ಮಮ್ಮೂಟಿ ನಟನೆಯ ‘ಭ್ರಮಯುಗಂ’ ಮಲಯಾಳಂ ಸಿನಿಮಾದ ರಿಲೀಸ್‌ ದಿನಾಂಕ ಘೋಷಣೆಯಾಗಿದೆ. ರಾಹುಲ್‌ ಸದಾಶಿವನ್‌ ನಿರ್ದೇಶನದ ಸಿನಿಮಾ ಫೆಬ್ರವರಿ 16ರಂದು ತೆರೆಕಾಣಲಿದೆ. ಸಿನಿಮಾ ಕಪ್ಪು – ಬಿಳುಪಿನಲ್ಲಿ ತೆರೆಕಾಣಲಿದೆ ಎನ್ನುವುದು ವಿಶೇಷ.

ಮಮ್ಮೂಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಭ್ರಮಯುಗಂ’ ಮಲಯಾಳಂ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಚಿತ್ರದ ಕಪ್ಪು-ಬಿಳುಪಿನ ಪೋಸ್ಟರ್‌ ಬಿಡುಗಡೆಯಾಗಿದೆ. ‘ರೆಡ್ ರೈನ್’ ಮತ್ತು ‘ಭೂತಕಾಲಂ’ ಚಿತ್ರಗಳ ಖ್ಯಾತಿಯ ರಾಹುಲ್ ಸದಾಶಿವನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಲನಚಿತ್ರವನ್ನು ವೀಕ್ಷಕರು ಸಂಪೂರ್ಣವಾಗಿ ಕಪ್ಪು-ಬಿಳುಪಿನಿಂದ ವೀಕ್ಷಿಸುತ್ತಾರೆ ಎಂದು ಚಿತ್ರತಂಡ ಇತ್ತೀಚೆಗೆ ಮಾಹಿತಿ ಹಂಚಿಕೊಂಡಿದೆ. ”ಭ್ರಮಯುಗಂ’ ಅನ್ನು ಕಪ್ಪು ಬಿಳುಪಿನಲ್ಲಿ ಇದೇ ಫೆಬ್ರವರಿ 16ರಿಂದ ಚಿತ್ರಮಂದಿರಗಳಲ್ಲಿ ವೀಕ್ಷಿಸಿ’ ಎಂದು ಚಿತ್ರದ ಹೊಸ ಪೋಸ್ಟರ್ ಅನ್ನು ತಮ್ಮ Xನಲ್ಲಿ ಮಮ್ಮೂಟಿ ಹಂಚಿಕೊಂಡಿದ್ದಾರೆ. ಇದೊಂದು ಹಾರರ್‌ ಥ್ರಿಲ್ಲರ್ ಎನ್ನಲಾಗಿದ್ದು, ಚಿತ್ರದಲ್ಲಿ ಅರ್ಜುನ್ ಅಶೋಕನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಮ್ಮೂಟಿ ಈ ಹಿಂದೆ ‘ಕಾತಲ್ – ದಿ ಕೋರ್’ ಚಿತ್ರದಲ್ಲಿ ಜ್ಯೋತಿಕಾ ಅವರೊಟ್ಟಿಗೆ ಕಾಣಿಸಿಕೊಂಡಿದ್ದರು. ‘ದಿ ಗ್ರೇಟ್ ಇಂಡಿಯನ್ ಕಿಚನ್’ ಖ್ಯಾತಿಯ ಜಿಯೋ ಬೇಬಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಮಮ್ಮುಟ್ಟಿ ಸಲಿಂಗಕಾಮಿ ಪಾತ್ರ ನಿರ್ವಹಿಸಿದ್ದಾರೆ. ಈ ಚಲನಚಿತ್ರವು ಸಕಾರಾತ್ಮಕ ಮೆಚ್ಚುಗೆಯನ್ನು ಪಡೆದುಕೊಂಡಿತು. ‘The Age of Madness’ ಎಂಬ ಅಡಿಬರಹ ಹೊಂದಿರುವ ‘ಭ್ರಮಯುಗಂ’ ಚಿತ್ರದಲ್ಲಿ ನಟ-ನಿರ್ದೇಶಕ ಸಿದ್ಧಾರ್ಥ್ ಭರತನ್ ಮತ್ತು ‘ಕಮ್ಮಟ್ಟಿಪಾಡಂ’ ನಟಿ ಅಮಲ್ಡಾ ಲಿಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಮೂಲ ಮಲಯಾಳಂ ಸೇರಿದಂತೆ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here