ಗುಳಿಕೆನ್ನೆಯ ಯುವಕ ವಿಜಯ್‌ ಸೂರ್ಯ ನಟನಾಗಬೇಕೆಂದು ಮುಂಬಯಿ ಆಕ್ಟಿಂಗ್‌ ಸ್ಕೂಲ್‌ನಲ್ಲಿ ಕಲಿತುಬಂದವರು. ‘ಕ್ರೇಜಿಲೋಕ’ ಸಿನಿಮಾ ಮೂಲಕ ಕ್ಯಾಮೆರಾ ಎದುರಿಸಿದರೂ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟದ್ದು ‘ಅಗ್ನಿಸಾಕ್ಷಿ’ ಸೀರಿಯಲ್‌. ಅಲ್ಲಿಂದ ಮುಂದೆ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುತ್ತಾ ಬಂದ ಅವರು ರಿಯಾಲಿಟಿ ಶೋ ನಿರೂಪಕರಾಗಿಯೂ ಯಶಸ್ಸು ಕಂಡರು. ಮೆಲು ಮಾತು, ಸುಂದರ ನಗು, ಸೌಜನ್ಯದ ನಡವಳಿಕೆಯ ವಿಜಯ್‌ ಸೂರ್ಯ ಅವರೆಂದರೆ ಹೆಣ್ಣುಮಕ್ಕಳಿಗೆ ಬಲು ಇಷ್ಟ.

ಸೂಪರ್ ಸ್ಟಾರ್ ಸಿಂಗರ್ ಸಂಗಮ್ ಸಾತನೂರು ನೋಡಲಿಕ್ಕೆ ಅಂತಾನೇ ಜನ ಮುಗಿಬೀಳ್ತಾರೆ. ಹಾಡು ಕೇಳೋಕೆ ಊರೋರೆಲ್ಲಾ ಒಂದಾಗ್ತಾರೆ. ಆ ಮಟ್ಟಿಗೆ ಫೇಮಸ್. ಆದರೆ ಈ ಹಾಡುಗಾರನಲ್ಲೊಬ್ಬ ಅಪ್ಪ ಇದಾನಲ್ಲ. ಅವನೊಬ್ಬ ಮಮತೆಯ ಒಡಲು. ಮಕ್ಕಳ ಮೇಲಿನ ಕಾಳಜಿ, ಪ್ರೀತಿಯ ಮಾತು, ಒಡನಾಟ ನೋಡುವಾಗಲೆಲ್ಲ ಎಲ್ಲರ ಮನೆಯಲ್ಲೂ ಇವನಂಥ ಅಪ್ಪ ಇರಬೇಕು ಎನ್ನುವ ಮಟ್ಟಿಗೆ ಕಿರುತೆರೆ ಪ್ರೇಕ್ಷಕರಿಗೆ ಲವರ್‌ ಬಾಯ್ ಇಮೇಜ್‌ನಿಂದ ಫ್ಯಾಮಿಲಿಮ್ಯಾನ್‌ ರೂಪದಲ್ಲಿ ಮತ್ತೊಮ್ಮೆ ಹತ್ತಿರವಾದವರು ವಿಜಯ್‌ಸೂರ್ಯ. ವಾಹಿನಿಯೊಂದರಲ್ಲಿ ಪ್ರಸಾರವಾಗುವ ‘ನಮ್ಮ ಲಚ್ಚಿ’ ಧಾರಾವಾಹಿ ಮೂಲಕ ಪುನಃ ಕಿರುತೆರೆಯಲ್ಲಿ ಸಂಚಲನ ಮೂಡಿಸಿದ್ದಾರೆ. ಇದೊಂದು ಅಪ್ಪ ಮಗಳ ಅನುಬಂಧದ ಮ್ಯೂಸಿಕಲ್ ಜರ್ನಿಯ ಕಥೆ. ಕೆಲವು ವರ್ಷಗಳ ನಂತರ ಪುನಃ ಕಿರುತೆರೆಯಲ್ಲಿ ಮಿಂಚುತ್ತಿರುವ ಅವರು ಇದೀಗ ತೆಲುಗು ಧಾರಾವಾಹಿಗೂ ಎಂಟ್ರಿ ಕೊಟ್ಟಿದ್ದಾರೆ.

‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾದ ವಿಜಯ್‌ ಸೂರ್ಯ ಲವರ್ ಬಾಯ್ ಆಗಿಯೇ ಖ್ಯಾತ. ಆದರೆ ‘ನಮ್ಮ ಲಚ್ಚಿ’ ಮೂಲಕ ಒಬ್ಬ ಯುವ ತಂದೆಯಾಗಿ ಲುಕ್ ಬದಲಿಸಿಕೊಂಡಿದ್ದಾರೆ. ನಿಜ ಜೀವನದಲ್ಲೂ ಇವರು ಮೂರು ವರ್ಷದ ಮಗುವಿನ ತಂದೆ. ಆಗಾಗ ಇನ್‌ಸ್ಟಾಗ್ರಾಂನಲ್ಲಿ ಮಗ ಸೋಹನ್ ಜತೆಗೆ ಕಳೆಯುವ ಮಧುರ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಪೋಷಕರಾದ ಮೇಲೆ ಬದುಕೇ ಬದಲಾಗುತ್ತದೆ ಎನ್ನುವ ಇವರಿಗೆ `ನಮ್ಮ ಲಚ್ಚಿ’ಯ ಪಾತ್ರದೊಳಗೆ ಪ್ರವೇಶಕ್ಕೂ ನಿಜ ಜೀವನ ಸಹಕಾರಿ ಆಗಿದೆಯಂತೆ.

ಆಗಾಗ ಬರುವ ವಿರಾಮ
ಓದಿನಿಂದ ಹಿಡಿದು ಅವರು ನಿರ್ವಹಿಸುವ ಪ್ರಾಜೆಕ್ಟ್‌ಗಳವರೆಗೂ ಒಟ್ಟಾರೆ ಅವರ ಬದುಕಿನಲ್ಲಿ ಆಗಾಗ ವಿರಾಮ ಎದುರಾಗುತ್ತದೆಯಂತೆ. ಆ ಗ್ಯಾಪ್‌ನಲ್ಲಿ ಒಂದೊಳ್ಳೆ ಸಿನಿಮಾ ಮಾಡುತ್ತಾರೆ. ಕುಟುಂಬಕ್ಕೆ ಸಮಯ ನೀಡುತ್ತಾರೆ ಅಥವಾ ಇನ್ಯಾವುದೋ ಉತ್ತಮ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾದರೂ ಆ ಧಾರಾವಾಹಿಯಿಂದ ಅರ್ಧದಿಂದಲೇ ಹೊರಬಂದರು. ಕೆಲವು ಸಮಯದ ಬ್ರೇಕ್ ನಂತರ ‘ಪ್ರೇಮಲೋಕ’ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಮತ್ತೆ ವಿಜಯ್‌ಸೂರ್ಯ ಟಿವಿಯಲ್ಲಿ ಕಾಣಿಸುತ್ತಲೇ ಇಲ್ಲ ಎಂದಾಗ ಇದೀಗ ಪುನಃ ‘ನಮ್ಮ ಲಚ್ಚಿ’ ಮೂಲಕ ನಿತ್ಯವೂ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ವಿಜಯ್‌ಸೂರ್ಯ ಅವರ ಕಿರುತೆರೆ ಜರ್ನಿ ಆಗಾಗ ಬ್ರೇಕ್‌ಗಳ ನಡುವೆ ಸಾಗುತ್ತದೆಯಂತೆ. ಆದರೂ ‘ಅಗ್ನಿಸಾಕ್ಷಿ’ ಕೊಟ್ಟ ಯಶಸ್ಸನ್ನು ಮಾತ್ರ ಅವರು ಜೀವನಪೂರ್ತಿ ಮರೆಯುವುದಿಲ್ಲವಂತೆ. ‘ಸ್ಟಾರ್ ಕಾಸ್ಟಿಂಗ್, ಕಥೆಯಿಂದ ಹಿಡಿದು ಟಿಆರ್‌ಪಿಯವರೆಗೂ ಅಗ್ನಿಸಾಕ್ಷಿ ಸೃಷ್ಟಿಸಿದ ಜಾದೂ ಮರೆಯಲು ಸಾಧ್ಯವೇ ಇಲ್ಲ. ಅದೊಂದು ಅದ್ಭುತ ಪ್ರಾಜೆಕ್ಟ್‌. ಮತ್ತೆ ಅಂಥದ್ದೊಂದು ಇತಿಹಾಸ ಸೃಷ್ಟಿಯಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ’ ಎನ್ನುತ್ತಾರವರು. ಸುದೀರ್ಘ ಕಾಲದ ನಂತರ ಕಿರುತೆರೆಗೆ ಪುನಃ ಎಂಟ್ರಿ ಕೊಟ್ಟಿರುವ ಬಗ್ಗೆ ಅವರೇನು ಹೇಳುತ್ತಾರೆ? ‘ನನಗೆ ನಾನು ಮಾಡುವ ಕೆಲಸವಷ್ಟೆ ಮುಖ್ಯ. ಅದು ಕಿರುತೆರೆ ಅಥವಾ ಹಿರಿತೆರೆ ಎಂಬ ಭೇದವಿಲ್ಲ. ಆದರೆ ಆಯ್ಕೆ ವಿಷಯ ಬಂದಾಗ ಯಾವುದಕ್ಕೆ ಹೆಚ್ಚು ಸಮಯ ವಿನಿಯೋಗಿಸಬೇಕು ಎಂಬುದನ್ನು ನೋಡುತ್ತೇನೆ. ಸಿನಿಮಾ ಗ್ರಾಮರ್ ಬೇರೆ. ಟೀವಿ ಗ್ರಾಮರ್ ಬೇರೆ. ಈ ನಿಟ್ಟಿನಲ್ಲಿ ನಮಗಾಗಿ ಒಂದಷ್ಟು ಸಮಯ ಮೀಸಲಿಡಬೇಕು. ಹೀಗಾಗಿ ಅಲ್ಲೊಂದಿಷ್ಟು ಸಮಯ, ಇಲ್ಲೊಂದಿಷ್ಟು ಸಮಯ ಮೀಸಲು’ ಎನ್ನುತ್ತಾರೆ.

