‘ಚೊಚ್ಚಲ ಸಿನಿಮಾ ಸಂದರ್ಭದಲ್ಲಿ ನನಗೆ ನಿರ್ದೇಶನದ ಅನುಭವ ಇರಲಿಲ್ಲ, ಸಿನಿಮಾ ತಂತ್ರಗಾರಿಕೆ ಕುರಿತಾಗಿ ಕಿಂಚಿತ್ತೂ ತಿಳದಿರಲಿಲ್ಲ’ ಎಂದು ಹಿಂದಿ ಚಿತ್ರನಿರ್ದೇಶಕ ಶೇಖರ್‌ ಕಪೂರ್‌ ಟ್ವೀಟ್‌ ಮಾಡಿದ್ದರು. ಸ್ಯಾಂಡಲ್‌ವುಡ್‌ನ ಸಿನಿಮಾ ಬರಹಗಾರ ವೀರು ಮಲ್ಲಣ್ಣ ಈ ಟ್ವೀಟ್‌ಗೆ ಸಂಬಂಧಿಸಿದಂತೆ ಸಿನಿಮಾ ಕಲೆ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಶೇಖರ್ ಕಪೂರ್ ಅವರ ಪ್ರತಿಭೆಯನ್ನು ನಾನು ಅಲ್ಲಗಳೆಯುವುದಿಲ್ಲ. ‘ಮಾಸೂಮ್’ ಸಿನಿಮಾನ ನಾನು ನೋಡದೇ ಇದ್ದರೂ ಆ ಸಿನಿಮಾದ ಗುಣಮಟ್ಟವನ್ನೂ ಅಲ್ಲಗಳೆಯುವುದಿಲ್ಲ. ಅಂದಿನ ಕಾಲಕ್ಕೆ ಹಿಟ್ ಆಗಿರುವ ಸಿನಿಮಾ, ವಿಮರ್ಶಕರಿಂದಲೂ ಹೊಗಳಿಕೆ ಪಡೆದ ಸಿನಿಮಾ ಅಂತ ಕೇಳಿದ್ದೇನೆ. ನನ್ನ ಗೆಳೆಯರು ‘ಮಾಸೂಮ್’ ಸಿನಿಮಾದ ಬಗ್ಗೆ ಪ್ರಶಂಸಿದ್ದನ್ನೂ ಕೇಳಿದ್ದೀನಿ. ಥಿಯರಿ, Script structure, ಮತ್ತೊಂದು, ಇನ್ನೊಂದು ಇವುಗಳ ಬಗ್ಗೆ ನನಗೂ ಅಷ್ಟಾಗಿ ನಂಬಿಕೆ ಇಲ್ಲ. ಮನಸ್ಸಿಗೆ ತೋಚಿದಂತೆ ಕತೆ ಹೇಳುವ ಒಬ್ಬ ನಿರ್ದೇಶಕ ಮತ್ತು ಆ ಕತೆಯನ್ನು ಸಿನಿಮಾ ರೂಪದಲ್ಲಿ ಸ್ವೀಕರಿಸುವ ಪ್ರೇಕ್ಷಕನ ನಡುವಿನ ಅಭಿರುಚಿಯ ಹೊಂದಾಣಿಕೆ ಅಷ್ಟೇ ಪ್ರಮುಖವಾಗುವುದು. ಆ ವಿಚಾರದಲ್ಲಿ ಶೇಖರ್ ಕಪೂರ್ ಅಥವಾ ಮತ್ಯಾವುದೇ ನಿರ್ದೇಶಕರ ಬಗ್ಗೆ ಹಾಗೂ ಆಯಾ ನಿರ್ದೇಶಕರ ಸಿನಿಮಾಗಳನ್ನು ಮೆಚ್ಚಿದ ಪ್ರೇಕ್ಷಕರ ಬಗ್ಗೆ ನನಗೆ ಅಪಾರ ಗೌರವವಿದೆ.

