ಮಾಮೂಲು ಶಾರ್ಕ್ ದಾಳಿಯ ಚಿತ್ರಣಗಳನ್ನು ನೋಡಿ ಬೇಸತ್ತವರಿಗೆ ಇದರಲ್ಲಿನ ಕಂಡೂ ಕಾಣದ ನಿಗೂಢತೆ ಮತ್ತು ಭಯಾನಕತೆಯ ಅನುಭವ ಆಗುತ್ತದೆ. ಆದರೆ ಅತಿಯಾದ ನಿಗೂಢತೆಯನ್ನು ತೋರುವ ಬದಲಿಗೆ ಈ ದಂತಕತೆಯ ಸಣ್ಣ ಎಳೆಯನ್ನು ಮಾತ್ರ ಇಟ್ಟುಕೊಂಡು ಮನುಷ್ಯ ಪ್ರಕೃತಿಯ ಮೇಲೆ ನಡೆಸುವ ಅನಾಚಾರವನ್ನು ತೋರಿಸುವ ಪ್ರಯತ್ನವನ್ನು ಈ ಚಿತ್ರ ಮಾಡಿದೆ. ‘ದ ಬ್ಲಾಕ್ ಡೆಮನ್’ ಖಂಡಿತ ಒಂದು ಉತ್ತಮ ಪ್ರಯತ್ನ. ಈ ಸಿನಿಮಾ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಹಾಲಿವುಡ್‌ನಲ್ಲಿ ಈಗಾಗಲೇ ಶಾರ್ಕ್ ದಾಳಿಯ ವಿಷಯ ಇರುವ ಅನೇಕ ಚಿತ್ರಗಳು ಬಂದು ಹೋಗಿವೆ. ಅದೇ ವಿಷಯವನ್ನು ಇಟ್ಟುಕೊಂಡು ಅದಕ್ಕೊಂದು ಅತಿಮಾನುಷ ಮಜಲನ್ನು ಲೇಪಿಸಿ ಪ್ರಸ್ತುತಪಡಿಸಿರುವ ಚಿತ್ರವೇ ‘ದ ಬ್ಲಾಕ್ ಡೆಮನ್’. ಎಲ್ ಡೆಮೋನಿಯೋ ಅಥವಾ ಬ್ಲಾಕ್ ಡೆಮನ್ ದಂತಕತೆ ಈ ಶಾರ್ಕ್ ದಾಳಿ ಆಧಾರಿತ ಚಿತ್ರಕ್ಕೆ ಒಂದು ನಿಗೂಢತೆಯನ್ನು ಕೊಟ್ಟಿರುವುದಂತೂ ಹೌದು. ನಿರ್ದೇಶಕ ಏಡ್ರಿಯನ್ ಗ್ರಾನ್‌ಬರ್ಗ್‌ ಒಂದು ಜನಪದ ದಂತಕತೆಯ ಆಯಾಮವನ್ನು ಈ ಶಾರ್ಕ್ ದಾಳಿಯ ವಿಷಯಕ್ಕೆ ಅಳವಡಿಸಿರುವುದು ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದು ನೋಡಿದರೆ ಅಂದುಕೊಂಡಷ್ಟೇನೂ ಇಲ್ಲ ಎಂದೇ ಹೇಳಬಹುದು. ಯಾಕೆ ಎನ್ನುವ ವಿವರಗಳಿಗೆ ಇಳಿದರೆ ಕಾಣುವುದಿಷ್ಟು.

