ಬದುಕಿನ ಭಾಗವೇ ಆಗಿಹೋಗಿರುವ ಸೆಲ್‌ ಫೋನ್‌ ಕಥಾನಾಯಕಿಯ ನೆಮ್ಮದಿಗೆ ಕೊಳ್ಳಿ ಇಡುತ್ತದೆ. ಈ ಸಮಸ್ಯೆಗಳ ಸುಳಿಯಿಂದ ಆಕೆ ಹೇಗೆ ಪಾರಾಗುತ್ತಾಳೆ? – ಟೆಕ್ನೋ ಥ್ರಿಲ್ಲರ್‌ ‘ಚಥುರ್ಮುಖಂ’ ಮಲಯಾಳಂ ಸಿನಿಮಾ ZEE5 ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ನಮ್ಮ ಜೀವನ ನಮ್ಮ ಕೈಲಿಲ್ಲ, ಆದರೆ ಕೈಲಿರೋ ಮೊಬೈಲ್‌ನಲ್ಲಿರುತ್ತೇನೋ! ಮೊಬೈಲ್‌ ಫೋನ್‌ ಇಲ್ಲದೇ ಬದುಕೋದಕ್ಕೆ ಸಾಧ್ಯವೇ ಇಲ್ಲವೇನೋ ಎನ್ನುವ ಹಂತಕ್ಕೆ ತಲುಪಿದೆ ಇಂದಿನ ಜಗತ್ತು. ಅವಶ್ಯಕತೆ ಇದೆಯೋ, ಇಲ್ಲವೋ… ಕುಳಿತಲ್ಲಿ, ನಿಂತಲ್ಲಿ, ಡ್ರೈವ್‌ ಮಾಡುತ್ತಿರುವಾಗಲೂ ಮೊಬೈಲ್‌ ನಮ್ಮ ಸಂಗಾತಿ. ಸರ್ವಸ್ವವೂ ಮೊಬೈಲ್‌ ಆಗಿದ್ದು ಸೆಲ್ಯುಲಾರ್‌ ಜಗತ್ತಿನಲ್ಲಿ ಕಳೆದುಹೋದ ಅನುಭವ. ಹೀಗೆ, ನಾವ್‌ ಕಂಟ್ರೋಲ್‌ ಮಾಡೋ ಸೆಲ್‌ಫೋನ್‌ ನಮ್ಮನ್ನೇ ಕಂಟ್ರೋಲ್‌ ಮಾಡಿದ್ರೆ ಏನಾಗಬಹುದು? ಈ ಪರಿಕಲ್ಪನೆಯೇ ‘ಚತುರ್ಮುಖಂ’ ಸಿನಿಮಾ. ಈ ಹಿಂದೆ ಮೊಬೈಲ್‌ ಫೋನ್‌, ಟೆಕ್ನಾಲಜಿ ಕುರಿತಾದ ಲವ್‌, ಸಸ್ಪೆನ್ಸ್‌, ಡ್ರಾಮಾ ಸಿನಿಮಾಗಳು ಬಂದಿವೆ. ಈ ಯಾದಿಯಲ್ಲಿ ಟೆಕ್ನೋ ಹಾರರ್‌ ಜಾನರ್‌ನಲ್ಲಿ ಇದು ತೀರಾ ಭಿನ್ನವಾಗಿ ನಿಲ್ಲುತ್ತದೆ. ಸೌತ್‌ ಇಂಡಿಯಾದ ಮೊದಲ ಟೆಕ್ನೋ ಹಾರರ್‌ ಸಿನಿಮಾ ಇದು ಎಂದು ಚಿತ್ರತಂಡ ಹೇಳಿಕೊಳ್ಳುತ್ತದೆ.