ಶೇಖರ್ ಕಪೂರ್ ಅವರ ಈ ಟ್ವೀಟ್‌ನಲ್ಲಿ ಕೆಲವು ಸಾಲುಗಳು ಹೊಸ ಜನರೇಷನ್ನಿನ ಹುಡುಗರನ್ನು ದಾರಿ ತಪ್ಪಿಸಲೂಬಹುದು. ಶೇಖರ್ ಕಪೂರ್ ಅವರು ಯಾರ ಬಳಿಯೂ ಸಹಾಯಕನಾಗಿ ದುಡಿದಿಲ್ಲದಿರಬಹುದು, ಸಿನಿಮಾ ಶಾಲೆಗಳಿಗೆ ಹೋಗಿಲ್ಲದಿರಬಹುದು, ಸೌಂಡ್ ನೆಗೆಟಿವ್ ಮತ್ತು ಪಾಸಿಟಿವ್ ಮತ್ತಿತ್ಯಾದಿ ಸಿನಿಮಾ ಪರಿಕರಗಳ ಬಗ್ಗೆ ತಿಳಿಯದೇ ಇದ್ದಿರಲೂಬಹುದು. ಆದರೆ ಸಿನಿಮಾ ಆಗುವ ಪ್ರಕ್ರಿಯೆ ಬಗ್ಗೆ ಅವರಿಗೆ ಕಿಂಚಿತ್ತಾದರೂ ಅರಿವಿರಲು ಸಾಧ್ಯವಿದೆ, ಯಾಕೆಂದರೆ ಅವರಿಗೆ ಸಿನಿಮಾದ ಹಿನ್ನೆಲೆ ಇದೆ. ಶೇಖರ್ ಕಪೂರ್ ಅವರಿಗೆ ಸಿನಿಮಾ ಹಿನ್ನೆಲೆ ಇರುವುದು ಅವರಿಗೆ ತಮ್ಮ ಮೊದಲ ಸಿನಿಮಾನ ತಾವು ಇಷ್ಟಪಟ್ಟಂತೆ ಮಾಡಲು ಆತ್ಮವಿಶ್ವಾಸ ನೀಡಿರಬಹುದು ಮತ್ತು ಹಾಗೆ ಒಬ್ಬ ನಿರ್ದೇಶಕ ಇಷ್ಟಪಟ್ಟಂತೇ ಅವನ ಮೊದಲ ಸಿನಿಮಾಗೆ ಹಣ ಹೂಡಿಕೆ ಮಾಡಲು ನಿರ್ಮಾಣ ಸಂಸ್ಥೆ ಮುಂದೆ ಬರಲು ಆತನಿಗಿರುವ ಸಿನಿಮಾ ಹಿನ್ನೆಲೆಯೂ ಕಾರಣವಾಗಿರಬಹುದು.

ಸಿನಿಮಾ ಹಿನ್ನೆಲೆಯಿಂದ ಬಂದವರಿಗೆಲ್ಲಾ ಯಶಸ್ಸು ಸಿಗುತ್ತದೆ ಅಂತ ಹೇಳುವುದಕ್ಕೆ ಆಗೋಲ್ಲ. ಸಾಕಷ್ಟು ಮಂದಿ ಸಿನಿಮಾ ಹಿನ್ನೆಲೆಯಿಂದ ಬಂದ ನಟರು, ನಿರ್ದೇಶಕರು ಕೆಲವು ಸಿನಿಮಾಗಳಿಗೇ ನೇಪಥ್ಯಕ್ಕೆ ಸರಿದಿದ್ದಾರೆ. ಒಬ್ಬ ನಿರ್ದೇಶಕ ಅಥವ ನಟನಿಗೆ ಇರುವ ಸಿನಿಮಾ ಹಿನ್ನೆಲೆ, ಆ ವ್ಯಕ್ತಿಯ ವೃತ್ತಿಜೀವನದ ಶುರುವಿಗೆ ಸುಲಭದ ಮೆಟ್ಟಿಲಷ್ಟೇ ಆಗುತ್ತದೆ. ನಂತರ ಅವರನ್ನು ಬೆಳೆಸುವುದು ಪ್ರತಿಭೆ, ಶ್ರಮ, ಸಮಯದ ನಿರ್ವಹಣೆ ಹಾಗೂ ಒಂಚೂರು ಅದೃಷ್ಟವೂ ಬೇಕಾಗಬಹುದು.

