ತೊಂಬತ್ತರ ದಶಕದ ‘ಮಿನ್ಸಾರ ಕನವು’ ತಮಿಳು ಚಿತ್ರದಲ್ಲಿ ನಟಿ ಕಾಜೋಲ್‌ ಪಾತ್ರಕ್ಕೆ ರೇವತಿ ಡಬ್ ಮಾಡಿದ್ದರು. ಇದೀಗ ರೇವತಿ ನಿರ್ದೇಶನದ ಸಿನಿಮಾದಲ್ಲಿ ಕಾಜೋಲ್ ನಟಿಸುತ್ತಿದ್ದಾರೆ.

ಎಂಬತ್ತು, ತೊಂಬತ್ತರ ದಶಕಗಳ ದಕ್ಷಿಣ ಭಾರತದ ಜನಪ್ರಿಯ ನಾಯಕನಟಿ ರೇವತಿ. ಕಳೆದ ದಶಕದಿಂದೀಚೆಗೆ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಅವರು ‘ಮಿತ್ರ್‌, ಮೈ ಫ್ರೆಂಡ್‌’ (2002) ಇಂಗ್ಲಿಷ್‌ ಚಿತ್ರದ ಮೂಲಕ ನಿರ್ದೇಶಕಿಯಾಗಿದ್ದರು. ಅತ್ಯುತ್ತಮ ಪ್ರಾದೇಷಿಕ ಭಾಷಾ ಸಿನಿಮಾ ವಿಭಾಗದಲ್ಲಿ ಇದು ರಾಷ್ಟ್ರಪ್ರಶಸ್ತಿಗೆ ಪಾತ್ರವಾಗಿತ್ತು. 2004ರಲ್ಲಿ ‘ಫಿರ್ ಮಿಲೇಂಗೆ’ ಹಿಂದಿ ಸಿನಿಮಾ ನಿರ್ದೇಶಿಸಿದ್ದರು. ಮುಂದೆ ‘ಕೇರಳ ಕೇಫ್‌’ (ಮಲಯಾಳಂ) ಮತ್ತು ‘ಮುಂಬೈ ಕಟಿಂಗ್‌’ (ಹಿಂದಿ) ಆಂಥಾಲಜಿ ಚಿತ್ರಗಳಲ್ಲಿ ಒಂದೊಂದು ಕತೆಯನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ಅವರೀಗ ಮತ್ತೆ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು ಅವರ ನೂತನ ಹಿಂದಿ ಸಿನಿಮಾ ‘ದಿ ಲಾಸ್‌ ಹುರ್ರಾ’ ಸೆಟ್ಟೇರಲಿದೆ.

‘ದಿ ಲಾಸ್‌ ಹುರ್ರಾ’ ಚಿತ್ರದ ಪ್ರಮುಖ ಪಾತ್ರದಲ್ಲಿ ಹಿಂದಿ ನಟಿ ಕಾಜೋಲ್ ನಟಿಸಲಿರುವುದು ವಿಶೇ‍ಷ. 1997ರಲ್ಲಿ ತೆರೆಕಂಡ ಕಾಜೋಲ್ ಅಭಿನಯದ ‘ಮಿನ್ಸಾರ ಕನವು’ ತಮಿಳು ಚಿತ್ರದಲ್ಲಿ ಕಾಜೋಲ್‌ಗೆ ರೇವತಿ ಡಬ್ ಮಾಡಿದ್ದರು. ಇದೀಗ ಅವರಿಗಾಗಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. “ಈ ಕತೆಗೆ ನೈಜ ಘಟನೆಯೊಂದು ಸ್ಫೂರ್ತಿ. ದಿಟ್ಟ ತಾಯಿ ತನಗೆದುರಾಗುವ ಸಂಕಷ್ಟಗಳನ್ನು ಎದುರಿಸಿ ಗೆಲ್ಲುವ ಸ್ಫೂರ್ತಿ ನೀಡುವ ಕಂಟೆಂಟ್‌” ಎನ್ನುತ್ತಾರೆ ರೇವತಿ. ನಟಿ ಕಾಜೋಲ್‌ ತಮ್ಮ ಹೊಸ ಸಿನಿಮಾದ ಖುಷಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು, “ಟ್ಯಾಲೆಂಟೆಡ್‌ ರೇವತಿ ಮೇಡಂ ಜೊತೆ ಕೆಲಸ ಮಾಡುವುದು ಅದೃಷ್ಟವೆಂದೇ ಭಾವಿಸುತ್ತೇನೆ. ಚಿತ್ರದಲ್ಲಿ ದಿಟ್ಟ ಹೆಣ್ಣುಮಗಳು ‘ಸುಜಾತಾ’ ಪಾತ್ರ ನಿರ್ವಹಿಸುತ್ತಿದ್ದೇನೆ” ಎಂದು ಸಂಭ್ರಮಿಸಿದ್ದಾರೆ. ಬ್ಲೈವ್ ಪ್ರೊಡಕ್ಷನ್ಸ್ ಮತ್ತು ಟೇಕ್‌ 23 ಸ್ಟುಡಿಯೋ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ಸೂರಜ್ ಸಿಂಗ್ ಮತ್ತು ಶ್ರದ್ಧಾ ಅಗರ್‌ವಾಲ್‌ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ನಟಿ ಕಾಜೋಲ್ ಇತ್ತೀಚೆಗೆ ನೆಟ್‌ಫ್ಲಿಕ್ಸ್‌ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ‘ತ್ರಿಭಂಗ್‌’ ಸರಣಿಯೊಂದಿಗೆ ಡಿಜಿಟಲ್‌ ಡೆಬ್ಯೂಟ್‌ ಮಾಡಿದ್ದರು. ಇದೀಗ ರೇವತಿ ನಿರ್ದೇಶನದ ಚಿತ್ರದ ಪಾತ್ರಕ್ಕಾಗಿ ಸಿದ್ಧತೆ ನಡೆಸಿದ್ದಾರೆ.

Previous articleZEE5 ‘ಆಫತ್-ಎ-ಇಶ್ಕ್’ ಇದೇ 29ಕ್ಕೆ; ನೇಹಾ ಶರ್ಮಾ ನಟನೆಯ ಸರಣಿ
Next articleನಾಲ್ಕು ವರ್ಷಗಳವರೆಗೆ ಬುಕ್ ಆದ ಪ್ರಭಾಸ್; ‘ಬಾಹುಬಲಿ’ಯ ಕೈಯಲ್ಲಿ ಸಾಲುಸಾಲು ಸಿನಿಮಾ

LEAVE A REPLY

Connect with

Please enter your comment!
Please enter your name here