ದೇಶದ ಹೆಸರನ್ನು ‘ಇಂಡಿಯಾ’ ಬದಲಿಗೆ ‘ಭಾರತ್‌’ ಎಂದು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ಚಿಂತನೆಗೆ ಬಾಲಿವುಡ್‌ನ ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿರಿಯ ನಟರಾದ ಅಮಿತಾಭ್‌ ಬಚ್ಚನ್‌, ಜಾಕಿ ಶ್ರಾಫ್‌, ನಟಿ ಕಂಗನಾ ರನಾವತ್‌ ಈ ಬಗ್ಗೆ ಹೇಳಿಕೆಗಳನ್ನು ಕೊಟ್ಟಿದ್ದಾರೆ.

ಇಂಡಿಯಾ (India) ಹೆಸರನ್ನು ‘ಭಾರತ್‌’ (Bharat) ಎಂದು ಬದಲಾಯಿಸುವ ಕುರಿತಂತೆ ಚರ್ಚೆ ನಡೆಯುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ಹಿರಿಯ ನಟರಾದ ಅಮಿತಾಭ್‌ ಬಚ್ಚನ್‌, ಜಾಕಿ ಶ್ರಾಫ್‌, ನಟಿ ಕಂಗನಾ ರನಾವತ್‌ ಪ್ರತಿಕ್ರಿಯಿಸಿದ್ದಾರೆ. ಈ ಪ್ರಸ್ತಾವನೆಯನ್ನು ಅವರು ಸ್ವಾಗತಿಸಿದ್ದಾರೆ. ಅಮಿತಾಭ್‌ ಬಚ್ಚನ್‌, ‘ಭಾರತ್‌ ಮಾತಾ ಕಿ ಜೈ’ ಎಂದು ಟ್ವೀಟ್‌ ಮಾಡಿದ್ದಾರೆ. ದೆಹಲಿಯಲ್ಲಿ ನಡೆದ ‘ಪ್ಲಾನೆಟ್ ಇಂಡಿಯಾ’ ಪ್ರಚಾರ ಕಾರ್ಯಕ್ರಮದಲ್ಲಿ, ‘ಮೊದಲು ನಮ್ಮ ದೇಶವನ್ನು ಭಾರತ್ ಎಂದು ಕರೆಯಲಾಗುತ್ತಿತ್ತು. ನನ್ನ ಹೆಸರು Jackie, ಕೆಲವರು ನನ್ನನ್ನು Jackey, ಮತ್ತು ಕೆಲವರು Jaki ಎಂದು ಕರೆಯುತ್ತಾರೆ, ಜನರು ನನ್ನ ಹೆಸರನ್ನು ಬದಲಾಯಿಸುತ್ತಿರುತ್ತಾರೆ. ಅದಕ್ಕಾಗಿ ನಾನು ಬದಲಾಗುವುದಿಲ್ಲ. ಹೆಸರು ಬದಲಾಗುತ್ತದೆ, ನಾವು ಆಗುವುದಿಲ್ಲ.
ನೀವು ಭಾರತೀಯರು ಎಂಬುದನ್ನು ಮರೆಯಬೇಡಿ’ ಎಂದು ಹೇಳಿದ್ದಾರೆ.

ನಟಿ ಕಂಗನಾ, ‘ಇಂಡಿಯಾ ಹೆಸರಿನಲ್ಲಿ ಪ್ರೀತಿಸಲು ಏನಿದೆ? ಮೊದಲನೆಯದಾಗಿ ಬ್ರಿಟಿಷರಿಗೆ ಸಿಂಧು ಎಂಬುದನ್ನು ಉಚ್ಚರಿಸಲು ಬರುತ್ತಿರಲಿಲ್ಲ. ಹೀಗಾಗಿ ಇಂಡಸ್ ಎಂದು ಕರೆದರು. ಆ ಬಳಿಕ ಕೆಲವರು ಹಿಂದೋಸ್ ಎಂದರೆ, ಇನ್ನೂ ಕೆಲವರು ಇಂಡೋಸ್ ಎಂದರು. ಕೊನೆಗೆ ಇಂಡಿಯಾ ಎಂದು ಮಾಡಿದರು. ಕುರುಕ್ಷೇತ್ರದ ಮಹಾಯುದ್ಧದಲ್ಲಿ ಭಾಗವಹಿಸಿದ ಎಲ್ಲಾ ರಾಜ್ಯಗಳು ಭಾರತ ಎಂಬ ಒಂದು ಖಂಡದ ಅಡಿಯಲ್ಲಿ ಬಂದವು. ಆದರೆ ಬ್ರಿಟಿಷರು ನಮ್ಮನ್ನು ಇಂದೂ, ಸಿಂಧು ಎಂದು ಕರೆದಿದ್ದು ಏಕೆ?’ ಎಂದು ಪ್ರಶ್ನಿಸಿದ್ದಾರೆ. ಕಂಗನಾ ಈ ವಿಚಾರದ ಬಗ್ಗೆ ಮಾತನಾಡಿದ್ದು ಇದೇ ಮೊದಲೇನೂ ಅಲ್ಲ. ʼಇಂಡಿಯಾ’ ಎಂಬುದನ್ನು ʼಭಾರತʼ ಎಂದು ಮಾಡಬೇಕು ಎಂದು ಹಿಂದೊಮ್ಮೆ ಅವರು ಹೇಳಿದ್ದರು. ಅದರಲ್ಲಿ ಅವರು ಇಂಡಿಯಾ ಅನ್ನೋದು ಬ್ರಿಟಿಷರು ಕೊಟ್ಟ ಹೆಸರು’ ಎಂದು ಅವರು ಹೇಳಿದ್ದರು. ಕೇಂದ್ರ ಸರ್ಕಾರವು ಸೆಪ್ಟೆಂಬರ್‌ 18ರಿಂದ 22ರವರೆಗೆ ಐದು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ ಕರೆದಿದ್ದು, ಈ ಅಧಿವೇಶನದಲ್ಲಿ ದೇಶದ ಹೆಸರನ್ನು ‘ಇಂಡಿಯಾ’ ಬದಲು ‘ಭಾರತ್‌’ ಎಂದು ಬದಲಾಯಿಸುವ ಬಗ್ಗೆ ಗಂಭೀರ ಚಿಂತನೆ ನಡೆಯಲಿದೆ. ‘ಜಿ20 ಶೃಂಗಸಭೆ’ ಔತಣಕೂಟದ ಆಮಂತ್ರಣ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್‌ ಆಫ್‌ ಭಾರತ್’ ಎಂದು ಉಲ್ಲೇಖಿಸಲಾಗಿದೆ.

LEAVE A REPLY

Connect with

Please enter your comment!
Please enter your name here