ಸಿನಿಮಾ ಹಿನ್ನೆಲೆ ಇಲ್ಲದೆಯೂ, ಯಾರ ಬಳಿಯೂ ಸಹಾಯಕರಾಗಿ ದುಡಿಯದೇ, ಸಿನಿಮಾ ನಿರ್ದೇಶನದ ಅಆಇಈ ಕಲಿಯದೇ ಯಾರೆಲ್ಲಾ ಯಶಸ್ವಿ ನಿರ್ದೇಶಕರಾಗಿದ್ದಾರೋ ಅವರಲ್ಲಿ ಬಹುತೇಕರು ಯಾವುದೋ ಒಂದು ರೀತಿಯಲ್ಲಿ ಸಿನಿಮಾ ಆಗುವ ಪ್ರಕ್ರಿಯೆ ಒಳಗೆ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ನಮ್ಮ ಪೀಳಿಗೆಯ ಕೆಲವು ಉದಾಹರಣೆಗಳನ್ನು ಗಮನಿಸಿದರೆ, ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಅವರು ಕೂಡ ಯಾವುದೇ ಸಿನಿಮಾ ನಿರ್ದೇಶಕನ ಜೊತೆ ಸಹಾಯಕನಾಗಿ ಕೆಲಸ ಮಾಡಿದ್ದಿಲ್ಲ, ಆದರೆ ಅವರು ನಟನೆಯ ಜೊತೆಜೊತೆಗೆ ಸಿನಿಮಾ ನಿರ್ದೇಶನ ಎಂಬ ಕುದುರೆಯ ಲಗಾಮು ಹಿಡಿದು ಏರಿ ಬಿದ್ದು, ಗಾಯಗಳಾದರೂ ಲೆಕ್ಕಿಸದೇ ಎದ್ದು ಮತ್ತೆ ರೇಸಿನಲ್ಲಿ ಗೆದ್ದವರು. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರು ಸಿನಿಮಾಗಳಲ್ಲಿ ಕಲಾನಿರ್ದೇಶಕನಾಗಿ ಕೆಲಸ ಮಾಡುತ್ತಲೇ ವಾರೆಗಣ್ಣಲ್ಲಿ ಡೈರೆಕ್ಟರ್ ಕುರ್ಚಿಯ ಕಡೆ ಕಣ್ಣಿಟ್ಟಿದ್ದವರು. ರಿಷಭ್ ಮತ್ತು ಮಂಸೋರೆ ಅವರಿಗೆ ರಂಗಭೂಮಿಯ ಅನುಭವವೂ ಇದೆ. ರಂಗಭೂಮಿ ಸಿನಿಮಾಗಿಂತ ಸ್ವಲ್ಪ ಹೆಚ್ಚೇ ಕಲಿಸುತ್ತದೆ.