ಕಂಟೆಂಟೇ ಸ್ಟ್ರಾಂಗ್‌!
ಧಾರಾವಾಹಿಗಳಲ್ಲಿ ಆಗಾಗ ಕಾಣಿಸಿಕೊಂಡರೂ ಸಿನಿಮಾ ಇವರ ಬದುಕಿನ ಬಹು ದೊಡ್ಡ ಕನಸು. ಈಗಾಗಲೇ ಹಲವು ಸಿನಿಮಾಗಳ ಮೂಲಕ ಗುರುತಿಸಿಕೊಂಡರೂ ‘ಇನ್ನಷ್ಟು ಪ್ರಯತ್ನ ಮಾಡಬೇಕಿದೆ’ ಅನ್ನುವ ಅವರು ಕಥಾವಸ್ತುವಿಗೆ ಪ್ರಾಮುಖ್ಯತೆ ಇರುವ ಸಿನಿಮಾಗಳ ಮೂಲಕವೇ ಗುರುತಿಸಿಕೊಳ್ಳಲು ಬಯಸುತ್ತಾರಂತೆ. ಅಷ್ಟೇ ಅಲ್ಲ ಅವರ ಸಿನಿಮಾ ಅಂತಲೇ ಜನ ಟಾಕೀಸ್‌ಗೆ ಬರಬೇಕು ಆ ಮಟ್ಟಕ್ಕೆ ತಾವು ಉತ್ತಮ ನಟನಾಗಬೇಕು. ಒಳ್ಳೆಯ ಕಥೆ ಇರುವ ಸಿನಿಮಾದಲ್ಲಿ ನಟಿಸಬೇಕು ಅನ್ನುವುದು ಅವರ ಆಸೆ.

