ಅವೆಷ್ಟು ಕ್ರಿಸ್ಮಸ್ ಚಿತ್ರಗಳು ಬಂದು ಹೋಗಿವೆ ಎಂದರೆ ಪ್ರೇಕ್ಷಕರಿಗೆ ಇಷ್ಟ ಆಗಬೇಕಾದರೆ ಏನಾದರೂ ಹೊಸತನ್ನು ಹೇಳಲೇಬೇಕು. ಆದರೆ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ನಿರೂಪಣೆಯ ಮಾದರಿ ಅಂದುಕೊಂಡ ಪರಿಣಾಮ ಬೀರದೇ ಚಿತ್ರ ಸವಕಲು ಎನಿಸುವಂತೆ ಮಾಡಿದೆ. ಇಷ್ಟರ ಮಧ್ಯೆಯೂ ಎಡ್ಡಿ ಮರ್ಫಿಯವರ ಆಂಗಿಕ ಮತ್ತು ಅಭಿನಯ ಅಲ್ಲಲ್ಲಿ ಮುದ ನೀಡುತ್ತಾ ಚಿತ್ರದ ಕೊರತೆಯನ್ನು ಸ್ವಲ್ಪ ಮುಚ್ಚುವಲ್ಲಿ ಸಹಾಯ ಮಾಡಿದೆ. ‘ಕ್ಯಾಂಡಿ ಕೇನ್ ಲೇನ್’ ಇಂಗ್ಲಿಷ್‌ ಸಿನಿಮಾ Amazon Primeನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಎಡ್ಡಿ ಮರ್ಫಿ ಅಭಿಮಾನಿಗಳಿಗೆ ಸಂತಸದ ಸುದ್ದಿ. ಮರ್ಫಿ ಅವರ ಹೊಸ ಚಿತ್ರ ‘ಕ್ಯಾಂಡಿ ಕೇನ್ ಲೇನ್’ ಬಿಡುಗಡೆಯಾಗಿದೆ. ಒಬ್ಬ ನಿರುದ್ಯೋಗಿ ತಂದೆ ಕ್ರಿಸ್ಮಸ್ ಅಲಂಕಾರದ ಸ್ಪರ್ಧೆಯಲ್ಲಿ ಗೆಲ್ಲಲು ಹವಣಿಸುವ ವಿನೋದಭರಿತ ಕಥೆ ಕ್ಯಾಂಡಿ ಕೇನ್ ಲೇನ್. ಚಿತ್ರದುದ್ದಕ್ಕೂ ನಮಗೆ ಕಾಣಸಿಗುವುದು ಕ್ರಿಸ್ಮಸ್ ಹಬ್ಬದ ಸಂಭ್ರಮ, ಸಡಗರ, ಹಬ್ಬದ ವಾತಾವರಣ. ಕ್ರಿಸ್ಮಸ್ ಎಂದರೆ ಉಡುಗೊರೆಗಳ ಹಬ್ಬ, ಅಲಂಕಾರಗಳ ಹಬ್ಬ, ಕುಟುಂಬ ಒಟ್ಟಿಗೆ ಸೇರುವ ಹಬ್ಬ ಹಾಗೆಯೇ ದುಡ್ಡಿನ ಹಬ್ಬ ಕೂಡ. ಇಷ್ಟೆಲ್ಲ ಸಂಭ್ರಮಿಸುವುದಕ್ಕೆ ದುಡ್ಡು ಬೇಕೇ ಬೇಕಲ್ಲವೇ?

ಈ ಚಿತ್ರದಲ್ಲಿ ಹಬ್ಬದ ಸಂಭ್ರಮದ ಜೊತೆಗೆ ವಾಣಿಜ್ಯ ಹಪಹಪಿತನ ಮತ್ತು ಹತಾಶೆಯ ಚಿತ್ರಣವೂ ಇದೆ. ಅ ಕ್ರಿಸ್ಮಸ್ ಕ್ಯಾರೋಲ್ ಇಂದ ಹಿಡಿದು ನೀವು ಸುಮಾರು ಕ್ರಿಸ್ಮಸ್ ಆಧಾರಿತ ಚಿತ್ರಗಳಲ್ಲಿ ಇದನ್ನು ಗಮನಿಸಿರಬಹುದು. ಮೇಲ್ನೋಟಕ್ಕೆ ಹಬ್ಬದ ಸುತ್ತ ಹೆಣೆದ ಕಥೆಯಂತೆ ಇದ್ದರೂ ಇವೆಲ್ಲವೂ ಹಣದ ಸುತ್ತ, ಬಡತನದ ಕುರಿತ ಭಯದ ಸುತ್ತ ಹೆಣೆದ ಕಥೆಗಳೇ. ಕೊನೆಗೆ ಅವರನ್ನು ಕಾಪಾಡುವುದು ಹಣವಲ್ಲ, ಅವರ ನಂಬಿಕೆ ಅಷ್ಟೇ. ಈಗಿನ ದಿನಮಾನದ ಅಮೇರಿಕ ದೇಶದ ಕ್ರಿಸ್ಮಸ್ ಹಬ್ಬ ಮತ್ತು ಅದರೊಟ್ಟಿಗೆ ಬರುವ ಬಡವ ಮತ್ತು ಹಣದ ನಡುವಿನ ಸಂಘರ್ಷದ ಕಥೆಯನ್ನು ಹೇಳಹೊರಟಿರುವ ಮತ್ತೊಂದು ಚಿತ್ರ ‘ಕ್ಯಾಂಡಿ ಕೇನ್ ಲೇನ್’. ವಾಸ್ತವ ಪ್ರಪಂಚ ಮತ್ತು ಕಾಲ್ಪನಿಕ ಪ್ರಪಂಚದ ನಡುವೆ ಇರುವ ಕೊಂಡಿಯಂತೆ ನಾಯಕನ ವಿನೋದಮಯ ಘಟನೆಗಳನ್ನು ನಿರೂಪಿಸುವ ಚಿತ್ರವಿದು.

