ವಾಸುದೇವ ರೆಡ್ಡಿ ನಿರ್ಮಿಸಿ, ನಿರ್ದೇಶಿಸಿರುವ ‘ಮೈಸೂರು’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಚಿತ್ರ ತೆರೆಕಾಣಲಿದೆ. ನಕ್ಸಲ್‌ ಹಿನ್ನೆಲೆಯ ಲವ್‌ಸ್ಟೋರಿ ಕತೆಯಿದು. ಕನ್ನಡ, ಒಡಿಶಾ ಮತ್ತು ಬೆಂಗಾಲಿ ಭಾಷೆಗಳಲ್ಲಿ ಸಿನಿಮಾ ತಯಾರಾಗಿರುವುದು ವಿಶೇ‍ಷ.

‘ಲೈಫ್ ಎಂಡ್ಸ್ ವಿಥ್‌ ಲವ್’ – ಇದು ‘ಮೈಸೂರು’ ಸಿನಿಮಾದ ಅಡಿ ಬರಹ. ಕೆಲವು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ವಾಸುದೇವ ರೆಡ್ಡಿ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರವಿದು. ಪ್ರೇಮಕತೆಯ ಚಿತ್ರಕ್ಕೆ ನಕ್ಸಲ್‌ ನಂಟು ಇದೆ ಎನ್ನುವುದು ನಿರ್ದೇಶಕರ ಮಾತಿನಿಂದ ತಿಳಿದುಬರುತ್ತದೆ. ಸದ್ದಿಲ್ಲದೆ ಚಿತ್ರೀಕರಣ ಮುಗಿದಿದ್ದು, ಈ ಸಿನಿಮಾ ಕನ್ನಡ ಮಾತ್ರವಲ್ಲದೆ ಒಡಿಶಾ ಮತ್ತು ಬೆಂಗಾಲಿ ಭಾಷೆಗಳಲ್ಲೂ ತೆರೆಕಾಣಲಿದೆ. ಹಿರಿಯ ನಟ ಜ್ಯೂನಿಯರ್ ನರಸಿಂಹರಾಜು ಅವರು ನಿರ್ಮಾಪಕ ವಾಸುದೇವ ರೆಡ್ಡಿ ಅವರ ಬೆನ್ನಿಗೆ ನಿಂತಿದ್ದಾರೆ. ದಶಕಗಳ ಕಾಲ ಚಿತ್ರರಂಗದ ಒಡನಾಟವಿರುವ ಅವರಿಗೆ ಇಲ್ಲಿನ ಒಳಹೊರಗುಗಳು ಗೊತ್ತು. ಅವರ ನೇತೃತ್ವದಲ್ಲಿ ‘ಮೈಸೂರು’ ಸಿನಿಮಾ ತಯಾರಾಗಿದ್ದು ತೆರೆಗೆ ಸಿದ್ಧವಾಗಿದೆ.

ತಮ್ಮ ಚಿತ್ರದ ಬಗ್ಗೆ ಮಾತನಾಡಿದ ವಾಸುದೇವ ರೆಡ್ಡಿ, “ನಾನು ಮೂಲತಃ ಮೈಸೂರಿನವನು. ಹಿರಿತೆರೆಯಲ್ಲಿ ಇದು ನನ್ನ ಚೊಚ್ಚಲ ಚಿತ್ರ.  ಇದೊಂದು ಅನಿವಾಸಿ ಕನ್ನಡಿಗನ ಕಥೆ. ಹೊರರಾಜ್ಯದಿಂದ ನಾಯಕ ಕಾರಣಾಂತರದಿಂದ ಮೈಸೂರಿಗೆ ಬರುತ್ತಾನೆ. ಅಲ್ಲಿ ಅವನಿಗೆ ನಾಯಕಿಯ ಮೇಲೆ ಪ್ರೇಮ ಆರಂಭವಾಗುತ್ತದೆ. ನಂತರ ಕೆಲವು ದಿನಗಳಲ್ಲಿ ನಾಯಕನಿಗೆ ನಕ್ಸಲ್ ನಂಟಿರುವುದು ತಿಳಿಯುತ್ತದೆ. ನ್ಯಾಯಾಲಯ ಆತನಿಗೆ ಗಲ್ಲು ಶಿಕ್ಷೆ ವಿಧಿಸುತ್ತದೆ. ಆತನ ಸಾವಿನ ಮುಂಚೆ ಕೊನೆಯಾಸೆ ಏನೆಂದು ಪ್ರಶ್ನಿಸಿದಾಗ, ತನ್ನ ದೇಹವನ್ನು ದಾನ ಮಾಡಬೇಕೆಂದು ತಿಳಿಸುತ್ತಾನೆ. ಇಂತಹ ಒಳ್ಳೆಯ ಗುಣಗಳಿರುವ ನಾಯಕ ಹೇಗೆ ಕೆಟ್ಟವನಾಗಲು ಸಾಧ್ಯ ಎನ್ನುವ ಪ್ರಶ್ನೆ ಎದುರಾಗುತ್ತದೆ. ಈತನ ಕೇಸ್ ಮತ್ತೆ ಓಪನ್ ಆಗುತ್ತದೆ. ವಾದವಿವಾದಗಳು ನಡೆಯುತ್ತವೆ. ಕೊನೆಗೆ ಜಯ ಯಾರಿಗೆ ಎನ್ನುವುದನ್ನು ಚಿತ್ರದಲ್ಲೇ ನೋಡಿ” ಎನ್ನುತ್ತಾರೆ.

