ಕ್ರೀಡಾ ಉತ್ಸಾಹಿ ಮಲೆನಾಡಿನ ಹುಡುಗನೊಬ್ಬ ಕಷ್ಟಪಟ್ಟು ನ್ಯಾಷನಲ್ ಚಾಂಪಿಯನ್ ಆಗುವುದೇ ಚಿತ್ರದ ಕಥಾಹಂದರ. ಸಚಿನ್ ಧನಪಾಲ್ ಮತ್ತು ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಅದು ನಿಜಕ್ಕೂ ಸಿನಿಮಾ ಸಮಾರಂಭ ಅನಿಸುತ್ತಿರಲಿಲ್ಲ. ಅಲ್ಲಿ ಸಿನಿಮಾ ಮಂದಿಗಿಂತ ಹೆಚ್ಚಿದವರು ಸೇನೆಯಲ್ಲಿ ಕಾರ್ಯನಿರ್ವಹಿಸುವ ಸೇನಾನಿಗಳು. ಸೇನಾ ವಿಭಾಗದ ಉತ್ಕೃಷ್ಟ ಪ್ರಶಸ್ತಿಗಳಾದ ಪರಮವೀರ ಚಕ್ರ ಪಡೆದ ಯೋಗೇಂದ್ರ ಸಿಂಗ್ ಯಾದವ್ ಹಾಗೂ ಮಹಾವೀರ ಚಕ್ರ ಪಡೆದಿರುವ ಪಿ.ಎಸ್.ಗಣಪತಿ ಅವರು ಆ ಸಮಾರಂಭದ ಮುಖ್ಯ ಅತಿಥಿಗಳು. ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದು, ಶಿವಾನಂದ ಎಸ್. ನೀಲಣ್ಣನವರ ನಿರ್ಮಾಣ, ಶಾಹುರಾಜ್ ಶಿಂಧೆ ನಿರ್ದೇಶನದ ‘ಚಾಂಪಿಯನ್’ ಸಿನಿಮಾ ಆಡಿಯೋ ಬಿಡುಗಡೆ ಸಮಾರಂಭ. ಸಚಿನ್ ಧನಪಾಲ್ ಹಾಗೂ ಅದಿತಿ ಪ್ರಭುದೇವ ನಟಿಸಿರುವ, ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯ ಹಾಡುಗಳು ಬಿಡುಗಡೆಯಾದವು.
ಚಿತ್ರದ ನಿರ್ಮಾಪಕ ಶಿವಾನಂದ ಎಸ್. ನೀಲಣ್ಣನವರ ಸಿನಿಮಾ ಕುರಿತು ಮಾತನಾಡಿ, “ಕೊರೋನ ಪೂರ್ವದಲ್ಲಿ ನಮ್ಮ ಚಿತ್ರ ಆರಂಭವಾಯಿತು. ಮಾತಿನ ಭಾಗದ ಚಿತ್ರೀಕರಣ ಮುಗಿಯಿತು. ಐದು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿತ್ತು. ಕೊರೋನಾದಿಂದಾಗಿ ಶೂಟಿಂಗ್ ಸ್ಥಗಿತವಾಯ್ತು. ಇದೇ ಸಮಯದಲ್ಲಿ ಅನಿರೀಕ್ಷಿತವೆಂಬಂತೆ ನಮ್ಮ ಚಿತ್ರದ ನಿರ್ದೇಶಕ ಶಾಹುರಾಜ್ ಶಿಂಧೆ ದೈವಾಧೀನರಾದರು. ಅವರ ನಿಧನದ ನೋವು ಇನ್ನೂ ಮರೆಯಲಾಗುತ್ತಿಲ್ಲ. ನಂತರ ನೃತ್ಯ ನಿರ್ದೇಶಕರ ಸಹಾಯದಿಂದ ಹಾಡುಗಳ ಚಿತ್ರೀಕರಣ ಮುಗಿಸಿದ್ದೆವು. ಈಗ ಟೀಸರ್ ಬಿಡುಗಡೆ ಮಾಡಿದ್ದೇವೆ” ಎಂದರು.