‘ಟಿವಿ ಕೊಡುವಷ್ಟು ಖ್ಯಾತಿ ಸಿನಿಮಾ ಕೊಡಲ್ಲ. ಆದರೆ ‘ಇಷ್ಟಕಾಮ್ಯ’ ನನ್ನ ಪ್ರಮುಖ ಸಿನಿಮಾ. ಟಿವಿ ವೀಕ್ಷಕರು ಆಗಲೇ ನನ್ನನ್ನು ಗುರುತಿಸಿದ್ದರು. ಆದರೆ ಆ ಸಿನಿಮಾವನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರ ಸಿನಿಮಾ ಅಂತ ಜನ ನೋಡಿದ್ದರು. ಮುಂದೊಂದು ದಿನ ನನಗಾಗಿ ಜನ ಚಿತ್ರಮಂದಿರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ನಾನು ಸಿನಿ ಪ್ರೇಕ್ಷಕರ ಮನದಲ್ಲಿ ಅಚ್ಚುಳಿಯುವ ನಿಟ್ಟಿನಲ್ಲಿ ಶ್ರಮಿಸಬೇಕು. ಉತ್ತಮ ಚಿತ್ರಕಥೆ ಹಾಗೂ ಬ್ರ್ಯಾಂಡ್‌ ಎಂಬುದು ಸಿನಿಮಾದಲ್ಲಿ ಮುಖ್ಯ. ಇವೆರಡರ ಮೂಲಕ ನಾನು ಗುರುತಿಸಿಕೊಳ್ಳಬೇಕು’ ಎನ್ನುತ್ತಾರೆ.

‘ಸಿನಿಮಾ ಅನ್ನುವುದು ಅಂದು ಅನುಭವ. ಅಂತಹ ಅನುಭವ ನೀಡಲು ಸಾಕಷ್ಟು ಶ್ರಮ ಬೇಕು. ಇತ್ತೀಚೆಗೆ ಕಂಟೆಂಟ್ ಇರುವ ಸಿನಿಮಾಗಳು ಓಟಿಟಿಯಲ್ಲಿ ಗಮನ ಸೆಳೆಯುತ್ತಿವೆ’ ಎನ್ನುತ್ತಾರೆ. ‘ನಮ್ಮನ್ನು ಸ್ಟಾರ್ ಅಥವಾ ನಟನಾಗಿ ನೋಡುವ ಹಾಗೂ ಮಾಡುವ ಎರಡೂ ಆಯ್ಕೆಗಳು ಪ್ರೇಕ್ಷಕನದ್ದೇ. ಪ್ರೇಕ್ಷಕರನ್ನು ತಲುಪಲು ಇಂದು ಸಾಕಷ್ಟು ವೇದಿಕೆಗಳಿವೆ. ಕೇವಲ ಸಿನಿಮಾ, ಧಾರಾವಾಹಿಗಳು ಅಂತಲ್ಲ. ರೀಲ್ಸ್ ಮಾಡಿದರೂ ಸಾಕು’ ಎನ್ನುವ ಅವರು ‘ನಮಗೇನು ಬೇಕು, ನಮ್ಮ ಗುರಿ ಏನು ಎಂಬುದರ ಸ್ಪಷ್ಟತೆಯೊಂದಿಗೆ ಮನರಂಜನಾ ಕ್ಷೇತ್ರದಲ್ಲಿ ಹೆಜ್ಜೆ ಇಡಬೇಕು. ಈ ಕ್ಷೇತ್ರದಲ್ಲಿ ಏರುಪೇರುಗಳು ಜಾಸ್ತಿ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು’ ಎನ್ನುತ್ತಾರೆ. ನಟನೆಯಷ್ಟೇ ಅಲ್ಲ ನಿರ್ದೇಶನದಲ್ಲೂ ತೊಡಗಿಕೊಳ್ಳಬೇಕೆಂಬ ಆಸೆ ಅವರದ್ದು. ಪಕ್ಕಾ ಫ್ಯಾಮಿಲಿ ಎಂಟರ್‌ಟೇನರ್ ಸಿನಿಮಾ ನಿರ್ದೇಶನ ಅವರ ಕನಸು.

