‘ಹೊಸ ತಲೆಮಾರಿನ ಕತೆಗಳು’ ಎನ್ನುವ ಕಾನ್ಸೆಪ್ಟ್‌ನಲ್ಲಿ ತಯಾರಾಗುವ ಸಿನಿಮಾಗಳ ಪಟ್ಟಿಗೆ ಸೇರ್ಪಡೆಗೊಳಿಸಬಹುದಾದ ಸಿನಿಮಾ ‘Bytwo ಲವ್‌’. ಬದುಕಿನ ಕುರಿತಾದ ಇಂದಿನ ಯುವ ಪೀಳಿಗೆಯ ನಿಲುವು, ಸಂಬಂಧಗಳನ್ನು ಅರಿಯುವಲ್ಲಿನ ದುಡುಕುತನ, ಆರ್ಥಿಕ ಸ್ವಾತಂತ್ರ್ಯ ತಂದುಕೊಡಬಹುದಾದ ಅಹಂ – ಇಗೋಗಳು ಇಲ್ಲಿ ಚರ್ಚೆಗೆ ಬರುತ್ತವೆ.

ಹೀರೋಗೆ ತನ್ನ ತಂದೆಯ ಮೇಲೆ ಕೋಪ. ತನ್ನ ತಾಯಿ ತೀರಿಕೊಂಡ ಮೇಲೆ ಮತ್ತೊಂದು ಮದುವೆಯಾಗಿ ಮಗು ಮಾಡಿಕೊಂಡರು ಎನ್ನುವುದು ಆತನಿಗೆ ಇರುಸುಮುರುಸು. ಈ ಮತ್ತೊಂದು ಮದುವೆಗೆ ಫ್ಲಾಶ್‌ಬ್ಯಾಕ್‌ ಇದ್ದು, ಅದು ಚಿತ್ರದ ಕೊನೆಯಲ್ಲಿ ರಿವೀಲ್‌ ಆಗುತ್ತದೆ. ಹೀರೋಯಿನ್‌ಗೆ ತನ್ನ ತಾಯಿ, ತಮ್ಮನ ಮೇಲೆ ಮುನಿಸು. ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಆದ ಎಡವಟ್ಟುಗಳಿಂದಾಗಿ ತಮ್ಮ ಮನೆಗಳಲ್ಲಿ ಜಗಳ ಮಾಡಿಕೊಂಡು ಇಬ್ಬರೂ ಊರು ಬಿಡುತ್ತಾರೆ. ಬೆಂಗಳೂರನ್ನು ಸೇರಿ ಅಲ್ಲೊಂದು ಮ್ಯಾಟ್ರಿಮೋನಿ ಏಜನ್ಸಿಯಲ್ಲಿ ಕೆಲಸಕ್ಕೆ ಸೇರುತ್ತಾರೆ.

ನಿರ್ದೇಶಕ ಹರಿ ಸಂತೋಷ್‌ ಅವರು ತಮ್ಮ ಚಿತ್ರದ ಹೀರೋ, ಹಿರೋಯಿನ್‌ ವ್ಯಕ್ತಿತ್ವಗಳನ್ನು ಕಟ್ಟಿಕೊಡಲು ಆರಂಭದ ಕೆಲವು ಸನ್ನಿವೇಶಗಳಲ್ಲಿ ಯತ್ನಿಸುತ್ತಾರೆ. ಆಂಜನೇಯನ ಭಕ್ತ ಎಂದು ಹೇಳಿಕೊಳ್ಳುವ ಹೀರೋಗೆ ಪ್ರೀತಿ, ಮದುವೆಯ ಬಂಧದಲ್ಲಿ ನಂಬಿಕೆಯಿಲ್ಲ. ಪುಟ್ಟ ಮಕ್ಕಳ ಸಂಗವೇ ಕಿರಿಕಿರಿ ಎನ್ನುವ ಹಿರೋಯಿನ್‌ಗೆ ಲೌಕಿಕ ಬದುಕಿನ ಜಂಜಾಟಗಳು ಇಷ್ಟವಿಲ್ಲ. ಆದರೆ ‘ಬಾಡಿಗಾರ್ಡ್‌’ ನೆಪದಲ್ಲಾದರೂ ಒಬ್ಬ ಲವರ್‌ ಇರ್ಬೇಕು ಅನ್ನೋ ಗೆಳತಿಯ ಸಲಹೆಗೆ ಓಗೊಡುತ್ತಾಳೆ. ಹೀಗೆ ಒಂದಾಗುವ ಹೀರೋ – ಹಿರೋಯಿನ್‌ ಇಬ್ಬರಿಗೂ ಬದುಕು ಕಟ್ಟಿಕೊಳ್ಳುವ ಬಗ್ಗೆಯೇ ಗೊಂದಲಗಳಿವೆ. ಈ ಗೊಂದಲಗಳ ಪರಿಹಾರಕ್ಕಾಗಿ ಒಂದು ಎಕ್ಸ್‌ಪೆರಿಮೆಂಟ್‌ಗೆ ಒಡ್ಡಿಕೊಳ್ಳುತ್ತಾರೆ. ಅಲ್ಲಿಂದ ಮುಂದೆ ಅವರ ಬದುಕಿನಲ್ಲಾಗುವ ಪಲ್ಲಟಗಳೇನು ಎನ್ನುವುದು ಚಿತ್ರದ ಪ್ಲಾಟ್‌.