2006ರಲ್ಲಿ ಬಿಡುಗಡೆಯಾದ ‘ಡೆಕ್ ದ ಹಾಲ್ಸ್’ ಚಿತ್ರದ ಕಥಾಹಂದರವನ್ನು ಸ್ವಲ್ಪ ಹೋಲುವ ಕತೆ ಎನಿಸಿದರೂ ಈ ಚಿತ್ರ ಹಲವಾರು ರೀತಿಗಳಲ್ಲಿ ಅದಕ್ಕಿಂತ ವಿಭಿನ್ನವಾಗಿ ಮೂಡಿಬಂದಿದೆ. ಲಾಸ್ ಆಂಜಲೀಸ್ ನಗರದ ಹೊರವಲಯದ ಜನಪ್ರಿಯ ಮತ್ತು ಸಮೃದ್ಧ ರಸ್ತೆಯೊಂದರಲ್ಲಿ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಯಾರ ಮನೆಯ ಅಲಂಕಾರ ಅತ್ಯುತ್ತಮವಾಗಿದೆ ಎನ್ನುವ ಸ್ಪರ್ಧೆ ನಡೆಸಲಾಗುತ್ತದೆ. ಆ ರಸ್ತೆಯ ಹೆಸರೇ ಕ್ಯಾಂಡಿ ಕೇನ್ ಲೇನ್. ಕ್ರಿಸ್ ಪಾತ್ರದ ಎಡ್ಡಿ ಕೂಡ ಆ ರಸ್ತೆಯ ನಿವಾಸಿ ಮತ್ತು ಕ್ರಿಸ್ಮಸ್ ಹಬ್ಬವನ್ನು ಬಹಳ ಇಷ್ಟಪಡುವ ವ್ಯಕ್ತಿ. ಎಷ್ಟು ಎಂದರೆ ಆತನ ಮೂರೂ ಮಕ್ಕಳಿಗೆ ಕ್ರಿಸ್ಮಸ್ ಹಬ್ಬಕ್ಕೆ ಸಂಬಂಧಪಟ್ಟ ಹೆಸರುಗಳನ್ನೇ ಇಡುವಷ್ಟು. ಆ ಮಕ್ಕಳ ಹೆಸರುಗಳು ಜಾಯ್, ನಿಕ್ ಮತ್ತು ಹಾಲಿ.

