಟು ಖರೀದಿಯಲ್ಲಿ ಈಗ ಪಿವಿಆರ್-ಐನಾಕ್ಸ್‌ ಒಳ್ಳೆಯ ಚೌಕಾಸಿ‌ ಮಾಡಬಹುದು. ಇದಲ್ಲದೆ ಪ್ರೊಜೆಕ್ಟರು, ಸೀಟು, ಲೈಟು, ನೆಲಕ್ಕೆ ಕಾರ್ಪೆಟ್ಟು ಖರೀದಿಯಲ್ಲೂ ಹೆಚ್ಚಿನ ಚೌಕಾಸಿಗಿಳಿಯಬಹುದು.

ಪಿವಿಆರ್ ಮತ್ತು ಐನಾಕ್ಸ್‌ ಸ್ವತಃ ಹೇಳಿಕೊಳ್ಳುವ ಪ್ರಕಾರ ವಿಲೀನದಿಂದಾಗಿ ಸಣ್ಣ‌ ನಗರಗಳ ಕಡೆಗಿನ ಮಾರುಕಟ್ಟೆ‌ ವಿಸ್ತರಣೆಗೆ ಅನುಕೂಲವಾಗುತ್ತದಂತೆ. ಒಂದು‌ ಮಟ್ಟಿಗೆ ಅದು ಹೌದು. ಈ ಕಂಪನಿಗಳು‌ ಎಲ್ಲಿಯೂ ಥಿಯೇಟರ್ ಇರುವ ಜಾಗವನ್ನು ಕೊಳ್ಳುವುದಿಲ್ಲ. ಅವುಗಳನ್ನು ಭೋಗ್ಯಕ್ಕೆ ಪಡೆಯುತ್ತವೆ. ವಿಲೀನದಿಂದ ಸಹಜವಾಗಿ ಸ್ಪರ್ಧೆ ಕಡಿಮೆಯಾಗುವ ಕಾರಣ ಮಾಲ್‌ಗಳ ಮಾಲೀಕರ ಜತೆ ಇವರಿಗೆ ಅನುಕೂಲ‌ ಆಗುವಂತೆ ವ್ಯವಹಾರ ಕುದುರಿಸುವ ಅವಕಾಶವಿದೆ.

ಇಷ್ಟೆಲ್ಲ ಚೌಕಾಸಿಗಿಳಿದು ವ್ಯವಹಾರ ನಡೆಸಬೇಕಾದ ಅನಿವಾರ್ಯತೆ ಬಂದಿರುವುದು ಓಟಿಟಿಗಳ ಕಾರಣದಿಂದ ಎಂಬುದು ಯಾರೂ ಅಲ್ಲಗಳೆಯಲಾರದ ಸತ್ಯ. ಸಿನಿಮಾ ಪ್ರದರ್ಶನ ಮಾತ್ರವಲ್ಲದೆ ವಿತರಣೆಯ ಜತೆಗೆ 2007ರ ‘ತಾರೆ ಜ಼ಮೀನ್ ಪರ್’ನಿಂದ ಸಹನಿರ್ಮಾಣಕ್ಕೂ ಪಿವಿಆರ್ ಕೈ ಹಾಕಿದೆ. ಆದಾಗ್ಯೂ ಓಟಿಟಿ ದಿಗ್ಗಜರಾದ ನೆಟ್‌ಫ್ಲಿಕ್ಸ್-ಅಮೆಜಾನ್‌ ತಮ್ಮ ಕೈಗಳಲ್ಲಿ ಪಿವಿಆರ್‌ಗಿಂತ ದೊಡ್ಡ ಗಾತ್ರದ ಹಣದ ಚೀಲ ಇಟ್ಟುಕೊಂಡಿವೆ. ಹಾಗಾಗಿ ಅವುಗಳ ಜತೆ ಸ್ಪರ್ಧಿಸಲು ತನ್ನ ಬಾಹುಗಳನ್ನು ಗಟ್ಟಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಪಿವಿಆರ್‌ ಮತ್ತು ಐನಾಕ್ಸ್ ಎರಡಕ್ಕೂ ಇದೆ. ಈ ಕಾರಣದಿಂದ ಒಂದಾಗಿ ಹೋರಾಡಲು ನಿರ್ಧರಿಸಿವೆ.

