ಶಂಕರ್‌ ವಿ ನಿರ್ದೇಶನದಲ್ಲಿ ಅಂಕುಶ್‌ ಏಕಲವ್ಯ ನಟಿಸಿರುವ ‘ಬ್ರಹ್ಮರಾಕ್ಷಸ’ ಆಕ್ಷನ್‌ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. 80-90ರ ದಶಕದಲ್ಲಿ ನಡೆಯುವ ಕತೆ. ಕಿರುತೆರೆಯ ಜನಪ್ರಿಯ ನಟಿ ಪಲ್ಲವಿ ಗೌಡ ಚಿತ್ರದ ಹಿರೋಯಿನ್‌.

ಶಂಕರ್‌ ವಿ ನಿರ್ದೇಶನದಲ್ಲಿ ಅಂಕುಶ್‌ ಏಕಲವ್ಯ ನಟಿಸಿರುವ ‘ಬ್ರಹ್ಮರಾಕ್ಷಸ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಚಿತ್ರದ ನಿರ್ಮಾಪಕ ಕೆ ಎಂ ಪಿ ಶ್ರೀನಿವಾಸ್‌ ಈ ಹಿಂದೆ ನಿರ್ಮಿಸಿದ್ದ ‘ಕಲಿವೀರ’ ಸಾಕಷ್ಟು ಸದ್ದು ಮಾಡಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ನೆಲಕಚ್ಚಿದರೂ ಸಿನಿಮಾ ವಿಶ್ಲೇಷಕರು ಮತ್ತು ಸಿನಿಮಾ ರಂಗದವರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೇ ಹುಮ್ಮಸ್ಸಿನಲ್ಲಿ ನಿರ್ಮಾಪಕರು ಮತ್ತೊಮ್ಮೆ ಆಕ್ಷನ್‌ ಸಿನಿಮಾ ಮಾಡುವ ಉಮೇದಿನಲ್ಲಿ ‘ಬ್ರಹ್ಮರಾಕ್ಷಸ’ ಸಿದ್ಧಪಡಿಸಿದ್ದಾರೆ. ಸಿನಿಮಾ ಬಗ್ಗೆ ಮಾತನಾಡುವ ನಿರ್ಮಾಪಕ ಶ್ರೀನಿವಾಸ್‌, ‘ನನ್ನ‌ ಮೊದಲ ಕಲಿವೀರ ರಿಲೀಸ್‌ ಸಂದರ್ಭ ಸರಿಯಾಗಿರಲಿಲ್ಲ. ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ಕೇಳಿಬಂದರೂ ಥಿಯೇಟರ್‌ನಲ್ಲಿ ಸಿನಿಮಾ ನಿಲ್ಲಲಿಲ್ಲ. ಈ ಹೊಸ ಸಿನಿಮಾದಲ್ಲಿ ಮೊದಲ ಚಿತ್ರಕ್ಕಿಂತ ಹೆಚ್ಚು ಆಕ್ಷನ್‌ ಇದೆ. ಜನ ಚಿತ್ರವನ್ನು ಕೈ ಹಿಡಿಯುವರೆಂಬ ನಂಬಿಕೆಯಿದೆ’ ಎನ್ನುತ್ತಾರೆ.