‘ಹೊಸ ತಲೆಮಾರಿನ ಕತೆಗಳು’ ಎನ್ನುವ ಕಾನ್ಸೆಪ್ಟ್‌ನಲ್ಲಿ ತಯಾರಾಗುವ ಚಿತ್ರಗಳ ಪಟ್ಟಿಗೆ ಸೇರ್ಪಡೆಗೊಳಿಸಬಹುದಾದ ಸಿನಿಮಾ ‘Bytwo ಲವ್‌’. ಬದುಕಿನ ಕುರಿತಾದ ಇಂದಿನ ಯುವ ಪೀಳಿಗೆಯ ನಿಲುವು, ಸಂಬಂಧಗಳನ್ನು ಅರಿಯುವಲ್ಲಿನ ದುಡುಕುತನ, ಆರ್ಥಿಕ ಸ್ವಾತಂತ್ರ್ಯ ತಂದುಕೊಡಬಹುದಾದ ಅಹಂ – ಇಗೋಗಳು ಇಲ್ಲಿ ಚರ್ಚೆಗೆ ಬರುತ್ತವೆ. ನಿರ್ದೇಶಕ ಹರಿ ಸಂತೋಷ್‌ ಒಳ್ಳೆಯ ಕತೆಯನ್ನೇ ಮಾಡಿಕೊಂಡಿದ್ದಾರೆ. ಚಿತ್ರದ ಮೊದಲಾರ್ಧ ಲವಲವಿಕೆಯಿಂದ ಇರಬೇಕೆಂದೇ ಸನ್ನಿವೇಶಗಳ ಹೆಣೆದಿದ್ದಾರೆ. ಅಲ್ಲಿ ಅವರ ಆಶಯ ಸಂಪೂರ್ಣವಾಗಿ ಸಕ್ಸಸ್‌ ಆಗಿದೆ ಎಂದು ಹೇಳಲಾಗದು. ಆದರೆ ಇಂಟರ್‌ವೆಲ್‌ ಶುರುವಾಗಿ ಅರ್ಧ ಗಂಟೆಯ ನಂತರದಿಂದ ಕೊನೆಯವರೆಗೂ ಸಿನಿಮಾ ಪ್ರೇಕ್ಷಕರನ್ನು ಒಳಗೊಳ್ಳುತ್ತದೆ.

ನಾಯಕ – ನಾಯಕಿಯರ ಗೊಂದಲಗಳಿಗೆ ಪರಿಹಾರ ಸೂಚಿಸುವಂತೆ ಚಿತ್ರದಲ್ಲೊಂದು ಸಬ್‌ ಪ್ಲಾಟ್‌ ಇದೆ. ಕೆಳಮಧ್ಯಮ ವರ್ಗದ ಗಂಡ – ಹೆಂಡತಿಯ (ಜಹಾಂಗೀರ್‌ – ಸಂಧ್ಯಾ ಅರಕೆರೆ) ಜಗಳ, ಪ್ರೀತಿ, ಸುಖ-ದುಃಖಗಳನ್ನು ಹೇಳುವ ಪ್ಲಾಟ್‌ ಇದು. ಈ ಕುಟುಂಬದ ಸನ್ನಿವೇಶಗಳು ಪ್ರತ್ಯೇಕವಾಗಿ ಕಾಣಿಸುವ ಬದಲು ಇಡಿಯಾಗಿ ಸಿನಿಮಾದ ಆಶಯಕ್ಕೆ ಬೆಂಬಲ ನೀಡುವಂತಿದ್ದರೆ ಚೆನ್ನಾಗಿರುತ್ತಿತ್ತು. ಆಕ್ಷನ್‌ – ಥ್ರಿಲ್ಲರ್‌ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಹೀರೋ ಧನ್ವೀರ್‌ ವೃತ್ತಿ ಬದುಕಿನ ಅರಂಭದಲ್ಲೇ ಇಂಥದ್ದೊಂದು ಕತೆಗೆ ತೆರೆದುಕೊಂಡಿರುವುದು ಅವರ ಕೆರಿಯರ್‌ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ನಟಿ ಶ್ರೀಲೀಲಾ ಭಾವನಾತ್ಮಕ ಸನ್ನಿವೇಶಗಳಲ್ಲಿ ಹೆಚ್ಚು ಸ್ಕೋರ್‌ ಮಾಡುತ್ತಾರೆ. ಚಿತ್ರದ ಮೊದಲಾರ್ಧಕ್ಕಿಂತ ದ್ವಿತಿಯಾರ್ಧದಲ್ಲೇ ಈ ಜೋಡಿಯ ಕೆಮಿಸ್ಟ್ರಿ ಚೆನ್ನಾಗಿ ವರ್ಕ್‌ ಆಗಿದೆ.