ಅಂದಹಾಗೆ ಈ‌ ವಿಲೀನಕ್ಕೆ ಕಂಪನಿ ವ್ಯವಹಾರಗಳ ಅಡಿಯಲ್ಲಿನ ಸ್ಪರ್ಧಾತ್ಮಕತೆ ನಿಯಂತ್ರಣ ಆಯೋಗದ ಅನುಮತಿ ಪಡೆಯುವುದು ಅಗತ್ಯ. ಯಾವುದೇ ಕ್ಷೇತ್ರದಲ್ಲಿ‌ ಬೃಹತ್ ಕಂಪನಿಗಳ ವಿಲೀನದ ಪರಿಣಾಮ ಮಾರುಕಟ್ಟೆಯ ‌ಸ್ಪರ್ಧಾತ್ಮಕತೆಗೆ ಧಕ್ಕೆ ಬೀಳುವ ಸಂಭವವಿದ್ದರೆ ಅದಕ್ಕೆ ಆಯೋಗ ಅನುಮತಿ ನೀಡುವುದಿಲ್ಲ. ಈ ಹಿಂದೆ ಡಿಟಿ‌‌ ಸಿನಿಮಾಸ್ ಖರೀದಿಯ ಸಂದರ್ಭದಲ್ಲಿ ತನ್ನ ಒಡೆತನದ ಕೆಲವು ಸ್ಕ್ರೀನ್‌ಗಳಿಗೆ ಪಿವಿಆರ್ ತೆರೆ ಎಳೆದ ಮೇಲಷ್ಟೇ ಆಯೋಗ ಅನುಮತಿ‌ ನೀಡಿರುವುದು. ಅದೇ‌ ನೆಲೆಯಲ್ಲಿ‌ ಲೆಕ್ಕ ಹಾಕಿದರೆ ದೆಹಲಿ ಮತ್ತು ಮುಂಬೈನ‌ಲ್ಲಿನ ಪಿವಿಆರ್ ಅಥವಾ ಐನಾಕ್ಸ್‌ನ ಕೆಲವು ಮಲ್ಟಿಪ್ಲೆಕ್ಸ್‌ಗಳಿಗೆ ಬಾಗಿಲು ಜಡಿಯಬೇಕಾಗಿ ಬರಬಹುದು. ಆದರೆ ಸದ್ಯಕ್ಕೆ ಆ ಅನಿವಾರ್ಯವಿಲ್ಲ‌ ಎಂದು ಉಭಯ ಕಂಪನಿಗಳು‌ ಪ್ರತಿಪಾದಿಸಿವೆ. ಎರಡೂ ಕಂಪನಿಗಳ ವಾರ್ಷಿಕ ಜಂಟಿ‌ ಆದಾಯ Rs 1000 ಕೋಟಿಗಿಂತ ಕಡಿಮೆಯಿದ್ದರೆ ಅದಕ್ಕೆ ಅನುಮತಿಯಿಂದ ವಿನಾಯಿತಿ ನೀಡಬಹುದು ಎಂದು ಆಯೋಗ 2017ರಲ್ಲಿ‌ ಹೊರಡಿಸಿದ ಅಧಿಸೂಚನೆ ಕಡೆಗೆ ಪಿವಿಆರ್ ಮತ್ತು ಐನಾಕ್ಸ್ ಬೊಟ್ಟು ಮಾಡಿವೆ. ಅದೇನೇ ಇದ್ದರೂ ವಿಲೀನಕ್ಕೆ ಅಗತ್ಯವಿರುವ ಮಾರ್ಪಾಟುಗಳನ್ನು ಎರಡೂ ಕಂಪನಿಗಳು ಮಾಡಿಕೊಳ್ಳುತ್ತವೆ ಎಂಬುದು ಮಾರುಕಟ್ಟೆ‌ ತಜ್ಞರ ಅಭಿಪ್ರಾಯ.