ನಿರ್ದೇಶಕ ಶಂಕರ್‌ ವಿ ಅವರು ಸಹಾಯಕ ನಿರ್ದೇಶಕರಾಗಿ ಹಲವು ವರ್ಷ ಅನುಭವ ಪಡೆದಿದ್ದಾರೆ. ‘ಬ್ರಹ್ಮರಾಕ್ಷಸ’ ಅವರ ಸ್ವತಂತ್ರ ನಿರ್ದೇಶನದ ಚೊಚ್ಚಲ ಸಿನಿಮಾ. ‘ಇದು 80-90ರ ದಶಕಗಳಲ್ಲಿ ನಡೆಯುವ ರಿವೇಂಜ್‌ ಸ್ಟೋರಿ. ಜೊತೆಗೊಂದು ಮೆಸೇಜ್ ಕೂಡ ಇದೆ. ಮೂವರು ಸಮಾಜಕ್ಕೆ ಒಳಿತನ್ನು ಮಾಡಲು ಹೊರಟಾಗ ಏನೋ ಒಂದು ಘಟನೆ ನಡೆಯುತ್ತದೆ. ಶೇ 90ರಷ್ಟು ಸಿನಿಮಾ ರಾತ್ರಿ ವೇಳೆಯಲ್ಲಿ ನಡೆಯುತ್ತದೆ ಎನ್ನುವುದು ವಿಶೇಷ. ಬಹುತೇಕ ಕತೆ ಮಳೆಯಲ್ಲೇ ನಡೆಯುತ್ತದೆ’ ಎನ್ನುತ್ತಾರೆ ಶಂಕರ್‌. ಅಂಕುಶ್‌ ಏಕಲವ್ಯ ಚಿತ್ರದ ಹೀರೋ ಆಗಿ ನಟಿಸಿದ್ದು ಅವರ ಬಗ್ಗೆ ಚಿತ್ರದ ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು ಪ್ರೀತಿಯಿಂದ ಮಾತನಾಡುತ್ತಾರೆ. ‘ಸಿನಿಮಾ ಇಷ್ಟು ಚೆನ್ನಾಗಿ ಬರಲು ನಿರ್ಮಾಪಕರೇ ಕಾರಣ. ಈ ಸಿನಿಮಾ ಯಾವುದೇ ಹಾಲಿವುಡ್ ಚಿತ್ರಕ್ಕೂ ಕಡಿಮೆ ಇಲ್ಲ. ಹೀರೋ ಏಕಲವ್ಯ ಪರ್ಫಾರ್ಮೆನ್ಸ್‌ ನೋಡಿದಾಗ ಜಾಕಿಚಾನ್‌ ನೆನಪಾದರು!’ ಎಂದು ತಮ್ಮ ಹೀರೋ ಬಗ್ಗೆ ಹೇಳುತ್ತಾರೆ ಥ್ರಿಲ್ಲರ್‌ ಮಂಜು.

ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳಂ ಕಿರುತೆರೆಯಲ್ಲಿ ಚಿರಪರಿಚಿತರಾಗಿರುವ ಪಲ್ಲವಿ ಗೌಡ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ನಟ ಬಿರಾದಾರ್‌ ಅವರಿಗೆ ಚಿತ್ರದಲ್ಲಿ ಪ್ರಮುಖ ಪಾತ್ರವಿದೆ. ‘ಇದೊಂದು ಡಿಫರೆಂಟ್ ಕ್ಯಾರೆಕ್ಟರ್. 30 ವರ್ಷಗಳಾದ ಮೇಲೆ ಮೊದಲ ಬಾರಿಗೆ ನನ್ನ ದಾರಿಬಿಟ್ಟು ಮಾಡಿದ ಚಿತ್ರ’ ಎನ್ನುತ್ತಾರೆ ಬಿರಾದಾರ್‌. ನಟಿ ಭವ್ಯಾ ಅವರು ಹೀರೋ ತಾಯಿಯಾಗಿ ನಟಿಸಿದ್ದಾರೆ. ಅನಿರುದ್ಧ ಕ್ಯಾಮೆರಾ, ಎಂ ಎಸ್ ತ್ಯಾಗರಾಜ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಅರವಿಂದ್ ರಾವ್, ಸ್ವಪ್ನ, ಪುರುಷೋತ್ತಮ್, ಬಲ ರಾಜವಾಡಿ, ರಥಾವರ ದೇವು, ಭುವನ್‌ಗೌಡ, ಚಿಕ್ಕಹೆಜ್ಜಾಜಿ ಮಜದೇವ್, ಶಿವಾನಂದಪ್ಪ ಹಾವನೂರು ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

LEAVE A REPLY

Connect with

Please enter your comment!
Please enter your name here