ಕಾರ್ಪೋರೇಟ್ ತೈಲ ವಹಿವಾಟು ಮಾಡುವ ಪಾಲ್ ಸ್ಟರ್ಜಿಸ್ ಮತ್ತವನ ಹೆಂಡತಿ ಮಕ್ಕಳು ಬಾಹಾ ಕರಾವಳಿಗೆ ಆಗಮಿಸುತ್ತಾರೆ. ಇದೇ ಸಮಯದಲ್ಲಿ ಪಾಲ್ ತನ್ನ ಪ್ರವಾಸದ ಜೊತೆಜೊತೆಗೆ ತನ್ನ ವಹಿವಾಟಿನ ಕೆಲಸವನ್ನೂ ಸೇರಿಸಿಕೊಂಡು ಬಾಹಾ ಕರಾವಳಿಯನ್ನು ಮತ್ತಷ್ಟು ವಿವರವಾಗಿ ನೋಡಲು ಹೊರಡುತ್ತಾನೆ. ಆಗ ಒಂದು ಜೀರ್ಣಾವಸ್ಥೆಯಲ್ಲಿರುವ ತೈಲ ಘಟಕವೊಂದರಲ್ಲಿ ತೈಲ ಸೋರಿಕೆಯಾಗುತ್ತಿರುತ್ತದೆ. ಆ ಸ್ಥಳ ಶಾರ್ಕ್ ದಾಳಿಗೆ ತುತ್ತಾಗಿದ್ದು ಇಬ್ಬರು ಕಾರ್ಮಿಕರು ಮಾತ್ರ ಉಳಿದುಕೊಂಡಿರುತ್ತಾರೆ. ಪಾಲ್ ಮತ್ತು ತಂಡ ಒಂದು ರೀಯೂನಿಯನ್ ಮಾದರಿಯ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುತ್ತದೆ. ಅದು ಅವರ ಕೇಡುಗಾಲದ ಮುನ್ಸೂಚನೆಯಾಗಿ ಬದಲಾಗಿ ಬ್ಲಾಕ್ ಡೆಮನ್ ತೈಲ ಘಟಕದ ಸುತ್ತಮುತ್ತ ಇರುವ ಎಲ್ಲರನ್ನೂ ನಾಶ ಮಾಡುವತ್ತ ಕಾರ್ಯಗತವಾಗುತ್ತದೆ.

ಮೇಲ್ನೋಟಕ್ಕೆ ಇದು ಬ್ಲಾಕ್ ಡೆಮನ್ ಎಂದೇ ಕರೆಯಲ್ಪಡುವ ಶಾರ್ಕ್ ದಾಳಿಯ ಕುರಿತಾದ ಚಿತ್ರವಾದರೂ ಕಾರ್ಪೋರೆಟ್ ಪ್ರಪಂಚದ ದುರಾಸೆ ಮತ್ತು ಪ್ರಕೃತಿಯ ಮೇಲೆ ನಡೆಯುವ ಅನಾಚಾರವನ್ನು ತಡೆಯುವ ಸಲುವಾಗಿ ಕರೆಸಿಕೊಳ್ಳಲ್ಪಟ್ಟ ಶಕ್ತಿಯಂತೆ ಈ ಬ್ಲಾಕ್ ಡೆಮನ್ ಬಿಂಬಿತವಾಗಿದೆ. ಅಂದರೆ ಕಥೆಯ ಮುಖ್ಯ ಗಮನ ಇಲ್ಲಿ ಶಾರ್ಕ್ ದಾಳಿಯ ಚಿತ್ರಣಕ್ಕಿಂತ ಪಾಲ್ ಮತ್ತವನ ಕಾರ್ಪೋರೆಟ್ ಜಗತ್ತು ಮತ್ತು ತೈಲ ವಹಿವಾಟಿನ ಸುತ್ತ ತಿರುಗುತ್ತದೆ. ಶಾರ್ಕ್ ದಾಳಿಯ ಮಜಲಿಗೆ ಒಂದು ಸಹಜವಾದ ಓಘ ಇಲ್ಲಿ ಸೃಷ್ಟಿಯಾಗುವುದೇ ಇಲ್ಲ. ಬದಲಿಗೆ ಸದಾ ಒಂದು ಭಯ ಹುಟ್ಟಿಸುವ ಅತಿಮಾನುಷ ಶಕ್ತಿಯಂತೆ ಇದು ಬಿಂಬಿತವಾಗಿದೆ.