ಸಿನಿಮಾ ನಿರ್ದೇಶನಕ್ಕೆ ಕ್ಯಾಮರಾ, ಲೈಟ್ಸ್, ಲೆನ್ಸ್ (ಅಂದಿನ ನೆಗೆಟಿವ್) ಇಂದಿನ EXR (ExDR), DPX, Wav, Premier Pro, Davinci ಇತ್ಯಾದಿಗಳನ್ನು ತಿಳಿದುಕೊಳ್ಳಲೇಬೇಕಾದ ಅಗತ್ಯವೂ ಇಲ್ಲ. ಆಯಾ ತಾಂತ್ರಿಕತೆಯನ್ನು ಅರಿತ ತಂತ್ರಜ್ಞರು ಅವರವರ ಕೆಲಸ ಮಾಡುತ್ತಾರೆ. ಆದರೆ ಅವರಿಂದ ಕೆಲಸ ತೆಗೆಸಿಕೊಳ್ಳುವುದು ನಿರ್ದೇಶಕನ ಕೆಲಸ. ಆ ಕೆಲಸವನ್ನು ಹೇಗೆ ತೆಗೆಸಿಕೊಳ್ಳಬೇಕು ಎಂಬುದಕ್ಕಾದರೂ ಸಿನಿಮಾದ ಒಟ್ಟು ಪ್ರಕ್ರಿಯೆ ಒಳಗೆ ನಿರ್ದೇಶಕನಾಗುವವನು ಒಮ್ಮೆಯಾದರೂ ಕಣ್ಣುಹಾಯಿಸಿ ಬರಬೇಕಲ್ಲ? Script Structure ಅಥವಾ ಥಿಯರಿಗಳನ್ನು ತಿಳಿದುಕೊಳ್ಳುವ ಅಗತ್ಯವಿಲ್ಲ. ನಮಗೆ ಬಹಳ ಇಷ್ಟವಾಗಿರುವ ಹತ್ತು ಸಿನಿಮಾಗಳನ್ನು ನೋಡಿ, ಆ ಸಿನಿಮಾಗಳಲ್ಲಿ ನಡೆಯುವ ಕ್ರಿಯೆ ಮತ್ತು ಪ್ರತಿಕ್ರಿಯೆ ಹಾಗೂ ಸಂಭಾಷಣೆಗಳನ್ನು ಬರೆದುಕೊಂಡು ಓದಿದರೆ ಒಂದಷ್ಟು ವಿಷಯಗಳು ಅರ್ಥವಾಗಿಬಿಡುತ್ತವೆ. ಆದರೆ ಸಿನಿಮಾ ಮಾಡುವಾಗ ದೃಶ್ಯವನ್ನು ಕಟ್ಟುವ ಸಲುವಾಗಿ ಶಾಟ್ಸ್ ಬಗ್ಗೆ ಗಮನ ಕೊಡದೇ ಇದ್ದರೂ Geography, Axis, Look ಅನ್ನುವುದು ಅತಿ ಸಾಮಾನ್ಯ ವಿಷಯವಾದರೂ ಅದರ ತಿಳುವಳಿಕೆ ಅತ್ಯಗತ್ಯವಾದದ್ದು. Team Management ಅನ್ನೋದು ಇನ್ನೂ ದೊಡ್ಡ ಟಾಸ್ಕ್. ಅಂತಹವುಗಳೆಲ್ಲಾ ಶೇಖರ್ ಕಪೂರ್ ಥರದ ಸಿನಿಮಾ ಹಿನ್ನೆಲೆಯವರು ಅಥವ ಯಾವುದೇ ರೀತಿಯಲ್ಲಿ ಸಿನಿಮಾದ ಪ್ರಕ್ರಿಯೆ ಒಳಗೆ ಹೋಗಿ ಬಂದವರು, ರಂಗಭೂಮಿಯನ್ನು ಕಂಡವರು ಅತಿ ಸಣ್ಣ ಅವಧಿಯಲ್ಲಿಯೇ ಗಾಢವಾಗಿ ಅಧ್ಯಯನ ಮಾಡಿ ಬಂದಿರುತ್ತಾರೆ. ನಾನು ಯಾರ ಬಳಿಯೂ ಸಹಾಯಕನಾಗಿ ಕೆಲಸ ಮಾಡಿಲ್ಲ, ಸಿನಿಮಾ ಶಾಲೆಗೆ ಹೋಗಿಲ್ಲ ಎಂದು ಹೇಳುವವರು ಏಕಲವ್ಯನಂತೆ ಪ್ರಚಂಡರಾಗಿರಲೂ ಸಾಧ್ಯವಿದೆ. ಲೈಟಾಗ್ ತಗೋಬೇಡಿ.

LEAVE A REPLY

Connect with

Please enter your comment!
Please enter your name here