ಇವೆಲ್ಲದರ ಮಧ್ಯೆ‌ ನಿಲ್ಲುವ‌ ಯಕ್ಷಪ್ರಶ್ನೆ
ಈ ಎಲ್ಲಾ ಕತೆಗಳ ನಡುವೆ ಗಮನಾರ್ಹ ಅಂಕಿ ಅಂಶವೊಂದಿದೆ. ಈಗಾಗಲೇ ಪಿವಿಆರ್‌ನ ಸಿನಿಮಾ ಆದಾಯದಲ್ಲಿ ಶೇ.37ರಷ್ಟು ತಮಿಳು, ತೆಲುಗು ಹಾಗೂ ಕನ್ನಡ ಚಿತ್ರಗಳಿಂದ ಬರುತ್ತಿವೆ. ಹಾಗಾಗಿ ದಕ್ಷಿಣ ಭಾರತದ ಜಿಲ್ಲೆ-ಜಿಲ್ಲೆಗಳಿಗೆ ಹೋಗಿ ಬಿಡಬೇಕು ಎಂದು‌ ಮಲ್ಟಿಪ್ಲೆಕ್ಸ್‌ಗಳ ಪಾಲಿಗೆ ಅವುಗಳಿಗೆ ತಾರ್ಕಿಕವೇನೋ ನಿಜ. ಆದರೆ ಓಟಿಟಿಗೆ ಒಗ್ಗಿಕೊಂಡ‌ ಪ್ರೇಕ್ಷಕ ಯಾವ ರೀತಿ ಸ್ಪಂದಿಸುತ್ತಾನೆ ಎಂಬುದೇ ಉಳಿದಿರುವ ಯಕ್ಷಪ್ರಶ್ನೆ.

ಈಗಾಗಲೇ 5ಜಿ ತನ್ನ ಒಂದು ಕಾಲನ್ನು ಹೊಸ್ತಿಲಿನ ಒಳಗೆ ಇಟ್ಟಾಗಿದೆ. ನೋಡ ನೋಡುತ್ತಿದ್ದಂತೆಯೇ ದೇಶದ ತುಂಬಾ ಆವರಿಸಿಕೊಳ್ಳಲಿದೆ. ಅದಕ್ಕೆ ಮೊದಲೇ‌ ಎಲ್‌ಇಡಿ, ಎಲ್‌ಸಿಡಿ, ಪ್ಲಾಸ್ಮಾ ಎಂದು ವಿವಿಧ ತಂತ್ರಜ್ಞಾನದ ಹೆಸರಲ್ಲಿ ದೊಡ್ಡ ಗಾತ್ರದ ಟಿವಿಗಳು ಕೈಗೆಟುಕುವ ದರದಲ್ಲಿ ಲಭ್ಯವಿವೆ. ಹಾಗೆ ನೋಡಿದರೆ ಈಗ ಪ್ರೊಜೆಕ್ಟರ್ ಕೂಡ ಭಾರಿ ದುಬಾರಿಯೇನಲ್ಲ. ಅತ್ಯುತ್ತಮ ಗುಣಮಟ್ಟ ನೀಡುವ 4K ಪ್ರೊಜೆಕ್ಟರ್ Rs 25,000ಕ್ಕೆಲ್ಲ ಸಿಕ್ಕಿಬಿಡುತ್ತದೆ. 5.1 ಸೌಂಡ್ ಸಿಸ್ಟಂ ಈಗಾಗಲೇ ‌ಹಲವು ಮನೆಗಳಲ್ಲಿದೆ. ಹೀಗಿರುವಾಗ ಪಾಪ್‌ ಕಾರ್ನ್ ಮಾಡುವುದನ್ನೊಂದು ಕಲಿತರೆ ಪ್ರೇಕ್ಷಕನ ಪಾಲಿಗೆ ಮನೆಯೇ‌ ಮಲ್ಟಿಪ್ಲೆಕ್ಸು.

ನಿಜ, ಸಿನಿಮಾಕ್ಕೆ ಖಂಡಿತ ಸಾವಿಲ್ಲ, ಆದರೆ ಸಿನಿಮಾ ಪ್ರದರ್ಶನ ವ್ಯವಹಾರ ಏನಾಗುತ್ತದೆ‌ ಎಂಬುದೇ ಕುತೂಹಲಭರಿತ ಕ್ಲೈಮ್ಯಾಕ್ಸು.

LEAVE A REPLY

Connect with

Please enter your comment!
Please enter your name here