ಅದರಲ್ಲೂ ಮುಖ್ಯಪಾತ್ರಧಾರಿ ಪಾಲ್ ಪಾತ್ರ ಕಾರಣವಿಲ್ಲದೆ ಉದ್ರಿಕ್ತತೆಗೆ ಒಳಗಾಗುವಂತೆ ಚಿತ್ರಿತವಾಗಿದೆ. ಇಲ್ಲಿ ಪಾಲ್ ಪಾತ್ರ ಕಾರ್ಪೋರೆಟ್ ಪ್ರಪಂಚದ ದುರಾಸೆ ಮತ್ತು ಆತನ ಕುಟುಂಬದೊಂದಿಗಿನ ನಂಟು ಇವೆರಡರ ನಡುವೆ ಸಿಲುಕಿದ ಅಸಹಾಯಕನಂತೆ ಪರಿಣಾಮಕಾರಿಯಾಗಿ ಚಿತ್ರಿತವಾಗಿಲ್ಲ. ಅವನ ಕೋಪ ಮತ್ತು ರೋಷಗಳ ಹಿನ್ನೆಲೆಯನ್ನು ವೀಕ್ಷಕರಿಗೆ ಸರಿಯಾಗಿ ಕಟ್ಟಿಕೊಡಲಾಗಿಲ್ಲವಾದ್ದರಿಂದ ಪಾಲ್‌ನ ಕೊಪೋದ್ವೇಗಗಳು ವೀಕ್ಷಕರಿಗೆ ಅರ್ಥಹೀನ ಎನಿಬಿಡುತ್ತವೆ. ಪಾತ್ರಪೋಷಣೆ ಎಷ್ಟು ಜಾಳು ಜಾಳಾಗಿ ಇದೆಯೆಂದರೆ ಚಿತ್ರದ ಮುಖ್ಯ ಅಂಶವಾಗಬೇಕಿದ್ದ ಬ್ಲಾಕ್ ಡೆಮನ್‌ ಚಿತ್ರಣ ಕೂಡ ವಿಸ್ತ್ರುತವಾಗಿರದೆ ಸುಮ್ಮನೆ ಅಡ್ಡಾದಿಡ್ಡಿಯಾಗಿ ಚಿತ್ರಿತವಾದಂತಿದೆ. ಹಾಗಾಗಿ ಪಾಲ್ ಪಾತ್ರ ಮತ್ತೂ ಉದ್ವೇಗಕ್ಕೆ ಒಳಗಾದಂತೆ ಕಾಣುತ್ತಾ ಹೋಗುತ್ತದೆ. ಇರುವುದರಲ್ಲಿ ಸೆಡಿಲ್ಲೋ ಪಾತ್ರ ಕಥೆಗೆ ಬೇಕಾದ ಒಂದು ಬೆಚ್ಚಗಿನ ಭಾವವನ್ನು ಒದಗಿಸುತ್ತದೆಯಾದರೂ ಒಟ್ಟಾರೆ ಗಟ್ಟಿತನ ಇನ್ನೂ ಇರಬೇಕಿತ್ತು ಎನಿಸುತ್ತದೆ.

ಚಿತ್ರ ಶಾರ್ಕ್ ದಾಳಿಯ ಮತ್ತು ಬ್ಲಾಕ್ ಡೆಮನ್ ಹಾರರ್ ಸುತ್ತಲೂ ಸುತ್ತುವ ಬದಲು ಚಿತ್ರದ ಹಾರರ್ ಮಜಲು ಹಿಂದಕ್ಕೆ ಹೋಗಿ ಮನುಷ್ಯ ಸಂಬಂಧಗಳ ಸುತ್ತಲೇ ತಿರುಗೋದು ಕೂಡ ಸ್ವಲ್ಪ ನಿರಾಸೆಯೇ. ಆದರೆ ಒಂದು ಮೆಚ್ಚಬೇಕಾದ ವಿಷಯ ಎಂದರೆ ಬ್ಲಾಕ್ ಡೆಮನ್ ಅನ್ನು ಚಿತ್ರದಲ್ಲಿ ತೆರೆಯ ಮೇಲೆ ಅತಿಯಾಗಿ ತೋರಿಸದೆ ಇರುವುದು ನಿಗೂಢತೆಯನ್ನು ಕಾದುಕೊಳ್ಳುವುತ್ತ ಸಹಾಯ ಮಾಡಿದೆಯಾದರೂ ವೀಕ್ಷಕರ ಕುತೂಹಲವನ್ನು ತಣಿಸಲು ಸಫಲವಾಗಿಲ್ಲ. ಶಾರ್ಕ್ ದಾಳಿಯ ಮಾಮೂಲು ವಿನ್ಯಾಸವನ್ನೇ ಇಲ್ಲಿ ಅನುಸರಿಸಿರುವುದರಿಂದ ಅಷ್ಟೇನೂ ರೋಚಕತೆ ಮೂಡಿಬಂದಿಲ್ಲ. ಚಿತ್ರದ ಧ್ವನಿ ವಿನ್ಯಾಸ ಕೂಡ ಒಂದು ರೀತಿ ಚರ್ವಿತಚರ್ವಣವಾಗಿದ್ದು ಎಷ್ಟೋ ಕಡೆ ಸಂಭಾಷಣೆಯಲ್ಲಿ ಸ್ಪಷ್ಟತೆ ಇಲ್ಲ ಎನ್ನುವಂತೆ ಭಾಸವಾಗುತ್ತದೆ.

