‘ಎ ಸ್ಟಾರ್ ಈಸ್ ಬಾರ್ನ್’ ಚಿತ್ರದೊಂದಿಗೆ ನಿರ್ದೇಶಕರಾಗಿ ಯಶಸ್ಸು ಕಂಡ ನಟ ಬ್ರಾಡ್ಲೇ ಕೂಪರ್ ಚಿತ್ರನಿರ್ಮಾಣ ಸಂಸ್ಥೆ ಆರಂಭಿಸುತ್ತಿದ್ದಾರೆ. ಈ ಬ್ಯಾನರ್‌ನ ಮೊದಲ ಚಿತ್ರವಾಗಿ ಅವರ ಮಹತ್ವಾಕಾಂಕ್ಷೆಯ ‘ಹೈಪೀರಿಯನ್’ ಸೆಟ್ಟೇರಲಿದೆ.
ಹಾಲಿವುಡ್‌ನ ಖ್ಯಾತ ನಟ ಬ್ರಾಡ್ಲೇ ಕೂಪರ್ ‘ಎ ಸ್ಟಾರ್ ಈಸ್ ಬಾರ್ನ್’ ಚಿತ್ರದೊಂದಿಗೆ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ವಾರ್ನರ್ ಬ್ರದರ್ಸ್ ಪಿಕ್ಚರ್ಸ್ ಸಂಸ್ಥೆಗೆ ಕೂಪರ್ ಈ ಸಿನಿಮಾ ನಿರ್ದೇಶಿಸಿದ್ದರು. ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ, ಆಸ್ಕರ್ ಗೌರವಕ್ಕೂ ನಾಮನಿರ್ದೇಶನಗೊಂಡಿದ್ದ ನಟ ಬ್ರಾಡ್ಲೇ ಅವರ ನಿರ್ದೇಶನಕ್ಕೆ ವಿಮರ್ಶಕರೂ ತಲೆದೂಗಿದ್ದರು. ಇದೀಗ ನಟ ಕೂಪರ್ ತಮ್ಮದೇ ಒಂದು ನಿರ್ಮಾಣ ಸಂಸ್ಥೆ ಆರಂಭಿಸುತ್ತಿದ್ದು, ತಮ್ಮ ಮಹತ್ವಾಕಾಂಕ್ಷೆಯ ‘ಹೈಪೀರಿಯನ್’ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ‘ಎ ಸ್ಟಾರ್ ಈಸ್ ಬಾರ್ನ್’ ಚಿತ್ರದ ಸಹನಿರ್ಮಾಪಕ ವೆಸ್ಟನ್ ಮಿಡ್ಲ್‌ಟನ್ ಮತ್ತು ಬ್ರಾಡ್ಲೇ ಕೂಪರ್ ಜೊತೆಗೂಡಿ ಆರಂಭಿಸುತ್ತಿರುವ ನಿರ್ಮಾಣ ಸಂಸ್ಥೆಯಿದು. ಡ್ಯಾನ್ ಸಿಮನ್ಸ್ ಅವರ ಕೃತಿಗಳನ್ನು ಆಧರಿಸಿ ‘ಹೈಪೀರಿಯನ್’ ತಯಾರಾಗಲಿದೆ.
ಬ್ರಾಡ್ಲೇ ಕೂಪರ್ ಅವರ ಮಹತ್ವಾಕಾಂಕ್ಷೆಯ ಪ್ರಯೋಗ ‘ಹೈಪೀರಿಯನ್’. ಮೊದಲು ಇದನ್ನು ಕಿರುತೆರೆಗೆ ಅಳವಡಿಸಲು ಕೂಪರ್ ಆಲೋಚಿಸಿದ್ದರು. ನಿರ್ದೇಶಕನಾಗಿ ಗೆಲುವು ಕಂಡ ವಿಶ್ವಾಸದಲ್ಲಿ ಅವರೀಗ ಫೀಚರ್ ಸಿನಿಮಾ ಮಾಡಲು ಸನ್ನದ್ಧರಾಗಿದ್ದಾರೆ. ದುಬಾರಿ ಪ್ರಾಜೆಕ್ಟ್‌ಗೆ ವಾರ್ನರ್ ಬ್ರದರ್ಸ್ ಪಿಕ್ಚರ್ಸ್ ಮತ್ತು ಆಸ್ಕರ್ ಪ್ರಶಸ್ತಿ ಪುರಸ್ಕೃತ ನಿರ್ಮಾಪಕ ಗ್ರಹಾಮ್ ಕಿಂಗ್ ಕೈಜೋಡಿಸುತ್ತಿದ್ದು, ನಿರ್ದೇಶಕರಿಗಾಗಿ ಹುಡುಕಾಟ ನಡೆದಿದೆ. ವಾರ್ನರ್ ಬ್ರದರ್ಸ್ ಮತ್ತು ಟಾಡ್ ಫಿಲಿಪ್ಸ್ ಜೊತೆ ಬ್ರಾಡ್ಲೇ ಕೂಪರ್ ಮಾಡಿಕೊಂಡಿದ್ದ ಆರು ವರ್ಷಗಳ ಒಪ್ಪಂದ 2019ಕ್ಕೆ ಪೂರ್ಣಗೊಂಡಿದೆ. ಈ ಒಪ್ಪಂದದ ಅಡಿಯಲ್ಲಿ ಕೂಪರ್ ನಿರ್ದೇಶನದ ‘ಎ ಸ್ಟಾರ್ ಈಸ್ ಬಾರ್ನ್’ ಮತ್ತು ಜಾಕ್ವಿನ್ ಫಿಯೋನಿಕ್ಸ್ ನಿರ್ದೇಶನದ ‘ಜೋಕರ್’ ಸಿನಿಮಾಗಳು ತಯಾರಾಗಿದ್ದವು. ಇದೀಗ ಕೂಪರ್ ‘ಹೈಪೀರಿಯನ್’ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.