ವಿಭಿನ್ನ ಪಾತ್ರಗಳಲ್ಲಿ ನಟಿಸುವ ಖುಷಿ
ವಿಭಿನ್ನ ಸಿನಿಮಾಗಳಲ್ಲಿ ಅಭಿನಯಿಸಿದ ಹೆಗ್ಗಳಿಗೆ ಇವರದ್ದು. ಸದ್ಯ ಸಿನಿಮಾವೊಂದರಲ್ಲಿ ಪೋಲಿಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ‘ವೀರಪುತ್ರ’ ಬಹು ನಿರೀಕ್ಷಿತ ಸಿನಿಮಾ. ಇತ್ತೀಚೆಗೆ ‘ಗಾಳಿಪಟ-2’ ಚಿತ್ರದ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡರೂ ಗಮನ ಸೆಳೆಯುವ ಪಾತ್ರವಾಗಿತ್ತು. ವಿಚಿತ್ರ ಅಂದರೆ ಇವರು ಓದುವಾಗ ‘ಗಾಳಿಪಟ’ ಸಿನಿಮಾವನ್ನು ವಿಪರೀತ ಇಷ್ಟಪಟ್ಟು ನೋಡಿದವರು. ಆದರೆ ಒಂದಷ್ಟು ವರ್ಷಗಳ ನಂತರ ‘ಗಾಳಿಪಟ-2’ ಚಿತ್ರತಂಡದಿಂದ ಕರೆ ಬಂದಾಗ ಅದಕ್ಕಿಂತ ಅದೃಷ್ಟ ಬೇರೆ ಇಲ್ಲ ಅನಿಸಿತ್ತಂತೆ. ‘ಯೋಗರಾಜ್ ಭಟ್ ಅವರು ಸಣ್ಣ ಪಾತ್ರ ಮಾಡಬಹುದಾ ಅಂದಾಗ ಹಿಂದೆಮುಂದೆ ನೋಡದೆ ಒಪ್ಪಿಕೊಂಡೆ. ಅನಂತ್‌ನಾಗ್ ಅವರ ಮಗನಾಗಿ ಅಭಿನಯಿಸಿದ್ದು ಜೀವನದಲ್ಲಿ ಮರೆಯಲಾಗದ ಅನುಭವ. ಪಾತ್ರಗಳನ್ನು ಮನಸುಪೂರ್ತಿಯಾಗಿ ಇಳಿಸಿಕೊಂಡು ಅದಕ್ಕೆ ಜೀವ ತುಂಬಿ ಅಭಿನಯಿಸುವ ಅನಂತ್‌ನಾಗ್ ಅವರು ಸದಾ ಅನುಕರಣೀಯ. ರವಿಚಂದ್ರನ್, ಅನಂತ್‌ನಾಗ್, ಯೋಗರಾಜ್‌ಭಟ್, ನಾಗತಿಹಳ್ಳಿ ಚಂದ್ರಶೇಖರ್ ಜತೆಗೆಲ್ಲ ಕೆಲಸ ಮಾಡಿದ್ದು ನನ್ನ ಅದೃಷ್ಟ’ ಎನ್ನುತ್ತಾರೆ. ‘ಕದ್ದುಮುಚ್ಚಿ’, ‘ಇಷ್ಟಕಾಮ್ಯ’, ‘ಸ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಇವರ ಮೊದಲ ಸಿನಿಮಾ ‘ಕ್ರೇಜಿಲೋಕ’.

ಜನ್ಮನಾಮ ಕುಮಾರ್‌!
ವಿಜಯ್‌ಸೂರ್ಯ ಅಂದರೆ ಕಿರುತೆರೆಯಲ್ಲೂ, ಹಿರಿತೆರೆಯಲ್ಲೂ ಇವರೇ ಅನ್ನುವಷ್ಟು ಪರಿಚಿತ ಇವರು. ಗುಳಿಗೆನ್ನೆ, ನಗು ಮುಖ, ಸಾವಧಾನದ ಮಾತಿನ ಮೂಲಕವೇ ಇಡೀ ವ್ಯಕ್ತಿತ್ವವೊಂದು ಕಣ್ಣೆದುರು ನಿಲ್ಲುತ್ತದೆ. ಆದರೆ ನಿಮಗೆ ಗೊತ್ತಾ? ಇಂಥದ್ದೊಂದು ಹೆಸರು ಹುಟ್ಟಿಂದ ಬಂದಿದ್ದಲ್ಲ. ವಿಜಯ್‌ಸೂರ್ಯ ಅವರ ಮೊದಲ ಹೆಸರು ಕುಮಾರ್. ಹತ್ತನೇ ತರಗತಿ ನಂತರ ಇವರ ಹೆಸರು ಶಾಸ್ಟ್ರೋಕ್ತವಾಗಿ ಬದಲಾಯ್ತಂತೆ. ಈ ಬಗ್ಗೆ ಅವರೇ ಹೇಳುವಂತೆ ವಿಜಯ್ ಹಾಗೂ ಸೂರ್ಯ ಇವರೆಡು ಹೆಸರು ಕಾಮನ್. ಆದರೆ ಎರಡೂ ಜತೆಗಿರುವುದೇ ಅಪರೂಪ.