ಶಾರ್ಕ್ ದಾಳಿಯ ಚಿತ್ರಗಳು ಸಾಕಷ್ಟು ಬಂದು ಹೋಗಿವೆಯಾದರೂ ಇಷ್ಟೆಲ್ಲದರ ನಡುವೆ ಚಿತ್ರವನ್ನು ಎತ್ತಿ ಹಿಡಿದಿರುವುದು ಎಂದರೆ ಈ ಚಿತ್ರದಲ್ಲಿ ಪರಿಚಯಿಸಿರುವ ಬಾಹಾ ಕರಾವಳಿಯಲ್ಲಿ ಸುಳಿದಾಡುವ, ಬ್ಲಾಕ್ ಡೆಮನ್ ಹೆಸರಲ್ಲಿ ಗುರುತಿಸಲ್ಪಡುವ ನಿಗೂಢ ಶಾರ್ಕಿನ ದಂತಕತೆ. ಮಾಮೂಲು ಶಾರ್ಕ್ ದಾಳಿಯ ಚಿತ್ರಣಗಳನ್ನು ನೋಡಿ ಬೇಸತ್ತವರಿಗೆ ಇದರಲ್ಲಿನ ಕಂಡೂ ಕಾಣದ ನಿಗೂಢತೆ ಮತ್ತು ಭಯಾನಕತೆಯ ಅನುಭವ ಆಗುತ್ತದೆ. ಆದರೆ ಅತಿಯಾದ ನಿಗೂಢತೆಯನ್ನು ತೋರುವ ಬದಲಿಗೆ ಈ ದಂತಕತೆಯ ಸಣ್ಣ ಎಳೆಯನ್ನು ಮಾತ್ರ ಇಟ್ಟುಕೊಂಡು ಮನುಷ್ಯ ಪ್ರಕೃತಿಯ ಮೇಲೆ ನಡೆಸುವ ಅನಾಚಾರವನ್ನು ತೋರಿಸುವ ಪ್ರಯತ್ನವನ್ನು ಈ ಚಿತ್ರ ಮಾಡಿದೆ. ಚಿತ್ರದ ಆಶಯ ಚೆನ್ನಾಗಿದ್ದರೂ ಚಿತ್ರಕಥೆ ಮತ್ತು ನಿರೂಪಣೆಯಲ್ಲಿ ಮತ್ತಷ್ಟು ಗಟ್ಟಿತನ ಇದ್ದಿದ್ದರೆ ಚಿತ್ರ ಮತ್ತೂ ಪರಿಣಾಮಕಾರಿಯಾಗಿ ಇರುತ್ತಿತ್ತು ಎನಿಸಿದ್ದು ಹೌದು. ‘ದ ಬ್ಲಾಕ್ ಡೆಮನ್’ ಖಂಡಿತ ಒಂದು ಉತ್ತಮ ಪ್ರಯತ್ನ.

LEAVE A REPLY

Connect with

Please enter your comment!
Please enter your name here