ಕಂಗನಾ ರನಾವತ್ ನಟನೆಯ ‘ತಲೈವಿ’ ಸಿನಿಮಾ ಈಗ ಓಟಿಟಿಯಲ್ಲಿ ಸುದ್ದಿ ಮಾಡುತ್ತಿದೆ. ಇದೀಗ ಅವರ ಮುಂದಿನ ಸಿನಿಮಾ ಸರದಿ. ಅವರು ನಟಿಸಿರುವ ನಾಯಕಿ ಪ್ರಧಾನ ಸ್ಪೈ-ಥ್ರಿಲ್ಲರ್‌ ಸಿನಿಮಾ ‘ಧಾಕಡ್‌’ ಮುಂದಿನ ವರ್ಷ ತೆರೆಗೆ ಬರಲಿದೆ.

ಕಂಗನಾ ರನಾವತ್‌ ಅಭಿನಯದ ಮೆಗಾ ಆಕ್ಷನ್ ಎಂಟರ್‌ಟೇನರ್‌ ಸಿನಿಮಾ ‘ಧಾಕಡ್’ ಮುಂದಿನ ವರ್ಷ ಏಪ್ರಿಲ್‌ನಲ್ಲಿ ತೆರೆಕಾಣಲಿದೆ ಎನ್ನುವ ಸುದ್ದಿ ಬಂದಿದೆ. ಚಿತ್ರದಲ್ಲಿ ‘ಏಜೆಂಟ್ ಅಗ್ನಿ’ ಪಾತ್ರ ನಿರ್ವಹಿಸುತ್ತಿದ್ದಾರೆ ಕಂಗನಾ. ಮಹಿಳಾ ಕಳ್ಳಸಾಗಣೆ ಚಿತ್ರದ ಕಥಾವಸ್ತು. ಭೋಪಾಲ್, ಬುಡಾಪೆಸ್ಟ್, ಮತ್ತು ಮುಂಬಯಿಯಲ್ಲಿ ಚಿತ್ರೀಕರಿಸಲಾಗಿದ್ದು, ಚಿತ್ರದ ಫಸ್ಟ್‌ಲುಕ್‌ನಲ್ಲಿ ಕಂಗನಾ ಆಕ್ಷನ್ ಹೀರೋಯಿನ್ ಅವತಾರ ಕಾಣಸಿಗುತ್ತದೆ. ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಮಾತನಾಡುವ  ಕಂಗನಾ, “ಧಾಕಡ್ ದೊಡ್ಡ ಪರದೆಯ ಮೇಲೆ ನೋಡುವಂಥ ಸಿನಿಮಾ. ಇದು ಎಲ್ಲರ ಮನಸ್ಸನ್ನು ಆಳವಾಗಿ ಕಲಕುವ ವಿಷಯ ಹೊಂದಿದೆ. ಕೇವಲ ಥಿಯೇಟರ್‌ಗಳಿಗೆ ಮಾತ್ರ ಈ ಚಿತ್ರಕ್ಕೆ ನ್ಯಾಯ ಒದಗಿಸಬಲ್ಲ ಶಕ್ತಿ ಇದೆ. ಈ ಕಥೆಯು ಜನಸಾಮಾನ್ಯರಿಗೆ ತಲುಪಬೇಕು. ಈ ಚಿತ್ರವು ಮಹಿಳೆಯರ ಬಗ್ಗೆ ಮಾತನಾಡುತ್ತದೆ” ಎಂದಿದ್ದಾರೆ.

ನಿರ್ದೇಶಕ ರಾಝಿ ಘಾಯ್ “ಧಾಕಡ್ ನನ್ನ ಮನಸ್ಸಿನ ಭಾವನೆಗಳನ್ನು ಹೊಂದಿರುವ ಒಂದು ವಿಶೇಷ ಚಲನಚಿತ್ರ. ಇದನ್ನುಅಂತಾರಾಷ್ಟ್ರೀಯ ಆಕ್ಷನ್ ಚಿತ್ರಗಳಿಗೆ ಸರಿಸಮವಾಗಿ ನಿಲ್ಲಿಸುವಂತೆ ಮಾಡುವುದು ನನ್ನ ಉದ್ದೇಶವಾಗಿತ್ತು. ಈ ವಿಷಯದಲ್ಲಿ ನಮ್ಮ ನಿರ್ಮಾಪಕರು ನಮಗೆ ಬಲವಾದ ಆಧಾರ ಸ್ತಂಭವಾಗಿ ನಿಂತಿದ್ದಾರೆ’ ಎಂದಿದ್ದಾರೆ. ನಿರ್ಮಾಪಕ ದೀಪಕ್ ಮುಕುತ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಚಿತ್ರದ ಬಿಡುಗಡೆಯ ದಿನಾಂಕದೊಂದಿಗೆ, ಚಿತ್ರದ ಪ್ರಮುಖ ಪಾತ್ರಧಾರಿ ಕಂಗನಾ ರನಾವತ್ ಅವರ ಫಸ್ಟ್‌ಲುಕ್ ಬಿಡುಗಡೆ ಮಾಡಲಾಯಿತು. ಚಿತ್ರದ ಸಾಹಸ ದೃಶ್ಯಗಳನ್ನು ಅಂತಾರಾಷ್ಟ್ರೀಯ ತಂಡವು ವಿನ್ಯಾಸಗೊಳಿಸಿದ್ದು, ಹಲವು ಹಾಲಿವುಡ್ ಆಕ್ಷನ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಪ್ರಶಸ್ತಿ ವಿಜೇತ ಜಪಾನಿನ ಛಾಯಾಗ್ರಾಹಕ ಟೆಟ್ಸುವೊ ನಾಗತಾ ಕ್ಯಾಮರಾ ಕೆಲಸ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here