ನೃತ್ಯದೊಂದಿಗೆ ಶುರುವಾಯ್ತು ನಟನೆ ಜರ್ನಿ
ವಿಜಯ್‌ಸೂರ್ಯ ಬಾಲ್ಯದಲ್ಲಿ ವಿಪರೀತ ನಾಚಿಕೆ ಸ್ವಭಾವದ ಹುಡುಗ. ಯಾರ ಜತೆಗೂ ಬೆರೆಯುತ್ತಿರಲಿಲ್ಲ. ಆದರೆ ನೃತ್ಯ ಅಂದರೆ ಅವರಿಗೆ ಜೀವ. ನಾಚಿಕೆ ಸ್ವಭಾವದ ಹುಡುಗ ಡಾನ್ಸ್ ಅಂದಾಗ ಮಾತ್ರ ಬದಲಾಗೇ ಬಿಡುತ್ತಿದ್ದ. ವರ್ಷಕ್ಕೊಮ್ಮೆ ಸ್ಕೂಲ್ ಡೇಗಾಗಿ ನೃತ್ಯ ಮಾಡುವಾಗ ಗ್ರೂಪ್ ಡಾನ್ಸ್‌ನಲ್ಲಿ ಮುಂದೆ ಇರಲು ಬಯಸುತ್ತಿದ್ದ ಹುಡುಗ ಮುಂದೊಂದು ದಿನ ನಟನೆಯತ್ತ ಅದೇ ನೃತ್ಯ ಕರೆದುಕೊಂಡು ಹೋಗುತ್ತದೆ ಎಂದು ಅವರು ಅಂದುಕೊಂಡಿರಲಿಲ್ಲವಂತೆ.

ಪಿಯುಸಿ ನಂತರ ಮುಂದೇನು ಅಂತ ಯೋಚಿಸುವಾಗ ನೃತ್ಯದ ಸೆಳೆತ ಮೊದಲಿಂದಲೇ ಇತ್ತು. ‘ಡಾನ್ಸರ್ ಆಗಲಾ’ ಅಂತ ಪೋಷಕರನ್ನು ಕೇಳಿದ್ರಂತೆ. ಒಂದಷ್ಟು ಮಾತುಕತೆ ನಂತರ ಫಿಲ್ಮ್ ಸ್ಕೂಲ್ ಅಂತ ಬಂದಾಗ ಮುಂಬಯಿಗೆ ಹೊರಟರು. ಪೋಷಕರು ಲೋನ್ ಮಾಡಿದ್ರು. ಮುಂಬಯಿಯಲ್ಲಿನ ಕಲಿಕೆಗೆ ಲೋನ್ ಮಾಡಿದ್ರಲ್ಲಾ ಎನ್ನುವುದೇ ಅವರಿಗೆ ಬಹು ದೊಡ್ಡ ಪ್ರೋತ್ಸಾಹದ ತರಹ ಕಾಣಿಸಿತು. ಹೀಗಾಗಿ ಕಲಿತದ್ದನ್ನು ಪ್ರಾಯೋಗಿಕವಾಗಿ ಮಾಡುವ ಹಠ ಕೂಡ ನಟನೆಯತ್ತ ಹೆಚ್ಚು ಆಸಕ್ತಿ ತೋರಲು ಕಾರಣವಾಯ್ತು. ಜೀವನವನ್ನು ಗಂಭೀರವಾಗಿ ನೋಡಲು ಶುರು ಮಾಡಿದರು, ಅಲ್ಲಿ ಏನು ಕಲಿತರೋ ಅದೇ ಈಗಿರುವ ವಿಜಯ್‌ಸೂರ್ಯ.

ಮೊದಲ ಅವಕಾಶ ‘ಕ್ರೇಜಿಲೋಕ’
ಆಗಷ್ಟೇ ಫಿಲ್ಮ್ ಸ್ಕೂಲ್‌ನಿಂದ ಹೊರ ಬಂದಾಗ ಸಿಕ್ಕ ಅವಕಾಶ ‘ಕ್ರೇಜಿಲೋಕ’. ಮೊದಲ ಸೀನ್‌ಗೆ ಮೇಕಪ್ ಎಲ್ಲಾ ಆಚೆ ಬರುವಷ್ಟು ಬೆವತು ಹೋಗಿದ್ದರಂತೆ. ಎಲ್ಲಾ ಸೀನಿಯರ್ ಕಲಾವಿದರಿದ್ದರು. ನಟಿ ಹರ್ಷಿಕಾ ಪೂಣಚ್ಚ ಕೂಡ ಆಗಲೇ ಸಾಕಷ್ಟು ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದರು. ‘ಕ್ಯಾಮೆರಾ ಎದುರು ನಿಂತಾಗ ಪಾತ್ರವಷ್ಟೆ ಆಗಬೇಕು. ಯಾರೂ ನಮ್ಮನ್ನು ಅಳೆಯುವುದಿಲ್ಲ. ನಾವು ನಮ್ಮಷ್ಟಕ್ಕೆ ಯಾರೇನು ಅನ್ಕೊಳ್ತಾರೋ ಎಂದುಕೊಳ್ಳುತ್ತೇವೆ. ಅದು ತಪ್ಪು ಎಂಬ ಪಾಠವನ್ನು ಮೊದಲ ಸಿನಿಮಾದಲ್ಲಿ ಕಲಿತೆ’ ಎನ್ನುತ್ತಾರೆ. ‘ಕ್ರೇಜಿಲೋಕ ಸಿನಿಮಾ ನಂತರ ಧಾರಾವಾಹಿಗಳಿಂದ ಸಾಕಷ್ಟು ಆಫರ್‌ಗಳು ಬರುತ್ತಿದ್ದವು. ಆದರೆ ಸಿನಿಮಾ ಮಾಡಬೇಕು ಅಂತ ಹುಚ್ಚಿತ್ತು. ಆದರೆ ಸುಮ್ಮನೆ ಕೂರುವುದು ಸರಿ ಅನಿಸಲಿಲ್ಲ. ಮನೆಯಲ್ಲಿ ಕೂಡ ಯಾವುದನ್ನೂ ಮಾಡಲ್ಲ ಅನ್ನಬಾರದು ಎನ್ನುತ್ತಿದ್ದರು. ಆಗ ಹೋಗುವಾಗ ಭಗವಂತನನ್ನು ಕಣ್ಣಲ್ಲಿ ನೀರು ತುಂಬಿಕೊಂಡು ಬೇಡಿಕೊಂಡಿದ್ದೆ. ಆದರೆ ಒಳಿತೇ ಆಯ್ತು. ‘ಅಗ್ನಿಸಾಕ್ಷಿ’ ಕೊಟ್ಟ ಹೆಸರು, ಅವಕಾಶಕ್ಕೆ ಸದಾ ಋಣಿ’ ಎನ್ನುತ್ತಾರೆ.

ಅವರ ಬಗ್ಗೆ ಅವರಿಗೆ ಬೇಜಾರ್ ಆಗುವುದು ಯಾವಾಗ ಅಂದರೆ ಯಾರಾದರೂ ಏನಾದರೂ ಕೇಳಿದರೆ ಇಲ್ಲ ಎನ್ನಲಿಕ್ಕಾಗಲ್ಲ.’ಕೆಲವು ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡು ಬಿಡುತ್ತೇನೆ. ಆದರೆ ನಿಜವಾಗಲೂ ಸಮಯವಿದ್ದರೆ ಮಾತ್ರ ಒಪ್ಪಿಕೊಳ್ಳಬೇಕು. ನಾನೊಮ್ಮೆ ಡಾನ್ಸಿಂಗ್ ರಿಯಾಲಿಟಿ ಶೋ ಒಪ್ಪಿಕೊಂಡು ಇತರೇ ಪ್ರಾಜೆಕ್ಟ್‌ಗಳ ನಡುವೆ ಅದಕ್ಕೆ ನ್ಯಾಯ ಸಲ್ಲಿಸಲೇ ಆಗಲಿಲ್ಲ. ಅರ್ಧಕ್ಕೆ ಹೊರ ಬಂದೆ. ಹೀಗಾಗಿ ನಮ್ಮ ಬಳಿ ಕೆಲಸ ಮಾಡಲು ಆಗುತ್ತದೆ ಅಂದರೆ ಮಾತ್ರ ಮಾಡಬೇಕು ಎಂಬುದನ್ನು ಅರಿತೆ’ ಎನ್ನುತ್ತಾರೆ. ಶೋವೊಂದನ್ನು ಹೋಸ್ಟ್ ಕೂಡ ಮಾಡಿದ್ದರು. ಆದರೆ ನಿರೂಪಣೆ ಮಾಡುವುದು ಕಷ್ಟ ಎನ್ನುತ್ತಾರೆ. ನಿಜವಾಗಲೂ ನಿರೂಪಕರು ಯಾರೆಲ್ಲ ಇದ್ದಾರೋ ಅವರೆಲ್ಲ ಗ್ರೇಟ್ ಎನ್ನುತ್ತಾರೆ.