ಅಚ್ಯುತ್‌ ಕುಮಾರ್‌, ರಂಗಾಯಣ ರಘು, ಪವಿತ್ರಾ ಲೋಕೇಶ್‌ ಅವರವು ‘ಟೈಲರ್‌ ಮೇಡ್‌’ ಪಾತ್ರಗಳು. ಚಿತ್ರಕಥೆ ಬರೆಯುವಾಗಲೇ ನಿರ್ದೇಶಕರು ಅವರನ್ನು ಊಹಿಸಿಯೇ ಪಾತ್ರಗಳನ್ನು ಬರೆದಿರುವಂತಿದೆ. ಅಚ್ಯುತ್‌ ಕುಮಾರ್‌ ಪಾತ್ರದ ಮರುಮದುವೆ ಪ್ರಸಂಗಕ್ಕೊಂದು ಫ್ಲಾಶ್‌ಬ್ಯಾಕ್‌ ಕತೆ ಹೆಣೆಯುವ ಅವಶ್ಯಕತೆಯೇನೂ ಇರಲಿಲ್ಲ. ನ್ಯೂ ಯೇಜ್‌ ಸ್ಟೋರಿಗಳನ್ನು ಹೇಳುವವರು ಇಂತಹ ಕ್ಲೀಷೆಗಳಿಂದ ಹೊರಗುಳಿಯುವ ಧೈರ್ಯ ಮಾಡಬೇಕು. ಪ್ರಸ್ತುತ ಕನ್ನಡ ಚಿತ್ರಸಂಗೀತದಲ್ಲಿ ಸದ್ದು ಮಾಡುತ್ತಿರುವ ಸಂಗೀತ ನಿರ್ದೇಶಕ ಅಜನೀಶ್‌ ಸಂಯೋಜನೆಯಲ್ಲಿನ ಎರಡು ಹಾಡುಗಳು ಇಂಪಾಗಿವೆ. ಕ್ಲೈಮ್ಯಾಕ್ಸ್‌ ದೃಶ್ಯಗಳು ಪರಿಣಾಮಕಾರಿಯಾಗಿ ಮೂಡಿಬರುವಲ್ಲಿ ಅವರ ಹಿನ್ನೆಲೆ ಸಂಗೀತದ ಪಾತ್ರ ದೊಡ್ಡದು. ಕೆಲವು ಮಿತಿಗಳ ಮಧ್ಯೆಯೂ ಚಿತ್ರ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತದೆ. ಕೊನೆಯ ನಲವತ್ತು ನಿಮಿಷಗಳನ್ನು ನಿರ್ದೇಶಕರು ಅತ್ಯಂತ ಆಪ್ತವಾಗಿ, ಸುಂದರವಾಗಿ ಕಟ್ಟಿದ್ದಾರೆ.

Previous articleತಂದೆ, ಬ್ಯಾಡ್ಮಿಂಟನ್‌ ಚಾಂಪಿಯನ್‌ ಪ್ರಕಾಶ್‌ ಪಡುಕೋಣೆ ಬಯೋಪಿಕ್‌ ನಿರ್ಮಿಸಲಿರುವ ದೀಪಿಕಾ
Next articleOTT ಗೆ ರವಿಚಂದ್ರನ್‌ ‘ದೃಶ್ಯ 2’; ZEE5ನಲ್ಲಿ ಸಿನಿಮಾ

LEAVE A REPLY

Connect with

Please enter your comment!
Please enter your name here