ವಿಜ್ಞಾನ, ಪ್ರೇತಾತ್ಮ ಜಗತ್ತು, ಮನುಷ್ಯಸಹಜ ಆಸೆ – ಕನಸು, ಸಾಮಾಜಿಕ ಜಾಲತಾಣಗಳಿಗೆ ಅಂಟಿಕೊಂಡಿರುವ ಇಂದಿನ ಯುವ ಸಮೂಹದ ದೈನಂದಿನ ಚಟುವಟಿಕೆಗಳ ಸುಳಿಯಲ್ಲಿ ಸುತ್ತುತ್ತದೆ ಸಿನಿಮಾ. ಚಿತ್ರದಲ್ಲಿ ಕಥೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಸ್ಪಿರಿಟ್‌ ವರ್ಸಸ್ ಸೈನ್ಸ್‌ ಎಂದು ಬಂದಾಗ ಅದನ್ನು ಯಾವೆಲ್ಲ ಆಯಾಮದ ಪರ್ಯಾಲೋಚನೆಯಿಂದ ತಾರ್ಕಿಕವಾಗಿ ಪರಿಹಾರ ಕಂಡುಕೊಳ್ಳಬಹುದು ಎನ್ನುವುದನ್ನು ಪ್ರೇಕ್ಷಕ ನೆಚ್ಚುವಂತೆ ಕಥೆಗಾರರಾದ ಅಭಯ್‌ಕುಮಾರ್‌ ಕೆ. ಮತ್ತು ಅನಿಲ್‌ ಕುರಿಯನ್‌ ಗಟ್ಟಿಯಾಗಿ ಕಟ್ಟಿದ್ದಾರೆ. ಹಾಗೆಯೇ ಮನುಷ್ಯ ತನ್ನ ಕೊನೆ ಗಳಿಗೆ ಹತ್ತಿರವಾಗುತ್ತಿದ್ದಂತೆ ಬದುಕು – ಸಂಬಂಧಗಳನ್ನು ಅರ್ಥೈಸಿಕೊಳ್ಳುವ ರೀತಿ, ಮೋಸದ ಜಾಲ… ಹೀಗೆ, ಹತ್ತಾರು ವಿಷಯಗಳನ್ನು ಅಸ್ಪಷ್ಟವಾಗಿ ಹೇಳುವಂತಹ ಪ್ರಯತ್ನ ನಡೆದಿದೆ.

ಸದಾ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯಳಾಗಿರುವ ಮಧ್ಯಮ ವರ್ಗದ ಮನೆಯ ಹೆಣ್ಣುಮಗಳು, ಖಾಸಗಿ ಕಂಪನಿಯೊಂದರ ಉದ್ಯೋಗಿ ತೇಜಸ್ವಿನಿ ಆಕಸ್ಮಿಕವಾಗಿ ತನ್ನ ವೊಬೈಲ್‌ ಫೋನು ಹಾಳುಮಾಡಿಕೊಳ್ಳುತ್ತಾಳೆ. ನಂತರ ಆನ್‌ಲೈನ್‌ನಲ್ಲಿ ತನ್ನ ಅವಶ್ಯಕತೆಗೆ ತಕ್ಕಂತಹ ಫೀಚರ್‌ ಇರುವ ಅಗ್ಗಕ್ಕೆ ಸಿಕ್ಕ ಲಿಸಾ ಎನ್ನುವ ಹೆಸರಿನ ಮೊಬೈಲ್ ಪೋನ್ ಖರೀದಿಸುತ್ತಾಳೆ. ಅಲ್ಲಿಂದ ಆಕೆಯ ನೆಮ್ಮದಿ ಕಳೆದುಹೋಗುತ್ತದೆ! ಸೆಲ್‌ಫೋನ್‌ ಬುಕ್‌ ಮಾಡಿದ ಕ್ಷಣದಿಂದಲೇ ವಿಚಿತ್ರ ಅನುಭವಗಳಾಗುತ್ತಾ ಹೋಗುತ್ತವೆ. ಮೊಬೈಲ್‌ ಪೋನಿನ ಆ ವಿಚಿತ್ರ ವರ್ತನೆ ದಿನದಿಂದ ದಿನಕ್ಕೆ ಹೆಚ್ಚಾದಂತೆ ಇದರ ಸಹವಾಸವೇ ಬೇಡ ಎಂದು ಆಕೆ ಪೋನ್ ಬಿಸಾಕಿದರೂ ಬಿಟ್ಟರೂ ಬಿಡದ ಮಾಯೆಯಂತೆ ಹತ್ತು ಹಲವು ರೂಪದಲ್ಲಿ ಕಾಡುತ್ತದೆ. ಆಕೆ ಬೆಚ್ಚಿ ಬೀಳುವಂತ ಹತ್ತಾರು ಘಟನೆಗಳು ಜರುಗುತ್ತವೆ. ಈ ಸೆಲ್‌ ಫೋನ್‌ ಆಕೆಯ ಬದುಕಿಗೆ ಹೇಗೆ ಉರುಳಾಗುತ್ತದೆ ಎನ್ನುವ ರೋಚಕತೆಯೇ ಸಿನಿಮಾದ ವಸ್ತು.

ಪಾರಾಗಲಾರದಂತಹ ಸಮಸ್ಯೆಯಲ್ಲಿ ಸಿಲುಕಿಕೊಂಡಿರುವ ತೇಜಸ್ವಿನಿಯನ್ನು ಆಕೆಯ ಒಡನಾಡಿ ಆಂಥೋನಿ ಸಮಸ್ಯೆಯಿಂದ ಹೊರಗೆ ತರುವ ಹಾದಿಯಲ್ಲಿ ಸಿನಿಮಾ ಸಾಗುತ್ತದೆ. ಕೊನೆತನಕ ಕೌತುಕತೆಯನ್ನು ಕಾಪಿಟ್ಟು ಅಲ್ಲಲ್ಲಿ ಬೆಚ್ಚಿಬೀಳಿಸುವಂತ ಅನುಭವ ನೀಡುತ್ತದೆ ಕತೆ. ಸಿನಿಮಾ ವೀಕ್ಷಿಸಿದ ನಂತರ ನಮ್ಮ ಮೊಬೈಲ್‌ ಫೋನು ನೋಡಿದರೂ ಭಯ ಪಡುವಂತಹ ಅನುಭವ! ಕತೆ ಎಷ್ಟು ಸದೃಢವಾಗಿದೆಯೋ ತಾಂತ್ರಿಕವಾಗಿಯೂ ಸಿನಿಮಾ ಗಟ್ಟಿಯಾಗಿದೆ. ಆಯ್ಕೆ ಮಾಡಿಕೊಂಡಿರುವ ಕತೆ, ಅದರ ಹೆಣಿಗೆಯೇ ವಿಶಿಷ್ಟವಾಗಿದೆ. ಆತ್ಮ, ಪ್ರೇತ, ಮತ್ತೊಂದು ಮಗದೊಂದು ಸತ್ಯ ಸುಳ್ಳು ಎನ್ನುವುದರ ಪೊಳ್ಳು ಎಳೆಯನ್ನು ಬಿಟ್ಟು, ಅದೇನೇ ಆದರೂ ವಿಜ್ಞಾನದಲ್ಲಿ ಬಗೆಹರಿಯದ ಸಮಸ್ಯೆಯೇ ಇಲ್ಲ ಎಂಬುದನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.

ಸಿನಿಮಾ : ಚಥುರ್ಮುಖಂ | ನಿರ್ದೇಶನ : ರಂಜೀತ್‌ ಕಮಲಾ ಶಂಕರ್‌, ಸಲೀಲ್‌ ವಿ. | ಸಂಗೀತ : ವಿಷ್ಣು ಗೋವಿಂದ್‌ | ತಾರಾಬಳಗ : ಮಂಜು ವಾರಿಯರ್‌, ಸನ್ನಿ ವೇನ್‌, ನಿರಂಜನ ಅನೂಪ್‌

LEAVE A REPLY

Connect with

Please enter your comment!
Please enter your name here