ದುಂದುವೆಚ್ಚ ಬೇಡ
ಕಲಾವಿದರಿಗೆ ವಿಜಯ್‌ಸೂರ್ಯ ಕೊಟ್ಟ ಟಿಪ್ಸ್ ಕಲಾವಿದರ ಬದುಕಿನಲ್ಲಿ ಸ್ಥಿರತೆ ಇಲ್ಲ ಎನ್ನುವ ಅವರು ದುಡಿಮೆಯನ್ನೆಲ್ಲ ಅನಗತ್ಯ ಹಾಳು ಮಾಡಬೇಡಿ, ಕೂಡಿಡಿ. ಆಪತ್ತಿಗೆ ಬಳಸಿ ಎಂದು ಸಲಹೆ ನೀಡುತ್ತಾರೆ. ಮನೋರಂಜನಾ ಕ್ಷೇತ್ರ ಮಾಯಾ ಜಿಂಕೆ ಇದ್ದ ಹಾಗೆ. ಇದ್ದಕ್ಕಿದ್ದ ಹಾಗೆ ಬೆಳೆಸಿ ಬಿಡುತ್ತದೆ ಒಮ್ಮೊಮ್ಮೆ. ಆದರೆ ಬೆಳವಣಿಗೆಯ ಮತ್ತೇರಿಸಿಕೊಳ್ಳದಿರುವುದೇ ಉತ್ತಮ. ಅವರು ಯಾವುದೇ ವಿಭಾಗವಿರಲಿ ಪ್ರಶಸ್ತಿ ಅಥವಾ ಗುರುತಿಸಿಕೊಳ್ಳುವಿಕೆ ಎಂಬುದು ಡ್ರಗ್ಸ್‌ ತರಹ. ಮತ್ತೆ ಮತ್ತೆ ಬಯಸುತ್ತದೆ. ಆದರೆ ಹೆಸರು ಬಂದಾಕ್ಷಣ ಮೇಲಕ್ಕೇರಿದೆ ಅಂದುಕೊಳ್ಳಬೇಡಿ. ದುಂದುವೆಚ್ಚದ ಜೀವನಶೈಲಿ ಬೇಡ. ಹಾಸಿಗೆ ಇದ್ದಷ್ಟೆ ಕಾಲು ಚಾಚಿ. ನಿಧಾನವಾಗಿ ಬೆಳೆಯುವುದೇ ಬೆಸ್ಟ್. ಬೆಳೆಯುತ್ತಿದ್ದರೂ ಅದನ್ನು ನಿಮ್ಮ ವರ್ತನೆ ಮೂಲಕ ಗುರುತಿಸಿಕೊಳ್ಳಬೇಡಿ. ಸರಳವಾಗಿ ಬದುಕಿ, ಶೋಕಿ ಮಾಡಿದರೂ ಮುಂದೆ ಒಂದಿಷ್ಟು ವರ್ಷ ನೀವು ಕೂಡಿಟ್ಟ ಹಣ ಕರಗುವುದಿಲ್ಲ ಅಂದರೆ ಮುಂದೆ ಹೋಗಿ. ಮೊಲ ಮತ್ತು ಆಮೆ ಕಥೆ ಬದುಕಿನ ಪಾಠವಾಗಲಿ ಎಂಬುದು ಅವರ ಕಾಳಜಿಯ ಮಾತು.

LEAVE A REPLY

Connect with

Please enter your comment!
Please enter your name here