ಈ ಸಿನಿಮಾ ಕನ್ನಡ, ಒಡಿಶಾ ಮತ್ತು ಬಂಗಾಳಿ ಭಾಷೆಗಳಲ್ಲಿ ತಯಾರಾಗಿದೆ. “ಈ ಚಿತ್ರ ಕನ್ನಡದಲ್ಲಿ ಬರುವಾಗ ಶೇಕಡಾ ಇಪ್ಪತ್ತೈದು ಭಾಗದಷ್ಟು ಒಡಿಶಾ ಭಾಷೆ ಇರುತ್ತದೆ. ಒಡಿಶಾ ಭಾಷೆಯಲ್ಲಿ ಬರುವಾಗ ಶೇಕಡಾ ಇಪ್ಪತ್ತೈದರಷ್ಟು ಕನ್ನಡದ ಸಂಭಾಷಣೆ ಇರುತ್ತದೆ” ಎನ್ನುತ್ತಾರೆ ನಿರ್ದೇಶಕ ರೆಡ್ಡಿ. “ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ.  ‘ರನ್ನ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದ್ದೇನೆ. ನೃತ್ಯ ಹಾಗೂ ನಾಟಕದಲ್ಲಿ ಆಸಕ್ತಿಯಿರುವ ನಾನು ಇನ್ಫೋಸಿಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾಯಕಿಯಾಗಿ ಮೊದಲ ಚಿತ್ರ. ನಾನು ಮೈಸೂರಿನವಳು. ಇದೇ ಊರಿನಲ್ಲೇ ಹೆಚ್ಚು ಚಿತ್ರೀಕರಣ ನಡೆದಿದೆ” ಎಂದರು ನಾಯಕಿ ಪೂಜಾ. ಮೂಲತಃ ಒರಿಸ್ಸಾದವರಾದ ನಾಯಕ್ ಸಂವಿತ್ ಮಂದಿನ ಪತ್ರಿಕಾಗೋಷ್ಠಿ ವೇಳೆಗೆ ಕನ್ನಡ ಕಲಿತು ಮಾತನಾಡುವುದಾಗಿ ಹೇಳಿದರು. ಕಿರುತೆರೆ ನಟ ಮತ್ತು ಬರಹಗಾರ ರವಿಕುಮಾರ್ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. “’ನಕ್ಸಲೈಟ್‌’ ಪಾತ್ರದಲ್ಲಿ ನಟಿಸಿದ್ದು, ಚಿತ್ರಕತೆಗೆ ತಿರುವಾಗುವ ಪಾತ್ರವಿದು” ಎನ್ನುತ್ತಾರೆ ರವಿಕುಮಾರ್‌. ಪ್ರಮುಖವಾಗಿ ಮೈಸೂರು ಸೇರಿದಂತೆ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ, ಭುವನೇಶ್ವರ್, ಪೂರಿ, ಕಟಕ್ ಮುಂತಾದೆಡೆ ಚಿತ್ರೀಕರಣ ನಡೆದಿದೆ. ಜ್ಯೂ.ನರಸಿಂಹರಾಜು, ಸತ್ಯಜಿತ್, ಕುರಿ ಪ್ರತಾಪ್, ಭಾಸ್ಕರ್ ಶೆಟ್ಟಿ, ಅಶೋಕ್ ಹೆಗ್ಡೆ, ಜೈಶ್ರೀ, ರವಿಕುಮಾರ್ ಮತ್ತಿತರರು ನಟಿಸಿದ್ದಾರೆ. ರಘು ಶಾಸ್ತ್ರಿ, ರವಿಶಂಕರ್ ನಾಗ್, ಅನಿತಕೃಷ್ಣ ಬರೆದಿರುವ ಹಾಡುಗಳಿಗೆ ರಮಣಿ ಸುಂದರೇಶನ್, ಅನಿತಕೃಷ್ಣ, ವಿಜಯ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಕೃಷ್ಣ ಮಳವಳ್ಳಿ ಸಂಭಾಷಣೆ. ಭಾಸ್ಕರ್ ವಿ ರೆಡ್ಡಿ ಛಾಯಾಗ್ರಹಣ, ಸಿದ್ದು ಭಗತ್ ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here