ನಿರ್ಮಾಪಕ ಶಿವಾನಂದ ಅವರು ಮೂಲತಃ ಬೆಳಗಾವಿಯವರು. ಅವರ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಒಡನಾಟದಲ್ಲಿ ಶಿವಾನಂದ ಕೂಡ ಸೇನೆ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಹಾಗಾಗಿಯೇ ಅವರು ತಮ್ಮ ಸಿನಿಮಾದ ಆಡಿಯೋ ಬಿಡುಗಡೆಗೆ ಸೇನೆಯಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಅತಿಥಿಗಳನ್ನಾಗಿ ಆಹ್ವಾನಿಸಿದ್ದರು. ಚಿತ್ರದ ಹೀರೋ ಸಚಿನ್ ಧನಪಾಲ್ ಹಿಂದೊಮ್ಮೆ ಅವರಿಗೆ ರೂಂಮೇಟ್ ಆಗಿದ್ದವರು. ದಶಕದ ಹಿಂದೆಯೇ ಸ್ನೇಹಿತ ಸಚಿನ್‌ರಿಗಾಗಿ ಸಿನಿಮಾ ನಿರ್ಮಿಸಬೇಕು ಎಂದಿಕೊಂಡಿದ್ದರು ಶಿವಾನಂದ್. ಅದು ‘ಚಾಂಪಿಯನ್’ ಸಿನಿಮಾ ಮೂಲಕ ಕೈಗೂಡಿದೆ.
ಕ್ರೀಡಾ ಉತ್ಸಾಹಿ ಮಲೆನಾಡಿನ ಹುಡುಗನೊಬ್ಬ ಕಷ್ಟಪಟ್ಟು ನ್ಯಾಷನಲ್ ಚಾಂಪಿಯನ್ ಆಗುವುದೇ ಚಿತ್ರದ ಕಥಾಹಂದರ. ಚಿತ್ರದ ಹೀರೋ ಸಚಿನ್ ಧನಪಾಲ್ ಅವರು ಮಾತನಾಡಿ, “ನನ್ನ ಅಪ್ಪ, ಅಣ್ಣ ಎಲ್ಲಾ ಆರ್ಮಿಯಲ್ಲಿ ಸೇವೆ ಸಲ್ಲಿಸಿದವರು. ನಾನೂ ಕೂಡ ಸೇನೆಗೆ ಸೇರಬೇಕೆಂದು ಹಲವು ಪರೀಕ್ಷೆಗಳನ್ನು ಬರೆದಿದ್ದೇನೆ. ಮಾಡೆಲಿಂಗ್‌ನಲ್ಲೂ ಆಸಕ್ತಿ. ಬ್ಯಾಂಕ್ ಉದ್ಯೋಗ ಬಿಟ್ಟು ಈಗ ಚಿತ್ರರಂಗಕ್ಕೆ ಆಗಮಿಸಿದ್ದೇನೆ. ಏನೂ ಇಲ್ಲದ ಕಾಲದಲ್ಲಿ ನನ್ನ ಹೀರೋ ಮಾಡುತ್ತೀನಿ ಅಂದಿದ್ದ ಗೆಳೆಯ ಶಿವಾನಂದ್ ಹೇಳಿದ ಮಾತಿನಂತೆ ನಡೆದುಕೊಂಡಿದ್ದಾರೆ. ಆತನಿಗೆ ನಾನು ಆಭಾರಿ” ಎಂದು ಕೃತಜ್ಞತೆ ಸಲ್ಲಿಸಿ ಚಿತ್ರದಲ್ಲಿ ಅಭಿನಯಿಸಲು ಮಾಡಿಕೊಂಡಿದ್ದ ತಯಾರಿ ಬಗ್ಗೆ ತಿಳಿಸಿದರು. ಅದಿತಿ ಪ್ರಭುದೇವ ಚಿತ್ರದ ಹಿರೋಯಿನ್. ದೇವರಾಜ್, ಸುಮನ್, ಪ್ರದೀಪ್ ರಾವತ್, ಅವಿನಾಶ್, ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿದ್ದಾರೆ. ಸನ್ನಿ ಲಿಯೋನ್ ಚಿತ್ರದ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಶರವಣನ್ ನಟರಾಜನ್ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ.