ವಿಕ್ರಂ ಪ್ರಭು ನಿರ್ಮಾಣ, ನಿರ್ದೇಶನದ ‘ವೆಡ್ಡಿಂಗ್‌ ಗಿಫ್ಟ್‌’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಪ್ರೀತಿ, ದಾಂಪತ್ಯದಲ್ಲಿ ಬಿರುಕು, ಕಾನೂನು ಸಮರದ ಕತೆಯ ಎಳೆಯಿರುವ ಸಿನಿಮಾದಲ್ಲಿ ನಟಿ ಪ್ರೇಮಾ ವಕೀಲೆ ಪಾತ್ರ ನಿರ್ವಹಿಸಿದ್ದಾರೆ. ನಿಶಾನ್‌ ನಾಣಯ್ಯ ಮತ್ತು ಸೋನು ಗೌಡ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ ಏಪ್ರಿಲ್‌ನಲ್ಲಿ ತೆರೆಕಾಣಲಿದೆ.

ಮಂಗಳೂರು ಮೂಲದ ವಿಕ್ರಂ ಪ್ರಭು ಹದಿನೆಂಟು ವರ್ಷಗಳ ಹಿಂದೆ ರಾಜೇಂದ್ರಸಿಂಗ್‌ ಬಾಬು ಅವರ ‘ಲವ್‌’ ಸಿನಿಮಾಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಮುಂದೆ ಕಾರಣಾಂತರಗಳಿಂದ ಚಿತ್ರರಂಗದಿಂದ ದೂರವಾಗಿದ್ದ ಅವರು ‘ವೆಡ್ಡಿಂಗ್‌ ಗಿಫ್ಟ್‌’ ನಿರ್ಮಾಣ, ನಿರ್ದೇಶನದೊಂದಿಗೆ ಸಿನಿಮಾಗೆ ಮರಳಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಚಾಲನೆ ಸಿಕ್ಕಿದೆ. “ನಾವು ಅಂದುಕೊಂಡಿದ್ದ ಅವಧಿಗಿಂತ ಮೊದಲೇ ಶೂಟಿಂಗ್‌ ಪೂರ್ಣಗೊಂಡಿದೆ. ಬೆಂಗಳೂರು, ತುಮಕೂರು, ಉಡುಪಿ, ಮಂಗಳೂರು ಮುಂತಾದೆಡೆ ಚಿತ್ರೀಕರಣ ನಡೆಸಿದ್ದೇವೆ. ಗಂಡ – ಹೆಂಡತಿ ನಡುವಿನ ಕಥಾಹಂದರ. ವಿಶೇಷವಾಗಿ ಸೆಕ್ಷನ್‌ 498 ಸಂಬಂಧಿಸಿದ ಸನ್ನಿವೇಶಗಳಿದ್ದು, ಕಾನೂನಿಗೆ ಸಂಬಂಧಿಸಿದಂತೆ ಕುತೂಹಲಕಾರಿ ಅಂಶಗಳಿವೆ. ಹೊಸ ತಲೆಮಾರಿನ ಪ್ರೇಕ್ಷಕರು ಇಷ್ಟಪಡುವ ಕತೆಯನ್ನು ನಿರೂಪಿಸಿದ್ದೇವೆ” ಎಂದರು ನಿರ್ದೇಶಕ ವಿಕ್ರಂಪ್ರಭು.

ಇದು ತಮ್ಮ ವೃತ್ತಿಬದುಕಿನಲ್ಲೇ ವಿಶಿಷ್ಟ ಮತ್ತು ಪ್ರಮುಖ ಪಾತ್ರ ಎನ್ನುತ್ತಾರೆ ನಾಯಕನಟಿ ಸೋನು ಗೌಡ. “ಇದು ನನಗೆ ತುಂಬಾ ಕಾಡಿದ ಪಾತ್ರ. ಚಿತ್ರೀಕರಣ ಮುಗಿಸಿ ಬಂದ ಮೇಲೆ ಪಾತ್ರದ ಹ್ಯಾಂಗ್‌ಓವರ್‌ನಲ್ಲೇ ಇರುತ್ತಿದ್ದೆ. ನಾನು ಮಾಡಿದ್ದು ಸರಿನಾ? ತಪ್ಪಾ? ಎಂದು ಯೋಚಿಸುತ್ತಿದ್ದೆ. ನೊಂದ ಮನಸ್ಸುಗಳಿಗೆ ಹತ್ತಿರವಾಗುವ ‘ಆಕಾಂಕ್ಷ’ ಪಾತ್ರ ನನ್ನದು” ಎಂದ ಸೋನು ಪಾತ್ರದ ಅವಕಾಶ ನೀಡಿದ ವಿಕ್ರಂಪ್ರಭು ಅವರಿಗೆ ಧನ್ಯವಾದ ಅರ್ಪಿಸಿದರು. ‘ಓಂ’ ಸಿನಿಮಾ ಖ್ಯಾತಿಯ ನಟಿ ಪ್ರೇಮಾ ಈ ಚಿತ್ರದಲ್ಲಿ ವಕೀಲೆಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕಥೆಗೆ ತಿರುವು ನೀಡುವ ಪಾತ್ರ ಅವರದು. “ನನಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ ಪಾತ್ರಗಳ ಆಯ್ಕೆಯಲ್ಲಿ ತುಂಬಾ ಎಚ್ಚರಿಕೆ ವಹಿಸುತ್ತೇನೆ. ಈ ಸಿನಿಮಾದ ಕತೆ ಭಿನ್ನ ಎನಿಸಿತು. ಉತ್ತಮ ಸಂದೇಶವಿರುವ ಚಿತ್ರದಲ್ಲಿ ನಟಿಸಿದ ಖುಷಿಯಿದೆ” ಎಂದ ಅವರು ಪಾತ್ರದ ಬಗ್ಗೆ ಹೆಚ್ಚು ಹೇಳಿದರೆ ಕತೆ ರಿವೀಲ್‌ ಆಗುತ್ತದೆ ಎಂದು ಮಾತುಗಳನ್ನು ಮೊಟಕುಗೊಳಿಸಿದರು. ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್ ಇತರರು ಪ್ರಮುಖ ಪಾತ್ರಧಾರಿಗಳು. ಬಾಲಚಂದ್ರ ಪ್ರಭು ಸಂಗೀತ ಸಂಯೋಜನೆ, ಉದಯ ಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here