ಆತ ಪ್ರತಿವರ್ಷ ತನ್ನ ಮನೆಯ ಮುಂದಿನ ಲಾನ್ ಮೇಲೆ ತಾನೇ ಕಯ್ಯಾರೆ ತಯಾರಿಸಿದ ಅಲಂಕಾರಿಕ ಕಲಾಕೃತಿಗಳನ್ನು ಬಳಸಿ ಕ್ರಿಸ್ಮಸ್ ಅಲಂಕಾರಗಳನ್ನು ಮಾಡುತ್ತಿರುತ್ತಾನೆ. ಚಂದವಾಗಿ ಬಣ್ಣ ಹಾಕಿದ ಕ್ಯಾಂಡಿ ಕೇನುಗಳ ಆಕೃತಿ ಆಗಿರಬಹುದು ಅಥವ ಇನ್ನಿತರ ಕಲಾಕೃತಿಗಳು ಒಟ್ಟಲ್ಲಿ ಅವನೇ ಕೈಯ್ಯಾರೆ ಸಿದ್ಧ ಮಾಡಬೇಕು. ಆಗಲೇ ಅವನಿಗೆ ಸಮಾಧಾನ. ಆದರೂ ಕಳೆದ ನಾಲ್ಕು ವರ್ಷಗಳಿಂದ ಆಧುನಿಕ ಮತ್ತು ಸಿದ್ಧ ಕಲಾಕೃತಿಗಳಿಂದ ಅಲಂಕಾರ ಮಾಡುವ ಅವನ ಎದುರು ಮನೆಯವನಿಗೆ ಬಹುಮಾನ ಬರುತ್ತಿರುತ್ತದೆ. ದುರದೃಷ್ಟವಶಾತ್ ಕ್ರಿಸ್, ಹಬ್ಬಕ್ಕೆ ಮೂರು ದಿನಗಳ ಮುಂಚೆ ತನ್ನ ಕೆಲಸ ಕಳೆದುಕೊಳ್ಳುತ್ತಾನೆ. ನಿರುದ್ಯೋಗಿಯ ಮನದ ಸಂಕಟ, ಭಯ, ಹತಾಶೆ ಎಲ್ಲವನ್ನೂ ಎಡ್ಡಿ ಬಹಳ ಅಮೋಘವಾಗಿ ನಿರ್ವಹಿಸಿದ್ದಾರೆ. ಕೆಲಸ ಹೋದರೂ ಕ್ರಿಸ್ ನಂಬಿಕೆ ಮತ್ತು ಭರವಸೆ ಕಳೆದುಕೊಳ್ಳುವುದಿಲ್ಲ. ಸ್ಪರ್ಧೆಯಲ್ಲಿ ಗೆದ್ದವರಿಗೆ ಈ ಬಾರಿ 100,000 ಡಾಲರುಗಳ ಬೃಹತ್ ಮೊತ್ತದ ಬಹುಮಾನವನ್ನು ಪ್ರಾಯೋಜಕರು ಘೋಷಿಸುತ್ತಾರೆ. ಇದು ಕ್ರಿಸ್ ಆಸೆ ಮತ್ತು ನಿರೀಕ್ಷೆಗಳಿಗೆ ರೆಕ್ಕೆ ನೀಡುತ್ತದೆ.

ಇಲ್ಲಿಯವರೆಗೂ ಚೆನ್ನಾಗಿ ಸಾಗುತ್ತಿದ್ದ ಚಿತ್ರ ದಿಢೀರ್ ಎಂದು ಫ್ಯಾಂಟಸಿ ಮಾದರಿಯ ತಿರುವು ತೆಗೆದುಕೊಳ್ಳುತ್ತದೆ. ನಿರ್ದೇಶಕ ರೆಜಿನಾಲ್ಡ್ ತಮ್ಮ ಕಲ್ಪನೆಯ ಗರಿಗಳನ್ನು ಎಗ್ಗಿಲ್ಲದೇ ಬಿಚ್ಚುತ್ತಾ ಮುನ್ನಡೆಯುತ್ತಾರೆ. ಕ್ರಿಸ್ ಒಂದು ವಿಲಕ್ಷಣವಾದ ಅಂಗಡಿಗೆ ಬರುತ್ತಾನೆ. ಅಂಗಡಿ ನೋಡಲು ಚಿಕ್ಕದಾಗಿದ್ದರೂ ಒಳಗೆ ಬೃಹತ್ ಆಗಿರುತ್ತದೆ. ಕಣ್ಣುಕುಕ್ಕುವಂತಹ ಆಲಂಕಾರಿಕ ವಸ್ತುಗಳಿಂದ ತುಂಬಿರುತ್ತದೆ. ಅಂಗಡಿ ನಡೆಸುವಾತ ಎಲ್ಫ್ ಅಂತೆ ಕಾಣುವ ಪೆಪ್ಪರ್. ಕ್ರಿಸ್ ಅಲ್ಲಿ ಲಭ್ಯವಿರುವ ಅತ್ಯಂತ ದೊಡ್ಡ ಆಲಂಕಾರಿಕ ವಸ್ತುವಾದ ಕ್ರಿಸ್ಮಸ್ ಹಬ್ಬದ ಹನ್ನೆರಡು ದಿನಗಳನ್ನು ಪ್ರತಿನಿಧಿಸುವ ಬೃಹತ್ ಕ್ರಿಸ್ಮಸ್ ಮರವನ್ನು ಖರೀದಿಸಲು ನಿರ್ಧಾರಿಸುತ್ತಾನೆ.

ಕ್ರಿಸ್ ಆ ಮರವನ್ನು ತನ್ನ ಮನೆಯ ಮುಂದೆ ಇಟ್ಟ ಮರುಕ್ಷಣವೇ ಮಾಯಾಜಾಲದಂತೆ ಘಟನೆ ನಡೆಯುತ್ತದೆ. ಆ ಮರದ ಮೇಲಿದ್ದ ದ ಟ್ವೆಲ್ವ್ ಡೇಸ್ ಆಫ್ ಕ್ರಿಸ್ಮಸ್ ಪಾತ್ರಗಳನ್ನು ಪ್ರತಿನಿಧಿಸುವ ಆಕೃತಿಗಳು ಮರದಿಂದ ಮಾಯವಾಗಿ ಜೀವ ತಳೆಯುತ್ತವೆ. ಇಲ್ಲಿಂದ ಮುಂದಕ್ಕೆ ಚಿತ್ರ ವಿಲಕ್ಷಣ ಘಟನೆಗಳಿಂದ ಕೂಡಿ ಅಯೋಮಯ ಎನಿಸಲು ಶುರುವಾಗುತ್ತದೆ. ಕಥೆಯ ಮಹತ್ತರ ತಿರುವು ಎಂದರೆ ಕ್ರಿಸ್ ಆ ಮರವನ್ನು ಕೊಳ್ಳುವಾಗ ಗೊತ್ತಿಲ್ಲದೇ ಒಂದು ಕರಾರಿಗೆ ಒಪ್ಪಿಗೆ ನೀಡಿಬಿಟ್ಟಿರುತ್ತಾನೆ. ಆ ಕರಾರಿನ ಪ್ರಕಾರ ಕ್ರಿಸ್, ಕ್ಯಾಂಡಿ ಕೇನ್ ಲೇನ್ ಸ್ಪರ್ಧೆಯಲ್ಲಿ ಜಯಶಾಲಿ ಆಗದಿದ್ದರೆ ಆತನೂ ಒಂದು ಜೀವವಿಲ್ಲದ ಕಲಾಕೃತಿಯಾಗಿ ಮಾರ್ಪಾಡಾಗಿ ಆ ಮರದ ಒಳಗೆ ಸೇರಿಬಿಡುತ್ತಾನೆ.

ಈ ಚಿತ್ರದ ಅತಿ ದೊಡ್ಡ ಹಿನ್ನಡೆ ಎಂದರೆ ಎಡ್ಡಿ ಮರ್ಫಿ ಎಷ್ಟೇ ವಿನೋದಮಯವಾಗಿ ನಟಿಸಲು ಪ್ರಯತ್ನ ಮಾಡಿದ್ದರೂ ಚಿತ್ರದ ಉದ್ದಕ್ಕೂ ಅದು ಬಲವಂತದ ಪ್ರಯಾಸ ಎಂದೇ ಎನಿಸುತ್ತದೆ. ಚಿತ್ರದ ನಿರೂಪಣೆ ಅಷ್ಟು ಜಾಳುಜಾಳಾಗಿದೆ. ಅವಧಿ ಕೂಡ ಬಹಳ ಜಾಸ್ತಿಯಾದಂತೆ ಅನಿಸುತ್ತದೆ. ಅವೆಷ್ಟು ಕ್ರಿಸ್ಮಸ್ ಚಿತ್ರಗಳು ಬಂದು ಹೋಗಿವೆ ಎಂದರೆ ಪ್ರೇಕ್ಷಕರಿಗೆ ಇಷ್ಟ ಆಗಬೇಕಾದರೆ ಏನಾದರೂ ಹೊಸತನ್ನು ಹೇಳಲೇಬೇಕು. ಆದರೆ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ನಿರೂಪಣೆಯ ಮಾದರಿ ಅಂದುಕೊಂಡ ಪರಿಣಾಮ ಬೀರದೇ ಚಿತ್ರ ಸವಕಲು ಎನಿಸುವಂತೆ ಮಾಡಿದೆ. ಇಷ್ಟರ ಮಧ್ಯೆಯೂ ಎಡ್ಡಿ ಮರ್ಫಿಯವರ ಆಂಗಿಕ ಮತ್ತು ಅಭಿನಯ ಅಲ್ಲಲ್ಲಿ ಮುದ ನೀಡುತ್ತಾ ಚಿತ್ರದ ಕೊರತೆಯನ್ನು ಸ್ವಲ್ಪ ಮುಚ್ಚುವಲ್ಲಿ ಸಹಾಯ ಮಾಡಿದೆ. ಒಟ್ಟಾರೆ ಹೇಳಬೇಕೆಂದರೆ ‘ಕ್ಯಾಂಡಿ ಕೇನ್ ಲೇನ್’ ಚಿತ್ರದಲ್ಲಿ ವಿಶೇಷವೇನೂ ಇಲ್ಲ. ಚಿಕ್ಕ ಮಕ್ಕಳಿಗೆ ತಕ್ಕಮಟ್ಟಿಗೆ ಮುದ ನೀಡಬಹುದೇನೋ. ಚಿತ್ರ ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here