ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿ ವಿರುದ್ಧ ನಿತಿನ್‌ ಬರಾಯ್‌ ಎನ್ನುವ ವ್ಯಕ್ತಿ ಮುಂಬಯಿ ಬಾಂದ್ರಾ ಸ್ಟೇಷನ್‌ನಲ್ಲಿ ವಂಚನೆ ದೂರು ದಾಖಲಿಸಿದ್ದಾರೆ. ಅವರಿಂದಾಗಿ ತಮಗೆ ಒಂದೂವರೆ ಕೋಟಿ ರೂಪಾಯಿ ದೋಖಾ ಆಗಿದೆ ಎನ್ನುವುದು ದೂರು. ಇದರಲ್ಲಿ ತಮ್ಮ ಪಾತ್ರವಿಲ್ಲ ಎಂದು ನಟಿ ಶಿಲ್ಪಾ ಶೆಟ್ಟಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅಶ್ಲೀಲ ವೀಡಿಯೋ, ಆಪ್‌ ವಿಷಯದಲ್ಲಿ ಜೈಲುವಾಸ ಮಾಡಿ ಬಂದಿದ್ದರು. ಇದೀಗ ಈ ದಂಪತಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿತಿನ್ ಬರಾಯ್ ಎನ್ನುವ ವ್ಯಕ್ತಿ ಇವರ ವಿರುದ್ಧ ಒಂದೂವರೆ ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. “2014ರಲ್ಲಿ SFL ಫಿಟ್‌ನೆಸ್‌ ಕಂಪನಿ ನಿರ್ದೇಶಕ ಕಾಶಿಫ್ ಖಾನ್‌ ಮತ್ತು ಶಿಲ್ಪಾ ಶೆಟ್ಟಿ – ರಾಜ್ ಕುಂದ್ರಾ ದಂಪತಿ ಒಂದೂವರೆ ಕೋಟಿ ರೂಪಾಯಿ ಪಡೆದು ಫ್ರಾಂಚೈಸ್ ಕೊಡುವುದಾಗಿ ಹೇಳಿದ್ದರು. ಪುಣೆ ಬಳಿ ಫಿಟ್‌ನೆಸ್ ಕಂಪನಿ ಆರಂಭಿಸಲು ಉದ್ದೇಶಿಸಿದ್ದೆ. ಈ ಪ್ರಾಜೆಕ್ಟ್ ಟೇಕ್‌ ಆಫ್ ಆಗಲಿಲ್ಲ. ಈಗ ನಾನು ಕೊಟ್ಟಿದ್ದ ಹಣ ವಾಪಸು ಕೇಳಿದರೆ ಬೆದರಿಕೆಯೊಡ್ಡುತ್ತಿದ್ದಾರೆ” ಎಂದು ನಿತಿನ್ ಬರಾಯ್ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಮುಂಬಯಿ ಬಾಂದ್ರಾ ಪೊಲೀಸರು ಈ ಮೂವರ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ಶಿಲ್ಪಾ ಶೆಟ್ಟಿ, ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. “ರಾಜ್ ಮತ್ತು ನನ್ನ ಮೇಲೆ ಎಫ್‌ಐಆರ್‌ ದಾಖಲಾಗಿರುವುದು ಶಾಕಿಂಗ್‌ ನ್ಯೂಸ್‌! SFL ಫಿಟ್‌ನೆಸ್‌ ಕಾಶಿಫ್ ಖಾನ್‌ಗೆ ಸೇರಿದ್ದು. ಅದರ ಸಂಪೂರ್ಣ ಬ್ಯಾಂಕಿಂಗ್‌ ವ್ಯವಹಾರ ಆತನದ್ದೆ. 2014ರಲ್ಲೇ ಆ ಕಂಪನಿ ಮುಚ್ಚಿದ್ದು, ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಇಂತಹ ಘಟನೆಗಳಿಂದ ಕಳೆದ 24 ವರ್ಷಗಳಿಂದ ನಾನು ಸಂಪಾದಿಸಿದ್ದ ಗೌರವಕ್ಕೆ ಕುಂದುಂಟಾಗುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ ನಟಿ ಶಿಲ್ಪಾ.

LEAVE A REPLY

Connect with

Please enter your comment!
Please enter your name here